ಪೆಹ್ಲೂಖಾನ್ ಎಂಬ ರೈತನನ್ನು ಮತ್ತೊಮ್ಮೆ ಕೊಂದವರು

Update: 2017-09-15 18:53 GMT

ರಾಜಸ್ಥಾನದ ಅಲ್ವಾರ್‌ನಲ್ಲಿ ಪೆಹ್ಲೂಖಾನ್ ಎಂಬ ವೃದ್ಧ ರೈತನನ್ನು ಗೋಸಾಗಾಟದ ಹೆಸರಲ್ಲಿ ಥಳಿಸಿ ಕೊಂದ ಪ್ರಕರಣವನ್ನು ನಮ್ಮ ಕಾನೂನು ವ್ಯವಸ್ಥೆ ಇನ್ನಷ್ಟು ಹೃದಯವಿದ್ರಾವಕವಾಗಿಸಿದೆ. ಪೆಹ್ಲೂಖಾನ್ ತಾನು ಸಾಯುವ ಮುನ್ನ ಆರು ಜನರ ಹೆಸರನ್ನು ಪೊಲೀಸರಿಗೆ ನೀಡಿದ್ದರು. ಇದೀಗ ರಾಜಸ್ಥಾನ ಪೊಲೀಸರು ಆ ಆರೂ ಜನರ ಹೆಸರನ್ನೂ ಪ್ರಥಮ ಮಾಹಿತಿ ವರದಿಯಿಂದ ಕೈ ಬಿಟ್ಟು, ಅವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ.

ಹೀಗೆ ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಆರೋಪಿಗಳು ನಿರಪರಾಧಿಗಳಾಗಿ ಪರಿವರ್ತನೆಗೊಂಡಿದ್ದಾರೆ. ಸದ್ಯಕ್ಕೆ, ಪೆಹ್ಲೂಖಾನ್‌ರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಿಲ್ಲವಲ್ಲ ಎನ್ನುವ ಕಾರಣಕ್ಕೆ ಪೊಲೀಸರಿಗೆ ಕೃತಜ್ಞರಾಗಬೇಕಾಗಿದೆ. ಯಾಕೆಂದರೆ ಈ ಹಿಂದೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಕೊಲೆಗೀಡಾದ ಅಖ್ಲಾಕ್‌ರನ್ನೇ ಅಂತಿಮವಾಗಿ ಆರೋಪಿಯನ್ನಾಗಿ ಘೋಷಿಸುವ ಮೂಲಕ, ಕೊಲೆಗಾರರನ್ನು ರಕ್ಷಿಸುವ ಪ್ರಯತ್ನ ಪೊಲೀಸರು ನಡೆಸಿದರು. ಅಖ್ಲಾಕ್ ಎನ್ನುವ ವೃದ್ಧರನ್ನು ಕೊಂದ ದುಷ್ಕರ್ಮಿಗಳನ್ನು ಬಂಧಿಸುವುದಕ್ಕಿಂತ, ಅಖ್ಲಾಕ್‌ರ ಫ್ರಿಜ್ಜಿನಲ್ಲಿದ್ದುದು ಗೋಮಾಂಸ ಹೌದೋ ಅಲ್ಲವೋ ಎನ್ನುವ ಚರ್ಚೆ ಮುನ್ನೆಲೆಗೆ ಬಂತು.

ಒಂದು ವೇಳೆ ಫ್ರಿಡ್ಜಿನಲ್ಲಿ ಗೋಮಾಂಸವೇ ಇರಲಿ. ಅದಕ್ಕಾಗಿ ಒಬ್ಬ ಹಿರಿಯ ಮನುಷ್ಯನನ್ನು ಕೊಂದು ಹಾಕುವುದು ಮತ್ತು ದೇಶಸೇವೆಯಲ್ಲಿರುವ ಯೋಧನಾಗಿರುವ ಆತನ ಮಗನನ್ನು ಬರ್ಬರವಾಗಿ ಥಳಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮಹತ್ವವನ್ನು ಪಡೆದುಕೊಳ್ಳಲಿಲ್ಲ. ತನಿಖೆಯಲ್ಲಿ ಪೊಲೀಸರು ತೋರಿಸಿದ ನಿಧಾನಗತಿಯಿಂದಾಗಿ ಆರೋಪಿಗಳು ಒಬ್ಬೊಬ್ಬರಾಗಿ ಬಿಡುಗಡೆಯಾಗುತ್ತ ಬರುವಂತಾಯಿತು. ಅಖ್ಲಾಕ್ ಎನ್ನುವ ಗಣ್ಯ ವ್ಯಕ್ತಿಯ ಸ್ಥಿತಿಯೇ ಹೀಗಿರುವಾಗ, ಗ್ರಾಮೀಣ ಪ್ರದೇಶವೊಂದರಲ್ಲಿ ಹೈನುಗಾರಿಕೆ ನಡೆಸುತ್ತಾ ಬದುಕುತ್ತಿದ್ದ ಪೆಹ್ಲೂಖಾನ್‌ರಿಗೆ ನ್ಯಾಯ ಸಿಗುತ್ತದೆ ಎಂದು ಭಾವಿಸುವುದು ನಮ್ಮ ಮೂರ್ಖತನವಾಗುತ್ತದೆ. ನಕಲಿ ಗೋರಕ್ಷಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ಎಚ್ಚರಿಕೆಗಳನ್ನು ನೀಡಿದ್ದಾರೆ.

