ಭಕ್ತ ಶಾಂತನಾಗಿರಬೇಕು

Update: 2017-09-15 18:39 GMT

ಭಕ್ತ ಶಾಂತನಾಗಿರಬೇಕು;
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು;
ಭೂತಹಿತವಹ ವಚನವ ನುಡಿಯಬೇಕು;
ಗುರುಲಿಂಗಜಂಗಮದಲ್ಲಿ ನಿಂದೆ ಇಲ್ಲದಿರಬೇಕು;
ಸಕಲಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು.
ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸಲೇಬೇಕು;
ಅಪಾತ್ರದಾನವ ಮಾಡಲಾಗದು;
ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು;
ಇದೇ ಮೊದಲಲ್ಲಿ ಬೇಹ ಶೌಚ ನೋಡಾ.
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ
ಕೂಡಲಚೆನ್ನಸಂಗಮದೇವಾ.
                                          - ಚೆನ್ನಬಸವಣ್ಣ

ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣನವರು ಕಿರಿಯ ವಯಸ್ಸಿನ ವಚನಕಾರರು. ವಚನ ಚಳವಳಿಯಲ್ಲಿಯೇ ಬೆಳೆದವರು. ಅಲ್ಲಮ ಮೊದಲಾದ ಹಿರಿಯ ವಚನಕಾರರಿಂದ ‘ಮಹಾಜ್ಞಾನಿ’ ಎನಿಸಿಕೊಂಡವರು. ಚೆನ್ನಬಸವಣ್ಣನವರು ಈ ವಚನದಲ್ಲಿ ಭಕ್ತನ ವ್ಯಕ್ತಿತ್ವ ದರ್ಶನ ಮಾಡಿಸಿದ್ದಾರೆ. ಆ ಮೂಲಕ ನಿಜ ಮಾನವ ಹೇಗಿರಬೇಕು ಎಂಬುದನ್ನು ತಿಳಿಹೇಳಿದ್ದಾರೆ.

ಭಕ್ತನೆನಿಸಿಕೊಳ್ಳುವವನು ಶಾಂತ ಗುಣವನ್ನು ಹೊಂದಿರಬೇಕು. ಯಾರು ಶಾಂತ ಗುಣವನ್ನು ಹೊಂದಿರುವುದಿಲ್ಲವೋ ಅವರ ಮನಸ್ಸಿನಲ್ಲಿ ಜಾತಿವಾದ, ಕೋಮುವಾದ, ಉಗ್ರವಾದ ಮುಂತಾದ ಅವಗುಣಗಳು ಹುಟ್ಟಿಕೊಳ್ಳುತ್ತವೆ. ಕೋಮುವಾದಿಗಳು ಧರ್ಮ ಧರ್ಮಗಳ ಮಧ್ಯೆ ಭೇದಭಾವವನ್ನು ಸೃಷ್ಟಿಸುತ್ತಾರೆ. ಧರ್ಮಗಳ ಹೆಸರಿನಲ್ಲಿ ಜನರು ಕೋಮುಗಲಭೆಗಳಲ್ಲಿ ತೊಡಗುವಂತೆ ಮಾಡುತ್ತಾರೆ. ಇಂಥ ಕೋಮುಗಲಭೆಗಳಿಂದಾಗಿ ಕೋಟ್ಯಂತರ ರೂಪಾಯಿಗಳ ಹಾನಿಯಾಗುವುದು. ಸಹಸ್ರಾರು ಅಮಾಯಕ ಜನ ಸಾಯುವರು. ಮೂಲಭೂತವಾದಿಗಳು ಅಂದರೆ ಧರ್ಮಗ್ರಂಥಗಳನ್ನು ಯಾಂತ್ರಿಕವಾಗಿ ಅರ್ಥ ಮಾಡಿಕೊಳ್ಳುವವರು. ಧರ್ಮದ ಮೂಲ ಆಧಾರಗಳಾದ ಆತ್ಮಸಾಕ್ಷಾತ್ಕಾರ, ಅಹಿಂಸೆ ಮತ್ತು ವಿಶ್ವಶಾಂತಿಯ ಮಹತ್ವವನ್ನು ಅರಿಯದವರು. ಆತ್ಮಸಾಕ್ಷಾತ್ಕಾರವಾಗದೆ ಅಹಿಂಸೆಯ ಅರಿವು ಮೂಡದು. ಅಹಿಂಸೆಯ ಅರಿವು ಮೂಡದೆ ವಿಶ್ವಶಾಂತಿ ಲಭಿಸದು. ಹೀಗೆ ಧರ್ಮದ ಈ ಮೂಲವನ್ನೇ ಅರಿಯದ ಮೂಲಭೂತವಾದಿಗಳು ತಮ್ಮ ಜನಾಂಗದ ಯುವಕರಿಗೆ ದಾರಿ ತಪ್ಪಿಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸುತ್ತಾರೆ. ಧರ್ಮಕ್ಕಾಗಿ ಬದುಕುವುದನ್ನು ಕಲಿಸದೆ ಸಾಯುವುದನ್ನು ಕಲಿಸುತ್ತಾರೆ. ನಾವೆಲ್ಲ ಧರ್ಮವಂತರಾಗಿ ಅಂದರೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ ದಾಸೋಹಂ ಭಾವದಿಂದ ಬದುಕಬೇಕಾಗಿದೆ. ನಾವು ಶಾಂತ ಮನಸ್ಥಿತಿಯನ್ನು ಹೊಂದಿದಾಗ ಮಾತ್ರ ಪ್ರಚೋದನೆಗೆ ಒಳಗಾಗದೆ ನಿಜದ ನಿಲುವನ್ನು ಅರಿಯಲು ಸಾಧ್ಯವಾಗುತ್ತದೆ.

