ಹಾಂಕಾಂಗ್ ಹುಡುಗರ ಹೃದ್ಗತ ರಾಜಕಾರಣ

Update: 2023-06-30 06:09 GMT

ವಾರಾಂತ್ಯದ ಟಿವಿ ಸಂಗೀತ ಸ್ಪರ್ಧೆಗಳಲ್ಲಿ ಪರಿಪಕ್ವವಾಗಿ ಹಾಡಿದ ಒಬ್ಬ ಬಾಲಕಿಗೆ ತೀರ್ಪುಗಾರರಲ್ಲೊಬ್ಬರು ಹೇಳಿದ್ದು, ‘‘ನೀನು ಅಮ್ಮನ ಹೊಟ್ಟೆಯಲ್ಲಿದ್ದಾಗಲೇ ರಿಯಾಜ್ ಮಾಡಿರಬೇಕು; ಹಾಗಲ್ಲದೆ ಇಷ್ಟೊಂದು ಚೆನ್ನಾಗಿ ಹಾಡುವುದು ದುಸ್ಸಾಧ್ಯ!’’ ಶೈಶವದಲ್ಲೇ ಕಲಾ ಪ್ರತಿಭೆ ತೋರುವವರನ್ನು ಸಮಾಜ ಬೇಗ ಗುರುತಿಸುತ್ತದೆ. ‘‘ಇದು ಹೇಗೆ ಸಾಧ್ಯ?’’ ಎಂಬ ಗೊಂದಲಗೆಡಿಸುವ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗದೆ ಒಂದು ಬಗೆಯ ದೈವಿಕತೆಯನ್ನೂ ಅವರಿಗೆ ಆರೋಪಿಸುವುದುಂಟು. ಆದರೆ, ಹುಟ್ಟಿ ಎರಡು ದಶಕ ಕಳೆಯುವಷ್ಟರಲ್ಲೇ ಕ್ರಾಂತಿಯ ನಾಯಕತ್ವ ವಹಿಸುವವರ ವಿಚಾರಶಕ್ತಿ, ಬುದ್ಧಿಮತ್ತೆ, ಕಷ್ಟ ಸಹಿಷ್ಣುತೆ, ರಾಜಕೀಯ ಪ್ರಜ್ಞೆ, ಪ್ರೌಢ ತೀರ್ಮಾನಗಳ ಕುರಿತು ತಾನೆ ಯಾವ ವಿವರಣೆ ಇದೆ? ಅವರೂ ಒಂದು ಬಗೆಯ ಶಿಶು(ಜ್ಞಾನ)ಪ್ರತಿಭೆಗಳೇ! ಮಹಾಭಾರತದ ಅಭಿಮನ್ಯುವಿಗೆ, ಚಕ್ರವ್ಯೆಹ ಭೇದಿಸಲು ತಾಯ ಬಸಿರಿನಲ್ಲಿ ಇರುವಾಗಲೇ ಸಿಕ್ಕ ಬೋಧನೆಯ ಅಮೋಘ ರೂಪಕಕ್ಕೆ ಅವರೂ ಹಕ್ಕುದಾರರು.

