ನಿಮ್ಮ ಕಣ್ಣುಗಳ ಪರೀಕ್ಷೆ ನಿಮ್ಮ ಜೀವವನ್ನು ರಕ್ಷಿಸುತ್ತದೆ,ಗೊತ್ತೇ?

Update: 2017-09-21 07:46 GMT

ನಮ್ಮ ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳು ಎನ್ನುತ್ತಾರೆ. ಇದು ತತ್ತ್ವಜ್ಞಾನ. ಆದರೆ ಅರೋಗ್ಯಶಾಸ್ತ್ರ ಹೇಳುವಂತೆ ನಮ್ಮ ಕಣ್ಣುಗಳು ಸನ್ನಿಹಿತವಾಗಿರುವ ಕಾಯಿಲೆಗಳ ಬಗ್ಗೆ ಮನ್ಸೂಚನೆ ನೀಡುತ್ತವೆ. ಆದರೆ ಇದು ಹೆಚ್ಚಿನವರಿಗೆ ಗೊತ್ತಿಲ್ಲ.

 ಕಣ್ಣುಗಳು ನಮ್ಮ ಶರೀರದ ಅತ್ಯಂತ ಮುಖ್ಯ ಅಂಗಾಂಗಗಳಲ್ಲಿ ಒಂದಾಗಿದ್ದು, ಅವುಗಳಿಲ್ಲದಿದ್ದರೆ ನಾವು ಹೊರಜಗತ್ತನ್ನು ನೋಡುವುದು ಅಸಾಧ್ಯ. ಹೀಗಾಗಿ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ.

ಇಂದು ಹೆಚ್ಚಿನ ಜನರು ಅನಾರೋಗ್ಯಕರ ಜೀವನ ಶೈಲಿಯನ್ನು ಹೊಂದಿದ್ದಾರೆ. ನಮ್ಮ ಉದ್ಯೋಗಗಳಲ್ಲಿ ಕಂಪ್ಯೂಟರ್‌ಗಳು, ಫೋನ್‌ಗಳಂತಹ ಇಲೆಕ್ಟ್ರಾನಿಕ್ ಸಾಧನಗಳೊದಿಗೆ ಕೆಲಸ ಮಾಡುತ್ತಿರುತ್ತೇವೆ. ನಮ್ಮ ಉದ್ಯೋಗ ಅತಿಯಾದ ಗ್ಯಾಜೆಟ್‌ಗಳ ಬಳಕೆಯನ್ನು ಬಯಸದಿದ್ದರೂ ಸಹ ಅವು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ.

ಕಂಪ್ಯೂಟರ್, ಮೊಬೈಲ್ ಫೋನ್‌ಗಳಲ್ಲಿ ಅತಿಯಾದ ವೀಕ್ಷಣೆ ಹಾಗೂ ಪರಿಸರ ಮಾಲಿನ್ಯ, ಕಳಪೆ ಆಹಾರದ ಇತ್ಯಾದಿ ಕಾರಣಗಳು ನಮ್ಮ ಕಣ್ಣುಗಳನ್ನು ದುರ್ಬಲ ಗೊಳಿಸುತ್ತವೆ. ಹೀಗಾಗಿ ನಮ್ಮ ದೃಷ್ಟಿ ಸಾಮರ್ಥ್ಯ ಸುಸ್ಥಿತಿಯಲ್ಲಿದೆ ಮತ್ತು ಯಾವುದೇ ಕಾಯಿಲೆಗಳು ಬಾಧಿಸುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಆಗಾಗ್ಗೆ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಕಣ್ಣುಗಳ ಪರೀಕ್ಷೆ ಕ್ಯಾನ್ಸರ್, ಹೃದ್ರೋಗ ಇತ್ಯಾದಿ ಗಂಭೀರ ಕಾಯಿಲೆಗಳನ್ನು ಪತ್ತೆ ಹಚ್ಚುವಲ್ಲಿಯೂ ನೆರವಾಗುತ್ತದೆ. ಹೇಗೆ ಎನ್ನುವ ಬಗ್ಗೆ ಮಾಹಿತಿಯಿಲ್ಲಿದೆ.......

