ಭಾರತದ ವೈವಿಧ್ಯತೆಯನ್ನು ಕಡೆಗಣಿಸುತ್ತಿರುವ ‘ನೀಟ್’ ಹೇರಿಕೆ

Update: 2017-09-22 05:32 GMT

ದೇಶಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಬಾಧಿಸುತ್ತಿರುವ ಕೊಳಕನ್ನು ನಿರ್ಮೂಲನೆ ಮಾಡದೆ ವೈದ್ಯಕೀಯ ಸಂಸ್ಥೆಗಳ ಪ್ರವೇಶಾತಿ ಪದ್ಧತಿಯಲ್ಲಿ ಮಾತ್ರ ಏಕರೂಪಿ ಪದ್ಧತಿಯನ್ನು ರೂಪಿಸುವುದರಿಂದ ಏನೇನೂ ಪ್ರಯೋಜನವಿಲ್ಲ. ವಾಸ್ತವವಾಗಿ ರಾಜ್ಯ ಸರಕಾರಗಳು ಇದರತ್ತ ತಮ್ಮ ಗಮನವನ್ನು ಹರಿಸಬೇಕಿದೆ.


ಭಾರತದದ ಸುಪ್ರೀಂ ಕೋರ್ಟು ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯ ಕಾಲೇಜುಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್.ಇ.ಇ.ಟಿ)ಯನ್ನು 2016ರಿಂದ ಅನುಷ್ಠಾನಕ್ಕೆ ತರಬೇಕೆಂದು ತನ್ನ 2013ರ ಆದೇಶಕ್ಕೆ ತಿದ್ದುಪಡಿ ಮಾಡಿ ನೀಡಿದ ಆದೇಶವನ್ನು ಹಲವಾರು ಕಾರಣಗಳಿಂದ ಸ್ವಾಗತಿಸಲಾಗಿತ್ತು. ಭಾರತಕ್ಕೆ ಅಗತ್ಯವಿರುವ ಆರೋಗ್ಯ ಸೇವೆಯನ್ನು ಗಮನದಲ್ಲಿಟ್ಟುಕೊಂಡಾಗ ವೈದ್ಯಕೀಯ ಶಿಕ್ಷಣದ ಮಹತ್ವವು ಯಾರಿಗಾದರೂ ಸ್ಪಷ್ಟವಾಗಿ ಅರ್ಥವಾಗುತ್ತದೆ.

ದೇಶಾದ್ಯಂತ ಏಕರೂಪಿಯಾದ ಪ್ರವೇಶ ಪರೀಕ್ಷೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಬೇರೆಬೇರೆ ಕಡೆ ಹಲವಾರು ಬಗೆಯ ಪ್ರವೇಶ ಪರೀಕ್ಷೆಗಳನ್ನು ಎದುರಿಸುವುದು ತಪ್ಪುತ್ತದೆಂದೂ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ ಮೇಲುಸ್ತು ವಾರಿಯಲ್ಲಿ ಪರೀಕ್ಷೆಗಳು ನಡೆಯುವುದರಿಂದ ಹಲವು ಬಗೆಯ ಅವ್ಯವಹಾರಗಳಿಗೆ ಲಗಾಮು ಬೀಳುತ್ತದೆಂದೂ ಮತ್ತು ದೇಶದೆಲ್ಲೆಡೆ ಏಕರೂಪಿಯಾದ ಪಠ್ಯವನ್ನು ನಿಗದಿ ಮಾಡುವುದರಿಂದ ಎಲ್ಲರಿಗೂ ಸಮಾನವಾದ ಅವಕಾಶಗಳು ದೊರೆಯುವಂತಾಗುತ್ತದೆಂದೂ ಭಾವಿಸಲಾಗಿತ್ತು. ಆದರೆ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಈ ನೀಟ್ ಪದ್ಧತಿಯು ಭಾರತದಂಥ ಅಪಾರ ವೈವಿಧ್ಯತೆ ಮತ್ತು ಸಂಕೀರ್ಣತೆಯಿಂದ ಕೂಡಿರುವ ದೇಶದಲ್ಲಿ ಒಂದೇ ಅಳತೆಯ ದಿರಿಸನ್ನು ಎಲ್ಲರಿಗೂ ತೊಡಿಸಲು ಹೊರಟಿರುವ ಪದ್ಧತಿಯೆಂಬಂತೆ ಕಂಡುಬರುತ್ತಿದೆ.

