ಎಚ್ಚರಿಕೆ....ಖಿನ್ನತೆ ನಿವಾರಕ ಔಷಧಿಗಳು ಸಾವಿಗೂ ಕಾರಣವಾಗಬಹುದು!

Update: 2017-09-17 08:38 GMT

ಮಾನಸಿಕ ಖಿನ್ನತೆ ಮತ್ತು ಆತಂಕಗಳನ್ನು ತಗ್ಗಿಸಲು ವೈದ್ಯರು ಶಿಫಾರಸು ಮಾಡುವ ಔಷಧಿಗಳು ಶರೀರದ ಬಹು ಅಂಗಾಂಗಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುವ ಮೂಲಕ ಸಾವಿನ ಅಪಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಸಿದೆ.

ಮಿದುಳಿನಲ್ಲಿಯ ಸೆರೊಟೋನಿನ್ ಎಂಬ ಹಾರ್ಮೋನ್ ನಮ್ಮ ಮನಃಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಖಿನ್ನತೆಯ ಚಿಕಿತ್ಸೆಗಾಗಿ ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಖಿನ್ನತೆ ನಿವಾರಕಗಳು ನರಕೋಶಗಳು ಸೆರೊಟೋನಿನ್ ಅನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಆದರೆ ಶರೀರದ ಪ್ರಮುಖ ಅಂಗಗಳಾದ ಹೃದಯ, ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಯಕೃತ್ತು ರಕ್ತದಲ್ಲಿ ಸೆರೊಟೋನಿನ್ ಅನ್ನು ತಮ್ಮ ಕಾರ್ಯನಿರ್ವಹಣೆಗಾಗಿ ಬಳಸಿಕೊಳ್ಳುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಖಿನ್ನತೆ ನಿವಾರಕ ಔಷಧಿಗಳು ಈ ಅಂಗಾಂಗಗಳು ಸೆರೊಟೋನಿನ್ ಅನ್ನು ಹೀರಿಕೊಳ್ಳುವುದನ್ನೂ ತಡೆಯುತ್ತವೆ ಮತ್ತು ಅವುಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡುತ್ತವೆ ಹಾಗೂ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ.

ಸಾವಿರಾರು ಜನರನ್ನು ತಮ್ಮ ಅಧ್ಯಯನಕ್ಕೊಳಪಡಿಸಿರುವ ಸಂಶೋಧಕರು ಖಿನ್ನತೆ ನಿವಾರಕಗಳನ್ನು ಬಳಸದವರಿಗೆ ಹೋಲಿಸಿದರೆ ಸಾವಿನ ಅಪಾಯ ಅದನ್ನು ಬಳಸಿದವರಲ್ಲಿ ಶೇ.33ರಷ್ಟು ಅಧಿಕವಾಗಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಖಿನ್ನತೆ ನಿವಾರಕಗಳನ್ನು ಬಳಸುವವರಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಗಳು ಸಂಭವಿಸುವ ಅಪಾಯವೂ ಶೇ.14ರಷ್ಟು ಅಧಿಕವಾಗಿದೆ.

ಅಧ್ಯಯನದ ಫಲಿತಾಂಶಗಳು ಅತ್ಯಂತ ಕಳವಳಕಾರಿಯಾಗಿವೆ. ಖಿನ್ನತೆ ನಿವಾರಕ ಔಷಧಿಗಳು ಶರೀರದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳದೆ ನಾವು ಅವುಗಳನ್ನು ತೆಗೆದುಕೊಳ್ಳಬಾರದು ಎನ್ನುವುದನ್ನು ಈ ಫಲಿತಾಂಶಗಳು ಸೂಚಿಸುತ್ತಿವೆ ಎನ್ನುತ್ತಾರೆ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಕೆನಡಾದ ಮೆಕ್‌ಮಾಸ್ಟರ್ ವಿವಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಪಾಲ್ ಆ್ಯಂಡ್ರೂಸ್.