‘‘ಈ ಗೋರಕ್ಷಕರ ತಂಡ ರಾತ್ರಿ ಕ್ರಿಮಿನಲ್ ಕೆಲಸಗಳನ್ನು ಮಾಡುತ್ತವೆ’’ ಎಂದು ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ನಕಲಿ ಗೋರಕ್ಷಕರು ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ನಕಲಿ ಗೋರಕ್ಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಎಲ್ಲ ರಾಜ್ಯ ಸರಕಾರಗಳಿಗೂ ಅವರು ನಿರ್ದೇಶಿಸಿದ್ದಾರೆ. ಅಂದರೆ ಚೆಂಡನ್ನು ಅವರು ಆಯಾ ರಾಜ್ಯ ಸರಕಾರಗಳಿಗೆ ದಾಟಿಸಿದ್ದಾರೆ. ಪೆಹ್ಲೂಖಾನ್‌ರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅವರು ಕೊಂದು ಹಾಕಿದರು. ಸರಿ. ಅದಕ್ಕಾಗಿಯೇ ಇರುವವರು.

ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯನ್ನು ಒಂದು ನಿರ್ದಿಷ್ಟ ಕೆಲಸಕ್ಕಾಗಿಯೇ ನೇಮಿಸಿರುತ್ತದೆ. ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೋ, ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಾರೋ ಅವರನ್ನು ಗುರುತಿಸಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಪೊಲೀಸರ ಕೆಲಸ. ಆದರೆ ರಾಜಸ್ಥಾನದಲ್ಲಿ ನಕಲಿ ಗೋರಕ್ಷಕರ ಜೊತೆಗೆ ಪೊಲೀಸರು ಪರೋಕ್ಷ ಭಾಗಿಯಾಗಿರುವುದು ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಗುರುತಿಸಿ ಅವರ ಮೇಲೆ ಬಲವಾದ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವುದು ಪೊಲೀಸರ ಕರ್ತವ್ಯ. ಆದರೆ ಇಲ್ಲಿ ಪೊಲೀಸರು ಎಫ್‌ಐಆರ್‌ನಿಂದಲೇ ಅವರ ಹೆಸರನ್ನು ಕೈ ಬಿಟ್ಟಿದ್ದಾರೆ. ಪೆಹ್ಲೂಖಾನ್ ಪುತ್ರನ ಮಾತಿನಂತೆ ‘‘ಇದರ ಹಿಂದೆ ರಾಜಕೀಯ ಸಂಚಿದೆ. ಅವರ ಪ್ರಭಾವಕ್ಕೊಳಗಾಗಿಯೇ ಪೊಲೀಸರು ಹೆಸರುಗಳನ್ನು ಕೈ ಬಿಟ್ಟಿದ್ದಾರೆ’’.

ಪೆಹ್ಲೂಖಾನ್ ತಾನು ಸಾಯುವ ಮೊದಲು, ಸ್ವತಃ ಅಂತಿಮ ಹೇಳಿಕೆಯನ್ನು ನೀಡಿದ್ದಾರೆ. ಹಲ್ಲೆ ನಡೆಸಿದವರಲ್ಲಿ ಬಹಳಷ್ಟು ಜನರಿದ್ದರೂ, ಅವರಲ್ಲಿ ಕೆಲವರನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ ಮತ್ತು ಪೊಲೀಸರ ಮುಂದೆ ಅವರ ಹೆಸರುಗಳನ್ನು ಹೇಳಿದ್ದಾರೆ. ಅದನ್ನು ಸ್ವತಃ ಪೊಲೀಸರು ದಾಖಲಿಸಿದ್ದಾರೆ.