ಇಂತಹ ಶಾಂತ ಸ್ವಭಾವದ ಭಕ್ತ ಸತ್ಯವಂತನಾಗಿರಬೇಕು. ಸತ್ಯವಂತರಾದ ವರಿಗೆ ಸ್ವವಿಮರ್ಶೆ ಮಾಡಿಕೊಳ್ಳುವ ಸಾಮರ್ಥ್ಯವಿರುತ್ತದೆ. ತಮ್ಮನ್ನು ತಾವು ತಿದ್ದಿಕೊಳ್ಳುವವರು ಸಮಾಜಕ್ಕೆ ತಮ್ಮಿಂದ ಯಾವುದೇ ರೀತಿಯಲ್ಲಿ ಹಾನಿಯಾಗ ಬಾರದು ಎಂಬ ಎಚ್ಚರಿಕೆ ವಹಿಸುವರು. ಇಂಥ ಸಂವೇದನಾಶೀಲ ಭಕ್ತರು ಜನಸಮುದಾಯಕ್ಕೆ ಒಳ್ಳೆಯದಾಗುವಂಥ ಮಾತುಗಳನ್ನಾಡಬೇಕು ಎಂದು ಚೆನ್ನಬಸವಣ್ಣನವರು ತಿಳಿಸುತ್ತಾರೆ.

