ಹಬ್ಬಗಳ ‘ರಿಯಾಯಿತಿ ಮಾರಾಟ’ ಎಚ್ಚರಿಕೆಯಿರಲಿ

Update: 2017-09-20 18:44 GMT

ನಾವು ಮತ್ತೆ ಪರ್ಸ್ ಬಿಚ್ಚುವಂತೆ ಮಾಡುವ ಸಮಯವೀಗ ಬಂದಿದೆ. ಸಾಲು ಸಾಲು ಹಬ್ಬಗಳ ಈ ಸಂದರ್ಭದಲ್ಲಿ ‘ನಂಬಲಾಗದ’ ಬೆಲೆಗಳಲ್ಲಿ ದೊರೆಯುವ ತಮಗೆ ಅಗತ್ಯವಾದ ಮತ್ತು ಅನಗತ್ಯವಾದ ವಸ್ತುಗಳ ಖರೀದಿಗೆ ಜನರು ಮುಗಿಬೀಳುತ್ತಾರೆ. ಇಲೆಕ್ಟಾನಿಕ್ ವಸ್ತುಗಳು, ವಾಹನಗಳಿಂದ ಹಿಡಿದು ಮನೆ ಅಲಂಕರಣ ಸಾಮಗ್ರಿಗಳವರೆಗೆ....ಊಹೂಂ, ಇವುಗಳ ಪಟ್ಟಿಗೆ ಅಂತ್ಯವೇ ಇಲ್ಲ ಮತ್ತು ಖರೀದಿಯ ಬಯಕೆಯನ್ನು ತಡೆದುಕೊಳ್ಳುವುದು ನಿಜಕ್ಕೂ ಕಷ್ಟ. ರಿಯಾಯಿತಿಗಳ ಆಸೆಗೆ ಬಿದ್ದು ನಮಗೆ ಬೇಕಾದ್ದು, ಬೇಡವಾಗಿದ್ದನ್ನು ಖರೀದಿಸಿ ಹಣವನ್ನೆಲ್ಲ ಖಾಲಿ ಮಾಡಿಕೊಂಡು ಕೊನೆಗೆ ನಮ್ಮದು ಕೊಳ್ಳುಬಾಕ ಸಂಸ್ಕೃತಿ ಎಂದು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ.

ಅವಾಸ್ತವಿಕ ಅವಸರ

ಕೊನೆಯ ದಿನ....ಸೀಮಿತ ದಾಸ್ತಾನು....ಇತ್ಯಾದಿ ಘೋಷಣೆಗಳಿಗೆ ಖಂಡಿತ ಮರುಳಾಗಬೇಡಿ. ಇತ್ತೀಚಿನ ಗಣೇಶ ಚತುರ್ಥಿ ಮಾರಾಟವನ್ನು ನೀವು ತಪ್ಪಿಸಿಕೊಂಡಿದ್ದರೆ ಚಿಂತೆ ಬೇಡ, ನವರಾತ್ರಿಯ ಕೊಡುಗೆ ನಿಮಗಾಗಿ ಕಾಯುತ್ತಿರುತ್ತದೆ. ಬಳಿಕ ಧನ್‌ತೇರಾಸ್‌ನ ‘ವಿಶೇಷ’ ಕೊಡುಗೆಯೂ ನಿಮಗಾಗಿಯೇ ಇದೆ. ಅದಾದ ನಂತರ ದೀಪಾವಳಿಯ ’ಮಹಾ ಕೊಡುಗೆ’ ಯಿದೆ. ಅದರ ಬೆನ್ನಿಗೇ ಕ್ರಿಸ್‌ಮಸ್ ಮತ್ತು ಹೊಸವರ್ಷದ ಸೇಲ್ ಆಫರ್‌ಗಳಿವೆ. ಇದಾದ ಮೇಲೆ ಮಾರ್ಚ್-ಎಪ್ರಿಲ್‌ನಲ್ಲಿ ಬೇಸಿಗೆಯ ವಿಶೇಷ ಮಾರಾಟವಿರುತ್ತದೆ. ಎಲ್ಲರೂ ನಿಮಗೆ ಉಚಿತ ಕೊಡುಗೆ, ವಿನಾಯಿತಿ, ರಿಯಾಯಿತಿ ಹೀಗೆ ಎಲ್ಲವನ್ನೂ ತಮ್ಮ ಖರ್ಚಿನಲ್ಲಿಯೇ ಕೊಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ! ಯಾರಿಗೆ ಗೊತ್ತು...ಮುಂದಿನ ವರ್ಷದ ಆಗಸ್ಟ್‌ನಲ್ಲಿ ಭಾರತವು ತನ್ನ 71ನೆ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿರುವಾಗ ನಿಮಗೆ ನಿಮ್ಮ ಖರೀದಿಯ ಮೇಲೆ ಶೇ.71ರಷ್ಟು ರಿಯಾಯಿತಿ ಸಿಕ್ಕರೂ ಸಿಗಬಹುದು!!

