ತಮಿಳುನಾಡಿನಲ್ಲಿ ‘ಕಮಲ’ ರಾಜಕಾರಣ!

Update: 2017-09-19 18:24 GMT

 ವೇಳೆಯಲ್ಲಿ ಕಮಲ್ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ. ‘‘ನಾನು ಹೊಸ ಪಕ್ಷವನ್ನೇ ಕಟ್ಟುತ್ತೇನೆ ಮತ್ತು ನನ್ನ ಪಕ್ಷದ ಬಣ್ಣವು ಕೇಸರಿಯಾಗಿರುವುದಿಲ್ಲ’’ ಎಂಬ ಕಮಲ್ ಅವರ ಮಾರ್ಮಿಕ ಹೇಳಿಕೆ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದಂತಿದೆ. ‘‘ಇಲ್ಲಿ ರಾಜಕೀಯ ಅಸ್ಥಿರತೆ ಇದೆ. ಒಂದು ನಿರ್ವಾತ ಸೃಷ್ಟಿಯಾಗಿದೆ ಆದ್ದರಿಂದ ನನಗೆ ತಮಿಳುನಾಡಿನ ರಾಜಕಾರಣಕ್ಕೆ ಬರಲು ಈಗ ಕಾಲ ಪಕ್ವವಾಗಿದೆ’’ ಎಂಬ ಕಮಲ್‌ಹಾಸನ್ ಹೇಳಿಕೆ ಕೂಡ ಪಳನಿಸ್ವಾಮಿ-ಪನೀರ್‌ಸೆಲ್ವಂ ಜೋಡಿಯ ರಾಜಕೀಯ ದೌರ್ಬಲ್ಯ ಮತ್ತು ಮೋದಿ-ಶಾ ಜೋಡಿಯ ರಾಜಕೀಯ ಕುತಂತ್ರಗಳನ್ನು ಕುರಿತು ಮಾತನಾಡಿದಂತಿದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಅಲ್ಲಿ ‘ಕಮಲ್ ವರ್ಸಸ್ ಕಮಲ’ ಸಮರ ನಡೆಯಬಹುದು. ಕಮಲ್ ಕಮಾಲ್ ನಡೆದೀತೆ?

