ಭಾರತದ ಬುಲೆಟ್ ಟ್ರೈನ್ ಯಾರಿಗೆಷ್ಟು ಲಾಭ?

Update: 2017-09-22 18:33 GMT

ಭಾಗ-1

ದೇಶದಲ್ಲಿ ಈಗ ಇರುವ ರೈಲು ಮೂಲ ಚೌಕಟ್ಟು ಅದರ ಭಾರ ತಡೆಯಲಾರದೆ ಮುಗ್ಗರಿಸುತ್ತಿರುವಾಗ ಹಳಿ ತಪ್ಪುವಿಕೆ, ರೈಲು ಅಪಘಾತಗಳು ಒಂದು ದೈನಂದಿನ ಘಟನೆಯಾಗುತ್ತ ಪ್ರಯಾಣಿಕರು ರೈಲು ಪ್ರಯಾಣ ಮಾಡುವುದಕ್ಕೇ ಹೆದರಿಕೊಳ್ಳುವ ಸ್ಥಿತಿ ಇರುವಾಗ, ಬುಲೆಟ್ ಟ್ರೈನ್‌ನಂತಹ ಭಾರೀ ಅದ್ದೂರಿಯ, ವೈಭವೋಪೇತ ಮತ್ತು ದುಬಾರಿ ವೆಚ್ಚದ ಒಂದು ಯೋಜನೆಯನ್ನು ಸಮರ್ಥಿಸುವುದು ಕಷ್ಟ ಎನ್ನುತ್ತಾರೆ ಯೋಜನೆಯ ವಿಮರ್ಶಕರು.

ನಾಮಕರಣ (ನಾಮಿನೇಶನ್)ದ ನೆಲೆಯಲ್ಲಿ ಜಪಾನಿಗೆ ಇಡೀ ಯೋಜನೆಯನ್ನು ನೀಡುವುದರ ಬದಲಾಗಿ ಭಾರತವು ಟೆಂಡರ್‌ಗಳನ್ನು, ಬಿಡ್‌ಗಳನ್ನು ಆಹ್ವಾನಿಸಿದರೆ ಮುಂಬೈ-ಅಹ್ಮದಾಬಾದ್ ಬುಲೆಟ್-ಟ್ರೈನ್ ವ್ಯವಸ್ಥೆಯಲ್ಲಿ ಅದು 3.2 ಬಿಲಿಯ ಡಾಲರ್‌ಗಳಷ್ಟು ಹಣವನ್ನು ಉಳಿಸಬಹುದಾಗಿತ್ತು. ಇದೇ ರೀತಿಯ ಹೈಸ್ಪೀಡ್ ರೈಲ್ (ಎಚ್‌ಎಸ್‌ಆರ್) ಯೋಜನೆಗಳ ವೆಚ್ಚ ಹೋಲಿಕೆಯಿಂದ ತಿಳಿದು ಬರುವ ಅಂಶ ಇದು.

ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ನಿರ್ಮಿಸಲಾದ ಎಚ್‌ಎಸ್‌ಆರ್ ಯೋಜನೆಗಳ ವಿಶ್ಲೇಷಣೆ ನಡೆಸಿರುವ ವಿಶ್ವ ಬ್ಯಾಂಕ್‌ನ ಪ್ರಕಾರ, ಯಾವುದೇ ಬುಲೆಟ್ ಟ್ರೈನ್ ಯೋಜನೆಯ ಒಟ್ಟು ವೆಚ್ಚದ ಶೇ.82ರಷ್ಟು ಮೊತ್ತವು ರೈಲು ಮೂಲ ಚೌಕಟ್ಟಿಗೆ (ಇನ್‌ಫ್ರಾಸ್ಟ್ರಕ್ಷರ್) ವೆಚ್ಚವಾಗುತ್ತದೆ. ನಿರ್ಮಾಣದ ಅವಧಿಯಲ್ಲಿ ನೀಡಬೇಕಾದ ಬಡ್ಡಿ, ರೋಲಿಂಗ್ ಸ್ಟಾಕ್ ಮತ್ತು ಭೂಮಿಯ ವೆಚ್ಚಗಳನ್ನು ಹೊರತುಪಡಿಸಿ ಆಗುವ ವೆಚ್ಚ ಇದು (ಶೇ.82).

