ಡೆಂಗ್ ರೋಗಕ್ಕೆ ಅವೈಜ್ಞಾನಿಕ ಔಷಧ !

Update: 2017-09-17 18:26 GMT

ಆಯುಷ್ ಸಚಿವಾಲಯವು ಕಳೆದ ಎರಡು ವಾರಗಳಲ್ಲಿ ಡೆಂಗ್ ಮತ್ತು ಚಿಕುನ್‌ಗುನ್ಯಾವನ್ನು ತಡೆಗಟ್ಟಲು ಆರೋಗ್ಯ ಸಲಹೆಗಳ ಸರಮಾಲೆಯನ್ನೇ ಬಿಡುಗಡೆಮಾಡಿದೆ.ಆದರೆ ವೈದ್ಯರುಗಳು, ವೈಜ್ಞಾನಿಕ ಆಧಾರವಿಲ್ಲದ ಚಿಕಿತ್ಸೆಗಳಿಗೆ ಸ್ವ-ಚಿಕಿತ್ಸಾ ವಿಧಾನ (ಸೆಲ್ಫ್-ಮೆಡಿಕೇಶನ್)ವನ್ನು ಸರಕಾರ ಪ್ರೋತ್ಸಾಹಿಸುತ್ತಿದೆ ಎಂದು ಟೀಕಿಸಿದ್ದಾರೆ. ಜ್ವರ ಮತ್ತು ಸಂಧಿನೋವುಗಳಂತಹ ರೋಗಲಕ್ಷಣಗಳು ಕಂಡುಬಂದಾಗ ಈ ಸೆಲ್ಫ್-ಮೆಡಿಕೇಶನ್ ಮಾಡಿಕೊಳ್ಳುವಂತೆ ಸರಕಾರ ಜನರಿಗೆ ಹೇಳಿದೆ. ಆದರೆ ವೈದ್ಯರುಗಳು ಸರಕಾರದ ಈ ಹೆಜ್ಜೆಯನ್ನು ಟೀಕಿಸುತ್ತಾ, ಸರಕಾರ ಈ ರೀತಿಯಾಗಿ ಸಲಹೆಗಳನ್ನು ನೀಡುವುದು ಸರಿಯಲ್ಲ ಎಂದಿದ್ದಾರೆ. ಆಯುಷ್ ಸಚಿವಾಲಯವು ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯ ಅಭಿವೃದ್ಧಿ ಮತ್ತು ಪ್ರಸಾರವನ್ನು ತನ್ನ ಗುರಿಯಾಗಿಸಿಕೊಂಡಿದೆ. ಸಚಿವಾಲಯದ ಪರಿಧಿಯಲ್ಲಿ ಐದು ಸಮಿತಿಗಳಿವೆ. ಪ್ರತಿಯೊಂದು ಸಮಿತಿಯು ಈ ಐದರಲ್ಲಿ ಒಂದೊಂದರ ಉಸ್ತುವಾರಿ ನೋಡಿಕೊಳ್ಳುತ್ತದೆ.

ಜಾಗತಿಕ ಆರೋಗ್ಯ ಮತ್ತು ನೀತಿಯ ಓರ್ವ ಸಂಶೋಧಕನಾಗಿರುವ ಡಾ.ಅನಂತ್‌ಭಾನ್ ಕೇಳುತ್ತಾರೆ, ''ಒಬ್ಬ ವ್ಯಕ್ತಿ ಗೊಂದಲಕ್ಕೊಳಗಾಗಿ ಬೇರೆ ಬೇರೆ ಸಮಿತಿಗಳು ನೀಡುವ ಸಲಹೆಯಂತೆ ಔಷಧಿಯ (ಪ್ರೊಫಿಲಾಕ್ಸಿಸ್) ಎಲ್ಲಾ ನಮೂನೆಗಳನ್ನು ತೆಗೆದುಕೊಂಡರೆ ಏನು ಗತಿ? ಆಗ ಅಡ್ಡಪರಿಣಾಮಗಳಾಗುತ್ತವೆ.''

ಈ ಹಿಂದಿನ ಕ್ರಮಗಳು: 

ವೈರಲ್ ಜ್ವರ ಹಬ್ಬಿದಾಗ ಸರಕಾರದ ಇಲಾಖೆಗಳು ಬದಲಿ ಔಷಧಿಯನ್ನು ಶಿಫಾರಸು ಮಾಡಿರುವುದು ಇದೇ ಮೊದಲಲ್ಲ, 2013ರಿಂದ ತಮಿಳುನಾಡು ಆರೋಗ್ಯ ಮತ್ತು ಆಯುಷ್ ಇಲಾಖೆಗಳು ಡೆಂಗ್ ಮತ್ತು ಚಿಕುನ್‌ಗುನ್ಯಾಕ್ಕೆ ಪ್ರೊಫಿಲಾಕ್ಸಿಸ್ ಚಿಕಿತ್ಸೆಯನ್ನು ನಿಲುವೆಂಬು ಕುಡಿನೀರ್ ಎಂಬ ಹೆಸರಿನ ಗಿಡಮೂಲಿಕೆ ಸಿದ್ಧೌಷಧ ರೂಪದಲ್ಲಿ ನೀಡುತ್ತಾ ಬಂದಿದೆ.

