ಕೋಲಾರ:ಜಕ್ಕಸಂದ್ರ ಕೈಗಾರಿಕಾ ಪ್ರದೇಶ ಯೋಜನೆಗೆ ಹಸಿರು ಸಮಿತಿಯ ಅಸ್ತು

Update: 2017-09-18 12:23 GMT

ಹೊಸದಿಲ್ಲಿ,ಸೆ.18: ಕರ್ನಾಟಕದ ಕೋಲಾರ ಜಿಲ್ಲೆಯ ಜಕ್ಕಸಂದ್ರದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 151.60 ಕೋ.ರೂ.ಅಂದಾಜು ವೆಚ್ಚದ ಯೋಜನೆಗೆ ಕೇಂದ್ರದ ತಜ್ಞ ವೌಲ್ಯಮಾಪನ ಸಮಿತಿ(ಇಎಸಿ)ಯು ಹಸಿರು ನಿಶಾನೆಯನ್ನು ತೋರಿಸಿದ್ದು, ಅದರ ಶಿಫಾರಸುಗಳ ಆಧಾರದಲ್ಲಿ ನಿರ್ಧಾರವನ್ನು ಕೈಗೊಳ್ಳುವ ಕೇಂದ್ರ ಪರಿಸರ ಸಚಿವಾಲಯವು ಅಂತಿಮ ಒಪ್ಪಿಗೆಯನ್ನು ನೀಡಲಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯು ಸ್ಟಾರ್ಟ್ ಅಪ್‌ಗಳು, ಹೊಸ ಉದ್ಯಮಗಳು ಮತ್ತು ಜ್ಞಾನ ಆಧಾರಿತ ಉದ್ಯಮಗಳಿಗೆ ಬೆಂಬಲದ ಉದ್ದೇಶದೊಂದಿಗೆ ಜಕ್ಕಸಂದ್ರ ಗ್ರಾಮದ 627.47 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಗೊಳಿಸಲಿದೆ.

ಇತ್ತೀಚಿಗೆ ಸಭೆ ಸೇರಿದ ಇಎಸಿಯು ಹಾಲಿ ಪ್ರದೇಶಕ್ಕೆ ಹೊಂದಿಕೊಂಡಿರುವ ಎರಡು ಕೆರೆಗಳ ರಕ್ಷಣೆ ಸೇರಿದಂತೆ ಕೆಲವು ಷರತ್ತುಗಳೊಂದಿಗೆ ಕೆಐಎಡಿಬಿಯ ಯೋಜನಾ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ ಎಂದು ಅಧಿಕಾರಿ ತಿಳಿಸಿದರು.

ಉದ್ದೇಶಿತ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಪರಿಹಾರವನ್ನು ಪಾವತಿಸಲಾಗಿದೆ. ಸಾರ್ವಜನಿಕ ವಿಚಾರಣೆಯೂ ಪೂರ್ಣಗೊಂಡಿದ್ದು, ಯೋಜನೆಯ ವಿರುದ್ಧ ನ್ಯಾಯಾಲಯಗಳಲ್ಲಿ ಯಾವುದೇ ಪ್ರಕರಣಗಳು ಬಾಕಿಯುಳಿದಿಲ್ಲ ಎಂದು ಕೆಐಎಡಿಬಿ ಕೇಂದ್ರಕ್ಕೆ ತಿಳಿಸಿದೆ.

ಗೋದಾಮು ಮತ್ತು ಲಾಜಿಸ್ಟಿಕ್ಸ್, ಪೀಠೋಪಕರಣ ತಯಾರಿಕೆ, ಜನರಲ್ ಇಂಜಿನಿಯರಿಂಗ್, ವಾಹನಗಳ ಬಿಡಿಭಾಗಗಳು ಇತ್ಯಾದಿಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಉದ್ದೇಶಿತ ಯೋಜನಾ ಪ್ರದೇಶದಲ್ಲಿ ತಲೆಯೆತ್ತಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News