ಕೆಲವು ರಾಜ್ಯಗಳಲ್ಲಿ ಬಡಮಕ್ಕಳು ಉನ್ನತ ಶಿಕ್ಷಣ ಪಡೆಯುವಂತ ಸಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಿದ್ದ ವಿವಿಧ ರಾಜ್ಯಮಟ್ಟದ ಪರೀಕ್ಷೆಗಳನ್ನು ಮತ್ತು ಪ್ರಕ್ರಿಯೆಗಳನ್ನೂ ಸಹ ಈ ಪದ್ಧತಿಯು ಇಲ್ಲದಂತೆ ಮಾಡಿದೆ. ತಮಿಳುನಾಡಿನ ಬಡ ದಲಿತ ಕಾರ್ಮಿಕನ ಮಗಳಾದ ಎಸ್. ಅನಿತಾ ಈ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಇದು ಇನ್ನೂ ಸ್ಪಷ್ಟವಾಗಿ ಅರ್ಥವಾದೀತು. ವಿಪರ್ಯಾಸವೆಂದರೆ 2013ರಲ್ಲಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ಮತ್ತಿತರರು ಹಾಗೂ ಭಾರತದ ಒಕ್ಕೂಟದ ಪ್ರಕರಣದಲ್ಲಿ ಸರಕಾರವು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸುತ್ತಾ ಸುಪ್ರೀಂ ಕೋರ್ಟು ಉಲ್ಲೇಖಿಸಿದ ಕಾರಣಗಳು ಈಗಲೂ ಸುಸಂಗತವಾಗಿವೆ. ನೀಟ್ ಬಗ್ಗೆ ಆಗ ಸರಕಾರ ಹೊರಡಿಸಿದ್ದ ಅಧಿಸೂಚನೆಯಿಂದ ರಾಜ್ಯಗಳು, ಸರಕಾರಿ ವಿಶ್ವವಿದ್ಯಾನಿಲಯಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಡೆಸುವಂಥ ಕಾಲೇಜುಗಳನ್ನೂ ಒಳಗೊಂಡಂತೆ ಎಲ್ಲಾ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶವನ್ನೂ ನೀಡದಂತಾಗುತ್ತದೆ ಎಂದು ಸುಪ್ರೀಂ ಕೋರ್ಟು ಹೇಳಿತ್ತು. ಅಷ್ಟು ಮಾತವಲ್ಲದೆ ಈ ನೀಟ್ ಪದ್ಧತಿಯು ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ಮತ್ತು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕಷ್ಟಕರವಾಗಿ ಪರಿಣಮಿಸುತ್ತದೆಂದೂ ಕೂಡಾ ಕೋರ್ಟು ಹೇಳಿತ್ತು.

