ಭಗತ್ ಸಿಂಗ್ ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಹೋರಾಟ ನಡೆಸುತ್ತಿರುವ ಪಾಕ್ ವಕೀಲ

Update: 2017-09-13 12:10 GMT

ಲಾಹೋರ್, ಸೆ.13: ಕ್ರಾಂತಿಕಾರಿ ನಾಯಕ ಭಗತ್ ಸಿಂಗ್ ಹುತಾತ್ಮರಾಗಿ ಬರೋಬ್ಬರಿ 86 ವರ್ಷಗಳ ನಂತರ ಪಾಕಿಸ್ತಾನಿ ವಕೀಲರೊಬ್ಬರು ಲಾಹೋರ್ ನ್ಯಾಯಾಲಯದಲ್ಲಿ ಭಗತ್ ಸಿಂಗ್  ನಿರಪರಾಧಿ ಎಂದು ಸಾಬೀತುಪಡಿಸಲು ಹೋರಾಡುತ್ತಿದ್ದಾರೆ.

ಭಗತ್ ಸಿಂಗ್ ನಿರಪರಾಧಿ ಎಂದು ಸಾಬೀತುಪಡಿಸಬಹುದಾದ ಈ ಪ್ರಕರಣದ ಶೀಘ್ರ ವಿಚಾರಣೆ ನಡೆಸುವಂತೆ ವಕೀಲ ಇಮ್ತಿಯಾಝ್ ರಶೀದ್ ಖುರೇಷಿ ಸೋಮವಾರ  ಲಾಹೋರ್ ಹೈಕೋರ್ಟ್ ಮುಂದೆ ಮತ್ತೆ ಅಪೀಲು ಸಲ್ಲಿಸಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಲಾಹೋರ್ ಹೈಕೋರ್ಟಿನ ವಿಭಾಗೀಯ ಪೀಠವು ಖರೇಷಿ ಅಪೀಲಿನ ಮೇಲಿನ ವಿಚಾರಣೆ ನಡೆಸಲು ಹೆಚ್ಚು ಸದಸ್ಯರಿರುವ ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿತ್ತು. ಅರ್ಜಿದಾರ ಖುರೇಷಿ ಅವರು ಲಾಹೋರ್ ನಲ್ಲಿ ಭಗತ್ ಸಿಂಗ್ ಸ್ಮಾರಕ ಫೌಂಡೇಶನ್ ನಡೆಸುತ್ತಿದ್ದಾರೆ.

ಭಗತ್ ಸಿಂಗ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಅವಿಭಜಿತ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಹಲವಾರು ಪಾಕಿಸ್ತಾನೀಯರು, ಮುಖ್ಯವಾಗಿ ಪಂಜಾಬ್ ಮಾತನಾಡುವ ಲಾಹೋರ್ ಪ್ರಾಂತ್ಯದ ಜನರು ಅವರನ್ನು ಹೀರೋ' ಎಂದೇ ಪರಿಗಣಿಸುತ್ತಾರೆ ಎಂದು ಖುರೇಷಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಅವರನ್ನು ಭಾರತೀಯರಲ್ಲದೆ ಪಾಕಿಸ್ತಾನೀಯರೂ ಗೌರವಿಸುತ್ತಾರೆ, ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರು ಕೂಡಾ ಎರಡು ಬಾರಿ ಭಗತ್ ಸಿಂಗ್ ರಿಗೆ ಗೌರವ ಸಲ್ಲಿಸಿದ್ದಾರೆ. ಇದು ಒಂದು ರಾಷ್ಟ್ರೀಯ ಮಹತ್ವದ ವಿಚಾರ ಎಂದು ಖುರೇಷಿ ಹೇಳಿದ್ದರು.

