ತನ್ನ ಬಂಧನಕ್ಕೆ ಬಿಜೆಪಿಯ ದ್ವೇಷ ರಾಜಕಾರಣವೇ ಕಾರಣ: ಅಖಿಲ್ ಗೊಗೋಯ್

Update: 2017-09-15 04:15 GMT

ಗುವಾಹತಿ, ಸೆ.15: ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ಹೋರಾಟಗಾರ ಅಖಿಲ್ ಗೊಗೋಯ್, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, "ಅಸ್ಸಾಂ ಜನರ ಪರವಾಗಿ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಆರೆಸ್ಸೆಸ್ ಹಿನ್ನೆಲೆಯ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಈ ಬಂಧನದ ಹಿನ್ನೆಲೆಯಲ್ಲಿ ಸ್ಥಳೀಯ ಸಮುದಾಯದ ರೈತರನ್ನು ಒಳಗೊಂಡ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್) ರಾಜ್ಯಾದ್ಯಂತ ಗುರುವಾರ ಪ್ರತಿಭಟನೆಗೆ ಇಳಿದಿತ್ತು. 24 ಗಂಟೆಯ ಒಳಗಾಗಿ ಬಂಧಿತ ನಾಯಕನನ್ನು ಬಿಡುಗಡೆ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ದಿಬ್ರೂಗಢ ನ್ಯಾಯಾಲಯ ಗೊಗೋಯ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು 14 ದಿನಗಳ ಕಸ್ಟಡಿಗೆ ಅವಕಾಶ ಕೋರಿದ್ದರು.

ಪ್ರತಿಭಟನಾಕಾರರು ಹೆದ್ದಾರಿಗಳನ್ನು ಹಲವು ಗಂಟೆಗಳ ಕಾಲ ತಡೆದದ್ದಲ್ಲದೇ, ಕೇಂದ್ರ ಪೊಲೀಸ್ ಠಾಣೆ ಮುಂದೆ ಬೀಡುಬಿಟ್ಟಿದ್ದಾರೆ. ಶಾಂತಿ ಕಾಪಾಡುವ ಸಲುವಾಗಿ ನಗರದಲ್ಲಿ ಅರೆಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ದಿಬ್ರೂಗಢ ಜಿಲ್ಲಾದಿಕಾರಿ ಲಾಯಾ ಮದ್ದೌರಿ ಹೇಳಿದ್ದಾರೆ.

ಮಂಗಳವಾರ ನಡೆದ ರ್ಯಾಲಿಯಲ್ಲಿ ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಗೊಗೋಯ್ ಅವರನ್ನು ಗೋಲಘಾಟ್ ನಿವಾಸದಿಂದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡಸಂಹಿತೆಯ ಆರು ಕಲಂಗಳಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

"ಬಿಜೆಪಿ ಸರ್ಕಾರ ನನ್ನನ್ನು ಅಸ್ಸಾಮಿಗಳ ಪರವಾಗಿ ಮಾತನಾಡಿದ್ದಕ್ಕೆ ಬಂಧಿಸಿದೆ. ನನ್ನ ಅಪರಾಧವೆಂದರೆ, ಹೊರಗಿನವರನ್ನು, ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶದಿಂದ ಬರುವ ಹಿಂದೂಗಳನ್ನು ಅಸ್ಸಾಂನಲ್ಲಿ ಹೇರಲು ನಡೆಸಿದ ಬಿಜೆಪಿ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದು" ಎಂದು ಪೊಲೀಸ್‌ ಠಾಣೆಯಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಗೊಗೋಯ್ ಹೇಳಿದ್ದಾರೆ.

ಬಂಗಾಳಿ ಹಿಂದೂ ವಲಸಿಗರಿಗೆ ಪುನರ್ವಸತಿ ಕಲ್ಪಿಸಬೇಕು ಎಂಬ ಆರೆಸ್ಸೆಸ್ ಸೂಚನೆಯಂತೆ ಅವರನ್ನು ಓಲೈಸುವ ಸಲುವಾಗಿ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಹಾಗೂ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮ, ಸ್ಥಳೀಯರಿಗೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಕೆಎಂಎಸ್‌ಎಸ್ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News