ದ್ರಾವಿಡನಾಡು ಎಂದೇ ಪ್ರಸಿದ್ಧವಾಗಿರುವ ತಮಿಳುನಾಡಿನಲ್ಲಿ ರಾಜಕಾರಣ ಮಾಡಬೇಕೆಂದರೆ ಅಲ್ಲಿನ ಪಕ್ಷಗಳು ಕಡ್ಡಾಯವಾಗಿ ದ್ರಾವಿಡ ಎಂಬ ಹೆಸರಿನಿಂದಲೇ ಗುರ್ತಿಸಿಕೊಳ್ಳಬೇಕು. ಹೀಗೆ ತಮಿಳುನಾಡಿನ ರಾಜಕಾರಣದ ದಿಕ್ಕನ್ನೇ ಬದಲಿಸಿದವರು ವಿಚಾರಕ್ರಾಂತಿಯ ತಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿದ್ದ ಪೆರಿಯಾರ್ ರಾಮಸ್ವಾಮಿಯವರಿಗೆ ಕಾಂಗ್ರೆಸ್ ಪಕ್ಷದ ಬಡಜನವಿರೋಧಿ ನಿಲುವು ಮತ್ತು ಇಬ್ಬಗೆಯ ನೀತಿ ಅರಿವಾಯಿತು. ಅಂದು ಕಾಂಗ್ರೆಸ್ ತೊರೆದ ಪೆರಿಯಾರ್ ಇನ್ನೆಂದೂ ತಮ್ಮ ದ್ರಾವಿಡ ನಾಡಿನಲ್ಲಿ ವೈದಿಕರ ಮೇವುಗಾಡಿನಂತಿರುವ ಕಾಂಗ್ರೆಸ್ ಪಕ್ಷವನ್ನು ಬೆಳೆಯಲು ಬಿಡುವುದಿಲ್ಲ ಎಂಬ ಶಪಥ ಗೈದರು. ಅಲ್ಲಿಂದ ದ್ರಾವಿಡ ಕಳಗಂ ಜೊತೆಯಲ್ಲಿ ಹೊಸ ರಾಜಕೀಯ ಪಯಣ ಆರಂಭಿಸಿದ ಪೆರಿಯಾರ್ ನಂತರ ದ್ರಾವಿಡ ಕಳಗಂ ಪಕ್ಷದ ನೇತೃತ್ವ ವಹಿಸಿಕೊಂಡು ತಮಿಳುನಾಡಿನಾದ್ಯಂತ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದರು. ಅವರ ವಿಚಾರಕ್ರಾಂತಿಗೆ ದೊಡ್ಡಸಂಖ್ಯೆಯಲ್ಲಿ ದ್ರಾವಿಡ ಜನರು ಬೆಂಬಲ ವ್ಯಕ್ತಪಡಿಸಿದರು. ರಾಜಕೀಯವಾಗಿ ತುಳಿಯಲ್ಪಟ್ಟಿದ್ದ ಶೂದ್ರಾತಿಶೂದ್ರರಿಗೆ ಬಹುದೊಡ್ಡ ರಾಜಕೀಯ ನೆಲೆ ಕಲ್ಪಿಸಿದ ಪೆರಿಯಾರ್ ಅಕ್ಷರಶಃ ಕಾಂಗ್ರೆಸ್ ಪಕ್ಷವನ್ನು ಅಲ್ಲಿ ಮೂಲೋತ್ಪಾಟನೆ ಮಾಡಿಬಿಟ್ಟರು. ಇಂದಿಗೂ ಅಲ್ಲಿ ಕಾಂಗ್ರೆಸ್ ತನ್ನ ಬಾಲಬಿಚ್ಚಲಾಗಿಲ್ಲದಿರುವುದಕ್ಕೆ ಪೆರಿಯಾರ್ ಅವರ ಹೊಡೆತವೇ ಕಾರಣ. ಅದು ಕಾಲಾನಂತರ ಕಾಂಗ್ರೆಸ್‌ನಿಂದ ಹಾರಿದ ವೈದಿಕರ ಬಿಜೆಪಿಗೂ ಅನ್ವಯವಾಗುತ್ತದೆ.

