ಫ್ಯಾಂಟಸಿ ಸಿನೆಮಾಗಳ ರಾಜ: ಕೆ.ವಿ.ರೆಡ್ಡಿ

Update: 2017-09-20 18:40 GMT

ರೆಡ್ಡಿಯವರ ಸಿನೆಮಾ ಬದುಕು ದೋಗ ರಾಮುಡು(1955), ಜಗದೇಕವೀರುನಿ ಕಥಾ(1961) ಮತ್ತು ಶ್ರೀಕೃಷ್ಣ ಸತ್ಯ(1972) ದಂತಹ ಅನೇಕ ಸಿನೆಮಾಗಳ ಒಂದು ಪಯಣ ಎನ್ನಬಹುದು. ಆದರೆ ಪಾತಾಳ ಭೈರವಿ ಮತ್ತು ಮಾಯಾಬಜಾರ್ ಇಂದಿಗೂ ತೆಲುಗು ಸಿನೆಮಾದ ಜನಪ್ರಿಯ ಚಿತ್ರಗಳಾಗಿ ಉಳಿದಿವೆ. ಇದು ಸಕಾರಣ ಮತ್ತು ಸಹಜ ಕೂಡ.

ಬಾಹುಬಲಿಯ ಐತಿಹಾಸಿಕ, ಭಾರೀ ಯಶಸ್ಸಿಗೆ ನೀಡಲಾಗಿರುವ ಹಲವು ಕಾರಣಗಳಲ್ಲಿ ಒಂದು ಮುಖ್ಯ ಕಾರಣ ತೆಲುಗು ಸಿನೆಮಾದಲ್ಲಿ ಬಹಳ ಸಮಯದಿಂದ ಜನಪ್ರಿಯವಾಗಿದ್ದ, ಫ್ಯಾಂಟಸಿ ಜಾನಪದ ಸಿನೆಮಾವನ್ನು ಪುನರುಜ್ಜೀವನಗೊಳಿಸುವಲ್ಲಿ ಎಸ್‌ಎಸ್ ರಾಜವೌಳಿ ತೋರಿದ ಆಸಕ್ತಿ ಮತ್ತು ಮಾಡಿದ ಸಾಧನೆ.

1950ರ ದಶಕದಲ್ಲಿ ಇಂತಹದೇ ಒಂದು ಪ್ರಯತ್ನವನ್ನು ವಿಜಯ-ವಾಹಿನಿ ಸ್ಟುಡಿಯೋಸ್ ಮಾಡಿತ್ತು. ಈ ಮಾದರಿಯ ಸಿನೆಮಾದ ಕಾಲ ಮುಗಿಯಿತು ಎಂದು ಸಿನೆಮಾ ತಯಾರಕರು ತಿಳಿದಿದ್ದಾಗ, 1951ರಲ್ಲಿ ವಿಜಯ-ವಾಹಿನಿ ಸ್ಟುಡಿಯೋಸ್ ಪಾತಾಳ ಭೈರವಿಯನ್ನು ಆಗ ಕೇವಲ ಮೂರು ಸಿನೆಮಾಗಳನ್ನಷ್ಟೆ ಮಾಡಿದ್ದ ಅನುಭವವಿದ್ದ ಕದಿರಿ ವೆಂಕಟರೆಡ್ಡಿಯ ನಿರ್ದೇಶನದಲ್ಲಿ ತಯಾರಿಸಿತು.

