ಅಸಹಿಷ್ಣುತೆ , ನಿರುದ್ಯೋಗ ಭಾರತದ ಪ್ರಮುಖ ಸಮಸ್ಯೆ: ರಾಹುಲ್ ಗಾಂಧಿ

Update: 2017-09-19 18:05 GMT

ವಾಷಿಂಗ್ಟನ್, ಸೆ.19: ಉದ್ಯೋಗ ಸೃಷ್ಟಿಸಲು ಭಾರತ ಸರಕಾರ ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಸಹಿಷ್ಣುತೆ ಮತ್ತು ನಿರುದ್ಯೋಗ ಭಾರತವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಎರಡು ವಾರದ ಅಮೆರಿಕ ಪ್ರವಾಸದಲ್ಲಿ ರಾಹುಲ್ ಗಾಂಧಿ, ‘ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಭಾರತ ಸರಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ. ಇದರಿಂದ ದೇಶವು ಅತ್ಯಂತ ಭಯಾನಕ ಪರಿಸ್ಥಿತಿ ಎದುರಿಸಬೇಕಾದೀತು ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದರು.ಯು.ಎಸ್.ಚೇಂಬರ್ ಆಫ್ ಕಾಮರ್ಸ್‌ನ ಸಿಇಒ ಥಾಮಸ್ ಜೆ.ಡೊನೊಹ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಅವರು ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಸಂಪಾದಕೀಯ ಮಂಡಳಿಯ ಜೊತೆ ನಡೆಸಿದ ಅನಧಿಕೃತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿಶ್ವದಾದ್ಯಂತ , ಅದರಲ್ಲೂ ಪ್ರಮುಖವಾಗಿ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆಯ ಭಾವನೆ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟರು. ಬಳಿಕ ರಾಹುಲ್ ರಿಪಬ್ಲಿಕನ್ ಪಕ್ಷದ ವ್ಯೆಹ ಪರಿಣತ ಪುನೀತ್ ಅಹ್ಲುವಾಲಿಯ ಹಾಗೂ ಅಮೆರಿಕನ್ ವಿದೇಶಿ ಕಾರ್ಯನೀತಿ ಸಂಸ್ಥೆ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಹ್ಲುವಾಲಿಯ, ರಾಹುಲ್ ಗಾಂಧಿ ಯಾವುದೇ ವಿಷಯದ ಬಗ್ಗೆ ಅಮೂಲಾಗ್ರ ತಿಳುವಳಿಕೆ ಹೊಂದಿದ್ದಾರೆ. ಅಸಹಿಷ್ಣುತೆ ಮತ್ತು ನಿರುದ್ಯೋಗ ಭಾರತ ಎದುರಿಸುತ್ತಿರುವ ಪ್ರಧಾನ ಸಮಸ್ಯೆ ಎಂಬ ರಾಹುಲ್ ಅಭಿಪ್ರಾಯವನ್ನು ಸಂವಾದದಲ್ಲಿ ಪಾಲ್ಗೊಂಡ ಬಹುತೇಕ ಜನರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿಯವರ ತಿಳುವಳಿಕೆ, ಚಿಂತನೆ, ಹೇಳಿಕೆಯಲ್ಲಿರುವ ಸ್ಪಷ್ಟತೆ ಸಭೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಪ್ರಭಾವ ಬೀರಿದೆ ಎಂದು ರಾಹುಲ್ ಪಾಲ್ಗೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲೂ ಜತೆಗಿರುವ ಕಾಂಗ್ರೆಸ್ ಸಾಗರೋತ್ತರ ವಿಭಾಗದ ಅಧ್ಯಕ್ಷ ಸ್ಯಾಮ್ ಪಿತ್ರೋಡ ಹೇಳಿದ್ದಾರೆ.

ಅವರು ವಿವೇಚನೆಯುಳ್ಳ ವ್ಯಕ್ತಿಯಾಗಿದ್ದು ಯಾವುದೇ ಸಮಸ್ಯೆಯನ್ನು ಚೆನ್ನಾಗಿ ಅರಿತು ಮಾತಾಡುವ ವ್ಯಕ್ತಿ . ಅವರ ಬಗ್ಗೆ ಇದುವರೆಗೆ ನಮಗೆ ತಪ್ಪು ಮಾಹಿತಿ ನೀಡಲಾಗುತ್ತಿತ್ತು. ನಾವು ಕಲ್ಪಿಸಿಕೊಂಡಿದ್ದ ವ್ಯಕ್ತಿಗಿಂತ ಅವರು ಭಿನ್ನರಾಗಿದ್ದಾರೆ ಎಂಬುದು ಸಭಿಕರ ಅಭಿಪ್ರಾಯವಾಗಿದೆ ಎಂದು ಪಿತ್ರೋಡ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸಲು ಅವರ ವಿರೋಧಿಗಳು ಪೂರ್ಣಕಾಲಿಕ ಉದ್ಯೋಗಿಗಳನ್ನು ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ ಪಿತ್ರೋಡ, ರಾಹುಲ್ ಗಾಂಧಿ ವಿಕೇಂದ್ರೀಕರಣದ ಬಗ್ಗೆ ಒಲವು ಹೊಂದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬುದು ರಾಹುಲ್ ನಿಲುವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News