×
Ad

94ರಲ್ಲಿ ನಿವೃತ್ತರಾದ ರಾಮ್ ಜೇಠ್ಮಲಾನಿ

Update: 2017-09-11 17:19 IST

ಹೊಸದಿಲ್ಲಿ, ಸೆ.11: ಹಿರಿಯ ವಕೀಲ ಹಾಗೂ ರಾಜಕಾರಣಿ ರಾಮ್ ಜೇಠ್ಮಲಾನಿ ಅವರು ಕಾನೂನು ವೃತ್ತಿಯಿಂದ ಕಳೆದ ಶನಿವಾರವಷ್ಟೇ ತಮ್ಮ 94ನೆ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದರು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಜೇಠ್ಮಲಾನಿ ತಮ್ಮ ನಿವೃತ್ತಿ ಘೋಷಿಸಿದ್ದರು.

ದೇಶದ ಅತ್ಯಂತ ಪ್ರಮುಖ ವಕೀಲರುಗಳಲ್ಲೊಬ್ಬರಾಗಿದ್ದ ಜೇಠ್ಮಲಾನಿ ಅವರು ರಾಜ್ಯಸಭಾ ಸದಸ್ಯರೂ ಆಗಿ ಸೇವೆ ಸಲ್ಲಿಸಿದ್ದಾರಲ್ಲದೆ ಆಡಳಿತ ಬಿಜೆಪಿಯೊಂದಿಗೆ ನಂಟೂ ಹೊಂದಿದವರು.

2 ಜಿ ಹಗರಣ ಹಾಗೂ ಜೆಸ್ಸಿಕಾ ಲಾಲ್ ಕೊಲೆ ಪ್ರಕರಣ ಸಹಿತ ಹಲವಾರು ವಿಐಪಿ ಕೇಸುಗಳನ್ನು ಅವರು ತಮ್ಮ 76 ವರ್ಷಗಳ ಕಾನೂನು ವೃತ್ತಿಯಲ್ಲಿ ಪ್ರತಿನಿಧಿಸಿದ್ದರು.

ಇತ್ತೀಚೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿಂದನಾತ್ಮಕ ಪದ ಉಪಯೋಗಿಸಿದ್ದಾರೆಂದು ಆರೋಪಿಸುವ ಮೂಲಕ ಜೇಠ್ಮಲಾನಿ ಸುದ್ದಿಯಲ್ಲಿದ್ದರು. ಜೇಟ್ಲಿ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ ನಂತರ ಹಾಗೂ ಜೇಠ್ಮಲಾನಿ ಶುಲ್ಕವಾದ ರೂ 3.86 ಕೋಟಿ ನೀಡಲು ಸಾರ್ವಜನಿಕ ನಿಧಿಯನ್ನು ಕೇಜ್ರಿವಾಲ್ ಕೋರಿದ ಬಳಿಕ ಈ ಬೆಳವಣಿಗೆ ನಡೆದಿತ್ತು.

ಜೇಠ್ಮಲಾನಿ ಅವರು ಪ್ರತಿನಿಧಿಸಿದ್ದ ಏಳು ವಿಐಪಿ ಕೇಸುಗಳು ಇಂತಿವೆ

* ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಲ್ಲಿ ಶಿಕ್ಷೆಗೊಳಗಾಗಿದ್ದ ಸತ್ವಂತ್ ಸಿಂಗ್ ಹಾಗೂ ಕೇಹರ್ ಸಿಂಗ್ ಅವರ ಪರವಾಗಿ ಜೇಠ್ಮಲಾನಿ ವಾದಿಸಿದ್ದರು.

* ಇನ್ನೊಬ್ಬ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ವಿ ಶ್ರೀಹರನ್ ಆಲಿಯಾಸ್ ಮುರುಗನ್ ವಕೀಲರಾಗಿಯೂ ಜೇಠ್ಮಲಾನಿ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಅವರು 1991ರಲ್ಲಿ ಬಾಂಬ್ ದಾಳಿಯಲ್ಲಿ ಹತರಾದ ಘಟನೆಯ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಜೇಠ್ಮಲಾನಿ ಅದು ಭಾರತದ ವಿರುದ್ಧ ನಡೆದ ಅಪರಾಧವಲ್ಲ ಎಂದು ಹೇಳಿದ್ದರು.

* ಜೇಠ್ಮಲಾನಿ ಅವರು ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರ ವಕೀಲರಾಗಿ ಹವಾಲ ಹಗರಣದಲ್ಲಿ ವಾದಿಸಿದ್ದರು. ತಾನು ಅಡ್ವಾಣಿ ಅವರ ವಕೀಲರಾಗಿ ಕಾರ್ಯನಿರ್ವಹಿಸಿದ್ದರಿಂದಲೇ ಅಡ್ವಾಣಿ ಈ ಕೇಸನ್ನು ಗೆದ್ದರು ಎಂದು ಜೇಠ್ಮಲಾನಿ ಇತ್ತೀಚೆಗೆ ಹೇಳಿಕೊಂಡಿದ್ದರು.

* ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಮನು ಶರ್ಮನ ವಕೀಲರೂ ಆಗಿದ್ದರು ಜೇಠ್ಮಲಾನಿ.

* ಹಲವಾರು ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಕೀಲರಾಗಿದ್ದರು.

* ರಾಜಸ್ಥಾನದ ಜೋಧಪುರದ ತನ್ನ ಆಶ್ರಮದಲ್ಲಿ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತ ಸ್ವಘೋಷಿತ ದೇವಮಾನವ ಅಸಾರಾಂ ಬಾಪುವಿಗೆ ಜಾಮೀನು ಸಿಗಲು ಜೇಠ್ಮಲಾನಿ ಕಾರಣರಾಗಿದ್ದರು.

* ಅಕ್ರಮ ಆಸ್ತಿ ಪ್ರಕರಣದಲ್ಲಿ ಜೇಠ್ಮಲಾನಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಕೀಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News