ಎಂಟೊಂಬತ್ತು ದಿನಗಳ ಹಿಂದೆ, ಹಾಂಕಾಂಗ್ ನಗರದಲ್ಲಿ, ಆರರಿಂದ ಎಂಟು ತಿಂಗಳ ಸೆರೆವಾಸ ಶಿಕ್ಷೆ ಜಾರಿಯಾದದ್ದು ಜೊಶುವಾ ವೋಂಗ್, ನಥನ್ ಲಾ ಮತ್ತು ಅಲೆಕ್ಸ್ ಚೋ ಹೆಸರಿನ ಹದಿವಯಸ್ಸಿನ ಚಳವಳಿಗಾರರಿಗೆ. ಅವರು ಮಾಡಿದ ಅಪರಾಧ, ಮೂರು ವರ್ಷಗಳ ಹಿಂದೆ, ಜನತಂತ್ರ ಸ್ಥಾಪನೆಗೆ ಆಗ್ರಹಿಸಿ ಹರತಾಳ ನಡೆಸುತ್ತ ನಡೆಸುತ್ತ, ಸರಕಾರ ಪ್ರವೇಶ ನಿಷೇಧಿಸಿದ್ದ ಸಿವಿಕ್ ಸ್ಕ್ವೇರ್ ಅನ್ನು ಮಿಂಚಿನಂತೆ ಹೊಕ್ಕು, ಸತತ 79 ದಿನ ಅಲ್ಲಿ ತಳವೂರಿ ಪ್ರತಿಭಟನೆ ಸ್ಥಾಪಿಸಿದ್ದು. ಸನಿಹದಲ್ಲಿದ್ದ ಚುನಾವಣೆ ಸ್ಪರ್ಧಿಸಲು ಅದಾಗಲೇ ಅವರ ಸಿದ್ಧತೆ ನಡೆದಿತ್ತು. ಈಗ, ಶಿಕ್ಷೆಯ ಕಾರಣ, ನಿಯಮಾನುಸಾರ ಇನ್ನು ಐದು ವರ್ಷ ಅದಕ್ಕೆ ಅವಕಾಶ ಇಲ್ಲ. ‘‘ಏನಂತೆ ಮಹಾ? ಪರವಾಗಿಲ್ಲ ನಮ್ಮ ಬಳಿ ಧಂಡಿಯಾಗಿ ಟೈಮ್ ಇದೆ..’’ ಎಂದು ನಕ್ಕು ನುಡಿದನಂತೆ, ಜೊಶುವಾ.

ವಿದ್ಯಾರ್ಥಿ ನಾಯಕನ ಜನನ ಬ್ರಿಟಿಷ್ ಹಾಂಕಾಂಗ್‌ನಲ್ಲಿ 13, ಅಕ್ಟೋಬರ್ 1996ರಂದು ಆಯಿತು ಎನ್ನುವುದಕ್ಕೆ ಒಂದು ಹಿನ್ನೆಲೆ ಇದೆ: 150 ವರ್ಷಕ್ಕೂ ಮಿಕ್ಕಿ ತಮ್ಮ ಅಧೀನದಲ್ಲಿದ್ದ ಈ ದ್ವೀಪನಾಡನ್ನು ಬ್ರಿಟಿಷರು ಚೀನಾಗೆ ಮರಳಿಸಿದ್ದು ಜುಲೈ 1997ರಲ್ಲಿ. ಅಂದರೆ ಅವನು ಒಂದು ವರ್ಷದವನಾದಾಗ. ಮಧ್ಯಮವರ್ಗದ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಕುಟುಂಬದಲ್ಲಿ ಹುಟ್ಟಿದವನಿಗೆ ಸಾಮಾಜಿಕ ಕಳಕಳಿಯ ಪಾಠ ತಂದೆಯಿಂದ ಎಳವೆಯಲ್ಲಿಯೇ ಸಿಕ್ಕಿತು. ಯುನೈಟೆಡ್ ಕ್ರಿಶ್ಚಿಯನ್ ಕಾಲೇಜ್ ಎಂಬ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿಯುವಾಗ ಚರ್ಚ್‌ನ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತ ಸಂಘಟನೆ, ಭಾಷಣ ಕಲೆ ಕಲಿತುಕೊಂಡ. ಭಾಗಶಃ ಪ್ರಾಪ್ತವಾಗಿದ್ದ ಸ್ವಾಯತ್ತತೆಯ ಕಾರಣ ಒಂದು ಬಗೆಯ ಅತಂತ್ರವನ್ನೇ ಅನುಭವಿಸುತ್ತಿದ್ದ ನಾಡಿನ ಪ್ರಜ್ಞಾವಂತ ಜನತೆ, ಅತೀ ವೇಗದ ರೈಲುಗಾಡಿ ಸ್ಥಾಪನೆಗೆ ವ್ಯಾಪಕ ಪ್ರತಿರೋಧ ವ್ಯಕ್ತಪಡಿಸಿ ಸರಕಾರದ ವಿರುದ್ಧ (ನಮ್ಮಲ್ಲಿ ಸ್ಟೀಲ್ ಬ್ರಿಡ್ಜ್ ಪ್ರಕರಣದಲ್ಲಿ ಆದಂತೆ) ತಮ್ಮ ಅಸಂತುಷ್ಟಿ ತೋರಿದ ಆಂದೋಲನದಲ್ಲಿ ಹದಿನಾಲ್ಕರ ಹರೆಯದ ಅವನೂ ಇದ್ದ... ಮುಂತಾದ ವಿವರಗಳಿಗೆ ತನ್ನದೇ ಮಹತ್ವ ಇದೆ.