ಭಗತ್ ಸಿಂಗ್ ರಿಗೆ ಸರಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದೂ ಅರ್ಜಿದಾರರು ಮನವಿ ಮಾಡಿದ್ದಾರಲ್ಲದೆ ಅವರಿಗೆ ಗಲ್ಲು ಶಿಕ್ಷೆ ನೀಡಿ ಹೊರಡಿಸಲಾಗಿದ್ದ ಆದೇಶವನ್ನು ಬದಿಗಿರಿಸಬೇಕೆಂದೂ ಆಗ್ರಹಿಸಿದ್ದಾರೆ. ಕೇಂದ್ರ ಲಾಹೋರ್ ನಗರದ ಶದ್ಮನ್ ಚೌಕ್ ನಲ್ಲಿ  ಭಗತ್ ಸಿಂಗ್ ಪ್ರತಿಮೆಯೊಂದನ್ನೂ  ನಿರ್ಮಿಸಬೇಕೆಂಬುದೂ ಖುರೇಷಿ ಬೇಡಿಕೆಯಾಗಿದೆ.

ಭಗತ್ ಸಿಂಗ್ ಗೆ ಆರಂಭದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೂ ನಂತರ ಇನ್ನೊಂದು ಸುಳ್ಳು ಪ್ರಕರಣದಲ್ಲಿ ಮರಣದಂಡನೆ ಘೋಷಿಸಲಾಗಿತ್ತು ಎಂಬುದು ಖುರೇಷಿ ವಾದವಾಗಿದೆ. 2014ರಲ್ಲಿ ಲಾಹೋರ್ ಪೊಲೀಸರು ಅನಾರ್ಕಲಿ ಪೊಲೀಸ್ ಠಾಣೆಯ ದಾಖಲೆಗಳನ್ನು ಕೋರ್ಟ್ ಆದೇಶದಂತೆ ಜಾಲಾಡಿ 1928ರಲ್ಲಿ ನಡೆದ ಸಾಂಡರ್ಸ್ ಹತ್ಯೆಯ ಎಫ್ ಐಆರ್ ಹುಡುಕಿದ್ದರು.  ನ್ಯಾಯಾಲಯದ ಆದೇಶದಂತೆ ಈ ಎಫ್ ಐಆರ್ ಪ್ರತಿಯನ್ನು ಖುರೇಷಿ ಅವರಿಗೆ ನೀಡಲಾಗಿತ್ತು. ಉರ್ದು ಭಾಷೆಯಲ್ಲಿ ಡಿಸೆಂಬರ್ 17, 1928ರಲ್ಲಿ ಬರೆಯಲಾದ ಈ ಎಫ್ ಐಆರ್ ನಲ್ಲಿ  ಇಬ್ಬರು ಅಪರಿಚಿತ ಬಂದೂಕುಧಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಐಪಿಸಿ ಸೆಕ್ಷನ್ 302, 1201 ಹಾಗೂ 109 ಅನ್ವಯ ಪ್ರಕರಣ ದಾಖಲಾಗಿತ್ತು. ಎಫ್ ಐಆರ್ ನಲ್ಲಿ ಸಿಂಗ್ ಹೆಸರಿಲ್ಲದೇ ಇದ್ದರೂ ಅವರಿಗೆ ನಂತರ ಮರಣದಂಡನೆ ಘೋಷಿಸಲಾಗಿತ್ತು.

ಪ್ರಕರಣದ 450 ಸಾಕ್ಷಿಗಳನ್ನು ವಿಚಾರಣೆ ನಡೆಸದೇ ತೀರ್ಪು ನೀಡಲಾಗಿತ್ತು ಹಾಗೂ ಭಗತ್ ಸಿಂಗ್ ವಕೀಲರಿಗೆ ಸಾಕ್ಷಿಗಳನ್ನು ಪಾಟೀಸವಾಲಿಗೊಡ್ಡಲು ನಿರಾಕರಿಸಲಾಗಿತ್ತು ಎಂದು ಅವರು ತಿಳಿಸುತ್ತಾರೆ. "ಸಾಂಡರ್ಸ್ ಪ್ರಕರಣದಲ್ಲಿ ಭಗತ್ ಸಿಂಗ್  ನಿರಪರಾಧಿ ಎಂದು ಸಾಬೀತುಪಡಿಸುತ್ತೇನೆ" ಎಂದು ಖುರೇಷಿ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಭಗತ್ ಸಿಂಗ್ ರನ್ನು 1931ರ ಮಾರ್ಚ್ 23ರಂದು ಅವರು 23 ವರ್ಷದವರಾಗಿದ್ದಾಗ ಗಲ್ಲಿಗೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News