“ರೊಹಿಂಗ್ಯಾ ಎಂದು ನಾನೇಕೆ ಕರೆಯಲಿಲ್ಲ”

Update: 2017-09-20 17:52 GMT

ನೇಪಿಟಾವ್ (ಮ್ಯಾನ್ಮಾರ್), ಸೆ. 20: ಮ್ಯಾನ್ಮಾರ್‌ನಲ್ಲಿ ಸೇನೆಯಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವನ್ನು ಪ್ರಸ್ತಾಪಿಸುವಾಗ ತಾನು ‘ರೊಹಿಂಗ್ಯಾ’ ಎಂಬ ಪದವನ್ನು ಯಾಕೆ ಬಳಸಿಲ್ಲ ಎಂಬುದಕ್ಕೆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ವಿವರಣೆ ನೀಡಿದ್ದಾರೆ.

ಈ ಸಮುದಾಯ ಈಗಾಗಲೇ ತೊಂದರೆಗೊಳಗಾಗಿರುವುದರಿಂದ, ತಾನು ಮತ್ತೆ ‘ಭಾವನಾತ್ಮಕ’ ಪದಗಳನ್ನು ಬಳಸಲು ಬಯಸಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಮಂಗಳವಾರ ದೇಶವನ್ನುದ್ದೇಶಿಸಿ ಟೆಲಿವಿಶನ್‌ನಲ್ಲಿ ಮಾಡಿದ ಭಾಷಣದಲ್ಲಿ, ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಯನ್ನು ಸೂ ಕಿ ಖಂಡಿಸಿದ್ದರು.  

ಆದರೆ, ಅವರು ಸೇನೆಯನ್ನು ಖಂಡಿಸಲೂ ಇಲ್ಲ, ಅಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿಯೂ ಇಲ್ಲ.

ಮ್ಯಾನ್ಮಾರ್‌ನಿಂದ ಸೈನಿಕರ ಅಟ್ಟಹಾಸಕ್ಕೆ ಬೆದರಿ 4.21 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದು, ಬೃಹತ್ ಮಾನವೀಯ ಬಿಕ್ಕಟ್ಟು ಎದುರಾಗಿದೆ.

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ ಎಂಬುದಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯೇ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

 ‘‘ರಖೈನ್‌ನಲ್ಲಿ ವಾಸಿಸುತ್ತಿರುವ ಮುಸ್ಲಿಮರನ್ನು ಹೇಗೆ ಕರೆಯಬೇಕು ಎಂಬ ವಿಷಯದಲ್ಲಿ ಭಾರೀ ವಿವಾದವಿದೆ. ತಮ್ಮನ್ನು ರೊಹಿಂಗ್ಯಾಗಳು ಎಂದು ಕರೆಯಬೇಕು ಎಂದು ಭಾವಿಸುವವರೂ ಅಲ್ಲಿದ್ದಾರೆ ಹಾಗೂ ತಮ್ಮನ್ನು ಕೇವಲ ಬಂಗಾಳಿಗಳೆಂದು ಕರೆಯಬೇಕು ಎಂದು ಭಾವಿಸುವವರೂ ಅಲ್ಲಿದ್ದಾರೆ’’ ಎಂದು ಮ್ಯಾನ್ಮಾರ್ ರಾಜಧಾನಿ ನೇಪಿಟಾವ್‌ನಲ್ಲಿ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಸೂ ಕಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News