‘ಪಾಲಿಟಿಕ್ಸ್ ಆ್ಯಸ್ ಪರ್‌ಫಾರ್ಮನ್ಸ್, ಎ ಸೋಶಿಯಲ್ ಹಿಸ್ಟರಿ ಆಫ್ ದಿ ತೆಲುಗು ಸಿನೆಮಾ’ ಎಂಬ ತನ್ನ ಪುಸ್ತಕದಲ್ಲಿ ಎಸ್.ವಿ. ಶ್ರೀನಿವಾಸ್ ಆ ಸಂದರ್ಭವನ್ನು ಹೀಗೆ ವಿವರಿಸುತ್ತಾರೆ: ‘‘1950ರ ದಶಕದ ವೇಳೆಗೆ, ಪೌರಾಣಿಕ ಸಿನೆಮಾದ ಹಾಗೆಯೇ, ಜಾನಪದ ಸಿನೆಮಾ ಕೂಡ ಯಾರಿಗೂ ಬೇಡವಾದಂತಹ ಒಂದು ಮಾದರಿಯಾಗಿತ್ತು. ಇದೊಂದು ‘ಉಪಟಳ’ವೆಂದು ಸಿನೆಮಾ ವಿಮರ್ಶಕರು ಹೇಳಲಾರಂಭಿಸಿದ್ದರು. ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ‘ತಿಲೋತ್ತಮಾ’ದ ಹೀನಾಯ ಸೋಲಿನಿಂದ ತೆಲುಗು ಸಿನೆಮಾ ಉದ್ಯಮ ಕಂಗಾಲಾಗಿತ್ತು. ಅದೇ ವೇಳೆಯಲ್ಲಿ ಆಗ ಇನ್ನೂ ಪ್ರಸಿದ್ಧನಾಗಿರದಿದ್ದ ಒಬ್ಬ ನಟನನ್ನು ಒಬ್ಬ ಸ್ಟಾರ್ ಆಗಿ ಮಾಡುವ ತನ್ನ ಪ್ರಯತ್ನದ ಒಂದು ಅಂಗವಾಗಿ ವಿಜಯವಾಹಿನಿ ಒಂದು ಜಾನಪದ ಸಿನೆಮಾ ಮಾಡಿತು. ಅದೇ ‘ಪಾತಾಳ ಭೈರವಿ’. ರೆಡ್ಡಿ ನಿರ್ದೇಶನದ ಹಾಗೂ ಎನ್‌ಟಿ ರಾಮರಾವ್, ಎಸ್‌ವಿ ರಂಗರಾವ್, ಕೆ. ಮಾಲತಿ, ಸಿ.ಎಸ್. ಆಂಜನೇಯುಲು ಮತ್ತು ರೇಲಂಗಿ ವೆಂಕಟರಾಮಯ್ಯ ನಟಿಸಿದ್ದ ‘ಪಾತಾಳ ಭೈರವಿ’ ಸಾಹಸ ಫ್ಯಾಂಟಸಿಯನ್ನು ಪುನರುಜ್ಜೀವನಗೊಳಿಸಿದ್ದಷ್ಟೇ ಅಲ್ಲ, 200 ದಿನಗಳ ಕಾಲ ಸತತ ಪ್ರದರ್ಶನಗೊಂಡ ಮೊತ್ತಮೊದಲ ತೆಲುಗು ಸಿನೆಮಾ ಎಂಬ ಇತಿಹಾಸವನ್ನೂ ನಿರ್ಮಿಸಿತು. ಆ ಬಳಿಕ ರೆಡ್ಡಿ ಅಷ್ಟೇ ಸಾಹಸ ಪ್ಯಾಂಟಸಿಯಾದ ‘ಮಾಯಾ ಬಜಾರ್’(1957) ನಿರ್ದೇಶಿಸಿದರು.

ಓರ್ವ ಭೌತವಿಜ್ಞಾನ ಪದವೀಧರರಾಗಿದ್ದ ರೆಡ್ಡಿ ವಾಹಿನಿ ಸ್ಟುಡಿಯೋಸ್‌ನಲ್ಲಿ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ತನ್ನ ವೃತ್ತಿಯನ್ನು ಆರಂಭಿಸಿದ್ದರು. 1940ರ ದಶಕದಲ್ಲಿ ಅವರು ಬಿಎನ್ ರೆಡ್ಡಿಯವರ ಪೌರಾಣಿಕ ಮೆಲೊಡ್ರಾಮಗಳಲ್ಲಿ ಭಾಗವಹಿಸುತ್ತಿದ್ದರು.