ಶಾಸೋಕ್ತವಾಗಿ ವಿದ್ಯಾರ್ಥಿ ನಾಯಕನ ಶಿಲುಬೆಯನ್ನು ‘ಸ್ಕಾಲರಿಸಮ್’ ಎಂಬ ಸಮಾನಮನಸ್ಕರ ಸಂಘಟನೆ ಕಟ್ಟುವುದರ (2011) ಮೂಲಕ ಆತ ಹೊತ್ತುಕೊಂಡ. ಹಾಂಕಾಂಗ್ ಸರಕಾರ ರಾಷ್ಟ್ರೀಯತೆ ಹಾಗೂ ನೈತಿಕ ಶಿಕ್ಷಣ ಹೇರುವುದನ್ನು ಈ ತೀಕ್ಷ್ಣಮತಿಗಳು ವಿರೋಧಿಸಿದ್ದರು. ಮರುವರ್ಷವೇ ಸುಮಾರು ಒಂದು ಲಕ್ಷ ಜನ ಭಾಗವಹಿಸಿದ್ದ ರಾಜಕೀಯ ಸಮ್ಮೇಳನ ಆಯೋಜಿಸಿದ ತರುಣನ ಮೇಲೆ ಸಂಬಂಧಪಟ್ಟ ಎಲ್ಲರ ದೃಷ್ಟಿ ಬಿತ್ತು. ಆನಂತರ ಅಕ್ಟೋಬರ್ 2014ರಲ್ಲಿ ಘಟಿಸಿದ ಐತಿಹಾಸಿಕ ‘ಅಂಬ್ರೆಲಾ ಮೂವ್‌ಮೆಂಟ್’ನಲ್ಲಿ ಭಾಗವಹಿಸಿದ ಮೇಲೆ ಇಡೀ ವಿಶ್ವದ ನಜರಿಗೆ ಆತ ತುತ್ತಾದ. ಪ್ರತಿಭಟನೆ, ವಿರೋಧಗಳಿಗೂ ಒಂದು ಕ್ರಿಯೆಟಿವಿಟಿ-ಸೌಂದರ್ಯಾತ್ಮಕತೆ ಪ್ರಾಪ್ತವಾಗಿರುವ ಯುಗದ ಈ ಛತ್ರಿ ಚಳವಳಿಯ ದೃಶ್ಮಾತ್ಮಕ ವಿವರಗಳು ಸಾಕಷ್ಟು ಆಕರ್ಷಕವಾಗಿವೆ: 26 ಸೆಪ್ಟಂಬರ್ 2014ರಲ್ಲಿ ಆರಂಭಗೊಂಡ, ‘ಆಕ್ಯುಪೈ ಸೆಂಟ್ರಲ್ ವಿತ್ ಲವ್ ಆ್ಯಂಡ್ ಪೀಸ್’ ಎಂದೂ ಕರೆಯಲಾಗುವ ಈ ಪ್ರತಿರೋಧ ಚಳವಳಿಯಲ್ಲಿ ಕೊಡೆಯೇ ಧಿಕ್ಕಾರದ ಸಂಕೇತವಾಯಿತು.