ಮುಂಬೈ-ಅಹ್ಮದಾಬಾದ್ ಎಚ್‌ಎಸ್‌ಆರ್‌ನ ವೆಚ್ಚ 17 ಬಿಲಿಯನ್ ಡಾಲರ್ (1.1 ಲಕ್ಷ ಕೋಟಿ ರೂ.) ಎಂದು ಅಂದಾಜಿಸಲಾಗಿದೆ. ಇದರ ಪ್ರಕಾರ, ಪ್ರಾಜೆಕ್ಟ್ ರೈಲು ಮೂಲ ಚೌಕಟ್ಟಿಗೆ ತಗಲುವ ವೆಚ್ಚ ಪ್ರತೀ ಕಿ.ಮೀ.ಗೆ 27.44 ಮಿಲಿಯ ಡಾಲರ್ ಆಗುತ್ತದೆ.

ಇದಕ್ಕೆ ಹೋಲಿಸಿದರೆ, ಚೀನಾದಲ್ಲಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚರಿಸುವ ಬುಲೆಟ್ ಟ್ರೈನ್‌ಗಳ ತಲಾ ವೆಚ್ಚ ಪ್ರತೀ ಕಿ.ಮೀ.ಗೆ 17.21 ಮಿಲಿಯ ಡಾಲರ್. ಒಂದು ವೇಳೆ ನಾವು, ಚೀನಾದಲ್ಲಿ ಪ್ರತಿ ಕಿ.ಮೀ.ಗೆ ಅತ್ಯಧಿಕ ಮೊತ್ತವಾದ 21 ಮಿಲಿಯ ಡಾಲರ್ ಎಂದು ಇಟ್ಟುಕೊಂಡರೂ, ಮುಂಬೈ ಅಹ್ಮದಾಬಾದ್ ಎಚ್‌ಎಸ್‌ಆರ್ ಪ್ರಾಜೆಕ್ಟ್ ನ ವೆಚ್ಚದ ಅಂದಾಜು, ಕನಿಷ್ಠ 3.2 ಬಿಲಿಯ ಡಾಲರ್ ಅಧಿಕವಾಗುತ್ತದೆ.

ಶೇ. 0.1 ಬಡ್ಡಿದರದಲ್ಲಿ ಜಪಾನ್ ಭಾರತಕ್ಕೆ 50 ವರ್ಷಗಳ ಅವಧಿಯ 88,000 ಕೋಟಿ ರೂ.ಗಳ ಸಾಲ ನೀಡಲಿದೆ. ಇದು ಹೊರ ನೋಟಕ್ಕೆ ತುಂಬ ಅನ್ನಿಸುತ್ತದೆ. ಆದರೆ ಭಾರತ ಮತ್ತು ಜಪಾನ್‌ನ ಹಣದುಬ್ಬರ ದರದಲ್ಲಿರುವ ವ್ಯತ್ಯಾಸವನ್ನು ಗಮನಿಸಿದರೆ, ಸಾಲ ಮರುಪಾವತಿಯ 50 ವರ್ಷಗಳ ಅವಧಿಯಲ್ಲಿ ಭಾರತದ ರೂಪಾಯಿ ವಿರುದ್ಧ ಜಪಾನಿನ ಯೆನ್‌ನ ವೌಲ್ಯವರ್ಧಿಸಲಿದೆ, ಅಂದರೆ ಕಡಿಮೆ ಬಡ್ಡಿದರದ ಲಾಭ ಆ ಮೂಲಕ ಲಾಭವೇ ಆಗುವುದಿಲ್ಲ. ಉದಾಹರಣೆಗೆ, ಕಳೆದ ಹತ್ತು ವರ್ಷಗಳಲ್ಲಿ ಯೆನ್, ರೂಪಾಯಿ ವಿರುದ್ಧ ಶೇ.64ರಷ್ಟು ತನ್ನ ವೌಲ್ಯವನ್ನು ಹೆಚ್ಚಿಸಿಕೊಂಡಿದೆ. 2007ರ ಸೆಪ್ಟಂಬರ್ 17ರಂದು, ಯೆನ್-ರೂಪಾಯಿ ವಿನಿಮಯ ದರ 0.3517 ಆಗಿತ್ತು. ಆದರೆ 2017ರ ಸೆಪ್ಟಂಬರ್ 15ರಂದು ಇದೇ ದರ 0.5786ಕ್ಕೆ ಏರಿತ್ತು.