ಈ ಬಾರಿ ಸಿದ್ಧೌಷಧದಲ್ಲಿ, ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್, ಚಿಕುನ್‌ಗುನ್ಯಾಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳನ್ನು ಪಟ್ಟಿಮಾಡಿ ಒಂದು ಸಲಹಾ ಪತ್ರವನ್ನು ಹೊರಡಿಸಿದೆ. ಕೌನ್ಸಿಲ್‌ನ ಉಪನಿರ್ದೇಶಕ ಡಾ.ಪಿ.ಎಸ್.ರಾಜೇಶ್ವರನ್ ಹೇಳುವಂತೆ, ಆಯುಷ್ ಸಚಿವಾಲಯದಿಂದ ಅಂಗೀಕಾರ ಪಡೆದಿರುವ ಈ ಔಷಧಿಗಳ ಅಡ್ಡಪರಿಣಾಮಗಳ ಬಗ್ಗೆ ಇದುವರೆಗೆ ಯಾವುದೇ ವರದಿಗಳು ಬಂದಿಲ್ಲ.

ಪುರಾವೆಯಿಲ್ಲದೆ ಸಲಹೆ:

ಆಯುಷ್ ನಿರ್ದೇಶಕ ಫ್ರಾಂಕ್ಲಿನ್ ಎಲ್.ಖೊಬಂಗ್ ಈ ವರ್ಷ ಚಿಕುನ್‌ಗುನ್ಯಾ ಮತ್ತು ಡೆಂಗ್ ಪ್ರಕರಣಗಳಲ್ಲಿ ಕಂಡುಬಂದ ಭಾರೀ ಹೆಚ್ಚಳವನ್ನು ಎದುರಿಸುವುದಕ್ಕಾಗಿ ಈ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ ಎಂದಿದ್ದಾರೆ. ಈ ವರ್ಷದ ಜನವರಿ ಮತ್ತು ಆಗಸ್ಟ್ 20ರ ನಡುವೆ ದೇಶದಾದ್ಯಂತ 22ಸಾವಿರ ಚಿಕುನ್‌ಗುನ್ಯಾ ಪ್ರಕರಣಗಳು ಹಾಗೂ 36 ಸಾವಿರ ಡೆಂಗ್ ಪ್ರಕರಣಗಳು ವರದಿಯಾಗಿವೆ.

ನಾಗರಿಕರಿಗೆ ಚಿಕಿತ್ಸೆಯ ವಿವಿಧ ಆಯ್ಕೆಗಳನ್ನು ನೀಡಲು ಸರಕಾರ ಬಯಸುತ್ತದೆಂದು ಖೊಬಂಗ್ ಹೇಳಿದರಾದರೂ, ಈ ಔಷಧಿಗಳ ಹೆಸರುಗಳನ್ನು ಜನತೆಗೆ ಶಿಫಾರಸು ಮಾಡುವ ಮೊದಲು, ಆಯುಷ್ ಸಚಿವಾಲಯವು ಏನು ಅಧ್ಯಯನಗಳನ್ನು ಹಾಗೂ ಸಂಶೋಧನೆಗಳನ್ನು ನಡೆಸಿದೆ ಎಂಬ ಬಗ್ಗೆ ವಿವರಗಳನ್ನು ನೀಡಲು ಅವರು ನಿರಾಕರಿಸಿದರು. ಸಂಶೋಧನಾ ಸಮಿತಿಗಳ ಪ್ರತಿನಿಧಿಗಳನ್ನು ಸಂಪರ್ಕಿಸಿದಾಗ, ಇಲಾಖೆಗಳ ಶಿಫಾರಸುಗಳಿಗೆ ತೃಪ್ತಿಕರವಾದ ಆಧಾರವಿದೆ ಎಂಬುದಕ್ಕೆ ಯಾವ ಸೂಚನೆಗಳೂ ದೊರಕಲಿಲ್ಲ.