ವಾಸ್ತವವಾಗಿ 2015ರಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಪ. ಬಂಗಾಳ ಮತ್ತು ತಮಿಳುನಾಡು ರಾಜ್ಯಗಳು ನೀಟ್ ಪದ್ಧತಿಯನ್ನು ಖಂಡತುಂಡವಾಗಿ ವಿರೋಧಿಸಿದ್ದವು. ನೀಟ್ ಪದ್ಧತಿಯ ವಿರೋಧಿಗಳು ಎತ್ತಿದ್ದ ಇತರ ಕಾಳಜಿಗಳು ಎಲ್ಲರಿಗೂ ಗೊತ್ತಿದ್ದವೇ ಆದರೂ ಅವನ್ನು ಯಾರೂ ಹೆಚ್ಚು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಈ ಸಿಬಿಎಸ್‌ಇ ಪಠ್ಯಗಳು ಕೇವಲ ನಗರ ಕೇಂದ್ರಿತವಾಗಿರುವುದು ಮಾತ್ರವಲ್ಲದೆ ರಾಜ್ಯಗಳ ಪ್ರೌಢ ಶಿಕ್ಷಣ ಮಂಡಳಿಗಳು ನಿಗದಿ ಮಾಡಿರುವ ಪಠ್ಯಗಳಿಗಿಂತ ಸಾಕಷ್ಟು ಭಿನ್ನವಾಗಿವೆಯೆಂದೂ, ಮತ್ತು ಇತರ ಎಲ್ಲಾ ಏಕರೂಪಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳಂತೆ ಈ ನೀಟ್ ಪರೀಕ್ಷೆಯನ್ನೂ ಸಹ ದುಬಾರಿ ತರಬೇತಿ ಶಾಲೆಗಳಿಂದ ತರಬೇತು ಪಡೆವರು ಮಾತ್ರ ಯಶಸ್ವಿಯಾಗಬಹುದೆಂಬ ಪ್ರಬಲವಾದ ಆಕ್ಷೇಪಣೆಗಳನ್ನು ಅಂಥವರು ಎತ್ತಿದ್ದರು. ಮತ್ತೊಂದು ವಿಷಯವೆಂದರೆ ಕೇಂದ್ರೀಯ ವೈದ್ಯಕೀಯ ಸಂಸ್ಥೆಗಳಾದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎ.ಐ.ಐ.ಎಮ್.ಎಸ್) ಮತ್ತು ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು (ಜೆಐಪಿಎಂಇಆರ್) ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವಾದ್ದರಿಂದ ಅವು ನೀಟ್ ಕೆಳಗಡೆ ಬರುವುದಿಲ್ಲ. ವಿವಿಧ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಷ್ಟು ತರಾತುರಿಯಲ್ಲಿ ಕೇಂದ್ರವು ಏಕೆ ನೀಟ್ ಅನ್ನು ದೇಶಾದ್ಯಂತ ಹೇರುತ್ತಿದೆಯೆಂದು ಅರ್ಥವಾಗುತ್ತಿಲ್ಲ.

ಶಿಕ್ಷಣವು ಕೇಂದ್ರ-ರಾಜ್ಯಗಳ ಜಂಟಿ ಪಟ್ಟಿಯಲ್ಲಿರುವುದರಿಂದ ಈ ತೀರ್ಮಾನವು ವಿಧಿ ವಿಧಾನಗಳ ಗಂಭೀರ ಉಲ್ಲಂಘನೆಯೂ ಆಗಿದೆ. ಉನ್ನತ ಶಿಕ್ಷಣದಲ್ಲಿ ಸಾಮಾಜಿಕವಾಗಿ ವಂಚಿತ ಸಮುದಾಯಗಳನ್ನು ಹೆಚ್ಚು ಒಳಗೊಳ್ಳುವ ವಿಷಯದಲ್ಲಿ ಪ್ರಾಯಶಃ ಬೇರೆ ಎಲ್ಲಾ ರಾಜ್ಯಗಳಿಗಿಂತ ತಮಿಳುನಾಡು ಮುಂದಿದೆ. 2007ರಿಂದ ತಮಿಳುನಾಡುವಿನಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶವನ್ನು ಕೇವಲ 12ನೆ ತರಗತಿಯ ಅಂಕಗಳನ್ನು ಆಧರಿಸಿಯೇ ನೀಡಲಾಗುತ್ತಿದೆ. ಹಾಗೂ ಆ ರಾಜ್ಯದಲ್ಲಿ ವಂಚಿತ ಸಮುದಾಯಗಳ ಪರವಾಗಿರುವ ಪ್ರಬಲ ಮೀಸಲಾತಿ ನೀತಿಯೂ ಅಸ್ತಿತ್ವದಲ್ಲಿರುವುದರಿಂದ ವಂಚಿತ ಸಮುದಾಯಗಳಿಂದ ಹೆಚ್ಚೆಚ್ಚು ಮಕ್ಕಳು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚೆಚ್ಚು ಸೇರ್ಪಡೆಯಾಗುತ್ತಿದ್ದರು.