ಅಲ್ಲದೆ ಬುಲೆಟ್ ಟ್ರೈನ್ ಯೋಜನೆಗೆ ಬೇಕಾಗುವ ಎಲ್ಲ ಸಾಮಾನು ಸಲಕರಣೆಗಳನ್ನು, ಸಾಮಗ್ರಿಗಳನ್ನು ಜಪಾನೀ ವ್ಯಾಪಾರಿಗಳಿಂದಲೇ ತೆಗೆದುಕೊಳ್ಳಬೇಕಾಗಿರುವುದರಿಂದ, ಬಡ್ಡಿದರದಲ್ಲಿ ಆಗುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಈ ವ್ಯಾಪಾರಿಗಳು ಸಾಮಗ್ರಿಗಳಿಗೆ, ಅವುಗಳ ನಿಜವಾದ ಬೆಲೆಗಿಂತ ಹೆಚ್ಚಿನ ಬೆಲೆ ವಿಧಿಸಿ ಮಾರುವ ಸಾಧ್ಯತೆಯನ್ನು ತಳ್ಳಹಾಕುವಂತಿಲ್ಲ. ಜಪಾನೀ ಪೂರೈಕೆದಾರರು ಇಂತಹ ಒಂದು ತಂತ್ರಕ್ಕೆ ಮೊರೆಹೋಗಿದ್ದಾರೋ ಇಲ್ಲವೋ ಎಂದು ಕಂಡು ಹಿಡಿಯುವ ಯಾವ ದಾರಿಯೂ ಭಾರತಕ್ಕಿಲ್ಲ.

ಜಪಾನ್ 88,000 ಕೋಟಿ ರೂ. ಸಾಲ ನೀಡುವಾಗ ಭಾರತ ಉಳಿದ 22,000 ಕೋಟಿ ರೂ.ಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.

ಬುಲೆಟ್-ಟ್ರೈನ್, ಮುಂಬೈ-ಅಹ್ಮದಾಬಾದ್ ನಡುವಣ ಪ್ರಯಾಣದ ಅವಧಿಯನ್ನು (ಏಳು ಗಂಟೆಗಳಿಂದ ಸುಮಾರು ಎರಡು ಗಂಟೆಗಳಿಗೆ) ಕಡಿಮೆಗೊಳಿಸುವ ಹೊಸ ಭಾರತದ ಒಂದು ಸಂಕೇತವೆಂದು ಜಾಹೀರಾತು ಮಾಡಿರುವ ನರೇಂದ್ರ ಮೋದಿ ಸರಕಾರ, ಈ ಯೋಜನೆ ದೇಶದ ಸಂಬಂಧಿತ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ವೇಗವರ್ಧಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದೆ. ಆದರೆ ದೇಶದಲ್ಲಿ ಈಗ ಇರುವ ರೈಲು ಮೂಲ ಚೌಕಟ್ಟು ಅದರ ಭಾರ ತಡೆಯಲಾರದೆ ಮುಗ್ಗರಿಸುತ್ತಿರುವಾಗ ಹಳಿ ತಪ್ಪುವಿಕೆ, ರೈಲು ಅಪಘಾತಗಳು ಒಂದು ದೈನಂದಿನ ಘಟನೆಯಾಗುತ್ತ ಪ್ರಯಾಣಿಕರು ರೈಲು ಪ್ರಯಾಣ ಮಾಡುವುದಕ್ಕೇ ಹೆದರಿಕೊಳ್ಳುವ ಸ್ಥಿತಿ ಇರುವಾಗ, ಬುಲೆಟ್ ಟ್ರೈನ್‌ನಂತಹ ಭಾರೀ ಅದ್ಧ್ದೂರಿಯ, ವೈಭವೋಪೇತ ಮತ್ತು ದುಬಾರಿ ವೆಚ್ಚದ ಒಂದು ಯೋಜನೆಯನ್ನು ಸಮರ್ಥಿಸುವುದು ಕಷ್ಟ ಎನ್ನುತ್ತಾರೆ ಯೋಜನೆಯ ವಿಮರ್ಶಕರು.