ಪೌರಾಣಿಕರಿಂದ ಫ್ಯಾಂಟಸಿ ಸಾಹಸಕ್ಕೆ ಬಂದ ಕದಿರಿ ವೆಂಕಟ ರೆಡ್ಡಿ 1949ರಲ್ಲಿ, ವಿಲಿಯಂ ಶೇಕ್ಸ್‌ಪಿಯರ್‌ನ ಕಿಂಗ್ ಲಯರ್ ನಾಟಕವನ್ನಾ ಧರಿಸಿದ, ಫ್ಯಾಂಟಸಿ ಮತ್ತು ಪೌರಾಣಿಕದ ಒಂದು ಮಿಶ್ರಣವಾದ ‘ಗುಣಸುಂದರಿ ಕಥಾ’ ನಿರ್ದೇಶಿಸಿದರು.

ರೆಡ್ಡಿಯವರ ನಾಲ್ಕನೇ ಸಿನೆಮಾ ಪಾತಾಳ ಭೈರವಿ ತೆಲುಗು ಸಿನೆಮಾದಲ್ಲಿ ಒಂದು ಮೈಲಿಗಲ್ಲಾಯಿತು. ಇದು ಅಲ್ಲಾವುದ್ದೀನ್ ಮತ್ತು ಅರೇಬಿಯನ್ ನೈಟ್ಸ್‌ಗಳಿಂದ ಸ್ಫೂರ್ತಿ ಪಡೆದ ಸಿನೆಮಾ. ಇದರಲ್ಲಿ ಓರ್ವ ತೋಟದ ಮಾಲಿ ತೋ ರಾಮುಡು (ಎನ್‌ಟಿ ರಾಮರಾವ್) ರಾಜಕುಮಾರಿ ಇಂದುಮತಿ(ಮಾಲತಿ)ಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ.

ಮಕ್ಕಳ ಜನಪ್ರಿಯ ಪತ್ರಿಕೆ ಚಂದಮಾಮದ ಪ್ರಕಾಶಕರಾಗಿ, ಲೇಖಕರಾಗಿ ತಮ್ಮ ಬದುಕು ಆರಂಭಿಸಿದ್ದ ನಾಗಿ ರೆಡ್ಡಿ ಮತ್ತು ಚಕ್ರಪಾಣಿ ವಿಜಯ-ವಾಹಿನಿ ಸ್ಟುಡಿಯೋಸ್‌ನ ಸ್ಥಾಪಕರು.

