ವಾರ್ತಾಭಾರತಿ ವರದಿಗಾರನ ಅಕ್ರಮ ಬಂಧನ

Update: 2017-09-11 18:44 GMT

ದಕ್ಷಿಣ ಕನ್ನಡದ ಬಂಟ್ವಾಳ ಪೊಲೀಸರು ಸೆಪ್ಟಂಬರ್ 7ರಂದು ವಾರ್ತಾಭಾರತಿಯ ವರದಿಗಾರ (ಮಂಗಳೂರು ಆವೃತಿ)ನನ್ನು ಬಂಧಿಸಿ, ರಾತ್ರಿಯಿಡೀ ವಿನಾಕಾರಣ ಠಾಣೆಯಲ್ಲಿ ಇಟ್ಟುಕೊಂಡಿರುವ ಘಟನೆ ರಾಜ್ಯಾದ್ಯಂತ ಸುದ್ದಿಯಾಗಿದೆ.

ಸಂಜೆ 7ರ ವೇಳೆಗೆ ಬಂಧನಕ್ಕೊಳಗಾದ ಇಮ್ತಿಯಾಝ್ ತುಂಬೆ ಅವರ ಸ್ನೇಹಿತರು ಮತ್ತು ಪತ್ರಿಕೆಯ ಸಹೋದ್ಯೋಗಿಗಳು ಪೊಲೀಸ್ ಠಾಣೆಗೆ ತೆರಳಿ, ಬಂಧನಕ್ಕೆ ಕಾರಣ ತಿಳಿಯುವ ಪ್ರಯತ್ನ ಮಾಡಿದರು. 2017ರ ಸೆಪ್ಟ್ಟಂಬರ್ 3ರ ಸಂಚಿಕೆಯಲ್ಲಿ ಪ್ರಕಟವಾದ ವರದಿಯ ಹಿನ್ನೆಲೆಯಲ್ಲಿ ಬಂಧಿಸಿದ್ದಾಗಿ ಪೊಲೀಸರು ಅನಧಿಕೃತವಾಗಿ ತಿಳಿಸಿದರು.

ನಿಗೂಢವಾಗಿಯೇ ಉಳಿದಿರುವ ಹತ್ಯೆ ಪ್ರಕರಣವೊಂದರ ತನಿಖೆಯ ನೆಪದಲ್ಲಿ ಪೊಲೀಸರು ಬಂಟ್ವಾಳದ ಬಳಿ ಶಂಕಿತರ ಮನೆಯೊಂದಕ್ಕೆ ಪ್ರವೇಶಿಸಿ, ಅನುಚಿತವಾಗಿ ವರ್ತಿಸಿದ ಕುರಿತಂತೆ ಸೆಪ್ಟಂಬರ್ 3ರಂದು ವಾರ್ತಾಭಾರತಿ ವರದಿ ಪ್ರಕಟಿಸಿತ್ತು. ಪೊಲೀಸರು ದಾಳಿ ಮಾಡಿದಾಗ ಮನೆಯಲ್ಲಿದ್ದ ಕುಟುಂಬ ಸದಸ್ಯರ ಹೇಳಿಕೆಯನ್ನಾಧರಿಸಿ ಆ ವರದಿ ಸಿದ್ಧಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆ ಬಳಿಕ ಸ್ಪಷ್ಟನೆ ನೀಡಿ, ದಾಳಿ ನಡೆಸಿದ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದ್ದರು. ಸೆಪ್ಟಂಬರ್ 4ರಂದು ಪೊಲೀಸ್ ಅಧೀಕ್ಷಕರ ಹೇಳಿಕೆಯನ್ನು ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಲಾಗಿತ್ತು.

ಇದುವರೆಗೆ ಪತ್ರಿಕೆಗಾಗಲೀ, ವರದಿಗಾರನಿಗಾಗಲೀ, ಪೊಲೀಸರು ಅಥವಾ ಯಾವುದೇ ಇಲಾಖೆಯಿಂದಲೂ ವರದಿ ಬಗ್ಗೆ ನೋಟಿಸ್ ಬಂದಿಲ್ಲ. ಬೇಕಾಬಿಟ್ಟಿಯಾಗಿ ವರದಿಗಾರನನ್ನು ಬಂಧಿಸಿರುವುದು ನೇರ ದಾಳಿಯಾಗಿದ್ದು, ನಮ್ಮ ಧ್ವನಿಯನ್ನು ದಮನಿಸುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ವಾಸ್ತವವನ್ನು ತಿಳಿದುಕೊಳ್ಳುವ ಹಕ್ಕನ್ನು ನಿರಾಕರಿಸುವ ಕ್ರಮ ಎಂದು ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಪ್ರತಿಕ್ರಿಯಿಸಿದ್ದಾರೆ.

ಇಮ್ತಿಯಾಝ್ ತುಂಬೆ ಹಾಗೂ ಪತ್ರಿಕೆಯ ಪ್ರಧಾನ ಸಂಪಾದಕರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 153 ಎ ಹಾಗೂ 505 (2) ಅನ್ವಯ ಪ್ರಕರಣ ದಾಖಲಾಗಿದೆ. ತುಂಬೆಯವರ ಮಧ್ಯಂತರ ಜಾಮೀನು ಅರ್ಜಿಯನ್ನು ಬಂಟ್ವಾಳ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಅವರನ್ನು ಸೆರೆಮನೆಗೆ ಕಳುಹಿಸಲಾಗಿದೆ.(ಸೋಮವಾರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ)

ಬಂಟ್ವಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ವಾರ್ತಾಭಾರತಿ ಇತ್ತೀಚಿನ ತಿಂಗಳಲ್ಲಿ ಸರಣಿ ವಿಶೇಷ ವರದಿ ಮತ್ತು ಸಂಪಾದಕೀಯಗಳನ್ನು ಪ್ರಕಟಿಸಿತ್ತು. ಈ ವರದಿ ಹಾಗೂ ಸಂಪಾದಕೀಯಗಳಿಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ಬಂದಿತ್ತು ಮತ್ತು ಕೆಲ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರು ಮತ್ತು ಕೆಲ ಪೊಲೀಸ್ ಅಧಿಕಾರಿಗಳ ಸಿಟ್ಟಿಗೆ ಕಾರಣವಾಗಿತ್ತು. ಇಮ್ತಿಯಾಝ್ ಅವರನ್ನು ಬಂಧಿಸುವ ಮೂಲಕ ಈ ಮುಖಂಡರು ಹಾಗೂ ಅಧಿಕಾರಿಗಳು ಪರೋಕ್ಷ ದಾಳಿ ನಡೆಸಿದ್ದು, ನಮ್ಮ ಬಾಯಿ ಮುಚ್ಚಿಸುವ ಯತ್ನ ಮಾಡಿದ್ದಾರೆ ಎಂಬ ಬಲವಾದ ಶಂಕೆ ನಮ್ಮದು ಎಂದು ಪುತ್ತಿಗೆ ನ್ಯೂಸ್‌ಲಾಂಡ್ರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