12ನೆ ತರಗತಿಯಲ್ಲಿ ಅತ್ಯುತ್ತಮವಾದ ಅಂಕಗಳನ್ನು ಪಡೆದಿದ್ದರೂ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವಂತಾಗಿದ್ದ ಅನಿತಾ ಸಹ ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ದಾವೆಯಲ್ಲಿ ಅಹವಾಲುದಾರಳಾಗಿದ್ದಳು. 2017ರಲ್ಲಿ ಆ ರಾಜ್ಯದ ವಿಧಾನಸಭೆಯು ತಮ್ಮ ರಾಜ್ಯದಲ್ಲಿ ತಮ್ಮದೇ ಆದ ಪ್ರವೇಶ ನೀತಿಯನ್ನು ಮುಂದುವರಿಸಲಾಗುವುದೆಂದೂ ಮತ್ತು ನೀಟ್ ಪದ್ಧತಿಯನ್ನು ತಮ್ಮ ರಾಜ್ಯದಲ್ಲಿ ಹೇರಲಾಗುವುದಿಲ್ಲವೆಂದೂ ಸರ್ವಸಮ್ಮತಿಯಿಂದ ತೀರ್ಮಾನ ಮಾಡಿತು. ಈ ವರ್ಷದ ಆಗಸ್ಟ್‌ನಲ್ಲಿ ತಮಿಳುನಾಡಿನ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂಬ ಪ್ರಸ್ತಾಪವಿರುವ ತಮಿಳುನಾಡು ಸರಕಾರದ ಸುಗ್ರೀವಾಜ್ಞೆಗೆ ಕೇಂದ್ರ ಕಾನೂನು ಇಲಾಖೆ ಹಸಿರು ನಿಶಾನೆ ತೋರಿತ್ತು. ಇಷ್ಟಾದರೂ ಕೇಂದ್ರವು ಸುಗ್ರೀವಾಜ್ಞೆಯನ್ನು ಊರ್ಜಿತಗೊಳಿಸುವಲ್ಲಿ ವಿಫಲವಾಗಿ ತಮಿಳುನಾಡು ಸರಕಾರಕ್ಕೆ ಕೊಟ್ಟಿದ್ದ ಭರವಸೆಯಿಂದ ಹಿಂದೆ ಸರಿಯಿತು.

2016ರ ಸುಪ್ರೀಂ ಕೋರ್ಟಿನ ನ್ಯಾಯಾದೇಶದ ಹಿನ್ನೆಲೆಯಲ್ಲಿ ನೀಟ್ ಪದ್ಧತಿಯನ್ನು ಜಾರಿ ಮಾಡುವಲ್ಲಿ ತನಗೆ ಒಂದು ವರ್ಷದ ವಿನಾಯಿತಿಯನ್ನು ನೀಡಬೇಕೆಂದು ತಮಿಳುನಾಡು ಸರಕಾರವು ಸುಪ್ರೀಂ ಕೋರ್ಟಿನಲ್ಲಿ ಮನವಿಯನ್ನು ಸಲ್ಲಿಸಿತ್ತು. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರದ ಈ ಮನವಿಗೆ ಬೆಂಬಲ ಕೊಡದಿದ್ದರಿಂದ ಸುಪ್ರೀಂ ಕೋರ್ಟು ತಮಿಳುನಾಡಿನ ಮನವಿಯನ್ನು ವಜಾ ಮಾಡಿತು. ಸಹಜವಾಗಿಯೇ ವಿರೋಧ ಪಕ್ಷಗಳು ಭಾರತೀಯ ಜನತಾ ಪಕ್ಷವನ್ನು ಬಡವರ ವಿರೋಧಿ ಮತ್ತು ತಮಿಳು ವಿರೋಧಿಯೆಂದು ನಿಂದಿಸಿದ್ದಲ್ಲದೆ ಅನಿತಾಳಂಥ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಲ್ಲದ ರಾಜ್ಯ ಸರಕಾರಕ್ಕೂ ಸಹ ಛೀಮಾರಿ ಹಾಕಿದವು.

