ಪಾನ್ ಕಾರ್ಡ್, ಸಿಮ್ ಕಾರ್ಡ್ ಸೇರಿದಂತೆ ಅಗತ್ಯ ಸೇವೆಗಳಿಗೆ ಆಧಾರ್ ಲಿಂಕ್

Update: 2017-09-17 08:32 GMT

ಹೊಸದಿಲ್ಲಿ, ಸೆ.17: ಕೇಂದ್ರ ಸರಕಾರವು ಹಲವು ಅಗತ್ಯಗಳಿಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲು ಈಗಾಗಲೇ ಆದೇಶ ಹೊರಡಿಸಿದೆ. ಈ ಅಗತ್ಯಗಳಲ್ಲಿ ಪ್ರಮುಖವಾಗಿ ಪಾನ್, ಆದಾಯ ತೆರಿಗೆ ರಿಟರ್ನ್ಸ್, ಮೊಬೈಲ್ ಫೋನ್ ಗಳು ಹಾಗು ಸಾಮಾಜಿಕ ಭದ್ರತಾ ಯೋಜನೆಗಳು ಸೇರಿವೆ.

2018ರ ಫೆಬ್ರವರಿಯ ಮೊದಲು ಆಧಾರ್ ಲಿಂಕ್ ಆಗದ ಸಿಮ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿದೆ ಎನ್ನಲಾಗಿದೆ. ಹಣಕಾಸು ಸಂಸ್ಥೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವುದು, ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಲಾಭ ಪಡೆಯಲು ಆಧಾರ್ ಲಿಂಕಿಂಗ್ ಕಡ್ಡಾಯವಾಗಿದೆ.

ಪಾನ್, ಮೊಬೈಲ್ ಸಿಮ್ ಕಾರ್ಡ್, ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ವಿವಿಧ ಡೆಡ್ ಲೈನ್ ಗಳನ್ನು ನೀಡಲಾಗಿದೆ.

ಆಧಾರ್-ಪಾನ್: ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡನ್ನು ಲಿಂಕ್ ಮಾಡುವ ದಿನಾಂಕವನ್ನು ನೇರ ತೆರಿಗೆಗಳ ಕೇಂದ್ರ ಮಂಡಳಿ ವಿಸ್ತರಿಸಿತ್ತು. ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕಿಂಗ್ ನ ಕೊನೆಯ ದಿನಾಂಕ 2017ರ ಆಗಸ್ಟ್ 31 ಎಂದು ಈ ಮೊದಲು ಘೋಷಿಸಲಾಗಿತ್ತಾದರೂ ನಂತರ ಅದನ್ನು ವಿಸ್ತರಿಸಲಾಯಿತು. ಇದೀಗ ಆಧಾರ್-ಪಾನ್ ಲಿಂಕಿಂಗ್ ನ ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ.

ಆಧಾರ್-ಮೊಬೈಲ್ ನಂಬರ್: 2018ರ ಫೆಬ್ರವರಿಯ ನಂತರ ಆಧಾರ್ ನೊಂದಿಗೆ ಲಿಂಕ್ ಆಗದ ಸಿಮ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡೋ ಏಶಿಯನ್ ನ್ಯೂಸ್ ಸರ್ವಿಸ್ (ಐಎಎನ್ ಎಸ್) ವರದಿ ಮಾಡಿದೆ. ಇದರಿಂದಾಗಿ ಆಧಾರ್ ನಂಬರನ್ನು ಸಿಮ್ ಕಾರ್ಡ್ ನೊಂದಿಗೆ 2018ರ ಫೆಬ್ರವರಿಯೊಳಗೆ ಲಿಂಕ್ ಮಾಡಬೇಕಾಗಿದೆ.

ಬ್ಯಾಂಕ್/ಹಣಕಾಸು ಸಂಸ್ಥೆಗಳೊಂದಿಗೆ ಆಧಾರ್: ಕೆವೈಸಿ ದಾಖಲೆಯಲ್ಲಿ ಗ್ರಾಹಕರ ಆಧಾರ್ ಮಾಹಿತಿಗಳನ್ನು ನಮೂದಿಸಬೇಕೆಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 31  ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಕೊನೆಯ ದಿನವಾಗಿದೆ.

ಸಾಮಾಜಿಕ ಭದ್ರತಾ ಯೋಜನೆಗಳಿಗೆ: ಎಲ್ಲಾ ರೀತಿಯ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಆಧಾರ್ ನಂಬರನ್ನು ಲಿಂಕ್ ಮಾಡಲು ಈ ವರ್ಷದ ಡಿಸೆಂಬರ್ 31 ಕೊನೆಯ ದಿನವಾಗಿದೆ. ಪಿಂಚಣಿ, ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ, ಸರಕಾರಿ ವಿದ್ಯಾರ್ಥಿವೇತನಗಳಿಗೆ ಆಧಾರ್ ಮಾಹಿತಿ ಸಲ್ಲಿಕೆ ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News