ಕೆಲಸಕ್ಕೆ ಬಾರದ ಫ್ರೀಬಿಗಳು

ಈ ಜಗತ್ತಿನಲ್ಲಿ ಯಾವುದೂ ಪುಕ್ಕಟೆಯಾಗಿ ದೊರೆಯುವುದಿಲ್ಲ ಎನ್ನುವುದು ಗೊತ್ತಿದ್ದರೂ ಹೆಚ್ಚಿನವರು ಉಚಿತ ಕೊಡುಗೆಯ ಆಕರ್ಷಣೆಗೆ ಬಲಿ ಬೀಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಫ್ರೀಬಿಗಳು ನಿಜಕ್ಕೂ ಉಪಯೋಗಕ್ಕೆ ಬರುತ್ತವೆಯೇ ಎನ್ನುವುದನ್ನೂ ನಾವು ನೋಡುವುದಿಲ್ಲ. ಈ ಉಚಿತ ಕೊಡುಗೆಯ ವೌಲ್ಯವು ನಿಮ್ಮ ಖರೀದಿ ವೌಲ್ಯದಲ್ಲಿಯೇ ಸೇರಿರುತ್ತದೆ ಎನ್ನುವುದು ನಿಮಗೆ ಗೊತ್ತಿಲ್ಲದ ಸತ್ಯವಾಗಿದೆ. ಹೀಗಾಗಿ ಉಚಿತ ಕೊಡುಗೆಯ ಬದಲು ಬೆಲೆಗಳಲ್ಲಿ ರಿಯಾಯಿತಿ ಪಡೆಯಲು ಪ್ರಯತ್ನಿಸುವುದು ಒಳ್ಳೆಯದು.

ಲಾಭದಾಯಕ ಆಫರ್ ಕಳೆದುಕೊಳ್ಳುವ ಭೀತಿ

ಲಾಭದಾಯಕ ಆಫರ್ ಕಳೆದುಕೊಳ್ಳಬಹುದು ಎಂಬ ನಮ್ಮ ಭೀತಿ ಮಾರಾಟಗಾರನ ಮಾರಾಟವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಕಾರುಗಳ ವ್ಯಾಪಾರಿ ‘ಸೀಮಿತ ಅವಧಿಗೆ’ ಉಚಿತ ಇನ್ಶೂರನ್ಸ್ ಘೋಷಿಸಬಹುದು. ಆದರೆ ಇದೇ ಕಾರಣದಿಂದ ನೀವು ಅವಸರಕ್ಕೆ ಬಿದ್ದು ಆತನ ಬಳಿಯಿಂದ ಕಾರು ಖರೀದಿಸಬೇಕಿಲ್ಲ. ದೀಪಾವಳಿಯ ಬಳಿಕ ನೀವು ಕಾರು ಖರೀದಿಸಿದರೆ ಏನೂ ವ್ಯತ್ಯಾಸವಾಗುವುದಿಲ್ಲ. ಈಗಾತ ನಿಮಗೆ ಉಚಿತ ವಿಮೆಯ ಬದಲು ವಾಹನದ ಉಪಕರಣಗಳನ್ನು ಕೊಡುಗೆಯಾಗಿ ಪ್ರಕಟಿಸಬಹುದು. ಇಂತಹ ಆಫರ್‌ಗಳು ಬದಲಾಗುತ್ತಲೇ ಇರುತ್ತವೆ. ಹೀಗಾಗಿ ಇತರ ಡೀಲರ್‌ಗಳಲ್ಲಿಯೂ ವಿಚಾರಣೆ ನಡೆಸಿ ನಿಮಗೆ ಸೂಕ್ತವಾದ ಆಫರ್ ಆಯ್ಕೆ ಮಾಡಿಕೊಳ್ಳಬಹುದು

ಮಹಾ ಉಳಿತಾಯ!

