ಉಗ್ರನ ಬಿಡುಗಡೆಗೆ 45 ಲಕ್ಷ ರೂ. ಲಂಚ ಪಡೆದಿದ್ದ ಉತ್ತರ ಪ್ರದೇಶ ಐಜಿ

Update: 2017-09-21 10:48 GMT

ಬರೇಲಿ, ಸೆ.21: ಉತ್ತರ ಪ್ರದೇಶ ಪೊಲೀಸರಿಗೆ ಭಾರೀ ಮುಜುಗರ ಸೃಷ್ಟಿಸಬಹುದಾದ ಬೆಳವಣಿಗೆಯೊಂದರಲ್ಲಿ, ಐಜಿ ರ್ಯಾಂಕಿನ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಕಳೆದ ವರ್ಷದ ನಾಭಾ ಜೈಲಿನಿಂದ ಕೈದಿಗಳು ಪರಾರಿಯಾದ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕುಖ್ಯಾತ ಖಲಿಸ್ತಾನಿ ಉಗ್ರ ಗೋಪಿ ಘನಶ್ಯಾಮಪುರ ಎಂಬಾತನ ಬಿಡುಗಡೆಗಾಗಿ ರೂ.45 ಲಕ್ಷ ಲಂಚ ಪಡೆದಿದ್ದಾರೆಂಬ ಆರೋಪ ಪಂಜಾಬ್ ಪೊಲೀಸರಿಂದ ಕೇಳಿ ಬಂದಿದೆ.

ಉತ್ತರ ಪ್ರದೇಶದ ವಿಶೇಷ ತನಿಖಾ ಏಜನ್ಸಿಯೊಂದರ ನೇತೃತ್ವ ವಹಿಸಿರುವ ಆರೋಪಿ ಅಧಿಕಾರಿ ಈ ಸಂಬಂಧ ನಡೆಸಿದ ಒಪ್ಪಂದದ ಪುರಾವೆಯಾಗಿ ಪಂಜಾಬ್ ಪೊಲೀಸರು ಧ್ವನಿ ಮುದ್ರಿಕೆಯೊಂದನ್ನೂ ಪ್ರಸ್ತುತಪಡಿಸಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಡಿಜಿಪಿ ಸುಲ್ಖನ್ ಸಿಂಗ್ ಹಾಗೂ ಪ್ರಧಾನ ಗೃಹ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರಿಗೆ ಬುಲಾವ್ ಕಳುಹಿಸಿ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಎಡಿಜಿ ರ್ಯಾಂಕಿನ ಅಧಿಕಾರಿ ಈ ಪ್ರಕರಣದ ತನಿಖೆ ನಡೆಸಲಿದ್ದಾರೆಂದು ಡಿಜಿಪಿ ಸಿಂಗ್ ಮಾಹಿತಿ ನೀಡಿದ್ದಾರೆ.

ಗೋಪಿಯನ್ನು ಕಡೆಯ ಬಾರಿ ಶಹಜಹಾನಪುರದಲ್ಲಿ ಸೆಪ್ಟೆಂಬರ್ 10ರಂದು ನೋಡಲಾಗಿದ್ದರೂ ಆತ ನಂತರ ಶಂಕಾಸ್ಪದವಾಗಿ ನಾಪತ್ತೆಯಾಗಿದ್ದ ಎಂದು ಪಂಜಾಬ್ ಪೊಲೀಸರು ಹೇಳಿದ್ದರು.

ನವೆಂಬರ್ 27ರ ನಾಭಾ ಜೈಲಿನಿಂದ ಕೈದಿಗಳ ಪಲಾಯನ ಸಂಬಂಧ ಪಂಜಾಬ್ ಪೊಲೀಸರು ಹಾಗೂ ಉತ್ತರ ಪ್ರದೇಶ ಉಗ್ರ ನಿಗ್ರಹ ದಳ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಮಂದಿ ಶಂಕಿತರನ್ನು ಕಳೆದ ವಾರ ಬಂಧಿಸಲಾಗಿತ್ತು. ಅವರೆಲ್ಲರೂ ಜಾಮೀನುರಹಿತ ವಾರಂಟ್ ಎದುರಿಸುತ್ತಿದ್ದರು.

ಗೋಪಿ ಮತ್ತು ಐಜಿಪಿ ರ್ಯಾಂಕಿನ ಅಧಿಕಾರಿ ನಡುವೆ ಒಪ್ಪಂದದನ್ವಯ ಆತನನ್ನು ಬಿಟ್ಟುಬಿಡಲಾಗಿತ್ತು ಹಾಗೂ ಇದಕ್ಕಾಗಿ 2012ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಸುಲ್ತಾನ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದೀಪ್ ತಿವಾರಿ ಆಲಿಯಾಸ್ ಪಿಂಟೂ ಎಂಬಾತನ ಸಹಾಯ ಪಡೆಯಲಾಗಿತ್ತು ಎಂದು ಪಂಜಾಬ್ ಪೊಲೀಸರು ಆರೋಪಿಸಿದ್ದರು. ಮಾತುಕತೆ ವೇಳೆ ಪೊಲೀಸ್ ಅಧಿಕಾರಿ ರೂ.1 ಕೋಟಿ ಬೇಡಿಕೆಯಿಟ್ಟಿದ್ದರೂ ರೂ.45 ಲಕ್ಷಕ್ಕೆ ಅಂತಿಮವಾಗಿ ಒಪ್ಪಲಾಗಿತ್ತು ಎಂದು ಹೇಳಲಾಗಿದೆ.

ಪಿಂಟೂ, ಅಮನ್‌ದೀಪ್ ಸಿಂಗ್ ಹಾಗೂ ಹರ್ಜಿಂದರ್ ಸಿಂಗ್ ಕಹ್ಲೋನ್ ಎಂಬ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದಾಗ ಮೇಲಿನ ಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಬಂಧಿತರ ವಿಚಾರಣೆಗೆ ಸಂಬಂಧಿಸಿದ ಧ್ವನಿಮುದ್ರಿಕೆಯನ್ನು ಪಂಜಾಬ್ ಪೊಲೀಸರು ಉತ್ತರ ಪ್ರದೇಶ ಅಧಿಕಾರಿಗಳಿಗೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News