ಸಾಯುವ ಹೊತ್ತಿನಲ್ಲಿ, ಅಷ್ಟು ಜನರ ನಡುವೆ ಅವರು ಸುಳ್ಳು ಹೆಸರುಗಳನ್ನು ಹೇಳುವ ಸಾಧ್ಯತೆಗಳೇ ಇಲ್ಲ. ಇದೀಗ ಪೊಲೀಸರು, ಪೆಹ್ಲೂಖಾನ್ ಉಲ್ಲೇಖಿಸಿದ ಜನರು ಆ ಸ್ಥಳದಲ್ಲಿ ಇರಲೇ ಇಲ್ಲ ಎನ್ನುವುದನ್ನು ಮೊದಲೇ ಘೋಷಿಸಿ ಬಿಟ್ಟಿದ್ದಾರೆ. ಆ ಮೂಲಕ, ನ್ಯಾಯಾಲಯಕ್ಕೆ ಯಾವ ಕಷ್ಟವನ್ನೂ ಕೊಡದೆ ತಾವೇ ವಿಚಾರಣೆ ನಡೆಸಿ ನ್ಯಾಯವನ್ನು ಘೋಷಿಸಿದ್ದಾರೆ. ಪೆಹ್ಲೂಖಾನ್ ಸ್ವತಃ ಉಲ್ಲೇಖಿಸಿದ್ದ ಹೆಸರನ್ನೇ ಕೈ ಬಿಟ್ಟಿರುವ ಪೊಲೀಸರು ಗುಂಪಿನಲ್ಲಿರುವ ಅಳಿದುಳಿದ ದುಷ್ಕರ್ಮಿಗಳನ್ನು ಹುಡುಕಿ ಅವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಕಟಕಟೆ ಹತ್ತಿಸುತ್ತಾರೆ ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಒಂದು ವೇಳೆ ಕಾಟಾಚಾರಕ್ಕೆ ಅದನ್ನು ಮಾಡಿದರೂ, ಅವರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವುದು ಸಾಧ್ಯವೂ ಇಲ್ಲ. ಇಲ್ಲಿ ದುಷ್ಕರ್ಮಿಗಳ ಕೃತ್ಯಕ್ಕಿಂತಲೂ, ಕಾನೂನನ್ನು ರಕ್ಷಿಸಬೇಕಾಗಿದ್ದ ಪೊಲೀಸರ ಕೃತ್ಯವೇ ಅತೀ ಹೆಚ್ಚು ಬರ್ಬರವಾಗಿ ಕಾಣುತ್ತದೆ.

ಪೆಹ್ಲೂಖಾನ್‌ರ ಆರೋಪಿಗಳನ್ನು ಮುಕ್ತವಾಗಿ ಓಡಾಡಲು ಅನುಕೂಲ ಮಾಡಿಕೊಡುವ ಮೂಲಕ ಪೊಲೀಸರು ಪ್ರಧಾನಿಯ ಕಳಕಳಿಯನ್ನೇ ನಿರ್ಲಕ್ಷಿಸಿದ್ದಾರೆ. ಜೊತೆಗೆ ನಕಲಿ ಗೋರಕ್ಷಕರಿಗೆ ಇನ್ನಷ್ಟ್ಟೂ ಕೃತ್ಯಗಳನ್ನು ಎಸಗಲು ಕುಮ್ಮಕ್ಕು ನೀಡಿದ್ದಾರೆ. ಈ ದೇಶದಲ್ಲಿ ಹೈನುಗಾರಿಕೆಯ ಮೂಲಕ ಬದುಕು ನಡೆಸುವ ರೈತರು ಭಯಭೀತರಾಗಬೇಕಾಗಿದೆ. ಸಮಾಜದಲ್ಲಿ ಬೀದಿ ರೌಡಿಗಳು ಗೌರವ, ಮಾನ್ಯತೆಗಳನ್ನು ಪಡೆದಂತಾಗಿದೆ. ಇಂದು ದೇಶದಲ್ಲಿ ಗೋರಕ್ಷಕರು ಹುಟ್ಟಿರುವುದು ಭಾವನಾತ್ಮಕ ಕಾರಣಗಳಿಲ್ಲ ಎನ್ನುವ ಅಂಶವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಜಕೀಯ ಕಾರಣಗಳಿಗಾಗಿ ಈ ನಕಲಿ ಗುಂಪುಗಳನ್ನು ಕಟ್ಟಲಾಗಿದೆ.