ಬಹಳಷ್ಟು ಬಾರಿ ನಂಬಲಾಗದ ಡಿಸ್ಕೌಂಟ್‌ಗಳು ಮತ್ತು ಉಳಿತಾಯದ ಜಾಹೀರಾತುಗಳು ನಮ್ಮನ್ನು ಸೆಳೆಯುತ್ತಲೇ ಇರುತ್ತವೆ. ಆದರೆ ಖರೀದಿಗೆ ತೆರಳಿದಾಗ ಬೆಲೆಗಳು ದುಪ್ಪಟ್ಟೋ ಜಾಹೀರಾತಿನಲ್ಲಿ ನೋಡಿದ್ದಕ್ಕಿಂತ ಹೆಚ್ಚೋ ಆಗಿರುತ್ತವೆ. ಕೆಲವೆಡೆಗಳಲ್ಲಿ ಷರತ್ತುಗಳೂ ಅನ್ವಯಿಸುತ್ತವೆ. ಕೆಲವೊಮ್ಮೆ ಜಾಹೀರಾತಿನಲ್ಲಿ ತೋರಿಸಿರುವುದು ಮೂಲಬೆಲೆಯಾಗಿರುತ್ತದೆ. ಬಿಲ್ ಮಾಡುವಾಗ ಇತರ ಗುಪ್ತ ವೆಚ್ಚಗಳು ಸೇರಿಕೊಳ್ಳುತ್ತವೆ. ರಿಯಾಯತಿಗಳನ್ನು ನಂಬಲೇಬೇಕು ಎಂದೇನಿಲ್ಲ. ವಾಸ್ತವವಾಗಿ ವಸ್ತುವಿನ ಬೆಲೆಯನ್ನು ಮೊದಲೇ ಹೆಚ್ಚಿಸಿ ಬಳಿಕ ಗ್ರಾಹಕರಿಗೆ ರಿಯಾಯಿತಿಯ ಆಮಿಷವೊಡ್ಡಲಾಗುತ್ತದೆ. ಮಾಲ್‌ಗಳಲ್ಲಿ ಎಂಆರ್‌ಪಿಯ ಮೇಲೆ ಶೇ.10-15 ರಿಯಾಯಿತಿಯನ್ನು ಪ್ರಕಟಿಸಿರುತ್ತಾರೆ. ಆದರೆ ಹೊರಗಡೆ ಕೆಲವು ಅಂಗಡಿಗಳಲ್ಲಿ ಈ ವಸ್ತುಗಳು ಯಾವುದೇ ಘೋಷಣೆಗಳ ಅಬ್ಬರವಿಲ್ಲದೆ ಎಂಆರ್‌ಪಿಯ ಶೇ.10-15ರಷ್ಟು ಕಡಿಮೆ ಬೆಲೆಯಲ್ಲಿ ವರ್ಷದ 365 ದಿನಗಳೂ ದೊರೆಯುತ್ತಲೇ ಇರುತ್ತವೆ!

ಇಂತಹ ಮಾರಾಟಗಳಿಗೆ ಬಲಿ ಬೀಳದಿರುವುದು ಹೇಗೆ?

ನಿಮಗೆ ಅಗತ್ಯವಾಗಿರುವ ವಸ್ತು ಯಾವುದು ಮತ್ತು ಅನಗತ್ಯವಾಗಿರುವುದು ಯಾವುದು ಎನ್ನುವುದನ್ನು ಮೊದಲು ನಿರ್ಧರಿಸಿಕೊಳ್ಳಿ. ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಖರೀದಿ ಬಜೆಟ್ ಮೀರುವ ಸಾಹಸ ಮಾಡಬೇಡಿ.