ಮಾಧವ ಪೆದ್ದಿ ಗೋಖಲೆಯ ಅದ್ದೂರಿಯ ಸೆಟ್‌ಗಳು, ಕಳಾಧರ್‌ರ ವಸ್ತ್ರ ವಿನ್ಯಾಸಗಳು ಮತ್ತು ಮಾರ್ಕಸ್ ಬಾಟ್ಲೆಯ ಛಾಯಾಚಿತ್ರಗ್ರಹಣದೊಂದಿಗೆ ರೆಡ್ಡಿ, ಅಷ್ಟೇ ಆಕರ್ಷಕವಾದ ದೃಶ್ಯಾವಳಿಗಳನ್ನು ಬೆಸೆದು ತನ್ನ ಸಿನೆಮಾವನ್ನು ನಿರ್ದೇಶಿಸಿದರು. ರಾಮುಡು ಇದಿರಾಗುವ ಸನ್ನಿವೇಶಗಳು ಅಲ್ಲಾವುದ್ದೀನ್ ಮತ್ತು ಆಲಿಬಾಬಾರ ಸನ್ನಿವೇಶಗಳಿಗೆ ಸರಿಸಾಟಿಯಾಗಿವೆ. ಆದರೆ ರೆಡ್ಡಿ ಒಂದು ಭಾರತೀಯ ಪರಿಭಾಷೆಯಲ್ಲಿ ಕಲ್ಪಿಸಿಕೊಳ್ಳುತ್ತಾರೆ. ಅವರು ಜನಪ್ರಿಯ ನೀತಿಕತೆಗಳ ಅಂಶಗಳನ್ನು ತೆಗೆದುಕೊಂಡು ಅವುಗಳಿಗೊಂದು ಭಾರತೀಯ ರೂಪ ನೀಡುತ್ತಾರೆ. ಉದಾಹರಣೆಗೆ ಗಣ ಆಕಾರದ ಒಂದು ರಹಸ್ಯ ಪ್ರವೇಶದ್ವಾರ ಅಥವಾ ಒಂದು ಕೆಲಸ ಮುಗಿಸಿದ ಕೂಡಲೇ ಹಾರಹಾಕುವ ಸಾಂಪ್ರದಾಯಕ ಆಚರಣೆ. ಒಂದು ತೆಲುಗು ಜಾನಪದ ಕತೆಯಂತೆ ಕಾಣುವುದಕ್ಕಾಗಿ ಇಂತಹ ಪರಿಚಿತ ಅಂಶಗಳನ್ನು ಹಾಗೂ ಸನ್ನಿವೇಶಗಳನ್ನು ಸಮಗ್ರವಾಗಿ ಜೋಡಿಸಿ ವಿಶಿಷ್ಟವಾದ ಕತೆಯೊಂದು ಪ್ರೇಕ್ಷಕರೆದುರು ತೆರೆದುಕೊಳ್ಳುವಂತೆ ಮಾಡುವ ರೆಡ್ಡಿ, ಇಂತಹುದೇ ಒಂದು ಸಾಧನೆಯನ್ನು 1957ರಲ್ಲಿ ನಿರ್ದೇಶಿಸಿದ ಮಾಯಾಬಜಾರ್‌ನಲ್ಲೂ ಮಾಡುತ್ತಾರೆ. ಬಲರಾಮನು ತನ್ನ ಸಹೋದರಿ ಸುಭದ್ರೆಗೆ ತನ್ನ ಮಗಳು ಶಶಿರೇಖಾಳನ್ನು ಆಕೆಯ ಮಗ ಅಭಿಮನ್ಯುವಿಗೆ ವಿವಾಹ ಮಾಡಿಕೊಡುವುದಾಗಿ ನೀಡಿದ ಆಶ್ವಾಸನೆ ಇದರ ಕಥಾವಸ್ತು. ಇಲ್ಲಿ ಮ್ಯಾಜಿಕ್ ನಡೆದು ಆಶ್ವಾಸನೆ ಈಡೇರುತ್ತದೆ.

ಅದ್ದೂರಿಯಾಗಿ ನಿರ್ಮಾಣಗೊಂಡ ಈ ಚಿತ್ರದ ಸಿದ್ಧತೆಗಳಿಗೆ ಸುಮಾರು ಒಂದು ವರ್ಷ ಹಿಡಿಯಿತು. ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ ಮತ್ತು ಎಸ್.ವಿ. ರಂಗರಾವ್ ನಟಿಸಿದ ಮಾಯಾಬಜಾರ್, ಅಂತಿಮವಾಗಿ ಪಾತಾಳಭೈರವಿಗಿಂತ ದೊಡ್ಡ ಒಂದು ದೃಶ್ಯಲೋಕವಾಗಿತ್ತು.

