×
Ad

ಗೌರಿ ಲಂಕೇಶ್ ಹತ್ಯೆ ಸಂಘಪರಿವಾರದ ಕೃತ್ಯ: ಸಿಪಿಐ (ಮಾವೊವಾದಿ)

Update: 2017-09-14 21:14 IST

ನಾಗಪುರ, ಸೆ. 14: ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಲ್ಲಿ ತಮ್ಮ ಪಾತ್ರ ನಿರಾಕರಿಸಿರುವ ಸಿಪಿಐ (ಮಾವೋವಾದಿ), ಈ ಹತ್ಯೆ ಹಿಂದೆ ಹಿಂದೂ ಫ್ಯಾಶಿಸ್ಟ್ ಶಕ್ತಿ ಇದೆ ಎಂದಿದೆ.

 ಹಿಂದೂ ಫ್ಯಾಶಿಸ್ಟ್ ಶಕ್ತಿ ಜನಧ್ವನಿ ಹತ್ತಿಕ್ಕಲು ಗೌರಿ ಅವರನ್ನು ಹತ್ಯೆಗೈದು ಇತರರ ಮೇಲೆ ಆರೋಪ ಹೊರಿಸುತ್ತಿದೆ ಎಂದು ಸಿಪಿಐ (ಮಾವೊವಾದಿ) ಕೇಂದ್ರ ಸಮಿತಿಯ ವಕ್ತಾರ ಅಭಯ್ ಹೆಸರಲ್ಲಿ ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆ ತಿಳಿಸಿದೆ.

ಕೇಂದ್ರದಲ್ಲಿ ಬಿಜೆಪಿ ಸರಕಾರವನ್ನು ರಕ್ಷಿಸಲು ಸಂಘ ಪರಿವಾರದ ಬ್ರಾಹ್ಮಣ ಫ್ಯಾಶಿಸ್ಟ್ ಗಳು ಎಡಪಂಥೀಯ, ಜನಪರ, ಪ್ರಗತಿಪರ ಹಾಗೂ ಪ್ರಜಾಪ್ರಭುತ್ವವಾದಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿರುವುದನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಫ್ಯಾಶಿಸ್ಟ್ ಶಕ್ತಿಯ ವಿರುದ್ಧ ಸಮಾನ ಮನಸ್ಕರು ಸಂಘಟಿತರಾಗಿ ನಿರ್ಣಾಯಕ ಹೋರಾಟ ನಡೆಸಬೇಕು ಎಂದು ಅದು ಆಗ್ರಹಿಸಿದೆ.

  ಬಡವರು, ಅಂಚಿಗೆ ತಳ್ಳಲ್ಪಟ್ಟವರು, ಅಲ್ಪಸಂಖ್ಯಾತರ ಮೇಲೆ ಹಿಂದುತ್ವ ಶಕ್ತಿ ಹಾಗೂ ಭ್ರಷ್ಟ ಸರಕಾರ ನಡೆಸುತ್ತಿರುವ ದೌರ್ಜನ್ಯ ವಿರೋಧಿಸಿ ಗೌರಿ ಲಂಕೇಶ್ ಅಭಿಯಾನ ನಡೆಸಿದ್ದರು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭಾಗಿಯಾಗಿರುವುದನ್ನು ಬೆಳಕಿಗೆ ತಂದ ಗುಜರಾತ್ ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಗುಜರಾತ್ ಫೈಲ್ಸ್ ಪುಸ್ತಕವನ್ನು ಗೌರಿ ಲಂಕೇಶ್ ಕನ್ನಡಕ್ಕೆ ಅನುವಾದಿಸಿದ್ದರು. ಇದು ಹಿಂದುತ್ವ ಶಕ್ತಿಗಳ ಕಣ್ಣು ಕೆಂಪಾಗಿಸಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವೌನವಾಗಿರುವುದರನ್ನು ಗುರಿ ಮಾಡಿರುವ ಸಿಪಿಐ (ಮಾವೋವಾದಿ) ಇದು ಗೌರಿಯ ಹತ್ಯೆ ಹಿಂದುತ್ವದ ಕೈಯಲ್ಲಿ ಆಗಿದೆ ಎಂಬುದನ್ನು ಸೂಚಿಸುತ್ತದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News