ಹತ್ಯೆ ಆರೋಪಿಯ ಬಗ್ಗೆ ಪೊಲೀಸರು ಅನುಕಂಪ ತೋರಿದ್ದು ಏಕೆ ಗೊತ್ತೇ?

Update: 2017-09-22 04:17 GMT

ಚೆನ್ನೈ, ಸೆ. 22: ಹದಿಹರೆಯದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಮುಂದಾದ ಪಾನಮತ್ತ ಮಗನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಮಹಿಳೆಗೆ ಪೊಲೀಸರೇ ಕಾನೂನು ನೆರವು ನೀಡಿದ ಅಪರೂಪದ ಪ್ರಕರಣ ವರದಿಯಾಗಿದೆ.

ತಮಿಳುನಾಡಿನ ಶಿವಗಂಗಾ ಜಿಲ್ಲೆ ಸಕ್ಕವಾಲಯ್ ಎಂಬ ಗ್ರಾಮದ 65 ವರ್ಷ ವಯಸ್ಸಿನ ಮಹಿಳೆ ಲಕ್ಷ್ಮಿ ತನ್ನ 47 ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು. ಆತ ಪಾನಮತ್ತನಾಗಿ ಬಂದ ಆತ ತನ್ನ 19 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಮುಂದಾದಾಗ, ಕೋಪಗೊಂಡ ತಾಯಿ ಕಡುಗೋಲಿನಿಂದ ಹೊಡೆದು ಆತನನ್ನು ಸಾಯಿಸಿದ್ದಳು ಎಂದು ಆರೋಪಿಸಲಾಗಿತ್ತು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯ ಎದುರು, "ನನ್ನನ್ನು ರಕ್ಷಿಸುವ ಸಲುವಾಗಿ ಅಜ್ಜಿ  ಬೇರೇನು ಮಾಡಲು ಸಾಧ್ಯವಿತ್ತು" ಎಂದು ಕವಿತಾ (ಹೆಸರು ಬದಲಿಸಲಾಗಿದೆ) ಅಜ್ಜಿಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಳು. ಘಟನೆ ಸಂಬಂಧ ಲಕ್ಷ್ಮಿಯನ್ನು ಬಂಧಿಸಿದ ಬಳಿಕ ಈ ಹದಿಹರೆಯದ ಯುವತಿ, ಅಜ್ಜಿ ಇಲ್ಲದೇ ತಾನೊಬ್ಬಳೇ ಹೇಗೆ ಜೀವಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಳು. ಲಕ್ಷ್ಮಿ ವಿರುದ್ಧ ಐಪಿಸಿ ಸೆಕ್ಷನ್ 304 (ದೋಷಯುಕ್ತ ನರಹತ್ಯೆ) ಅನ್ವಯ ಪ್ರಕರಣ ದಾಖಲಾಗಿತ್ತು. ಇದು ಕೊಲೆ ಪ್ರಕರಣವಲ್ಲ.

ವೃದ್ಧ ಮಹಿಳೆಯ ಬಗ್ಗೆ ನಮಗೂ ಅನುಕಂಪವಿದೆ. ಆದರೆ ಕಾನೂನು ನಮ್ಮ ಕೈ ಕಟ್ಟಿದೆ. ಈಕೆ ಜಾಮೀನಿಗೆ ಮನವಿ ಸಲ್ಲಿಸಿದರೆ, ಪೊಲೀಸರು ಇದನ್ನು ವಿರೋಧಿಸುವುದಿಲ್ಲ ಎಂದು ಎಸ್ಪಿ ಟಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.

ಆಕೆಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸುವಂತೆ ತನಿಖಾಧಿಕಾರಿಗೆ ಸೂಚಿಸಿದ್ದಾಗಿ ಅವರು ಹೇಳಿದ್ದಾರೆ. ಈ ಪ್ರಕರಣದ ಸ್ವರೂಪ ಹಾಗೂ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News