ಮಲಬದ್ಧತೆ ಅಪಾಯಕಾರಿ ಏಕೆ?

Update: 2017-09-22 09:00 GMT

ಸಾಮಾನ್ಯವಾಗಿ ಎಲ್ಲರೂ ಆಗಾಗ್ಗೆ ಮಲಬದ್ಧತೆಯನ್ನು ಅನುಭವಿಸುತ್ತಿರುತ್ತಾರೆ. ಮಲಬದ್ಧತೆ ಅಪಾಯಕಾರಿ ಸಮಸ್ಯೆಯಾಗಿದೆ ಎನ್ನುವುದು ಗೊತ್ತೇ? ಅದು ಕೇವಲ ಮಲ ವಿಸರ್ಜನೆಯ ತೊಂದರೆಯಷ್ಟೇ ಅಲ್ಲ. ಅದು ಹೊಟ್ಟೆಯುಬ್ಬರಿಕೆ, ವಾಕರಿಕೆ ಮತ್ತು ಹೊಟ್ಟೆನೋವುಗಳಿಗೂ ಕಾರಣವಾಗುತ್ತದೆ.

ಪ್ರಮುಖ ಸಮಸ್ಯೆಯೆಂದರೆ ಮಲಬದ್ಧತೆಯು ನಮ್ಮ ಜೀರ್ಣ ಸಾಮರ್ಥ್ಯವನ್ನು ಕುಂದಿಸುತ್ತದೆ. ಶರೀರದಿಂದ ಹೊರಗೆ ಹೋಗಬೇಕಾದ ತ್ಯಾಜ್ಯ ಸುದೀರ್ಘ ಸಮಯ ದವರೆಗೆ ಜೀರ್ಣಾಂಗಗಳಲ್ಲಿಯೇ ಇರುತ್ತದೆ ಮತ್ತು ಇದನ್ನು ಹೊರಹಾಕಲು ಸಾಕಷ್ಟು ಸಮಯ ಬೇಕಾಗುತ್ತದೆ.

ಇದು ನಮ್ಮಲ್ಲಿ ಅಹಿತಕರ ಭಾವನೆಯನ್ನು ಸೃಷ್ಟಿಸುವ ಜೊತೆಗೆ ಗುದದ್ವಾರದಲ್ಲಿ ಬಿರುಕು, ಮೂಲವ್ಯಾಧಿ, ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯಲ್ಲಿ ಏರುಪೇರು, ಜೊತೆಗೆ ದೊಡ್ಡಕರುಳಿನಲ್ಲಿ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅಲ್ಲದೆ ಗುದನಾಳದಲ್ಲಿ ಮಲವು ಸಂಗ್ರಹಗೊಂಡು ಗಟ್ಟಿಯಾಗುವುದರಿಂದ ಜ್ವರ, ತಲೆನೋವು, ನಿರ್ಜಲೀಕರಣ, ವಾಂತಿ, ತೂಕ ಇಳಿಕೆ ಮತ್ತು ತ್ವರಿತ ಉಸಿರಾಟಕ್ಕೆ ಕಾರಣವಾಗುವ ಜೊತೆಗೆ ಕಿರಿಕಿರಿಯನ್ನೂ ಉಂಟು ಮಾಡುತ್ತದೆ.

ಗುದನಾಳದಲ್ಲಿ ಸಂಗ್ರಹಗೊಂಡ ಈ ಗಟ್ಟಿಮಲವನ್ನು ಹೊರಗೆ ಹಾಕುವಲ್ಲಿ ಶರೀರವು ವಿಫಲಗೊಂಡರೆ ಸಾವು ಕೂಡ ಸಂಭವಿಸಬಹುದು. ದಿನಕ್ಕೆ ಎಷ್ಟು ಬಾರಿ ಮಲ ವಿಸರ್ಜನೆಯಾಗುತ್ತದೆ ಎನ್ನುವುದಕ್ಕೆ ನಿಗದಿತ ಸಂಖ್ಯೆಯಿಲ್ಲ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಮಲವಿಸರ್ಜನೆ ಗರಿಷ್ಠ ಮಿತಿಯಾಗಿದೆ. ವ್ಯಕ್ತಿಗೆ ಅದಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆಯಾದರೆ ಅದು ಡಯರಿಯಾ ಅಥವಾ ಅತಿಸಾರವಾಗಿರಬಹುದು. ಸರಾಸರಿ ದಿನಕ್ಕೆ ಒಂದು ಬಾರಿಗಿಂತ ಕಡಿಮೆ ಮಲವಿಸರ್ಜನೆಯಾದರೆ ಅದಕ್ಕೆ ಮಲಬದ್ಧತೆ ಕಾರಣವಾಗಿರಬಹುದು.

