ಹ್ಯಾಟ್ರಿಕ್ ಮುನ್ನ ಧೋನಿ ಸಲಹೆ ಪಡೆದಿದ್ದ ಕುಲ್‌ದೀಪ್‌ ಯಾದವ್

Update: 2017-09-22 18:37 GMT

ಕೋಲ್ಕತಾ , ಸೆ.22: ಹ್ಯಾಟ್ರಿಕ್ ಗಳಿಸಲು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನೀಡಿದ್ದ ಸಲಹೆ ಸ್ಫೂರ್ತಿ ನೀಡಿತ್ತು ಎಂದು ಆಸ್ಟ್ರೇಲಿಯ ವಿರುದ್ಧ ಕೋಲ್ಕತದಲ್ಲಿ ಗುರುವಾರ ನಡೆದ ಎರಡನೆ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಉಡಾಯಿಸಿ ತಂಡದ ಗೆಲುವಿಗೆ ನೆರವಾದ ಬೌಲರ್ ಕುಲ್‌ದೀಪ್ ಯಾದವ್ ತಿಳಿಸಿದ್ದಾರೆ.

 ಸತತ ಎರಡು ವಿಕೆಟ್ ಉಡಾಯಿಸಿದ ಬಳಿಕ ಮಹೇಂದ್ರ ಸಿಂಗ್ ಅವರನ್ನು ಭೇಟಿಯಾಗಿ ಮುಂದೆ ಯಾವ ರೀತಿ ವಿಕೆಟ್ ಉಡಾಯಿಸಬೇಕೆಂದು ಕೇಳಿದೆ. ಅದಕ್ಕೆ ಅವರು ನಿಮಗೆ ಯಾವ ರೀತಿ ಬೌಲಿಂಗ್ ನಡೆಸಲು ಬಯಸಿರುವಿರಾ ಆ ರೀತಿ ಬೌಲಿಂಗ್ ನಡೆಸಿ ’’ ಎಂದು ಸಲಹೆ ನೀಡಿರುವುದಾಗಿ ಕುಲ್‌ದೀಪ್ ಹೇಳಿದ್ದಾರೆ.

ಕುಲ್‌ದೀಪ್ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಭಾರತದ ಮೂರನೆ ಬೌಲರ್ ಎನಿಸಿಕೊಂಡಿದ್ದಾರೆ.

ಸತತ ಮೂರು ಎಸೆತಗಳಲ್ಲಿ ಕುಲ್‌ದೀಪ್ ಯಾದವ್ ಅವರು (54ಕ್ಕೆ 3) ಮೂರು ವಿಕೆಟ್ ಪಡೆದಿದ್ದರು. ಮ್ಯಾಥ್ಯೂ ವೇಡ್, ಅಸ್ಟನ್ ಅಗರ್ ಮತ್ತು ಪ್ಯಾಟ್ ಕಮಿನ್ಸ್ ಅವರಿಗೆ 33ನೆ ಓವರ್‌ನಲ್ಲಿ ಕುಲ್‌ದೀಪ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದ್ದರು.

 ಈ ಮೊದಲು ಭಾರತದ ಚೇತನ್ ಶರ್ಮಾ 1987ರಲ್ಲಿ ಮತ್ತು ಕಪಿಲ್ ದೇವ್ 1991ರಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಕಪಿಲ್ ದೇವ್ ಈಡನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ್ದರು. ಅದೇ ಕ್ರೀಡಾಂಗಣದಲ್ಲಿ ಕುಲ್‌ದೀಪ್ ಈ ಸಾಧನೆ ಮಾಡಿದ್ದಾರೆ.

ಕುಲ್‌ದೀಪ್ ತಮಗೆ ಈ ಸಾಧನೆಗೆ ಬೆಂಬಲ ನೀಡಿದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕುಲ್‌ದೀಪ್ ಯಾದವ್ ಅವರು 2014ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಭಾರತದ ಪರ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ನೆರವಿನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 50 ರನ್‌ಗಳ ಗೆಲುವು ದಾಖಲಿಸಿತ್ತು. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು.

‘‘ ಇದು ನನಗೆ ಸ್ಮರಣೀಯ ಪಂದ್ಯವಾಗಿದೆ. ಹ್ಯಾಟ್ರಿಕ್ ವಿಕೆಟ್ ಪಡೆದ ಹಿನ್ನೆಲೆಯಲ್ಲಿ ಪಂದ್ಯದ ಗತಿ ಬದಲಾಯಿತು’’ ಎಂದು ಕುಲ್‌ದೀಪ್ ಹೇಳಿದ್ದಾರೆ. ಅಷ್ಟರ ತನಕ ಅವರು ಎಸೆದಿದ್ದ ಐದು ಓವರ್‌ಗಳಲ್ಲಿ ಅವರು ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡಿದ್ದರು.