ಯಾವುದೇ ಶ್ರೀಸಾಮಾನ್ಯ, ಗೋವು ತನ್ನ ತಾಯಿ, ದೇವತೆ ಎನ್ನುವ ಕಾರಣಕ್ಕಾಗಿ ಯಾವನೇ ಒಬ್ಬನ ಮೇಲೆ ಭಾವನಾತ್ಮಕವಾಗಿ ಎರಗಿದ ಉದಾಹರಣೆಗಳಿಲ್ಲ. ನಡೆದಿರುವ ಎಲ್ಲ ದಾಳಿಗಳು ಸಂಘಟಿತ ಮತ್ತು ಪೂರ್ವನಿಯೋಜಿತವಾಗಿವೆ ಮತ್ತು ದಾಳಿಯನ್ನು ಸಂಘಟಿಸುವ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರಿಮಿನಲ್ ಕೇಸುಗಳನ್ನು ಮೈಮೇಲೆ ಜಡಿದುಕೊಂಡವರು. ಪ್ರಧಾನಿ ಮೋದಿಯವರ ಮಾತಿನಂತೆ, ಕ್ರಿಮಿನಲ್‌ಗಳೇ ನಕಲಿ ಗೋರಕ್ಷಕರ ವೇಷದಲ್ಲಿ ಬದುಕುತ್ತಿದ್ದಾರೆ. ಜನರನ್ನು ನೇರವಾಗಿ ದೋಚುವ ಬದಲು ಸಂಸ್ಕೃತಿ, ಧರ್ಮದ ಮುಖವಾಡ ಹಾಕಿ ಸಮಾಜಬಾಹಿರ ಕೃತ್ಯಗಳನ್ನು ಎಸಗಲು ಶುರು ಹಚ್ಚಿದ್ದಾರೆ. ಇವರಲ್ಲಿ ಬಹುತೇಕರು ಒಂದು ನಿರ್ದಿಷ್ಟ ಸಂಘಟನೆ ಮಾತ್ರವಲ್ಲ, ಪಕ್ಷಕ್ಕೂ ಸೇರಿದವರು.ಪೊಲೀಸರು ಚುರುಕಾಗಿದ್ದರೆ ಇಂತಹ ದಾಳಿಗಳು ನಡೆಯುವ ಮೊದಲೇ ಅದನ್ನು ತಡೆಯಬಹುದು.

ಆದರೆ ದುರದೃಷ್ಟವಶಾತ್, ಹೆಚ್ಚಿನ ದಾಳಿಗಳು ನಡೆದಿರುವುದು ಪೊಲೀಸರ ಸಮ್ಮುಖದಲ್ಲೇ ಆಗಿದೆ. ಕೆಲವೊಮ್ಮೆ ಪೊಲೀಸರ ಸಹಕಾರದಿಂದಲೇ ಇಂತಹ ದಾಳಿಗಳು ನಡೆಯುತ್ತವೆ. ನಮ್ಮ ಕಾನೂನು ವ್ಯವಸ್ಥೆ ಸರಿ ದಾರಿಯಲ್ಲಿದ್ದಿದ್ದರೆ ಇಂದು ಈ ನಕಲಿ ಗೋರಕ್ಷಕರು ದೇಶಕ್ಕೆ ಸಮಸ್ಯೆಯೇ ಆಗುತ್ತಿರಲಿಲ್ಲ. ದುರದೃಷ್ಟ ನಾವಿಂದು ಹೆದರಬೇಕಾದುದು ನಕಲಿ ಗೋರಕ್ಷಕರಿಗಲ್ಲ, ಪೊಲೀಸರೊಂದಿಗೆ ಇವರು ಇಟ್ಟುಕೊಂಡಿರುವ ಅನೈತಿಕ ಸಂಬಂಧಗಳಿಗಾಗಿ ಹೆದರಬೇಕಾಗಿದೆ. ಈ ಸಂಬಂಧವೇ, ದೇಶದಲ್ಲಿ ನಕಲಿ ಗೋರಕ್ಷಕರನ್ನು ಸಮಸ್ಯೆಯಾಗಿ ಪರಿವರ್ತಿಸಿದೆ ಈ ಸಂಬಂಧವೇ ಪೆಹ್ಲೂಖಾನ್ ಎನ್ನುವ ವೃದ್ಧ ರೈತನ ಕೊಲೆ ಆರೋಪಿಗಳಿಗೆ ಕ್ಲೀನ್‌ಚಿಟ್ ನೀಡಿದೆ. ಆರೋಪಿಗಳನ್ನು ತಪ್ಪಿಸಿಕೊಳ್ಳಲು ಬಿಡುವ ಮೂಲಕ ವೃದ್ಧ ಪೆಹ್ಲೂಖಾನ್‌ರನ್ನು ಮಗದೊಮ್ಮೆ ಕೊಲೆ ಮಾಡಲಾಗಿದೆ. ಆದರೆ ಈ ಬಾರಿ ಕೊಂದವರು ನಕಲಿ ಗೋರಕ್ಷಕರಲ್ಲ ಎನ್ನುವುದು ಇನ್ನಷ್ಟು ನೋವು ಕೊಡುವ ಅಂಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News