ದುಬಾರಿಯಾದ ವಸ್ತುವೊಂದನ್ನು ಖರೀದಿಸಲು ಬಯಸಿದ್ದರೆ ಅದನ್ನು ಒಂದು ತಿಂಗಳು ಮುಂದೂಡಿ. ಈ ಅವಧಿಯಲ್ಲಿ ಅದು ನಿಮಗೆ ನಿಜಕ್ಕೂ ಅಗತ್ಯವಿದೆಯೇ, ಅದು ಇಲ್ಲದೇ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲವೇ ಎಂಬ ಬಗ್ಗೆ ಮರುಚಿಂತನೆ ನಡೆಸಿ. ಆ ವಸ್ತು ನಿಮಗೆ ನಿಜಕ್ಕೂ ಅಗತ್ಯವಿಲ್ಲದಿದ್ದರೆ ನಿಮ್ಮ ಬಯಕೆಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗುತ್ತದೆ ಮತ್ತು ಕೆಲವು ದಿನಗಳ ಬಳಿಕ ಅದನ್ನು ಮರೆತು ಬಿಡುತ್ತೀರಿ.

ಬಹಳಷ್ಟು ಯುವಜನರು ಮಾಲ್‌ಗಳಲ್ಲಿ ಆಫರ್‌ಗಳ ಸಂದರ್ಭದಲ್ಲಿ ತಮಗೆ ಉಪಯೋಗವಿಲ್ಲದ ವಸ್ತುಗಳ ಖರೀದಿಗೆ ಹಣವನ್ನು ವ್ಯಯಿಸುತ್ತಾರೆ, ಏಕೆಂದರೆ ಅವರ ಸುತ್ತುಮುತ್ತ ಇರುವವರೂ ಅದನ್ನೇ ಮಾಡುತ್ತಿರುತ್ತಾರೆ. ಹೀಗಾಗಿ ಬೇರೊಬ್ಬರು ಖರೀದಿಸುತ್ತಿದ್ದಾರೆ ಎಂದು ನಾವೂ ಅದನ್ನು ಖರೀದಿಸಬೇಕಿಲ್ಲ.

ಕೆಲವರಿಗೆ ಇಡೀ ದಿನದ ಒತ್ತಡದಿಂದ ಮುಕ್ತರಾಗಲು ಶಾಪಿಂಗ್ ಮಾಡುವ ಚಟವಿರುತ್ತದೆ. ಆದರೆ ಒತ್ತಡದಿಂದ ಮುಕ್ತರಾಗುವ ಈ ವಿಧಾನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಲ್ಲ ಅಡ್ಡ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ಒತ್ತಡದಿಂದ ಮುಕ್ತರಾಗಲು ಶಾಪಿಂಗ್ ಮೊರೆ ಹೋಗುವವರು ತಮಗೆ ಅರಿವಿಲ್ಲದೆಯೇ ತಮಗೆ ಇನ್ನಷ್ಟು ಹಾನಿಯನ್ನು ಮಾಡಿಕೊಳ್ಳುತ್ತಾರೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಹಾಗೆಂದು ಮಾರಾಟ ಉತ್ಸವಗಳಲ್ಲಿ ಖರೀದಿ ಮಾಡಲೇಬಾರದು ಎಂದು ಅರ್ಥವಲ್ಲ. ಇಂತಹ ಸಂದರ್ಭದಲ್ಲಿ ವ್ಯಾಪಾರಿ ಬೆಲೆಯನ್ನು ತಗ್ಗಿಸಿ ಹೆಚ್ಚು ವ್ಯಾಪಾರ ಮಾಡುವುದರ ಬಗ್ಗೆ ಗಮನ ಕೇಂದ್ರೀಕರಿಸುತ್ತಾನೆ. ಹೀಗಾಗಿ ನೀವು ಮೂರು ತಿಂಗಳಿಗೋ ಆರು ತಿಂಗಳಿಗೋ ಅಗತ್ಯವಾದ ಸಾಮಗ್ರಿಗಳನ್ನು ಖರೀದಿ ಮಾಡುವವರಾದರೆ ವ್ಯಾಪಾರಿಯ ಬಳಿ ಚೌಕಾಶಿ ಮಾಡಿ ನಿಜಕ್ಕೂ ಉಳಿತಾಯದ ಲಾಭ ಪಡೆದುಕೊಳ್ಳಬಹುದು. ಆದರೆ ಯಾವುದೇ ಸಂದರ್ಭದಲ್ಲಿಯೂ ಮಾರಾಟದ ತಂತ್ರಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News

ಜಗದಗಲ
ಜಗ ದಗಲ