ಹರತಾಳ ನಿಗ್ರಹಿಸಲು ಬಂದ ಪೊಲೀಸರು ಅಶ್ರುವಾಯು ಸಿಡಿಸುವಾಗ ಪ್ರತಿಭಟನಾಕಾರರಲ್ಲಿ ಒಬ್ಬಾತ ಹಳದಿ ಛತ್ರಿ ತೆರೆದು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ; ಅದನ್ನು ಅನುಸರಿಸಿ ಅನೇಕರು ತಂತಮ್ಮ ಕೊಡೆ ಅರಳಿಸಿದರು ಎನ್ನಲಾಗುತ್ತದೆ. ಹತ್ತೊಂಬತ್ತನೆ ಶತಮಾನದ ಮಧ್ಯಭಾಗದಲ್ಲಿ ಬ್ರಿಟನ್ ಹಾಗೂ ರಾಜರ ಆಳ್ವಿಕೆಯಲ್ಲಿದ್ದ ಚೀನಾ ದೇಶದ ನಡುವೆ ವಿರಸ ತಲೆದೋರಿದಾಗ ಆದದ್ದು, ಚರಿತ್ರೆಯ ಪುಟಗಳಲ್ಲಿ ‘ಓಪಿಯಮ್ ವಾರ್’ ಎಂದು ದಾಖಲಾಗಿರುವ ಯುದ್ಧ. ಸೋತ ಚೀನಾ ರಾಜರು, ಆಗ ನಡೆದ ಒಂದು ಒಪ್ಪಂದದಲ್ಲಿ, ಮರಳಿ ಕೊಡಬೇಕು ಎನ್ನುವ ಕರಾರಿನೊಂದಿಗೆ ಹಾಂಕಾಂಗ್ ಅನ್ನು ಇಂಗ್ಲಿಷರ ಸುಪರ್ದಿಗೆ ಒಪ್ಪಿಸಿದರು. ಹಾಗೆ ಮೇಯ್ನಿ ಲ್ಯಾಂಡ್ ಚೀನಾ ನಂಟು ಹರಿದುಹೋದ ಈ ಪುಟ್ಟ ಪ್ರದೇಶ ವ್ಯಾಪಾರ ವಹಿವಾಟು ವೃದ್ಧಿಸಿಕೊಳ್ಳುತ್ತ, ಪ್ರಜಾತಂತ್ರದ ಕಡೆ ತುಡಿಯುವ ಶಾಂತಿಪ್ರಿಯ ವಸಾಹತಾಗಿ ಅಭಿವೃದ್ಧಿ ಹೊಂದಿದ್ದು ವಿಶೇಷ.

ಕಮ್ಯುನಿಸ್ಟ್ ಕ್ರಾಂತಿ, ಗಲಭೆಗಳ ಸಮಯದಲ್ಲಿ ಅನೇಕರು ಚೀನಾದಿಂದ ಹಾಂಕಾಂಗ್‌ಗೆ ವಲಸೆ ಬಂದು ಅದನ್ನೇ ಮನೆ ಮಾಡಿಕೊಂಡರು. ಇಷ್ಟೆಲ್ಲ ಆಗುವ ವೇಳೆಗೆ ವರ್ಷಗಳು ಕ್ಷಣಗಳಂತೆ ಹಾರಿ ಹೋಗಿ, ಮರಳಿ ಚೀನಾ ಹಿಡಿತಕ್ಕೆ ಒಳಪಡುವ ವರ್ಷವೂ ಬಂತು. (ಈ ಮಧ್ಯೆ ಇಪ್ಪತ್ತನೆ ಶತಮಾನದ ಮಧ್ಯಭಾಗದಲ್ಲಿ ಚೀನಾ-ಜಪಾನ್ ಕಿತ್ತಾಡಿಕೊಂಡಾಗ, ಶತ್ರು ರಾಷ್ಟ್ರ ಅನಿಸಿಕೊಂಡ ಜಪಾನ್ ದುರಾಡಳಿತವನ್ನೂ ಹಾಂಕಾಂಗ್ ನೋಡಿತು.) ಆಗೆಲ್ಲ ಈ ಜೊಶುವಾ ಎಂಬ ಚೇತನ ಎಲ್ಲಿತ್ತೋ ಹೇಗಿತ್ತೋ ಬಲ್ಲವರಾರು?! ಹಸ್ತಾಂತರ ಪ್ರಕ್ರಿಯೆಯಲ್ಲಿ ‘ಒನ್ ಕಂಟ್ರಿ, ಟೂ ಸಿಸ್ಟಮ್ಸ್’ ಎಂಬುದು ಘೋಷವಾಕ್ಯವಾಯಿತು. ಅಂದರೆ, ಕಮ್ಯುನಿಸ್ಟ್ ಚೀನಾ ಆಳ್ವಿಕೆಯಲ್ಲಿದ್ದರೂ ಹಾಂಕಾಂಗ್‌ಗೆ ತನ್ನ ಬಂಡವಾಳಶಾಹಿ ವ್ಯಾಪಾರ-ವಹಿವಾಟು