ಆಯುರ್ವೇದಿಕ್ ವಿಜ್ಞಾನಗಳ ಸಂಶೋಧನೆಗಾಗಿ ಇರುವ ಕೇಂದ್ರ ಸಮಿತಿಯ ಮಹಾನಿರ್ದೇಶಕ ಕೆ.ಎಸ್.ಧಿಮನ್, ನಮ್ಮ ಸಲಹೆಯಲ್ಲಿ ಚಿಕುನ್‌ಗುನ್ಯಾಕ್ಕೆ ಬಹಳ ಸಮಯದಿಂದ ಬಳಕೆಯಲ್ಲಿರುವ ಆಯುರ್ವೇದ ಔಷಧಿಗಳನ್ನು ಶಿಫಾರಸು ಮಾಡಿದ್ದೇವೆ ಎಂದು ಹೇಳಿದ್ದಾರಾದರೂ, ಆ ಶಿಫಾರಸುಗಳನ್ನು ಯಾವ ಸಂಶೋಧನೆಯ ಆಧಾರದಲ್ಲಿ ಮಾಡಲಾಗಿದೆ ಎಂಬ ಬಗ್ಗೆ ಅವರು ಏನನ್ನೂ ಹೇಳಿಲ್ಲ; ಯಾವುದೇ ಸೂಕ್ತ ಸಂಶೋಧನೆಯನ್ನು ಉಲ್ಲೇಖಿಸಿಲ್ಲ. ಅದೇ ರೀತಿಯಾಗಿ, ಹೋಮಿಯೋಪತಿ ಸಂಶೋಧನಾ ಅಧ್ಯಯನ ದ ಕೇಂದ್ರ ಸಮಿತಿಯ ಮಹಾನಿರ್ದೇಶಕ ಆರ್.ಕೆ.ಮನ್‌ಚಂದಾ, ಆರೋಗ್ಯ ಸಲಹಾಪತ್ರವು ಶತಮಾನಗಳೇ ಲಾಗಾಯ್ತು. ಸಂಗ್ರಹಿಸಲಾದ '' ಪಾರಂಪರಿಕ ಜ್ಞಾನ'' ವನ್ನು ಆಧರಿಸಿದೆ ಎಂದಿದ್ದಾರೆ.

 ಆದರೆ ಚಿಕಿತ್ಸಾ ಪ್ರಯೋಗಗಳು ಎಲ್ಲಿವೆ? '' ವ್ಯಾಕ್ಸಿನ್ - ಟ್ರಯಲ್ '' ನಂತಹ ಅಧ್ಯಯನಗಳನ್ನು ನಡೆಸಿಲ್ಲ, ಆದರೆ ತಜ್ಞರ ತಂಡವೊಂದು ಸಲಹೆಗಳನ್ನು ರೂಪಿಸಿದೆ ಎಂದಿದ್ದಾರೆ. ಮನ್‌ಚಂದಾ, ಇಂಡಿಯನ್ ಜನರಲ್ ಆಫ್ ರಿಸರ್ಚ್ ಇನ್ ಹೋಮಿಯೋಪತಿಯಲ್ಲಿ ತಾನು ಬರೆದಿರುವ ಒಂದು ಸಂಪಾದಕೀಯವನ್ನು ಅವರು ಉಲ್ಲೇಖಿಸಿ, ಈ ಸಂಪಾದಕೀಯವು ಶಿಫಾರಸುಗಳಿಗೆ ಆಧಾರ ಎಂದಿದ್ದಾರೆ. ಆದರೆ ಸಂಪಾದಕೀಯದಲ್ಲಿ ಅವರು, ಡೆಂಗ್ ಚಿಕಿತ್ಸೆಯ ನಿಟ್ಟಿನಲ್ಲಿ ಹೋಮಿಯೋಪತಿ ಬಳಕೆಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂದಷ್ಟೇ ಹೇಳುತ್ತಾರೆ. ವಿಶ್ವಾದ್ಯಂತ ನಡೆದಿರುವ, ಒಂದಲ್ಲ ಒಂದು ಮಿತಿ ಇರುವ ಹಲವು ಅಧ್ಯಯನಗಳನ್ನು ಅವರು ಕೋಟ್ ಮಾಡುತ್ತಾರೆ, ಉದ್ಧರಿಸುತ್ತಾರೆ, ಅಷ್ಟೇ.

ಔಷಧದ ಬದಲಿ ರೂಪಗಳ ಬಳಕೆ ಬಗ್ಗೆ ಈಗ ಜಾಗತಿಕವಾಗಿ ಕಾವೇರಿದ ಚರ್ಚೆ ನಡೆಯುತ್ತಿದೆ. ಉದಾಹರಣೆಗೆ, ಆಯುರ್ವೇದಿಕ್ ಔಷಧಿಗಳಲ್ಲಿ ವಿಷಕಾರಕ ಭಾರಲೋಹ (ಟಾಕ್ಸಿಕ್ ಹೆವಿ ಮೆಟಲ್ಸ್)ಗಳಿರುವುದನ್ನು ಅಧ್ಯಯನಗಳು ಬಹಿರಂಗಗೊಳಿಸಿವೆ. ಈ ಶಿಸ್ತುಗಳು (ವೈದ್ಯಕೀಯ ರಂಗಗಳು) ನೀಡುವ ಚಿಕಿತ್ಸೆಗಳು ಸಮರ್ಪಕವಲ್ಲ, ಎಫಿಶಿಯಂಟ್ ಅಲ್ಲ ಎಂದೂ ಅಲೋಪಥಿ ವೈದ್ಯರುಗಳು ಸಾರ್ವಜನಿಕವಾಗಿಯೇ ವಾದಿಸಿದ್ದಾರೆ.

ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಬಳಕೆಯಾಗುವ ಔಷಧಿಗಳು ಅವುಗಳ ರೋಗನಿವಾರಕ ಸಾಮರ್ಥ್ಯಗಳನ್ನು ಮತ್ತು ಸುರಕ್ಷತೆಯನ್ನು ಸಾಬೀತುಪಡಿಸಲು ಚಿಕಿತ್ಸಾಪ್ರಯೋಗ (ಕ್ಲಿನಿಕಲ್ ಟ್ರಯಲ್)ಗಳಿಗೆ ಗುರಿಯಾಗಬೇಕು. ಸರಕಾರವು ಬದಲಿ ಔಷಧಿಗಳನ್ನು ಶಿಫಾರಸು ಮಾಡುವ ನಿಟ್ಟಿನಲ್ಲಿ ದೊಡ್ಡ ಸಮಸ್ಯೆ ಎಂದರೆ, ಕ್ಲಿನಿಕಲ್ ಡೇಟಾ(ದತ್ತಾಂಶ)ದ ಕೊರತೆ.

ವೈರಲ್ ಜ್ವರದ ಲಕ್ಷಣಗಳಿರುವ ಜನರು, ನೋಂದಾಯಿತ ವೈದ್ಯರೊಬ್ಬರ ಬಳಿ ಇರುವ ಬದಲಿ ಔಷಧಿಗಳ ಯಾದಿಯಲ್ಲಿರುವ ಔಷಧಿಗಳನ್ನು ತೆಗೆದುಕೊಳ್ಳಬಹುದೆಂದು ಸರಕಾರದ ಆರೋಗ್ಯ ಸಲಹಾ ಪತ್ರಗಳು ಹೇಳುತ್ತವೆ. ಆದರೆ ಬದಲಿ ಔಷಧಿಗಳ ಹೆಸರುಗಳನ್ನು ಪಟ್ಟಿಮಾಡುವ ಮೂಲಕ ಆಯುಷ್ ಸಚಿವಾಲಯವು ಜನರಿಗೆ ಅವರೇ ಸ್ವತಃ ಔಷಧಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದಿದ್ದಾರೆ. ಮುಂಬೈಯ ಓರ್ವ ಹಿರಿಯ ವೈದ್ಯರು : ''ಹೀಗೆ, ರೋಗಿಯೊಬ್ಬ ತಾನೇ ಔಷಧಿಗಳನ್ನು ಸೇವಿಸಿ ಆತನ ಪರಿಸ್ಥಿತಿ ಬಿಗಡಾಯಿಸಿದರೆ ಆಗ ಅದಕ್ಕೆ ಯಾರು ಜವಾಬ್ಧಾರಿ? ಈಗಾಗಲೇ ಭಾರತದಲ್ಲಿ ಜನರು ವೈದ್ಯರ ಬಳಿ ಹೋಗದೆ ತಾವೇ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಸರಕಾರದ ಇಂತಹ ಬೇಜವಾಬ್ದಾರಿಯ ಹೆಜ್ಜೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.''

ರೋಗಿಯೊಬ್ಬ ತಾನೇ ಔಷಧಿಗಳನ್ನು ಸೇವಿಸಿ ಆತನ ಪರಿಸ್ಥಿತಿ ಬಿಗಡಾಯಿಸಿದರೆ ಆಗ ಅದಕ್ಕೆ ಯಾರು ಜವಾಬ್ಧಾರಿ? ಈಗಾಗಲೇ ಭಾರತದಲ್ಲಿ ಜನರು ವೈದ್ಯರ ಬಳಿ ಹೋಗದೆ ತಾವೇ ಔಷಧಿ ತೆಗೆದುಕೊಳ್ಳುತ್ತಿದ್ದಾರೆ.ಸರಕಾರದ ಇಂತಹ ಬೇಜವಾಬ್ದಾರಿಯ ಹೆಜ್ಜೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

Writer - ಪ್ರಿಯಾಂಕ ವೋರಾ

contributor

Editor - ಪ್ರಿಯಾಂಕ ವೋರಾ

contributor

Similar News

ಜಗದಗಲ
ಜಗ ದಗಲ