ಮಧುಮೇಹ

ರಕ್ತನಾಳ ಒಡೆಯುವಿಕೆಯಿಂದ ಅಕ್ಷಿಪಟಲದಲ್ಲಿ ಸಣ್ಣದಾಗಿ ರಕ್ತ ಜಿನುಗುತ್ತಿದ್ದರೆ ಅದು ವ್ಯಕ್ತಿಯು ಮಧುಮೇಹಕ್ಕೆ ಗುರಿಯಾಗಿದ್ದಾನೆ ಎನ್ನುವುದನ್ನು ಸೂಚಿಸಬಹುದು. ಈ ಲಕ್ಷಣವು ಆರಂಭಿಕ ಹಂತದಲ್ಲಿಯೇ ಮಧುಮೇಹ ರೋಗನಿರ್ಣಯ ಮಾಡಲು ನೆರವಾಗುತ್ತದೆ.

ಮಿದುಳು ಗಡ್ಡೆ

ಬ್ರೈನ್ ಟ್ಯೂಮರ್ ಅಥವಾ ಮಿದುಳು ಗಡ್ಡೆಯು ಕ್ಯಾನ್ಸರ್‌ನ ಅತ್ಯಂತ ಮಾರಣಾಂತಿಕ ರೂಪವಾಗಿದೆ ಮತ್ತು ಇಂದು ಸಾಮಾನ್ಯವಾಗಿಬಿಟ್ಟಿದೆ. ಕಣ್ಣುಗಳ ತಪಾಸಣೆ ಸಂದರ್ಭದಲ್ಲಿ ದೃಷ್ಟಿಯಲ್ಲಿ ಅಸಾಧಾರಣ ಬದಲಾವಣೆಗಳು, ಕಣ್ಣಿನ ನರದ ಬಣ್ಣ,ಕಣ್ಣಿನ ಪಾಪೆಯ ಹಿರಿದಾಗಿರುವ ಸ್ಥಿತಿ ಇತ್ಯಾದಿಗಳು ವ್ಯಕ್ತಿಯಲ್ಲಿ ಮಿದುಳು ಗಡ್ಡೆ ಇದೆಯೇ ಎನ್ನುವುದನ್ನು ನಿರ್ಣಯಿಸಲು ಸಹಕಾರಿಯಾಗುತ್ತವೆ.

ಹೃದ್ರೋಗ

ಇಂದು ವಯಸ್ಸಾದವರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಸಾಮಾನ್ಯವಾಗಿವೆ. ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ರಕ್ತದೊತ್ತಡ ಹೃದ್ರೋಗಗಳಿಗೆ ಪ್ರಮುಖ ಕಾರಣಗಳಾಗಿವೆ. ಕಣ್ಣುಗಳ ತಪಾಸಣೆಯ ಸಂದರ್ಭ ಕಾರ್ನಿಯಾದ ಸುತ್ತಲೂ ಬಿಳಿಯ ವರ್ತುಲ ಕಂಡು ಬಂದರೆ ಅದು ಹೆಚ್ಚಿನ ಕೊಲೆಸ್ಟ್ರಾಲ್ ಅಥವಾ ಅಧಿಕ ರಕ್ತದೊತ್ತಡವನ್ನು ಸೂಚಿಸುತ್ತದೆ. ಇದರಿಂದಾಗಿ ಹೃದ್ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.

ಮಲ್ಟಿಪಲ್ ಸ್ಕ್ಲೆರೋಸಿಸ್

ಮಲ್ಟಿಪಲ್ ಸ್ಕ್ಲೆರೋಸಿಸ್ ಅಥವಾ ಬಹು ಅಂಗಾಂಶಗಳ ಗಟ್ಟಿಯಾಗುವಿಕೆಯು ಅಪಾಯಕಾರಿ ಕಾಯಿಲೆಯಾಗಿದ್ದು, ಇದರಿಂದಾಗಿ ನಿರೋಧಕ ವ್ಯವಸ್ಥೆಯು ನರಗಳ ಅಂಗಾಂಶಗಳ ರಕ್ಷಣಾ ಪದರವನ್ನು ನಾಶಗೊಳಿಸುತ್ತದೆ ಮತ್ತು ಇದು ಅಂಗಾಂಗಗಳಿಗೆ ಗಂಭೀರ ಹಾನಿಯಾಗಲು ಕಾರಣವಾಗುತ್ತದೆ. ಈ ಮಾರಣಾಂತಿಕ ಕಾಯಿಲೆಯಿರುವವರಲ್ಲಿ ಸಾಮಾನ್ಯವಾಗಿ ಕಣ್ಣಿನ ನರವು ಊದಿಕೊಂಡಿರುತ್ತದೆ. ಕಣ್ಣುಗಳ ತಪಾಸಣೆ ವೇಳೆ ಇದನ್ನು ಪತ್ತೆ ಹಚ್ಚಬಹುದಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News