ಪೆರಿಯಾರ್ ನಂತರ ದ್ರಾವಿಡ ಕಳಗಂ ಪಕ್ಷವು ದ್ರಾವಿಡ ಕಳಗಂ, ಅಣ್ಣಾ ದ್ರಾವಿಡ ಕಳಗಂ, ಆಲ್ ಇಂಡಿಯಾ ಅಣ್ಣಾ ದ್ರಾವಿಡ ಕಳಗಂ ಎನ್ನುತ್ತಾ ವಿಭಜನೆಯಾಗುತ್ತಾ ಹೋಯಿತು. ಆದರೂ ಅದು ತನ್ನ ಮೂಲದಲ್ಲಿನ ದ್ರಾವಿಡ ಎಂಬುದನ್ನು ಬಿಟ್ಟುಕೊಟ್ಟಿಲ್ಲ. ಹಾಗೆ ದ್ರಾವಿಡ ಪದವು ಇಲ್ಲವಾದರೆ ಅಲ್ಲಿ ದ್ರಾವಿಡ ರಾಜಕಾರಣವೂ ಇಲ್ಲವಾಗುತ್ತದೆ. ಇಂತಹ ದ್ರಾವಿಡನಾಡಿನಲ್ಲಿ ಇನ್ನು ಮುಂದೆ ಹೊಸ ರಾಜಕೀಯ ಶಕೆಯೊಂದು ಆರಂಭವಾಗಲಿದೆ. ಹಿಂದೆ ದ್ರಾವಿಡ ಕಳಗಂ ಪಕ್ಷವು ಒಡೆದುಹೋಗುವುದಕ್ಕೆ ಕಾರಣವಾದವರು ಅಂದಿನ ಪ್ರಸಿದ್ಧ ಚಲನಚಿತ್ರ ತಾರೆಯರಾದ ಎಂಜಿಆರ್ ಮತ್ತು ಕರುಣಾನಿಧಿಯವರು ನಂತರ ಅದು ಎಐಎಡಿಎಂಕೆ ಯಾಗಿ ಮರುವಿಭಜನೆಯಾದದ್ದೂ ಸಹ ಪ್ರಸಿದ್ಧ ಚಿತ್ರನಟಿ ಜಯಲಲಿತಾರಿಂದಲೇ. ಇದೀಗ ತಮಿಳುನಾಡಿನ ರಾಜಕಾರಣಕ್ಕೆ ಮತ್ತಿಬ್ಬರು ಪ್ರಸಿದ್ಧ ಚಲನಚಿತ್ರನಟರು ಕಾಲಿಡುತ್ತಿದ್ದಾರೆ. ಒಬ್ಬರು ಸೂಪರ್‌ಸ್ಟಾರ್ ರಜನಿಕಾಂತ್ ಮತ್ತೊಬ್ಬರು ಉಲಗನಾಯಗನ್ ಕಮಲ್‌ಹಾಸನ್! ಇಬ್ಬರೂ ತಮಿಳುನಾಡಿನ ಚಿತ್ರರಂಗದಲ್ಲಿ ದೊಡ್ಡ ತಾರೆಯರು. ತಮಿಳುನಾಡಿನಾಚೆಗೂ ವಿಶ್ವಪ್ರಸಿದ್ಧರೇ ಆದವರು. ಅವರಿಬ್ಬರೂ ಸಮಕಾಲೀನ ನಟರು. ಆರಂಭದಿಂದ ಇಂದಿನ ತನಕವೂ ಯಶಸ್ವಿ ಸಿನಿಪಯಣ ನಡೆಸಿರುವವರು. ಹೊಸತಲೆಮಾರಿನ ನಟರ ಭರಾಟೆಯ ನಡುವೆ ಇಂದಿಗೂ ತಮ್ಮ ಖ್ಯಾತಿಯನ್ನು ಕಾಯ್ದಿಟ್ಟುಕೊಂಡಿರುವವರು. ಇಬ್ಬರೂ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ಖ್ಯಾತನಾಮರು. ಇವರಿಬ್ಬರ ರಾಜಕೀಯ ನಡೆ ಈಗ ರಾಜ್ಯ ರಾಜ್ಯಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹಾಗೆಯೇ ಇಡೀ ದೇಶದ ಗಮನ ಸೆಳೆದಿದೆ.

