ಮುಝಫ್ಫರ್ ನಗರ ಗಲಭೆ: 190 ಕುಟುಂಬಗಳಿಗೆ ಇನ್ನೂ ಪರಿಹಾರ ಮರೀಚಿಕೆ

Update: 2017-09-09 05:24 GMT

ಲಕ್ನೋ, ಸೆ.9: ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ಕೋಮುಗಲಭೆ ನಡೆದು ನಾಲ್ಕು ವರ್ಷಗಳು ಕಳೆದರೂ ಗಲಭೆ ಸಂತ್ರಸ್ತರ ಪೈಕಿ 190 ಕುಟುಂಬಗಳಿಗೆ ರಾಜ್ಯ ಸರ್ಕಾರ ಇನ್ನೂ ಪರಿಹಾರ ವಿತರಿಸಿಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆಪಾದಿಸಿದೆ.

ಕೋಮುಗಲಭೆಯಲ್ಲಿ ಸಂತ್ರಸ್ತ 190 ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕದೇ ಅವರು ಪುನರ್ವಸತಿ ಶಿಬಿರಗಳಲ್ಲೇ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ 19 ಪುಟಗಳ ವರದಿಯಲ್ಲಿ ಹೇಳಲಾಗಿದೆ. ವರದಿ ಶುಕ್ರವಾರ ಬಿಡುಗಡೆಯಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ, 1800 ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದೆ. ಆದರೆ ಅಧಿಕಾರಿಗಳು ಕುಟುಂಬಕ್ಕೆ ಸಮರ್ಪಕ ವ್ಯಾಖ್ಯೆಯನ್ನು ನೀಡದೇ, ಜನರಿಗೆ ಪರಿಹಾರ ನಿರಾಕರಿಸುವ ಹುನ್ನಾರ ನಡೆಸಿದೆ ಎಂದು ವರದಿ ಉಲ್ಲೇಖಿಸಿದೆ.

ಅಧಿಕಾರಿಗಳ ಹೇಳಿಕೆ ಪ್ರಕಾರ, ಪರಿಹಾರ ನಿರಾಕರಿಸಲಾದ ಕುಟುಂಬಗಳು ಈಗಾಗಲೇ ಪರಿಹಾರ ಸ್ವೀಕರಿಸಿದ ಕುಟುಂಬಗಳ ಭಾಗ. ಸರ್ಕಾರದ ವ್ಯಾಖ್ಯೆಯ ಪ್ರಕಾರ, ಒಂದೇ ಅಡುಗೆಮನೆ ಹಂಚಿಕೊಂಡಿರುವ ಜನರ ಗುಂಪನ್ನು ಕುಟುಂಬ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರತ್ಯೇಕ ಕುಟುಂಬವಾಗಿ ವಾಸವಿದ್ದವರಿಗೆ ಕೂಡಾ ಹಣಕಾಸು ನೆರವು ನೀಡಿಲ್ಲ ಎಂದು ಅಮ್ನೆಸ್ಟಿ ದೂರಿದೆ. ಪ್ರತ್ಯೇಕ ಕುಟುಂಬ ಇರುವುದಕ್ಕೆ ರೇಷನ್ ಕಾರ್ಡ್, ವಿಳಾಸದ ದಾಖಲೆ ಒದಗಿಸಿದರೂ ಪರಿಹಾರ ನೀಡಿಲ್ಲ ಎಂದು ಹೇಳಲಾಗಿದೆ.

ಮುಝಫ್ಫರ್ ನಗರದಲ್ಲಿ 2013ರಲ್ಲಿ ನಡೆದ ಕೋಮುಗಲಭೆಯಲ್ಲಿ 60 ಮಂದಿ ಮೃತಪಟ್ಟು 50 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದರು. 250 ಗ್ರಾಮಗಳಲ್ಲಿ ಗಲಭೆ ನಡೆದಿತ್ತು. ನೂರಾರು ಕುಟುಂಬಗಳು ಮನೆಗಳನ್ನು ತೊರೆದು ಪರಿಹಾರ ಶಿಬಿರ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News