ಭೀಕರ ಭೂಕಂಪಕ್ಕೆ ಮೆಕ್ಸಿಕೊ ತತ್ತರ

Update: 2017-09-20 03:43 GMT

ಮೆಕ್ಸಿಕೊ ಸಿಟಿ, ಸೆ. 20: ಕೇಂದ್ರ ಮೆಕ್ಸಿಕೊದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ಕನಿಷ್ಠ 139 ಮಂದಿ ಬಲಿಯಾಗಿದ್ದು, ಕಟ್ಟಡಗಳು ತರಗೆಲೆಗಳಂತೆ ಬಿದ್ದಿವೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟಿತ್ತು. ದಟ್ಟ ದೂಳು ಇಡೀ ಪ್ರದೇಶವನ್ನು ವ್ಯಾಪಿಸಿದೆ. ಸಾವಿರಾರು ಮಂದಿ ಭೀತಿಯಿಂದ ತಮ್ಮ ಕಟ್ಟಡಗಳಿಂದ ಹೊರಬಂದು ಬೀದಿಯಲ್ಲಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವವರನ್ನು ಸಂರಕ್ಷಿಸುವ ಪರಿಹಾರ ಕಾರ್ಯ ಭರದಿಂದ ನಡೆದಿದೆ.

ಮೆಕ್ಸಿಕೊ ಸಿಟಿ ನಗರದ ಜನದಟ್ಟಣೆ ಪ್ರದೇಶದಲ್ಲಿ ಹಲವು ಕಟ್ಟಡಗಳು ಧ್ವಂಸವಾಗಿವೆ. ನಗರದಲ್ಲೇ ಒಟ್ಟು 44 ಕಡೆಗಳಲ್ಲಿ ಕಟ್ಟಡಗಳು ಕುಸಿದಿವೆ ಎಂದು ಮೇಯರ್ ಮೈಗುಲ್ ಅಂಜೆಲ್ ಮನ್ಸೆರಾ ಪ್ರಕಟಿಸಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಸಮವಾದ ಚಿತ್ರಣ ಎಲ್ಲೆಡೆ ಕಂಡುಬರುತ್ತಿದೆ.

ಭೂಕಂಪ ಸಂಭವಿಸಿದ ಒಂದು ಗಂಟೆಯಲ್ಲಿ ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿದ್ದು, ಪ್ರಾಥಮಿಕ ಶಾಲೆಯೊಂದರ ಅವಶೇಷಗಳಡಿ ಮಕ್ಕಳು ಸಿಕ್ಕಿಹಾಕಿಕೊಂಡಿರುವ ಭೀತಿಯಿಂದ ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ. ಕಟ್ಟಡಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಇಬ್ಬರು ಬಾಲಕಿಯರಿಂದ ವಾಟ್ಸ್ಆ್ಯಪ್ ಸಂದೇಶ ಬಂದಿದೆ ಎಂದು ಪೋಷಕರು ಹೇಳಿಕೊಂಡಿದ್ದಾರೆ.

1985ರ ಬಳಿಕ ಇದು ಭೀಕರ ಭೂಕಂಪವಾಗಿದ್ದು, 1985ರಲ್ಲಿ ಸಾವಿರಾರು ಜನರನ್ನು ಬಲಿಪಡೆದ ದಿನವೇ ಮತ್ತೆ ಈ ಭೀಕರ ಘಟನೆ ನಡೆದಿರುವುದು ಕಾಕತಾಳೀಯ. ದೇಶದ ದಕ್ಷಿಣದಲ್ಲಿ ಎರಡು ವಾರಗಳ ಹಿಂದಷ್ಟೇ ಭೀಕರ ಭೂಕಂಪ ಸಂಭವಿಸಿ, 90ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

139 ಮಂದಿಯ ಸಾವನ್ನು ರಾಷ್ಟ್ರೀಯ ನಾಗರಿಕ ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಲೂಯಿಸ್ ಫಿಲಿಪ್ ಪ್ಯುಂಟೆ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಇದೆ.

ಮಾರ್ಲೋಸ್ ರಾಜ್ಯದಲ್ಲಿ 64 ಮಂದಿ, ರಾಜಧಾನಿಯಲ್ಲಿ 36 ಮಂದಿ ಹಾಗೂ ಪ್ಯುಬೆಲಾದಲ್ಲಿ 29 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News