ವಿಚಿತ್ರವೆಂದರೆ ಸ್ವತಃ ಶೂದ್ರರಾಗಿರುವ ಹಾಗೂ ಅತೀ ಹೆಚ್ಚು ತಳಸಮುದಾಯದ ಅಭಿಮಾನಿ ವೃಂದವನ್ನು ಹೊಂದಿರುವ ರಜನಿಕಾಂತ್‌ರವರು ಅಪ್ಪಟ ದೈವಭಕ್ತರು ಮತ್ತು ಅವರು ರಾಜಕೀಯವಾಗಿ ಬಿಜೆಪಿಯೊಡನೆ ಗುರ್ತಿಸಿಕೊಳ್ಳತೊಡಗಿದ್ದಾರೆ. ಬಿಜೆಪಿ ಸಖ್ಯದಲ್ಲಿ ರಾಜಕಾರಣ ಮಾಡಬಯಸಿದ್ದಾರೆ. ಆದರೆ ಬ್ರಾಹ್ಮಣರಾಗಿರುವ ಕಮಲ್‌ಹಾಸನ್ ಅಪ್ಪಟ ನಿರೀಶ್ವರವಾದಿ ಮತ್ತು ಪೆರಿಯಾರ್ ಅವರ ಅಭಿಮಾನಿ. ಕಮಲ್ ಯಾವುದೇ ಪಕ್ಷದೊಡನೆ ಗುರ್ತಿಸಿಕೊಳ್ಳದೆ ಸ್ವಂತ ಪಕ್ಷ ಕಟ್ಟಲು ಹೊರಟಿದ್ದಾರೆ! ಮತ್ತು ಅವರು ‘‘ನನ್ನ ಪಕ್ಷದ ಬಣ್ಣ ಖಂಡಿತಾ ಕೇಸರಿಯಾಗಿರುವುದಿಲ್ಲ’’ ಎನ್ನುವ ಮೂಲಕ ಮಾರ್ಮಿಕವಾಗಿ ಬಿಜೆಪಿ ಹಾಗೂ ಬಿಜೆಪಿ ಸೇರಲಿರುವ ಗೆಳೆಯ ರಜನಿಕಾಂತ್‌ಗೆ ಟಾಂಗ್ ನೀಡಿದ್ದಾರೆ. ತಮ್ಮ ವಿಚಾರಾತ್ಮಕ ಹಾಗೂ ವಿವಾದಾತ್ಮಕ ಚಿತ್ರಗಳಿಂದ ಹಲವು ಬಾರಿ ಜಯಲಲಿತಾ ಮತ್ತು ಅವರ ಪಕ್ಷದಿಂದ ವಿರೋಧ, ಆರ್ಥಿಕ ನಷ್ಟ ಹಾಗೂ ಮಾನಸಿಕ ಸಂಕಷ್ಟ ಎದುರಿಸಿ ಹೈರಾಣಾಗಿದ್ದ ಕಮಲ್‌ಹಾಸನ್ ತಮ್ಮ ಮಹತ್ವಾಕಾಂಕ್ಷೆಯ ಸಿನೆಮಾ ‘ವಿಶ್ವರೂಪಂ’ ಬಿಡುಗಡೆಯ ವೇಳೆ ಉಂಟಾದ ಪ್ರಕ್ಷುಬ್ಧ ಸ್ಥಿತಿಗೆ ರೋಸಿ ತಮಿಳುನಾಡನ್ನೇ ತೊರೆಯುವುದಾಗಿ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು. ಅದೇ ರೀತಿ ತಮ್ಮ ವೈವಾಹಿಕ ಜೀವನ ಹಾಗೂ ವೈಯಕ್ತಿಕ ಜೀವನದಲ್ಲೂ ಹಲವು ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ದಕ್ಕಿಸಿಕೊಂಡವರು. ಪ್ರಗತಿಪರ ಆಲೋಚನೆಗಳು ಮತ್ತು ಮೌಢ್ಯ ವಿರೋಧಿ ನಿಲುವುಗಳಿಂದಲೇ ಗುರ್ತಿಸಿಕೊಂಡವರು ಕಮಲ್‌ಹಾಸನ್. ಅದೇ ರಜನಿಕಾಂತ್ ದೈವನಂಬಿಕೆ, ಪವಾಡಪುರುಷರ ಮೇಲೆ ಭಕ್ತಿ ಮುಂತಾಗಿ ತಮ್ಮನ್ನು ಸದಾ ಸೇಫ್ ಝೋನ್‌ನಲ್ಲಿ ಇಟ್ಟುಕೊಂಡವರು. ಹಾಗೆಯೇ ತಮ್ಮ ಸಿನಿಮಾಗಳ ಆಯ್ಕೆಯನ್ನು ಮಾಡಿಕೊಂಡು ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದೆ ಜನಸಾಮಾನ್ಯರ ನಡುವೆ ಖ್ಯಾತಿ ಉಳಿಸಿಕೊಂಡವರು. ಆದರೆ ಕೆಲವು ಸಾಮಾಜಿಕ ಸೇವೆಗಳಿಂದ ಜನಮನ್ನಣೆ ಗಳಿಸಿಕೊಂಡವರು. ಇಂತಹ ಇಬ್ಬರು ಸಿನಿಸ್ಟಾರ್‌ಗಳ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿರುವುದು ಸುಳ್ಳಲ್ಲ.