ಪ್ರತಿ ಎಂಟು ವಯಸ್ಕ ಅಮೆರಿಕನ್‌ರ ಪೈಕಿ ಓರ್ವ ಖಿನ್ನತೆ ನಿವಾರಕ ಔಷಧಿಯನ್ನು ಸೇವಿಸುತ್ತಿದ್ದು, ಇದು ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವ ಔಷಧಿಗಳಲ್ಲೊಂದಾಗಿದೆ. ಸಾಮಾನ್ಯವಾಗಿ ವೈದ್ಯರೂ ಈ ಔಷಧಿಗಳು ಸುರಕ್ಷಿತವಾಗಿ ಭಾವಿಸಿರುವುದರಿಂದ ಖಿನ್ನತೆಗೆ ಕಾರಣಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಈ ಔಷಧಿಗಳನ್ನೇ ತಮ್ಮ ರೋಗಿಗಳಿಗೆ ಶಿಫಾರಸು ಮಾಡುತ್ತಾರೆ.

ಮಾನಸಿಕ ಖಿನ್ನತೆಯೇ ತುಂಬ ಅಪಾಯಕಾರಿಯಾಗಿದ್ದು, ಅದು ಆತ್ಮಹತ್ಯೆಗೆ ಪ್ರಚೋದಿಸುವ ಜೊತೆಗೆ ಮಿದುಳಿಗೆ ಆಘಾತ ಮತ್ತು ಹೃದಯಾಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ. ಖಿನ್ನತೆ ನಿವಾರಕಗಳು ಖಿನ್ನತೆಯನ್ನು ತಗ್ಗಿಸುವ ಮೂಲಕ ವ್ಯಕ್ತಿಗಳ ಪ್ರಾಣಗಳನ್ನು ರಕ್ಷಿಸುತ್ತವೆ ಎನ್ನುವುದು ಹೆಚ್ಚಿನ ವೈದ್ಯರ ಭಾವನೆಯಾಗಿದೆ.

ಮಿದುಳಿನ ಹೊರಗೆ ಖಿನ್ನತೆ ನಿವಾರಕಗಳ ಪರಿಣಾಮಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಎನ್ನುವುದು ಗೊತ್ತಾದರೆ ಜನರು ಅವುಗಳನ್ನು ತೆಗೆದುಕೊಳ್ಳಲು ಹಿಂಜರಿಯಬಹುದು. ನಮಗೆ ಈಗ ತಿಳಿದು ಬಂದಿರುವ ಮಾಹಿತಿಯು ಅವು ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುವುದನ್ನು ಬೆಟ್ಟು ಮಾಡುತ್ತಿದೆ ಎನ್ನುತ್ತಾರೆ ಆ್ಯಂಡ್ರೂಸ್.

ಸಂಶೋಧಕರ ಪ್ರಕಾರ ಈ ಫಲಿತಾಂಶಗಳು ಖಿನ್ನತೆ ನಿವಾರಕಗಳು ನಿಜಕ್ಕೂ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ಅಗತ್ಯವಾಗಿವೆ ಎನ್ನುವುದನ್ನು ತೋರಿಸುತ್ತಿವೆ ಎಂದಿದ್ದಾರೆ ಟೊರೊಂಟೊ ವಿವಿಯಲ್ಲಿ ಸೈಕಿಯಾಟ್ರಿಸ್ಟ್ ಆಗಿರುವ ಬೆನಾಯಿಟ್ ಮುಲ್ಸಂಟ್.ಹೃದ್ರೋಗ ಮತ್ತು ಮಧುಮೇಹಗಳಿಂದ ಬಳಲುತ್ತಿರುವವರಿಗೆ ಖಿನ್ನತೆ ನಿವಾರಕಗಳು ಹಾನಿಕಾರಕವಲ್ಲ ಎನ್ನುವುದನ್ನೂ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಖಿನ್ನತೆ ನಿವಾರಕಗಳು ರಕ್ತವನ್ನು ತೆಳುವಾಗಿಸುತ್ತವೆ ಮತ್ತು ಇದು ಈ ಕಾಯಿಲೆಗಳ ಚಿಕಿತ್ಸೆಯಲ್ಲಿ ನೆರವಾಗುತ್ತದೆ. ಆದರೆ ದುರದೃಷ್ಟವಶಾತ್ ಯಾವುದೇ ಹೃದ್ರೋಗವಿಲ್ಲದ ವ್ಯಕ್ತಿಗಳು ಖಿನ್ನತೆ ನಿವಾರಕಗಳನ್ನು ಸೇವಿಸಿದರೆ ಅದು ಅವರಿಗೆ ಹಾನಿಕಾರಕವಾಗಿ ಪರಿಣಮಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News