ಸನ್ಮಾರ್ಗವನ್ನು ತೋರಿಸುವ ಗುರುವಿಗೆ, ಸರ್ವಸಮತ್ವವನ್ನು ಸಾರುವ ಲಿಂಗತತ್ತ್ವಕ್ಕೆ ಮತ್ತು ಲೋಕವೇ ತಾವಾಗಿ ಲಿಂಗತತ್ತ್ವವನ್ನು ಸಾರುವ ಜಂಗಮಾತ್ಮರಿಗೆ ನಿಂದಿಸಬಾರದು. ಸಕಲಜೀವಾತ್ಮರಲ್ಲಿ ತನ್ನನ್ನೇ ಕಾಣಬೇಕು. ಯಾರು ಸಕಲ ಜೀವಾತ್ಮರಲ್ಲಿ ತಮ್ಮನ್ನೇ ಕಾಣುವರೋ ಅವರು ಸಹಜವಾಗಿಯೇ ವಿಶ್ವಮಾನವರಾಗುತ್ತಾರೆ. ಒಬ್ಬ ವ್ಯಕ್ತಿಯ ಜಾತಿ, ಧರ್ಮ, ದೇಶ ಮತ್ತು ಭಾಷೆಗಳು ಅವರಿಗೆ ಮುಖ್ಯವಾಗುವುದಿಲ್ಲ. ‘ಆತನೊಳಗೆ ನಾನಿದ್ದೇನೆ’ ಎಂಬ ಭಾವ ಮಾತ್ರ ಅವರಿಗೆ ಮುಖ್ಯವಾಗುತ್ತದೆ. ಬೇರೆಯವರನ್ನು ಗೌರವಿಸುವುದೆಂದರೆ ತಮ್ಮನ್ನು ತಾವೇ ಗೌರವಿಸಿಕೊಂಡಂತೆ ಎಂಬ ಭಾವ ಭಕ್ತನಲ್ಲಿ ಮೂಡಿಬರಬೇಕು. ಅಷ್ಟೇ ಅಲ್ಲದೆ ಸಕಲ ಪಶು ಪಕ್ಷಿಗಳು ಮತ್ತು ಕ್ರಿಮಿ ಕೀಟಗಳು ಕೂಡ ಜೀವಾತ್ಮರೆಂದೇ ಭಾವಿಸಿ ಅವುಗಳಿಗೆ ಲೇಸನ್ನು ಬಯಸಬೇಕು. ಇಂಥ ಉದಾತ್ತ ಮಾನವರು ಯಾರಿಗೂ ತೊಂದರೆಯಾಗದಂತೆ ಬದುಕುತ್ತಾರೆ. ಇಂಥವರಿಂದ ಸಮಾಜ ತುಂಬಿದಾಗ ಕೊಲೆ ಸುಲಿಗೆಗಳಾಗುವುದಿಲ್ಲ. ಜನಾಂಗ ಜನಾಂಗಗಳ ಮಧ್ಯೆ ಗಲಭೆಗಳಾಗುವುದಿಲ್ಲ ಮತ್ತು ದೇಶ ದೇಶಗಳ ಮಧ್ಯೆ ಯುದ್ಧಗಳಾಗುವುದಿಲ್ಲ.