ರಾಜ್ಯ ಸರಕಾರದ ಪ್ರೌಢ ಶಿಕ್ಷಣ ಮಂಡಳಿಯ ಫಲಿತಾಂಶಗಳನ್ನು ಮಾತ್ರ ಪರಿಗಣಿಸಿದ್ದಲ್ಲಿ ಅನಿತಾ ತನ್ನ ಸಮುದಾಯದ ಪ್ರಪ್ರಥಮ ವೈದ್ಯೆ ಆಗಿರುತ್ತಿದ್ದಳು. ಕೆಲವು ಅಪವಾದಗಳನ್ನು ಹೊರತುಪಡಿಸಿ, ಉಳಿದಂತೆ ಹೆಚ್ಚಿನ ವೈದ್ಯಕೀಯ ಕಾಲೇಜುಗಳು (ಕಾಗದದ ಮೇಲೆ ಮಾತ್ರ ಅರ್ಹತೆಯುಳ್ಳ ಶಿಕ್ಷಕರನ್ನು ಹೊಂದಿದ್ದು) ಬೇನಾಮಿ ಸಿಬ್ಬಂದಿಯಿಂದ ಪಾಠ ನಡೆಸುವ, ಅಸಮರ್ಪಕ ಮೂಲಸೌಕರ್ಯಗಳಿರುವ, ಅತ್ಯಂತ ಕೆಟ್ಟ ವೈದ್ಯಕೀಯ ಶಿಕ್ಷಣವನ್ನು ನೀಡುತ್ತಿರುವ ಲಾಭಕೋರ ದಂಧೆಯಲ್ಲಿ ನಿರತವಾಗಿರುವ ಸಂಸ್ಥೆಗಳಾಗಿವೆಯೆಂಬುದನ್ನು ವಿಶೇಷವಾಗಿಯೇನೂ ಹೇಳಬೇಕಿಲ್ಲ. ಇದರ ಜೊತೆಗೆ ಭಾರತೀಯ ವೈದ್ಯಕೀಯ ಪರಿಷತ್ತು ಸಹ ಒಪ್ಪಿಕೊಳ್ಳುವಂತೆ ನಕಲಿ ಪದವಿಗಳನ್ನು ಹಂಚುವ ನೈಜ ಮತ್ತು ವಿಸ್ತೃತವಾದ ಮೋಸದ ದಂಧೆಯೂ ನಡೆಯುತ್ತಿದೆ. ಇವೆಲ್ಲವೂ ಗಂಭೀರ ಸಮಸ್ಯೆಗಳೆ.