2016-17ರಲ್ಲಿ ಟ್ರೈನ್ ಹಳಿ ತಪ್ಪುವಿಕೆಗಳಿಂದ ಸಂಭವಿಸಿದ 193 ಪ್ರಯಾಣಿಕರ ಸಾವುಗಳು, ಒಂದು ದಶಕದಲ್ಲಿ ಸಂಭವಿಸಿದ ಸಾವುಗಳಲ್ಲೇ ಗರಿಷ್ಠ ಸಂಖ್ಯೆಯ ಸಾವುಗಳು. ಆದರೆ 2017-18ರಲ್ಲಿ ನಾವು ಈ ಸಂಖ್ಯೆಯನ್ನೂ ದಾಟಬಹುದು ಅನ್ನಿಸುತ್ತದೆ.

ತಲಾ ಆದಾಯ ಆಕಾಂಕ್ಷೆ

1,709 ಡಾಲರ್‌ಗಳ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ತಲಾ ಆದಾಯ ಹೊಂದಿರುವ ಭಾರತವು ವಿಶ್ವಬ್ಯಾಂಕ್‌ನ ಜಾಗತಿಕ ರ್ಯಾಂಕಿಂಗ್‌ನಲ್ಲಿ 134ನೆ ಸ್ಥಾನದಲ್ಲಿದೆ. ಇದು ಬುಲೆಟ್ ಟ್ರೈನ್‌ಗಳನ್ನು ಪಡೆಯುವ ಆಕಾಂಕ್ಷೆ ಹೊಂದಿರುವ ಸಿಂಗಾಪುರ, ಮಲೇಶ್ಯಾ, ಇಂಡೋನೇಶ್ಯಾ ಮತ್ತು ಥಾಯ್ಲೆಂಡ್‌ನಂತಹ ದೇಶಗಳ ತಲಾ ಆದಾಯಕ್ಕಿಂತ ತುಂಬಾ ಕಡಿಮೆ. ಈ ಎಲ್ಲ ದೇಶಗಳಲ್ಲಿ ಭಾರತಕ್ಕೆ ಅತ್ಯಂತ ಸಮೀಪ ಬರುವ ಇಂಡೋನೇಶ್ಯಾದ ತಲಾ ಆದಾಯ ಕೂಡ, ಭಾರತದ ಎರಡುಪಟ್ಟುಗಿಂತಲೂ ಹೆಚ್ಚು, ಅಂದರೆ 3,570 ಡಾಲರ್‌ನಷ್ಟು ಇದೆ.