 ‘‘ ಮೊದಲ ಐದು ಓವರ್‌ಗಳಲ್ಲಿ ನನಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಆರನೆ ಓವರ್ ನನಗೆ ಯಶಸ್ಸು ತಂದು ಕೊಟ್ಟಿತು. ಐತಿಹಾಸಿಕ ಸಾಧನೆ ಮಾಡಲು ಸಾಧ್ಯವಾಯಿತು’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕುಲ್‌ದೀಪ್ ಅವರ ಓವರೊಂದರಲ್ಲಿ ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಹ್ಯಾಟ್ರಿಕ್ ಸಿಕ್ಸರ್ ಮತ್ತು 1 ಬೌಂಡರಿ ಇರುವ 22 ರನ್ ಸಿಡಿಸಿದ್ದರು. ಆ ಪಂದ್ಯದಲ್ಲಿ ಕುಲ್‌ದೀಪ್ 4 ಓವರ್‌ಗಳಲ್ಲಿ 2 ವಿಕೆಟ್ ಪಡೆದಿದ್ದರೂ, 33 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡಿದ್ದರು.

     ಸ್ಪಿನ್ನರ್‌ಗಳು ಭಾರತದ ಗೆಲುವಿಗೆ ನೆರವಾದರು: ಸ್ಪಿನ್ನರ್‌ಗಳು ಮತ್ತೊಮ್ಮೆ ಭಾರತದ ಗೆಲುವಿಗೆ ನೆರವಾಗಿದ್ದಾರೆ. ಭಾರತ ಮೊದಲು ಬ್ಯಾಟಿಂಗ್ ನಡೆಸಿ 252ಕ್ಕೆ ಇನಿಂಗ್ಸ್ ಮುಗಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಕ್ಕೆ ಕುಲ್‌ದೀಪ್(54ಕ್ಕೆ 3) ಮತ್ತು ಮತ್ತು ಯುಜುವೇಂದ್ರ ಚಾಹಲ್ (34ಕ್ಕೆ 2) ಪ್ರಹಾರ ವನ್ನು ಎದುರಿಸಲು ಸಾಧ್ಯವಾಗದೆ 202 ರನ್‌ಗಳಿಗೆ ಆಲೌಟಾಗಿತ್ತು.

ವೇಗಿ ಭುವನೇಶ್ವರ ಕುಮಾರ್ ಅವರು ಆರಂಭಿಕ ದಾಂಡಿಗರಾದ ಹಿಲ್ಟನ್ ಕಾರ್ಟ್‌ರೈಟ್ (1)ಮತ್ತು ಡೇವಿಡ್ ವಾರ್ನರ್ (1) ಅವರ ವಿಕೆಟ್‌ನ್ನು ಬೇಗನೆ ಉರುಳಿಸಿದ್ದರು. ಬಳಿಕ ಕೊನೆಯಲ್ಲಿ ರಿಚರ್ಡ್ಸನ್(0) ವಿಕೆಟ್ ಉಡಾಯಿಸುವುದರೊಂದಿಗೆ ಆಸ್ಟ್ರೇಲಿಯದ ಇನಿಂಗ್ಸ್‌ನ್ನು ಮುಗಿಸಿದ್ದರು. ಮೂರನೆ ವಿಕೆಟ್‌ಗೆ ನಾಯಕ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ 76 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಆಧರಿಸಿದ್ದರು. ಇವರ ಜೊತೆಯಾಟವನ್ನು ಚಾಹಲ್ ಮುರಿದಿದ್ದರು. ಹೆಡ್ 39 ರನ್ ಗಳಿಸಿದ್ದರು. ಬಳಿಕ ಮ್ಯಾಕ್ಸ್‌ವೆಲ್(14) ವಿಕೆಟ್ ಪಡೆದಿದ್ದರು.

     100ನೆ ಏಕದಿನ ಪಂದ್ಯವನ್ನಾಡಿದ್ದ ನಾಯಕ ಸ್ಮಿತ್ ಅರ್ಧಶತಕ ದಾಖಲಿಸಿ ಗೆಲುವಿಗೆ ಹೋರಾಟ ನಡೆಸಿದ್ದರು.ಆದರೆ ಪಾಂಡ್ಯ ಅವರು ಸ್ಮಿತ್ ಬ್ಯಾಟಿಂಗ್‌ನ್ನು 59ರನ್‌ಗಳಿಗೆ ನಿಯಂತ್ರಿಸಿದ್ದರು. ಸ್ಮಿತ್ 76 ಎಸೆತಗಳಲ್ಲಿ 8 ಬೌಂಡರಿ ಬಾರಿಸಿದ್ದರು. ಮಾರ್ಕೂಸ್ ಸ್ಟೋನಿಸ್ ಔಟಾಗದೆ 62 ರನ್(65ಎ, 6ಬೌ,3ಸಿ) ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದರೂ ಅವರ ಪ್ರಯತ್ನ ಫಲ ನೀಡಲಿಲ್ಲ. 43.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟಾಯಿತು. ಸ್ಮಿತ್ ಔಟಾದ ಬಳಿಕ ಕುಲ್‌ದೀಪ್ ಯಾದವ್ , ಪಾಂಡ್ಯ ಮತ್ತು ಕುಮಾರ್ ಆಸ್ಟ್ರೇಲಿಯದ ಉಳಿದ ವಿಕೆಟ್‌ಗಳನ್ನು ಉರುಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News