ನಾಲ್ಕು ವರ್ಷಗಳಲ್ಲಿ ರಸ್ತೆ ಗುಂಡಿಗಳಿಗೆ 11,386 ಮಂದಿ ಬಲಿ!

Update: 2017-09-21 05:45 GMT

 ಬೆಂಗಳೂರು, ಸೆ,21: ದೇಶಾದ್ಯಂತ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಸ್ತೆ ಗುಂಡಿಗಳಿಗೆ ಬಿದ್ದು ಸುಮಾರು 11,386 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸಂಗ್ರಹಿಸಿರುವ ದತ್ತಾಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 2013-16ರ ನಡುವೆ ರಸ್ತೆ ಹೊಂಡಗಳಿಂದಾಗಿ 3,428 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ(1,410), ಮಧ್ಯಪ್ರದೇಶ(1,244), ಪಶ್ಚಿಮ ಬಂಗಾಳ(783), ಬಿಹಾರ(659), ಗುಜರಾತ್(597), ಆಂಧ್ರಪ್ರದೇಶ(497), ತಮಿಳುನಾಡು(481), ರಾಜಸ್ಥಾನ(440) ಹಾಗೂ ಪಂಜಾಬ್(367) ಬಳಿಕದ ಸ್ಥಾನದಲ್ಲಿವೆ.

ಕೆಲವು ಪ್ರಕರಣಗಳು ವರದಿಯಾಗದೇ ಇರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ನಿಖರವಾಗಿ ತಿಳಿದುಬಂದಿಲ್ಲ. ಭಾರತದಲ್ಲಿ ರಸ್ತೆ ಹೊಂಡಗಳಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ 2013 ರಿಂದ 2016ರ ತನಕ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕಂಡುಬಂದಿದೆ. ರಸ್ತೆ ಉದ್ದ, ವಾಹನ ದಟ್ಟಣೆ ಹಾಗೂ ಭಾರೀ ಮಳೆ ಸಹಿತ ಹಲವು ಕಾರಣದಿಂದಲೂ ಕೆಲವು ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಕೆಲವು ರಾಜ್ಯಗಳು ಅಪಘಾತಕ್ಕೆ ಕಾರಣವೇನೆಂದು ವೈಜ್ಞಾನಿಕವಾಗಿ ವರ್ಗೀಕರಿಸಿಲ್ಲ.

‘‘ರಸ್ತೆ ಹೊಂಡಗಳಿಂದಾಗಿ ಅಪಘಾತಗಳು ಸಂಭವಿಸಿದರೆ ಸರಕಾರಿ ಏಜೆನ್ಸಿಗಳು ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕಾಗುತ್ತದೆ’’ಎಂದು ಮದ್ರಾಸ್ ಹೈಕೋರ್ಟಿನ ವಕೀಲ ವಿ.ಎಸ್. ಸುರೇಶ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News