ಆಸ್ಟ್ರೇಲಿಯದ ಪತ್ರಕರ್ತನ ವಿರುದ್ಧ ಭಾರತ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ

Update: 2017-09-15 18:30 GMT

ಹೊಸದಿಲ್ಲಿ,ಸೆ.15: ವಿಶ್ವದೆಲ್ಲೆಡೆ ಅಪಾರ ಗೌರವ, ಕೀರ್ತಿ ಸಂಪಾದಿಸಿರುವ ವಿರಾಟ್ ಕೊಹ್ಲಿಯನ್ನು ಹೀಯಾಳಿಸಿರುವ ಆಸ್ಟ್ರೇಲಿಯದ ಪತ್ರಕರ್ತ ಡೆನ್ನಿಸ್ ವಿರುದ್ದ ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ನಾಯಕ ಕೊಹ್ಲಿ ಪೊರಕೆ ಹಿಡಿದು ಸ್ಟೇಡಿಯಂ ಕಸ ಗುಡಿಸುವ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿದ್ದ ಡೆನ್ನಿಸ್,‘‘ ವಿಶ್ವ ಇಲೆವೆನ್ ಪಂದ್ಯಕ್ಕೆ ಸ್ವೀಪರ್ ಸ್ಟೇಡಿಯಂನ್ನು ಸ್ವಚ್ಛಗೊಳಿಸುತ್ತಿದ್ದಾರೆ’’ ಎಂಬ ಶೀರ್ಷಿಕೆಯನ್ನು ಬರೆದಿದ್ದರು.

ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ವಿಶ್ವ ಇಲೆವೆನ್ ತಂಡಗಳ ನಡುವೆ ನಡೆದಿದ್ದ ಇಂಡಿಪೆಂಡೆನ್ಸ್ ಕಪ್ ಟ್ವೆಂಟಿ-20 ಸರಣಿಯ ಮೊದಲ ಪಂದ್ಯಕ್ಕಿಂತ ಮೊದಲು ಡೆನ್ನಿಸ್ ಟ್ವೀಟ್ ಮಾಡಿದ್ದರು.

 ವಿರಾಟ್ ಕೊಹ್ಲಿ ಕಳೆದ ವರ್ಷ ಸ್ವಚ್ಛ ಭಾರತ್ ಅಭಿಯಾನವನ್ನು ಪ್ರಚಾರ ಮಾಡಲು ಸಾಂಕೇತಿಕವಾಗಿ ಪೊರಕೆ ಹಿಡಿದು ಸ್ಟೇಡಿಯಂನಲ್ಲಿ ಕಸ ಗುಡಿಸಿದ್ದರು. ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದ ಡೆನ್ನಿಸ್, ಕೊಹ್ಲಿ ಲಾಹೋರ್ ಸ್ಟೇಡಿಯಂನ್ನು ಸ್ವಚ್ಛಗೊಳಿಸುತ್ತಿದ್ದಾರೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು.

ಇದರಿಂದ ಕೆರಳಿರುವ ಭಾರತದ ಕ್ರಿಕೆಟ್ ಅಭಿಮಾನಿಗಳು ಟ್ವಿಟರ್‌ನ ಮೂಲಕವೇ ಡೆನ್ನಿಸ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಅಭಿಮಾನಿಗಳಿಗೆ ಪಾಕ್‌ನಲ್ಲಿರುವ ಕೊಹ್ಲಿ ಬೆಂಬಲಿಗರು ಸಾಥ್ ನೀಡಿದರು. ಡೆನ್ನಿಸ್ ಈ ಹಿಂದೆ ಸಚಿನ್ ತೆಂಡುಲ್ಕರ್ ವಿರುದ್ಧವೂ ಉದ್ದೇಶಪೂರ್ವಕವಾಗಿ ಅವಮಾನಿಸಲು ಹೋಗಿ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಕೊಹ್ಲಿ ಪ್ರಸ್ತುತ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗುತ್ತಿದ್ದಾರೆ. ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News