ನಡೆಸಲು ಹಾಗೂ ಭಾಗಶಃ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಅವಕಾಶ ಇರುತ್ತದೆ ಎಂದು. ಆದರೆ, ಐವತ್ತು ವರ್ಷಗಳ ಬಳಿಕ, ಮತ್ತೆ ಯಥಾಸ್ಥಿತಿ ಅಂದರೆ ಕಮ್ಯುನಿಸ್ಟ್ ಚೀನಾದ ಭಾಗವಾಗಿ ಅದರ ಭಾಗ್ಯ ಬರೆಯಲ್ಪಡುತ್ತದೆ. ಆದರೆ, ಬ್ಯಾಕ್‌ಹ್ಯಾಂಡ್ ಅಪ್ರಿಸಿಯೇಷನ್-ನಿಂದೆಯಂತೆ ಕಾಣುವ ಸ್ತುತಿಯ ರೂಪದಲ್ಲಿ ಒಬ್ಬ ವಿಶ್ಲೇಷಕರು ಹೇಳಿರುವುದು ಸ್ವಾರಸ್ಯಕರವಾಗಿದೆ: ಹಾಂಕಾಂಗ್‌ನ ಬಿಡುಗಡೆಯ ಅಭೀಪ್ಸೆ ಎಂಬ ಜೀನಿ ಶೀಷೆಯಿಂದ ಹೊರಬಿದ್ದಾಗಿದೆ. ಇನ್ನು ಅದು ಮತ್ತೆ ಒಳಹೋಗುವುದು ಎಲ್ಲಾದರೂ ಉಂಟೆ?

ಜೊಶುವಾ, ಕಳೆದ ವರ್ಷ ಡಿಮಾಸಿಸ್ಟೊ ಎಂಬ ರಾಜಕೀಯ ಪಕ್ಷ ಕಟ್ಟಲು ಅದುವೇ ಮುಖ್ಯ ಪ್ರೇರಣೆ. ಹಾಗೆ ಮುಂಬರುವ 2047ರಲ್ಲಿ ಹಾಂಕಾಂಗ್ ಮೇಲೆ ಕಮ್ಯುನಿಸಂ ಹೇರುವ ಮುನ್ನ ಜನತೆಯ ಅಭಿಪ್ರಾಯ ಸಂಗ್ರಹಿಸುವ ರೆರೆಂಡಮ್- ಜನಮತಗಣನೆ ನಡೆಯಬೇಕು ಎಂಬುದು ಎಳೆಯರೇ ತುಂಬಿರುವ ಈ ಪಕ್ಷದ ಆಗ್ರಹ. ಅದಕ್ಕಾಗಿ ವ್ಯವಸ್ಥೆಯನ್ನು ಅಧಿಕೃತವಾಗಿ ಪ್ರವೇಶಿಸಿ, ಶಾಸಕ ಮಂಡಳಿಗೆ ಚುನಾಯಿತನಾಗಲು ಆತನ 19ರ ವಯೋಮಾನ ಅಡ್ಡಿ ಬಂತು. ವಯಸ್ಸಿನ ಅರ್ಹತೆ ಗಳಿಸಿಕೊಳ್ಳುವ ಸಮಯಕ್ಕೆ ಸರಿಯಾಗಿ ಹೀಗೆ, ಸೆರೆವಾಸ ಮತ್ತು ಐದು ವರ್ಷಗಳ ನಿರ್ಬಂಧ ಎದುರಾಗಿದೆ. ಹಾಗೆ ಪೊಲೀಸ್ ಠಾಣೆಯ ಆತಿಥ್ಯ-ಕ್ರೌರ್ಯ ಅವನಿಗೆ ಹೊಸದೇನಲ್ಲ. ಆದರೆ ಅವನ್ನೆಲ್ಲ ಪ್ರಶ್ನಿಸುತ್ತ, ಹೊರ ಪ್ರಪಂಚಕ್ಕೆ ತಿಳಿಯಪಡಿಸುವ ಎಚ್ಚರ ಕಾಯ್ದುಕೊಂಡಿದ್ದಾನೆ. ಚೀನಾ ಬೆಂಬಲಿಸುವ ತೈವಾನ್, ಥಾಯ್ಲೆಂಡ್ ಹಾಗೂ ಮಲೇಷ್ಯಾ ದೇಶಗಳು ಜೊಶುವಾನನ್ನು ಸರಾಗವಾಗಿ ಸಂಚರಿಸಲು ಬಿಡದೆ ಇರುವುದರ ಮೂಲಕ ತಮ್ಮ ದ್ವೇಷ ಕಾರಿವೆ. ಅಮೆರಿಕದ ಸಿಐಎ ಏಜೆಂಟ್ ಅಂತೆ ಎಂಬ, ಸಾಮಾನ್ಯವಾಗಿ ಎಲ್ಲ ಪ್ರಚಂಡರ ವಿಷಯದಲ್ಲಿಯೂ ಹುಟ್ಟಿಕೊಳ್ಳುವ ಗಾಸಿಪ್‌ಗೂ ಆಹಾರವಾಗಿದ್ದಾನೆ.