ಇತ್ತ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕೊನೆಗೂ ಮನ್ನಾರ್‌ಗುಡಿ ಗ್ಯಾಂಗ್ ಅನ್ನು ಪಳನಿಸ್ವಾಮಿ-ಪನೀರ್‌ಸೆಲ್ವಂ ಇಬ್ಬರೂ ಸೇರಿ ಹೊರದಬ್ಬಿದ್ದಾರೆ. ಅಲ್ಲಿಗೆ ಚಿನ್ನಮ್ಮನಾಗಿ ತಮಿಳುನಾಡಿನಲ್ಲಿ ಮೆರೆಯಬೇಕೆಂದು ಕನಸುಕಂಡಿದ್ದ ಶಶಿಕಲಾಳ ಕನಸಿನ ಸಾಮ್ರಾಜ್ಯ ಪತನಗೊಂಡಿದೆ. ಇದೇ ಸಂದರ್ಭವನ್ನು ಚನ್ನಾಗಿ ಬಳಸಿಕೊಳ್ಳಲು ಮಾಸ್ಟರ್‌ಪ್ಲಾನ್ ಮಾಡಿರುವ ಶಾ-ಮೋದಿ ಜೋಡಿ, ಪಳನಿಸ್ವಾಮಿ-ಪನೀರ್‌ಸೆಲ್ವಂ ಜೋಡಿಯನ್ನು ಎನ್‌ಡಿಎ ತೆಕ್ಕೆಗೆ ಸೆಳೆಯಲು ಆರಂಭಿಸಿದ್ದಾರೆ. ಮುಂದಿನ ಚುನಾವಣಾ ವೇಳೆಗೆ ಅಲ್ಲಿ ಬಿಜೆಪಿ ಪಳನಿಸ್ವಾಮಿ-ಪನೀರ್‌ಸೆಲ್ವಂ ಜೋಡಿಯನ್ನು ಮುಂದಿಟ್ಟುಕೊಂಡು ತನ್ನ ‘ಕಮಲ’ ಅರಳಿಸಲು ಹುನ್ನಾರ ನಡೆಸಿದೆ. ಬಹುಶಃ ಈ ತಂತ್ರ ಫಲಕಾರಿಯಾದರೆ ತಮಿಳುನಾಡಿನ ಕೆಸರಿನಲ್ಲಿ ಕಮಲ ಅರಳಿದರೂ ಆಶ್ಚರ್ಯವಿಲ್ಲ. ಈ ವೇಳೆಯಲ್ಲಿ ಕಮಲ್ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ. ‘‘ನಾನು ಹೊಸ ಪಕ್ಷವನ್ನೇ ಕಟ್ಟುತ್ತೇನೆ ಮತ್ತು ನನ್ನ ಪಕ್ಷದ ಬಣ್ಣವು ಕೇಸರಿಯಾಗಿರುವುದಿಲ್ಲ’’ ಎಂಬ ಕಮಲ್ ಅವರ ಮಾರ್ಮಿಕ ಹೇಳಿಕೆ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದಂತಿದೆ. ‘‘ಇಲ್ಲಿ ರಾಜಕೀಯ ಅಸ್ಥಿರತೆ ಇದೆ. ಒಂದು ನಿರ್ವಾತ ಸೃಷ್ಟಿಯಾಗಿದೆ ಆದ್ದರಿಂದ ನನಗೆ ತಮಿಳುನಾಡಿನ ರಾಜಕಾರಣಕ್ಕೆ ಬರಲು ಈಗ ಕಾಲ ಪಕ್ವವಾಗಿದೆ’’ ಎಂಬ ಕಮಲ್‌ಹಾಸನ್ ಹೇಳಿಕೆ ಕೂಡ ಪಳನಿಸ್ವಾಮಿ-ಪನೀರ್‌ಸೆಲ್ವಂ ಜೋಡಿಯ ರಾಜಕೀಯ ದೌರ್ಬಲ್ಯ ಮತ್ತು ಮೋದಿ-ಶಾ ಜೋಡಿಯ ರಾಜಕೀಯ ಕುತಂತ್ರಗಳನ್ನು ಕುರಿತು ಮಾತನಾಡಿದಂತಿದೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಅಲ್ಲಿ ‘ಕಮಲ್ ವರ್ಸಸ್ ಕಮಲ’ ಸಮರ ನಡೆಯಬಹುದು. ಕಮಲ್ ಕಮಾಲ್ ನಡೆದೀತೆ?

