ಭಾರತದ ಆರ್ಥಿಕತೆಗೆ ಈಗ ಅನಾವೃಷ್ಟಿ ಕಂಟಕ

Update: 2017-09-16 03:56 GMT

ಹೊಸದಿಲ್ಲಿ, ಸೆ.16: ನೋಟು ರದ್ದತಿ ಬಳಿಕ ಭಾರತದ ಆರ್ಥಿಕತೆಯ ಪ್ರಗತಿ ವೇಗ ಕುಂಠಿತಗೊಂಡಿದ್ದು, ಗಾಯದ ಮೇಲೆ ಬರೆ ಎಂಬಂತೆ ಇದೀಗ ಅನಾವೃಷ್ಟಿ ಪ್ರಗತಿಯ ವೇಗಕ್ಕೆ ಮತ್ತಷ್ಟು ಅಡ್ಡಿಯಾಗುವ ಎಲ್ಲ ಲಕ್ಷಣ ಕಾಣಿಸಿಕೊಂಡಿದೆ. ದೇಶದ ಶೇಕಡ 40ಕ್ಕೂ ಹೆಚ್ಚು ಭಾಗಗಳಲ್ಲಿ ಅನಾವೃಷ್ಟಿಯಿಂದಾಗಿ ಕೃಷಿ ಉತ್ಪಾದನೆ ಗಣನೀಯವಾಗಿ ಕುಂಠಿತವಾಗುವುದು ಆತಂಕಕ್ಕೆ ಕಾರಣವಾಗಿದೆ.

ಆಹಾರಧಾನ್ಯಗಳ ಉತ್ಪಾದನೆ ಕುಂಠಿತದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕುಸಿಯಲಿದೆ ಮತ್ತು ಕೃಷಿ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿ ಹಣದುಬ್ಬರಕ್ಕೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಭಾರತದ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ದೇಶದ 660 ಜಿಲ್ಲೆಗಳ ಪೈಕಿ ಶೇಕಡ 44ರಷ್ಟು ಜಿಲ್ಲೆಗಳಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ಆಹಾರ ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶಗಳ ಅರ್ಧಕ್ಕಿಂತಲೂ ಹೆಚ್ಚು ಭಾಗಗಳಲ್ಲಿ ಬರಗಾಲದ ಪರಿಸ್ಥಿತಿ ಇದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 8ರವರೆಗಿನ ಕೃಷಿ ಇಲಾಖೆ ಮಾಹಿತಿ ಪ್ರಕಾರ ದೇಶದಲ್ಲಿ ಅಕ್ಕಿ, ಬೇಳೆಕಾಳು, ಎಣ್ಣೆಬೀಜ ಮತ್ತಿತರ ಆಹಾರಧಾನ್ಯಗಳ ಬಿತ್ತನೆ ವಾಡಿಕೆಗಿಂತ ಸುಮಾರು 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಬಿತ್ತನೆ ಪ್ರದೇಶ ಕೇವಲ 8.7 ಲಕ್ಷ ಹೆಕ್ಟೇರ್ ಕಡಿಮೆಯಾಗಿದ್ದರೂ, ರೈತರು ಹೆಚ್ಚು ಕಬ್ಬು ಮತ್ತು ಹತ್ತಿ ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಹೇಳಿದೆ.

ತಜ್ಞರ ಪ್ರಕಾರ, ಪಂಜಾಬ್ ಹಾಗೂ ಹರ್ಯಾಣ ರೈತರು ಮಳೆಯನ್ನು ಅವಲಂಬಿಸದೇ ಅಂತರ್ಜಲ ಬಳಕೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಇದು ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹಣದುಬ್ಬರ ನಾಲ್ಕು ತಿಂಗಳ ಗರಿಷ್ಠ ಮಟ್ಟ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News