ತ್ರಿವಿಧ ದಾಸೋಹಂ ಭಾವದಿಂದ ಗುರುವಿಗೆ ತನುವನ್ನು, ಲಿಂಗಕ್ಕೆ ಮನವನ್ನು ಮತ್ತು ಸಮಾಜಕ್ಕೆ ಧನವನ್ನು ಅರ್ಪಿಸಬೇಕು. ಅಂದರೆ ಜ್ಞಾನ, ನೈತಿಕತೆ ಮತ್ತು ಸುಖಿ ಸಮಾಜಕ್ಕಾಗಿ ಭಕ್ತನಾದವನು ಸದಾ ಪ್ರಯತ್ನಿಸುತ್ತಿರಬೇಕು. ಇಷ್ಟೆಲ್ಲ ಸಾಧನೆ ಮಾಡಬೇಕಾದರೆ ಭಕ್ತನು ಮೊದಲು ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಂಥ ಆತ್ಮಶಕ್ತಿಯನ್ನು ಹೊಂದಬೇಕು. ತನ್ನ ಐಹಿಕ ಆಸೆಗಳ ಮೇಲೆ ವಿಜಯ ಸಾಧಿಸಿದ ಭಕ್ತ ಮಾತ್ರ ಚೆನ್ನಬಸವಣ್ಣನವರು ಬಯಸಿದಂಥ ಸಾಧನೆಗಳನ್ನು ಮಾಡಲು ಸಾಧ್ಯ. ಈ ಎಲ್ಲ ಸಾಧನೆಗಳ ಬಗ್ಗೆ ತಿಳಿಸುತ್ತಲೇ ಚೆನ್ನಬಸವಣ್ಣನವರು ಒಂದು ಎಚ್ಚರಿಕೆಯನ್ನೂ ಕೊಡುತ್ತಾರೆ. ಅದೇನೆಂದರೆ ಅಯೋಗ್ಯರಿಗೆ ದಾನವ ಮಾಡಬಾರದು ಎಂಬ ಕಟ್ಟುಪಾಡು ಹಾಕುತ್ತಾರೆ. ಏಕೆಂದರೆ ಅಯೋಗ್ಯರು ಆ ದಾನದ ದುರುಪಯೋಗ ಮಾಡುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಂಥವರು ಆ ದಾನವನ್ನು ನೀಚ ಕೃತ್ಯಗಳಿಗೆ ಬಳಸುವುದರ ಮೂಲಕ ಮಾನವಕುಲಕ್ಕೆ ಕಂಟಕಪ್ರಾಯ ಆಗಬಹುದು. ಧರ್ಮದ ಹೆಸರಿನಲ್ಲಿ ಹಣ ಸಂಗ್ರಹಿಸಿ ಕೋಮುಗಲಭೆಗಳಿಗೆ ಮತ್ತು ಭಯೋತ್ಪಾದನೆಗೆ ಬಳಸಿಕೊಳ್ಳುವಂಥ ಇಂದಿನ ದಿನಗಳಲ್ಲಿ ಚೆನ್ನಬಸವಣ್ಣನವರ ಈ ಎಚ್ಚರಿಕೆ ಇಡೀ ವಿಶ್ವಕ್ಕೆ ಮಾರ್ಗದರ್ಶಿಯಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಹೀಗೆ ನಾವು ಪವಿತ್ರಾತ್ಮರಾಗಲು ಮೊದಲಿಗೆ ಮಾಡಬೇಕಾದ ಸ್ವಚ್ಛತೆಯ ಕ್ರಮಗಳಿವು ಎಂದು ಚೆನ್ನಬಸವಣ್ಣನವರು ತಿಳಿಸಿದ್ದಾರೆ. ಈ ರೀತಿ ಪವಿತ್ರವಾದ ನಂತರ ಇಷ್ಟಲಿಂಗವನ್ನು ಪೂಜಿಸುವುದರ ಮೂಲಕ ಸರಳ ಸಹಜ ಬದುಕಿಗೆ ಬೇಕಾದ ವಸ್ತುಗಳನ್ನು ಪ್ರಸಾದವೆಂದು ಪಡೆಯುವಲ್ಲಿ ತಮಗಿರುವ ಮಾರ್ಗ ಇದೇ ಎಂದು ಹೇಳಿದ್ದಾರೆ. ನಾವು ಕಾಯಕದ ಮೂಲಕ ಪಡೆಯುವ ವಸ್ತು ಮುಂತಾದ ಸಂಪತ್ತೆಲ್ಲ ಗಳಿಕೆ ಅಲ್ಲ. ದೇವರು ಕರುಣಿಸಿದ ಪ್ರಸಾದ. ಸೂರ್ಯ, ಚಂದ್ರ, ತಾರೆ, ಸಮುದ್ರ, ನದಿ, ಸಸ್ಯಲೋಕ ಮತ್ತು ಪಶುಪಕ್ಷಿಲೋಕ ಹೀಗೆ ಎಲ್ಲವೂ ದೇವರ ಪ್ರಸಾದ. ನಮ್ಮ ಕಾಯ ಕೂಡ ದೇವರ ಪ್ರಸಾದವೇ ಆಗಿದೆ. ಅಂತೆಯೇ ನಮ್ಮ ಕಾಯವನ್ನು ಪ್ರಸಾದ ಕಾಯವನ್ನಾಗಿಸಬೇಕು ಎಂಬುದು ಶರಣರೆಲ್ಲರ ಬಯಕೆಯಾಗಿದೆ. ಲಿಂಗವ ಪೂಜಿಸಿ ಪ್ರಸಾದ ಪಡೆಯುವುದರ ಮೂಲಕ ಕಾಯವನ್ನು ಪ್ರಸಾದ ಕಾಯವನ್ನಾಗಿಸಬೇಕಾದರೆ ಚೆನ್ನಬಸವಣ್ಣನವರು ಮೇಲೆ ತಿಳಿಸಿದ ಎಂಟು ಅಂಶಗಳನ್ನು ಮಾನವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News