ಆದರೆ ಇವುಗಳಷ್ಟೇ ಗಂಭೀರವಾದ ಮತ್ತೊಂದು ಸಮಸ್ಯೆಯೆಂದರೆ ಹಲವು ವೈದ್ಯಕೀಯ ಸಂಸ್ಥೆಗಳಲ್ಲಿ ದಲಿತ ಮತ್ತು ಆದಿವಾಸಿ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ಸಂಸ್ಥೆಯ ಸಿಬ್ಬಂದಿಯಿಂದ ಮತ್ತು ತಮ್ಮ ಮೇಲ್ಜಾತಿ ಸಹಪಾಠಿಗಳಿಂದ ಅನುಭವಿಸುತ್ತಿರುವ ಜಾತಿ ತಾರತಮ್ಯ ಮತ್ತು ಅಪಮಾನಗಳು. ದೇಶಾದ್ಯಂತ ಪ್ರಾಥಮಿಕ ಶಿಕ್ಷಣವನ್ನು ಬಾಧಿಸುತ್ತಿರುವ ಕೊಳಕನ್ನು ನಿರ್ಮೂಲನೆ ಮಾಡದೆ ವೈದ್ಯಕೀಯ ಸಂಸ್ಥೆಗಳ ಪ್ರವೇಶಾತಿ ಪದ್ಧತಿಯಲ್ಲಿ ಮಾತ್ರ ಏಕರೂಪಿ ಪದ್ಧತಿಯನ್ನು ರೂಪಿಸುವುದರಿಂದ ಏನೇನೂ ಪ್ರಯೋಜನವಿಲ್ಲ. ವಾಸ್ತವವಾಗಿ ರಾಜ್ಯ ಸರಕಾರಗಳು ಇದರತ್ತ ತಮ್ಮ ಗಮನವನ್ನು ಹರಿಸಬೇಕಿದೆ. ರಾಜ್ಯಮಟ್ಟದ ರಾಜಕಾರಣಿಗಳು ತಮ್ಮ ತಮ್ಮ ಪ್ರದೇಶದ ವಿದ್ಯಾರ್ಥಿಗಳ ಹಿತವನ್ನು ತಾವು ರಕ್ಷಿಸುತ್ತಿರುವುದಾಗಿ ಕೊಚ್ಚಿಕೊಳ್ಳುತ್ತಾರೆ.

ಆದರೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಬಾಧಿಸುತ್ತಿರುವ ಮೂಲಭೂತ ಮತ್ತು ವ್ಯವಸ್ಥಾಗತ ಅಂಶಗಳತ್ತ ಗಮನಹರಿಸಬೇಕಾದ ಗಂಭೀರತೆಯನ್ನು ಅವರೆಲ್ಲ ತೋರುವುದೇ ಇಲ್ಲ. ಎಲ್ಲಕ್ಕಿಂತ ಮೂಲಭೂತವಾಗಿ ತಮ್ಮ ಪದವೀಧರರು ತಮ್ಮ ವೃತ್ತಿಯನ್ನು ಯಾವ ಸಾಮಾಜಿಕ ಮತ್ತು ಆರ್ಥಿಕ ವಾಸ್ತವತೆಗಳ ಮಧ್ಯೆ ನಡೆಸಬೇಕಾಗುತ್ತದೆಂಬುದನ್ನು ವೈದ್ಯಕೀಯ ಶಿಕ್ಷಣ ಮತ್ತು ತರಬೇತಿಗಳು ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಎಲ್ಲಾ ಮೂಲಭೂತ ವಿಷಯಗಳು ಕೆಲವು ಜನಪ್ರಿಯ ಯೋಜನೆಗಳಿಂದಲೋ ಅಥವಾ ಕೇಂದ್ರದ ಕಾರ್ಯಸೂಚಿಗೆ ಒಪ್ಪಿಗೆ ಇಲ್ಲದ ರಾಜ್ಯಗಳನ್ನೂ ಸಹ ಬಲವಂತವಾಗಿ ಒಪ್ಪಿಸುವುದರಿಂದಲೋ ಬಗೆಹರಿಸಲು ಸಾಧ್ಯವಿಲ್ಲ. ಅದಕ್ಕಾಗಿ ದೇಶದ ವೈವಿಧ್ಯತೆಗಳ ಬಗ್ಗೆ ಸಂವೇದನಾಶೀಲವಾಗಿರುವ ಮತ್ತು ಸಾಮಾಜಿಕವಾಗಿ ವಂಚಿತ ಸಮುದಾಯಗಳನ್ನು ಒಳಗೊಳ್ಳುವ ನೀತಿಗೆ ಬದ್ಧವಾಗಿರುವ ಧೋರಣೆಗಳ ಮೂಲಕ ಸರ್ವಸಮ್ಮತಿಯನ್ನು ರೂಪಿಸಬೇಕಾಗುತ್ತದೆ.

ಕೃಪೆ: : Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