ಒಂದೇ ತೆರನಾದ ಏರಿಳಿತವಿಲ್ಲದ (ಸಸ್‌ಟೈನಬಲ್) ಆರ್ಥಿಕ ಬೆಳವಣಿಗೆಗೆ ಅತ್ಯಂತ ಮುಖ್ಯವಾದ ದೇಶದ ಆರೋಗ್ಯ ಸೇವೆ ಮತ್ತು ಶಿಕ್ಷಣದ ಮೂಲ ಚೌಕಟ್ಟಿನ ಮೇಲೆ, ಈ ಎರಡು ರಂಗಗಳಲ್ಲಿ ಏರುತ್ತಿರುವ ಬೇಡಿಕೆಯನ್ನು ಪೂರೈಸಲು, ದೇಶವು ಭಾರೀ ಬೃಹತ್ ಮಟ್ಟದ ಹಣ ಹೂಡಿಕೆ ಮಾಡುವ ಆವಶ್ಯಕತೆ ಇದೆ. ವಿಶ್ವಬ್ಯಾಂಕ್‌ನ ಅಂದಾಜುಗಳ ಪ್ರಕಾರ, ಭಾರತದ ತಲಾ ಆರೋಗ್ಯ ಸೇವಾ ವೆಚ್ಚ 60 ಡಾಲರ್. ಇತರ ಬ್ರಿಕ್ಸ್ ದೇಶಗಳಾದ ಚೀನಾ (300 ಡಾಲರ್) ಮತ್ತು ಬ್ರೆಝಿಲ್ (1,000 ಡಾಲರ್)ಗಳಿಗೆ ಹೋಲಿಸಿದರೆ ಈ 60 ಡಾಲರ್ ತುಂಬಾ ಕಡಿಮೆ ಮೊತ್ತವಾಗಿದೆ. ಜಿಡಿಪಿಯ ಪರಿಭಾಷೆಯಲ್ಲಿ ಹೇಳುವುದಾದರೆ, ನಮ್ಮ ದೇಶವು ಆರೋಗ್ಯ ಸೇವೆಗಳ ಮೇಲೆ ಖರ್ಚು ಮಾಡುತ್ತಿರುವ ಸಾರ್ವಜನಿಕ ವೆಚ್ಚ ಜಿಡಿಪಿಯ ಕೇವಲ ಶೇ.1.2 ಎಂದು ಅಂದಾಜಿಸಲಾಗಿದೆ.

ಶಿಕ್ಷಣಕ್ಕಾಗಿ ಭಾರತವು ವೆಚ್ಚ ಮಾಡುತ್ತಿರುವ ಮೊತ್ತವು 1999ರಲ್ಲಿ ಶೇ.4.4 ಇದ್ದದ್ದು 2017-18ರ ಬಜೆಟ್‌ನಲ್ಲಿ ಶೇ.3.71ಕ್ಕೆ ಇಳಿದಿದೆ. ಪರಿಣಾಮವಾಗಿ, ಮಕ್ಕಳ ಶಿಕ್ಷಣ ಗುಣಮಟ್ಟದಲ್ಲಿ ಸುಧಾರಣೆಯಾಗುವ ಅವಕಾಶಗಳು ಕಡಿಮೆಯಾಗಿವೆ.

ಕೊಠಾರಿ ಶಿಕ್ಷಣ ಆಯೋಗವು ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಜಿಡಿಪಿಯ ಶೇ.6ರಷ್ಟು ಮೊತ್ತವನ್ನು ತೆಗದಿರಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ ಸರಕಾರವು ಈ ರಂಗಗಳಿಗೆ ಮಂಜೂರು ಮಾಡುವ ಮೊತ್ತವನ್ನು ಏರಿಸುವುದಕ್ಕೆ ಬದಲಾಗಿ ಬುಲೆಟ್ ಟ್ರೈನ್‌ಗಳ ಮೇಲೆ ಬೇಕಾಬಿಟ್ಟಿಯಾಗಿ ಭಾರೀ ಮೊತ್ತದ ಹಣವನ್ನು ವೆಚ್ಚ ಮಾಡಲು ಹೊರಟಿದೆ.

ಕೃಪೆ: thewire.in

Writer - ನೂರ್ ಅಹಮದ್

contributor

Editor - ನೂರ್ ಅಹಮದ್

contributor

Similar News

ಜಗದಗಲ
ಜಗ ದಗಲ