ಆ್ಯಸಿಡಿಟಿಗೆ ಅತ್ಯಂತ ಅಚ್ಚರಿದಾಯಕ ಕಾರಣವಿಲ್ಲಿದೆ

Update: 2017-09-13 11:49 GMT

ಊಟದ ನಂತರ ಹೊಟ್ಟೆ ಮತ್ತು ಎದೆಯಲ್ಲಿ ಉರಿಯ ಅನುಭವವಾಗುತ್ತದೆಯೇ? ಹಾಗಿದ್ದರೆ ಆ್ಯಸಿಡಿಟಿ ಅಥವಾ ಆಮ್ಲೀಯತೆ ನಿಮ್ಮನ್ನು ಕಾಡುತ್ತಿದೆ. ವಾಯು, ಅಜೀರ್ಣ, ಎದೆ ಮತ್ತು ಹೊಟ್ಟೆಯಲ್ಲಿ ಉರಿಯುತ್ತಿರುವ ಅನುಭವ, ವಾಕರಿಕೆ, ಮಲಬದ್ಧತೆ ಇತ್ಯಾದಿಗಳೆಲ್ಲ ಆ್ಯಸಿಡಿಟಿಯ ಲಕ್ಷಣಗಳಾಗಿವೆ. ಅನಾರೋಗ್ಯಕರ ಆಹಾರ ಆ್ಯಸಿಡಿಟಿಗೆ ಮುಖ್ಯ ಕಾರಣವಾಗಿದೆ. ಆದರೆ ಮಾನಸಿಕ ಒತ್ತಡವು ಕೂಡ ಆ್ಯಸಿಡಿಟಿಯನ್ನುಂಟು ಮಾಡುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ಬೆಳಕಿಗೆ ತಂದಿವೆ.

ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ಏನಾದರೊಂದು ಒತ್ತಡಕ್ಕೆ ಗುರಿಯಾಗುತ್ತಲೇ ಇರುತ್ತೇವೆ. ಹೆಚ್ಚಿನ ಕೆಲಸ, ಕಠಿಣ ವಿಷಯಗಳ ಅಧ್ಯಯನ, ಹಣಕಾಸು ಸಮಸ್ಯೆ, ಸಂಬಂಧದಲ್ಲಿ ವಿವಾದ ಇತ್ಯಾದಿಗಳು ಮಾನಸಿಕ ಒತ್ತಡಕ್ಕೆ ಕಾರಣಗಳಾಗಿವೆ. ಕೆಲವರಿಗೆ ಪ್ರತಿದಿನವೂ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡವುಂಟಾಗಬಹುದು. ಮಾನಸಿಕ ಒತ್ತಡ ನಮ್ಮ ಆರೋಗ್ಯದ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

 ನೀವು ಹಿಂದೆ ಯಾವಾಗಲಾದರೂ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಿದ್ದರೆ ತಲೆನೋವು, ದಣಿವು, ವಾಕರಿಕೆ ಇತ್ಯಾದಿಗಳು ಅನುಭವವಾಗಿರಬಹುದು. ಮಾನಸಿಕ ಒತ್ತಡವು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಗಳುಂಟಾಗುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಾನಸಿಕ ಒತ್ತಡವು ನಮ್ಮ ಶರೀರದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ ಮತ್ತು ಇದು ಕೆಲವು ಕಾಯಿಲೆಗಳನ್ನು ಬಳುವಳಿಯಾಗಿ ನೀಡುತ್ತದೆ.

ವ್ಯಕ್ತಿ ಆರೋಗ್ಯಕರ ಜೀವನಶೈಲಿಯನ್ನು ಹೊಂದಿದ್ದರೂ ಆ್ಯಸಿಡಿಟಿಯನ್ನುಂಟು ಮಾಡುವಲ್ಲಿ ಮಾನಸಿಕ ಒತ್ತಡವು ಪ್ರಮುಖ ಕಾರಣಗಳಲ್ಲೊಂದಾಗಿದೆ ಎಂದು ಇಂಟರ್ನಲ್ ಮೆಡಿಸನ್ ಮ್ಯಾಗಝಿನ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ. ವ್ಯಕ್ತಿ ತೀವ್ರ ಒತ್ತಡದಲ್ಲಿರುವಾಗ ಶರೀರದಲ್ಲಿಯ ಕಾರ್ಟಿಸೋಲ್ ಹಾರ್ಮೋನ್‌ನ ಮಟ್ಟವು ಜಠರದಲ್ಲಿ ಅಧಿಕ ಆಮ್ಲಗಳ ಉತ್ಪಾದನೆಯನ್ನು ಮಾಡುತ್ತದೆ ಮತ್ತು ಇದು ಆ್ಯಸಿಡಿಟಿಗೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News