ಹಾಗೆ ನೋಡಿದರೆ ರಜನಿಕಾಂತ್‌ಗೆ ಜನಬೆಂಬಲ ಜಾಸ್ತಿ ಇದೆ. ಆತನ ಅಭಿಮಾನಿಗಳು ಅತೀ ಹಿಂದುಳಿದ ಶ್ರಮಿಕರು ಹಾಗೂ ಸಾಮಾನ್ಯ ಜನರೇ. ರಜನಿ ಒಂದು ಹೊಸ ಪಕ್ಷ ಕಟ್ಟಿದ್ದರೂ ಅದರಿಂದ ಆತನ ಖ್ಯಾತಿ ಇನ್ನಷ್ಟು ಹೆಚ್ಚುತ್ತಿತ್ತು. ತಮಿಳುನಾಡಿನಲ್ಲಿ ಈಗ ಸೃಷ್ಟಿಯಾಗಿರುವ ರಾಜಕೀಯ ನಿರ್ವಾತವನ್ನು ತುಂಬಲು ರಜನಿಗೆ ಹೆಚ್ಚು ಅವಕಾಶವಿತ್ತು. ಆದರೆ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದ ರಜನಿ ಬಿಜೆಪಿಯೊಡನೆ ರಾಜಕಾರಣ ಮಾಡಹೊರಟಿರಬಹುದು. ಅಂತಹ ಗುಟ್ಟನ್ನು ಅವರು ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ರಜನಿ ರಾಜಕೀಯ ಪ್ರವೇಶ ಘೋಷಿಸಿದ ಮೇಲೆ ಅವರ ಮನೆಗೆ ಬಿಜೆಪಿ ಜನರ ಓಡಾಟ ಹೆಚ್ಚಾಗಿದೆ. ರಜನಿ ಕಾರಣಕ್ಕೆ ತಮಿಳುನಾಡಿನಲ್ಲಿ ಕಮಲ ಅರಳಲು ಅನುವಾಗಬಹುದು. ಪಳನಿಸ್ವಾಮಿ-ಪನೀರ್‌ಸೆಲ್ವಂ ಜೋಡಿ ಈಗಿರುವ ಅಧಿಕಾರಕ್ಕೆ ಮಾತ್ರ ಮೀಸಲು. ಮುಂದಿನ ಚುನಾವಣೆಯಲ್ಲಿ ಅವರ ಜೋಡಿ ಆಟ ಅಷ್ಟಾಗಿ ನಡೆಯದು. ಈ ದೌರ್ಬಲ್ಯವನ್ನು ಬಳಸಿಕೊಳ್ಳುವುದಕ್ಕಾಗಿಯೇ ಬಿಜೆಪಿ ಹೊಂಚು ಹಾಕಿದೆ. ಇದರೊಡನೆ ರಜನಿಯೂ ಸೇರಿದರೆ ಕಮಲ ಅರಳಲು ಭೂಮಿಕೆ ಸುಲಭವಾಗಬಹುದು.

