×
Ad

ರೋಹಿಂಗ್ಯಾ ನಿರಾಶ್ರಿತರಿಗೆ ಜಮೀನು ನೀಡಿದ ಬಾಂಗ್ಲಾದೇಶ

Update: 2017-09-11 23:32 IST

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 11: ಮ್ಯಾನ್ಮಾರ್‌ನಲ್ಲಿ ಸೇನೆ ನಡೆಸುತ್ತಿರುವ ಹಿಂಸಾಚಾರಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಹೊಸದಾಗಿ ಬರುತ್ತಿರುವ ರೋಹಿಂಗ್ಯಾ ನಿರಾಶ್ರಿತರಿಗೆ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲು ಈಗ ಅಸ್ತಿತ್ವದಲ್ಲಿರುವ ಕುಟುಪಲೊಂಗ್ ಶಿಬಿರದ ಸಮೀಪದಲ್ಲೇ 2 ಎಕರೆ ಜಮೀನನ್ನು ಪ್ರಧಾನಿ ಶೇಖ್ ಹಸೀನಾ ನೀಡಿದ್ದಾರೆ ಎಂದು ವಿದೇಶ ವ್ಯವಹಾರಗಳ ಸಹಾಯಕ ಸಚಿವ ಮುಹಮ್ಮದ್ ಶಹ್ರಿಯಾರ್ ಅಲಂ ಸೋಮವಾರ ಫೇಸ್‌ಬುಕ್‌ನಲ್ಲಿ ಹಾಕಿದ ಹೇಳಿಕೆಯೊಂದು ತಿಳಿಸಿದೆ.

ಹೊಸದಾಗಿ ಬಂದಿರುವವರ ಬೆರಳಚ್ಚು ಪಡೆಯುವ ಹಾಗೂ ಅವರನ್ನು ನೋಂದಾಯಿಸುವ ಪ್ರಕ್ರಿಯೆಯನ್ನು ಸರಕಾರ ಸೋಮವಾರ ಆರಂಭಿಸುವುದು ಎಂದು ಅವರು ಹೇಳಿದರು. ಹಸೀನಾ ಮಂಗಳವಾರ ರೋಹಿಂಗ್ಯಾ ನಿರಾಶ್ರಿತರನ್ನು ಭೇಟಿಯಾಗಲಿದ್ದಾರೆ.

  ರೋಹಿಂಗ್ಯಾರ ಸಾಮೂಹಿಕ ವಲಸೆಯನ್ನು ನೋಡಿ ನೆರವು ಸಂಸ್ಥೆಗಳು ದಂಗಾಗಿವೆ. ಅವರ ಪೈಕಿ ಹೆಚ್ಚಿನವರು ಕಾಡಿನಲ್ಲಿ ದಿನಗಟ್ಟಲೆ ನಡೆದು ಅಥವಾ ಸಣ್ಣ ಕಿಕ್ಕಿರಿದ ದೋಣಿಗಳಲ್ಲಿ ಪ್ರಯಾಣಿಸಿ ಹಸಿದು ಹಾಗೂ ಆಘಾತಗೊಂಡು ಬಂದವರು.

ಮ್ಯಾನ್ಮಾರ್ ಸೈನಿಕರು ಗ್ರಾಮಸ್ಥರ ಮೇಲೆ ಮನಬಂದಂತೆ ಗುಂಡು ಹಾರಿಸುತ್ತಿದ್ದಾರೆ, ಅವರ ಮನೆಗಳನ್ನು ಸುಡುತ್ತಿದ್ದಾರೆ ಹಾಗೂ ಊರು ಬಿಟ್ಟು ಹೋಗುವಂತೆ ಅಥವಾ ಸಾಯುವಂತೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಹೆಚ್ಚಿನ ನಿರಾಶ್ರಿತರು ಹೇಳುತ್ತಾರೆ. ತಮ್ಮ ಮೇಲೆ ಬೌದ್ಧರ ಗುಂಪುಗಳು ಹಲ್ಲೆ ನಡೆಸಿವೆ ಎಂದು ಕೆಲವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News