ಹೆಸರಿಗೆ ತಕ್ಕಂತೆ ಚಿತ್ರದಲ್ಲಿ ಹೇರಳವಾಗಿ ಮ್ಯಾಜಿಕ್ ಇದೆ. ಅಭಿಮನ್ಯುವಿನ ಜತೆ ಸಂಪರ್ಕಿಸಲು ಕೃಷ್ಣನು ಶಶಿರೇಖಾಳಿಗೆ ಈಗಿನ ಲ್ಯಾಪ್‌ಟಾಪನ್ನು ಹೋಲುವಂತಹ ಒಂದು ಸಾಧನವನ್ನು ಕೊಡುತ್ತಾನೆ. ಘಟೋತ್ಕಚನ ಸಹಾಯಕ ‘‘ಹಂ ಅಃ’’ ಎಂದದ್ದೇ ತಡ, ಮಾಯಾಬಜಾರ್‌ನ ಲೋಕ ಕಣ್ಣೆದುರು ಪ್ರತ್ಯಕ್ಷವಾಗುತ್ತದೆ. ಘಟೋತ್ಕಚನ ಆಜ್ಞೆಗಳಿಗನುಗುಣವಾಗಿ ಕಟ್ಟಡಗಳು, ಅಂಗಡಿಗಳು ಮತ್ತು ನರ್ತಕಿಯರು ಸೃಷ್ಟಿಯಾಗುತ್ತಾರೆ.

ಪಾತಾಳ ಭೈರವಿ ಮತ್ತು ಮಾಯಾ ಬಜಾರ್-ಎರಡರಲ್ಲೂ ಎನ್‌ಟಿ ರಾಮರಾವ್‌ರನ್ನು ಸ್ಟಾರ್ ಆಗಿ ತೋರಿಸುವುದು, ಸ್ಟಾರ್ ಆಗಿ ಪ್ರಾಜೆಕ್ಟ್ ಮಾಡುವುದು ರೆಡ್ಡಿಯವರ ಪ್ರಯತ್ನವಾಗಿತ್ತು. ಪಾತಾಳಭೈರವಿಯಲ್ಲಿ ರಾವ್ ಹೀರೋ ಆಗಿದ್ದರೆ, ಮಾಯಾಬಜಾರ್‌ನಲ್ಲಿ ಆಂಧ್ರದ ನಂತರದ ಮುಖ್ಯಮಂತ್ರಿ ಕೃಷ್ಣನಾಗಿ ನಟಿಸಿದ್ದಾರೆ. ತೆಲುಗು ನಟ ಪ್ರಭಾಸ್‌ರನ್ನು ರಾಜವೌಳಿ ಎನ್‌ಟಿಆರ್‌ಗೆ ಸಮಾನವಾಗಿ ಕಾಣಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಖ್ಯಾತ ಮಲಯಾಳಂ ಸಿನೆಮಾ ನಿರ್ದೇಶಕ ಅಡೂರು ಗೋಪಾಲಕೃಷ್ಣನ್‌ರ ಪ್ರಕಾರ ಬಾಹುಬಲಿ ಪಾತಾಳ ಭೈರವಿಯ ಅಣಕು.

ರೆಡ್ಡಿಯವರ ಸಿನೆಮಾ ಬದುಕು ದೋಗ ರಾಮುಡು(1955), ಜಗದೇಕವೀರುನಿ ಕಥಾ(1961) ಮತ್ತು ಶ್ರೀಕೃಷ್ಣ ಸತ್ಯ(1972) ದಂತಹ ಅನೇಕ ಸಿನೆಮಾಗಳ ಒಂದು ಪಯಣ ಎನ್ನಬಹುದು. ಆದರೆ ಪಾತಾಳ ಭೈರವಿ ಮತ್ತು ಮಾಯಾಬಜಾರ್ ಇಂದಿಗೂ ತೆಲುಗು ಸಿನೆಮಾದ ಜನಪ್ರಿಯ ಚಿತ್ರಗಳಾಗಿ ಉಳಿದಿವೆ. ಇದು ಸಕಾರಣ ಮತ್ತು ಸಹಜ ಕೂಡ.

ಕೃಪೆ: scroll.in

Writer - ಅರ್ಚನಾ ನಾಥನ್

contributor

Editor - ಅರ್ಚನಾ ನಾಥನ್

contributor

Similar News

ಜಗದಗಲ
ಜಗ ದಗಲ