ಈ ಸಾಧ್ಯತೆಯನ್ನು ನೋಡಿಯೇ ಕಮಲ್ ರಾಜಕೀಯಕ್ಕೆ ಧುಮುಕುವ ನಿರ್ಧಾರ ಮಾಡಿದ್ದಾರೆ ಎನ್ನುವವರಿದ್ದಾರೆ. ಕಮಲ್‌ಗೂ ಜನಸಾಮಾನ್ಯರೇ ಅಭಿಮಾನಿಗಳು ಹಾಗೂ ಮತದಾರರು. ಕಮಲ್ ಅವರನ್ನು ಇಷ್ಟಪಡುವ ಮೇಲ್ವರ್ಗದವರು ಕಡಿಮೆಯೆಂದೇ ಹೇಳಬೇಕು. ಅಷ್ಟಾದರೂ ಕಮಲ್ ರಾಜಕೀಯ ನಡೆಯನ್ನು ಮೆಚ್ಚಲೇಬೇಕು. ಗೆಲುವು ಸೋಲಿಗಿಂತ ಒಂದು ಜನವಿರೋಧಿ ಬೆಳವಣಿಗೆಯನ್ನು ಸರಾಗವಾಗಿ ಹರಡಲು ಬಿಡಬಾರದು ಅದಕ್ಕೆ ಕನಿಷ್ಠ ಪ್ರತಿರೋಧ ಹಾಗೂ ಪ್ರತಿಸ್ಪರ್ಧೆಯನ್ನು ನೀಡಬೇಕು ಎಂಬ ಕಮಲ್ ಪ್ರಜ್ಞೆಯನ್ನು ಮೆಚ್ಚಲೇಬೇಕು. ಯಾವುದಾದರು ರಾಜಕೀಯ ಬಿಕ್ಕಟ್ಟು ಎದುರಾದಾಗ, ಸಾಮಾಜಿಕ ಸಮಸ್ಯೆ ತಲೆದೋರಿದಾಗ ಕಮಲ್ ಅದಕ್ಕೆ ಪ್ರತಿಕ್ರಿಯಿಸುವುದನ್ನು ಎಂದೂ ತಪ್ಪಿಸಿಲ್ಲ. ಕಲಾವಿದನಿಗೆ ಮಿಗಿಲಾಗಿ ತಾನೊಬ್ಬ ಸಾಮಾಜಿಕ ಜವಾಬ್ದಾರಿಯುಳ್ಳ ನಾಗರಿಕನಾಗಿ ಕಮಲ್ ತಮ್ಮ ಮನದಾಳದ ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಈ ಕಾರಣಕ್ಕೇ ಅವರು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಗೌರಿಹತ್ಯೆಯನ್ನು ಖಂಡಿಸಿ ಕಮಲ್ ತಮ್ಮ ಮಾತುಗಳನ್ನು ದಿಟ್ಟವಾಗಿ ಹೇಳಿದ್ದರು. ಎಡಪಂಥೀಯ ವಿಚಾರಧಾರೆಗೆ ಹೆಚ್ಚು ಆಕರ್ಷಿತರಾಗಿದ್ದರೂ ಕಮಲ್ ಸ್ವತಂತ್ರ ಪಕ್ಷ ಹುಟ್ಟುಹಾಕುತ್ತೇನೆಂದು ಹೇಳಿರುವುದು ಅವರ ದಿಟ್ಟತನವನ್ನು ತೋರುತ್ತದೆ. ಈ ಕುರಿತು ಸದ್ಯ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಹೆಚ್ಚು ಚರ್ಚಿಸಬೇಕೆಂಬ ಇಂಗಿತ ವ್ಯಕ್ತಪಡಿಸಿರುವ ಕಮಲ್ ರಾಜಕೀಯ ನಡೆಯಲ್ಲಿ ಗಂಭೀರತೆ ಇರುವುದನ್ನು ಕಾಣಬಹುದು. ಈಗಾಗಲೇ ಅಲ್ಲಿ ವಿಜಯಕಾಂತ್, ಕಾರ್ತಿಕ್ ಮುಂತಾದ ನಟರು ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣದಲ್ಲಿದ್ದಾರೆ.