ಭಾರತದ ಇತ್ತೀಚಿನ ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿದ್ದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ, ಒಂದು ಸಂದರ್ಶನದಲ್ಲಿ ಸೆಕ್ಯುಲರಿಸಮ್, ಸ್ಯೂಡೊಸೆಕ್ಯುಲರಿಸಮ್ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತ ಹೀಗೆಂದರು: ‘‘ಜಾತ್ಯತೀತ ಅಂದರೆ ಹೀಗಿರತಕ್ಕದ್ದು ಅಥವಾ ಜಾತ್ಯತೀತತೆ ಅಂದರೆ ಇಷ್ಟೆಲ್ಲ ಅಂಶಗಳು ಇರಬೇಕು ಎಂದು ವಿವರಿಸುವುದಕ್ಕಿಂತ ಒಬ್ಬ ನಿಜವಾದ ಜಾತ್ಯತೀತ ನಾಯಕನ ಉದಾಹರಣೆ ಕೊಟ್ಟು ಮುಗಿಸುವುದು ಹೆಚ್ಚು ಸೂಕ್ತ. ಹಾಗೆ ಹೊಳೆವ ಉದಾಹರಣೆ ಎಂದರೆ ಶಹೀದ್ ಭಗತ್‌ಸಿಂಗ್. ಸಾಮಾಜಿಕ ನ್ಯಾಯ ಹಾಗೂ ಎಲ್ಲ ಪ್ರಜೆಗಳಿಗೆ ಸಮಾನ ಹಕ್ಕುಗಳಿರುವ ಒಂದು ಗಣರಾಜ್ಯವಾಗಿ ತನ್ನ ತಾಯ್ನಾಡು ಅಭಿವೃದ್ಧಿ ಹೊಂದಬೇಕೆಂದು ಅವರು ಬಯಸಿದ್ದರು. ದೇಶದ ಅತ್ಯಂತ ಪ್ರಭಾವಿ (ಜನಪ್ರಿಯ) ನಾಯಕರಲ್ಲಿ ಒಬ್ಬರು ಎಂದು ಸರ್ವಸಮ್ಮತಿಯಿಂದ ಪರಿಗಣಿಸಲ್ಪಡುವ ಭಗತ್‌ಸಿಂಗ್ ಕ್ರಾಂತಿಕಾರಿಯಾಗಿದ್ದು ಸಹ ಹದಿವಯಸ್ಸಿನಲ್ಲಿಯೇ.

ಹಿಂದುಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಕಟ್ಟಿದಾಗ ಅವರಿಗೆ ಇಪ್ಪತ್ತೊಂದು. ಬಿಡುಗಡೆ ದೊರೆತ ಎಪ್ಪತ್ತು ವರ್ಷಗಳ ನಂತರವೂ ವಯೋವೃದ್ಧ-ಜ್ಞಾನವೃದ್ಧ ಪಂಡಿತರು ಕೂತು ಚರ್ಚಿಸುವುದು, ಅನುಮೋದಿಸುವುದು, ಆತನ ವಿಚಾರಧಾರೆಯನ್ನು ಅಂದರೆ ಅದಿನ್ನೆಷ್ಟು ಮೇಧಾವಿತನ?!’’ ಜೊಶುವಾ ವಿಷಯದಲ್ಲಿಯೂ ಇದು ಅನ್ವಯವಾಗುತ್ತದೆ. ನಾಡನ್ನು ಸರ್ವತಂತ್ರ, ಸ್ವತಂತ್ರವಾಗಿಸಲು ಹುಟ್ಟುತ್ತ, ಬೆಳೆಯುತ್ತಲೇ ಶುರುಹಚ್ಚಿಕೊಂಡ ಈ ಎಳೆಯನನ್ನು ಹಾಂಗ್‌ಕಾಂಗ್‌ನ ಪಿತಾಮಹ ಸಿನೆಮಾ ನಿರ್ದೇಶಕ ಎನ್ನಬಹುದಾದ ವೋಂಗ್ ಜಿಂಗ್ ಸಾರ್ವಜನಿಕವಾಗಿ ಬೆಂಬಲಿಸಿದ್ದಾನೆ. ಪಶ್ಚಿಮದ ಪ್ರತಿಷ್ಠೆಯ ನಿಯತಕಾಲಿಕಗಳು ನಿಯಮಿತವಾಗಿ ದೊಡ್ಡ ದೊಡ್ಡ ಬಿರುದು, ಶ್ರೇಣಿಗಳನ್ನು ಕೊಟ್ಟು ಕೊಂಡಾಡಿವೆ.

ಯಕೃತ್ ಕ್ಯಾನ್ಸರ್ ಚಿಕಿತ್ಸೆಗೆ ದೇಶದ ಹೊರಗೆ ಹೋಗಲು ಅನುಮತಿ ಸಿಗದೆ, ಸರಕಾರದ ಬಂಧನದಲ್ಲಿರುವಾಗಲೇ ಕಳೆದ ಜುಲೈನಲ್ಲಿ ಕೊನೆಯುಸಿರೆಳೆದ ಚೀನಾ ವಿರೋಧಿ ನಾಯಕ, ನೊಬೆಲ್ ಶಾಂತಿ ಪುರಸ್ಕಾರ ವಿಜೇತ ಲಿಯು ಕ್ಸಿಯಾಬೊ ಪ್ರಕರಣ ಎಲ್ಲರ ನೆನಪಿನಲ್ಲಿ ಹೊಚ್ಚಹೊಸದು. ಕಮ್ಯುನಿಸ್ಟ್ ಆಡಳಿತದ ಕಪಿಮುಷ್ಟಿ ಸಡಿಲಿಸಲು ಮಾನವೀಯ ಕಾರಣಗಳು ಸಹ ಅಸಮರ್ಥವಾಗಿವೆ ಎಂಬುದು ಇದರಿಂದ ನಿರೂಪಗೊಂಡಿದ್ದು ವಿಶ್ವದ ನಾಯಕರಿಗೆ, ನೀತಿ ನಿರೂಪಕರಿಗೆ ಆಘಾತ ತಂದೊಡ್ಡಿದೆ. ತೀಕ್ಷ್ಣ ಪ್ರತಿಕ್ರಿಯೆಗಳೂ ತಡವಿಲ್ಲದೆ ಹರಿದುಬಂದಿವೆ. ಪ್ರಜ್ಞಾವಂತ ಹೋರಾಟದ ಮುಂದಾಳುತ್ವ ವಹಿಸುವುದೆಂದರೆ ಇಷ್ಟೆಲ್ಲ ಬೆಲೆ ತೆರಬೇಕು ಎಂಬುದು ಹಗಲು ಬೆಳಕಿನಷ್ಟೇ ಸ್ಪಷ್ಟವಾಗಿರುವಾಗ ಇನ್ನೂ ಮೀಸೆಯೂ ಸರಿಯಾಗಿ ಮೂಡದ ಜೊಶುವಾ ಜೀವನದ ಏಳುಬೀಳುಗಳು ಹೇಗಿರುತ್ತವೆಯೋ?! ಬರಿಯ ಯೋಚನೆಯೇ ಅಪ್ರತಿಭಗೊಳಿಸುತ್ತದೆ.

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News