ಮಲಬದ್ಧತೆಯುಂಟಾಗಲು ಹಲವಾರು ಕಾರಣಗಳಿವೆ. ನಿರ್ಜಲೀಕರಣ, ಆಹಾರದಲ್ಲಿ ನಾರಿನಂಶದ ಕೊರತೆ, ಡೇರಿ ಉತ್ಪನ್ನಗಳ ಅತಿಯಾದ ಬಳಕೆ, ಒತ್ತಡ, ಅತಿಯಾದ ಸಕ್ಕರೆ ಮತ್ತು ಕೊಬ್ಬು ಸೇವನೆ, ಗರ್ಭಧಾರಣೆ, ಮಧುಮೇಹ, ಮದ್ಯ ಅಥವಾ ಕೆಫೀನ್ ಸೇವನೆ ಇತ್ಯಾದಿಗಳು ಮಲಬದ್ಧತೆಯನ್ನುಂಟು ಮಾಡುತ್ತವೆ.

ಹೈಪೊಥೈರಾಯ್ಡಿಸಂ ಎಂದು ಕರೆಯಲಾಗುವ ಥೈರಾಯ್ಡಿ ಸಮಸ್ಯೆ ಕೂಡ ಮಲಬದ್ಧತೆಗೆ ಕಾರಣವಾಗಿದೆ. ಆಗಾಗ್ಗೆ ಮಲಬದ್ಧತೆ ಕಾಡುತ್ತಿದ್ದರೆ ವೈದ್ಯರನ್ನು ಕಂಡು ಥೈರಾಯ್ಡಿ ಸಮಸ್ಯೆಯಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಅತಿಯಾದ ಚಾಕಲೇಟ್ ಸೇವನೆ ಮಲಬದ್ಧತೆಗೆ ಒಂದು ಕಾರಣವಾಗಿದೆ. ಹೀಗಾಗಿ ಮಲಬದ್ಧತೆಯ ಸಮಸ್ಯೆ ತಲೆದೋರಿದರೆ ಚಾಕಲೇಟ್ ತಿನ್ನುವುದನ್ನು ಕಡಿಮೆ ಮಾಡಬೇಕಾಗುತ್ತದೆ.

ಶರೀರದಲ್ಲಿ ಕಬ್ಬಿಣ ಮತ್ತು ಕ್ಯಾಲ್ಶಿಯಂ ಕೊರತೆಯನ್ನು ನಿವಾರಿಸಲು ಸೇವಿಸುವ ಪೂರಕಗಳೂ ಮಲಬದ್ಧತೆಗೆ ಕಾರಣವಾಗುತ್ತವೆ. ನೀವು ಸುದೀರ್ಘ ಕಾಲದಿಂದ ಈ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಪರ್ಯಾಯ ಔಷಧಿಯನ್ನು ಸೂಚಸುವಂತೆ ನಿಮ್ಮ ವೈದ್ಯರನ್ನು ಕೇಳಿಕೊಳ್ಳಿ. ಖಿನ್ನತೆ ನಿವಾರಕ ಔಷಧಿಗಳ ಬಳಕೆಯೂ ಮಲಬದ್ಧತೆಯನ್ನುಂಟು ಮಾಡುತ್ತದೆ.

ಮಲಬದ್ಧತೆಗೆ ನೈಸರ್ಗಿಕ ಪರಿಹಾರವೇನು? ದೈನಂದಿನ ನಡಿಗೆ, ಸಾಕಷ್ಟು ನೀರು ಸೇವನೆ, ಸಮೃದ್ಧ ನಾರು ಇರುವ ಆಹಾರ, ತರಕಾರಿ ಮತ್ತು ಹಣ್ಣುಹಂಪಲುಗಳ ಸೇವನೆ ಮತ್ತು ಮಲವಿಸರ್ಜನೆಗೆ ಕಮೋಡ್ ಬದಲು ಭಾರತೀಯ ಶೈಲಿಯ ಬಳಕೆ ಇತ್ಯಾದಿಗಳು ಮಲಬದ್ಧತೆ ನಿವಾರಣೆಗೆ ಸರಳ ಪರಿಹಾರಗಳಾಗಿವೆ.

ಒಂದು ದಿನಕ್ಕೂ ಹೆಚ್ಚಿನ ಅವಧಿಗೆ ಮಲಬದ್ಧತೆ ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ. ಗುದನಾಳದಲ್ಲಿ ಮಲವು ಸಂಗ್ರಹಗೊಂಡು ಗಟ್ಟಿಯಾದರೆ ಮತ್ತು ಅದು ಶರೀರದಿಂದ ಹೊರಗೆ ಹೋಗದಿದ್ದರೆ ಜೀವಕ್ಕೇ ಅಪಾಯಕಾರಿ ಎನ್ನುವುದನ್ನು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News