ಸಿನೆಮಾ ಹಾಗೂ ರಾಜಕಾರಣ ಎರಡೂ ಒಂದೇ ಎಂಬಂತಿರುವ ತಮಿಳುನಾಡಿನಲ್ಲಿ ವಿವಿಧ ಪಕ್ಷಗಳಲ್ಲಿ ಹಲವು ನಟನಟಿಯರು ಅದಾಗಲೇ ಆಶ್ರಯ ಪಡೆದುಕೊಂಡಿದ್ದಾರೆ. ಎಡ ಪಕ್ಷಗಳ ಆಟ ಅಲ್ಲಿ ನಡೆಯುವುದಿಲ್ಲ. ದಲಿತ ಪ್ಯಾಂಥರ್ಸ್‌ ರಾಜಕಾರಣದಲ್ಲಿದ್ದರೂ ಅದು ಒಂದೆರಡು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ಬಹುಜನ ಸಮಾಜ ಪಕ್ಷದ ಕರ್ನಾಟಕದಲ್ಲಿರುವಂತೆಯೇ ಇದೆ. ಇಂತಹ ವೇಳೆಯಲ್ಲಿ ಕಮಲ್ ರಾಜಕಾರಣಕ್ಕಿಳಿದಿರುವುದು ಅದರಲ್ಲೂ ಹೊಸ ಪಕ್ಷವನ್ನೇ ಸ್ಥಾಪಿಸಹೊರಟಿರುವುದು ಒಳ್ಳೆಯ ಬೆಳವಣಿಗೆಯೇ. ಚುನಾವಣೆ ಹತ್ತಿರವಾದಂತೆ ಕಮಲ್‌ರೊಡನೆ ಇನ್ನಷ್ಟು ತಾರೆಯರು ಸೇರ್ಪಡೆಯಾಗಬಹುದು. ಯಾರಿಗೆ ಗೊತ್ತು ಕಮಲ್ ಸ್ನೇಹಕ್ಕೆ ಕಟ್ಟುಬಿದ್ದು ಅಥವಾ ಕಮಲ್ ನಡೆಗೆ ಹೆದರಿ ರಜನಿಯೂ ಕಮಲ್ ಜೊತೆ ಕೈಜೋಡಿಸಬಹುದು. ಒಂದು ವೇಳೆ ಅಂತಹುದೇನಾದರೂ ನಡೆದರೆ ಅಲ್ಲಿ ದೊಡ್ಡ ರಾಜಕೀಯ ಪಲ್ಲಟ ಪರ್ವವೇ ನಡೆಯಬಹುದು. ಇದೆಲ್ಲದರ ನಡುವೆ ಪೆರಿಯಾರ್ ಕಟ್ಟಿದ ದ್ರಾವಿಡ ರಾಜಕಾರಣದ ಪರಂಪರೆ ನಶಿಸದಿರಲಿ ಎಂಬುದಷ್ಟೇ ಆಶಯ.

Writer - ಡಾ. ಕೃಷ್ಣಮೂರ್ತಿ ಚಮರಂ

contributor

Editor - ಡಾ. ಕೃಷ್ಣಮೂರ್ತಿ ಚಮರಂ

contributor

Similar News

ಜಗದಗಲ
ಜಗ ದಗಲ