ಶ್ರೀಕಾಂತ್-ಪ್ರಣಯ್ ಗೆ ಸೋಲು; ಪ್ರಣವ್ -ಸಿಕ್ಕಿ ಸೆಮಿಫೆನಲ್ ಗೆ

Update: 2017-09-22 18:44 GMT

ಟೋಕಿಯೊ,ಸೆ.22: ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಕೆ.ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಸೋತು ನಿರ್ಗಮಿಸಿದ್ದಾರೆ.

ಇದೇ ವೇಳೆ ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

    ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯ ಚಾಂಪಿಯನ್ ಕೆ.ಶ್ರೀಕಾಂತ್ ಅವರು ನೂತನ ವಿಶ್ವ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್‌ಸನ್ ವಿರುದ್ಧ ಸೋಲು ಅನುಭವಿಸಿದರು. ಶ್ರೀಕಾಂತ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ವಿಕ್ಸರ್ ವಿರುದ್ಧ 17-21, 17-21 ಅಂತರದಲ್ಲಿ ಸೋಲು ಅನುಭವಿಸಿದರು. ಕ್ವಾರ್ಟರ್ ಫೈನಲ್ ಹಣಾಹಣಿ 40 ನಿಮಿಷಗಳಲ್ಲಿ ಕೊನೆಗೊಂಡಿತು. ಈ ಗೆಲುವಿನೊಂದಿಗೆ ವಿಕ್ಟರ್ ಅವರು ಶ್ರೀಕಾಂತ್ ವಿರುದ್ಧ ಈ ವರೆಗೆ ಆಡಿದ್ದ 5 ಪಂದ್ಯಗಳ ಪೈಕಿ 3ನೆ ಗೆಲುವು ದಾಖಲಿಸಿದರು. 2 ಬಾರಿ ಅವರು ಸೋಲು ಅನುಭವಿಸಿದ್ದಾರೆ. ಇದೇ ವೇಳೆ ಯುಎಸ್ ಓಪನ್ ಚಾಂಪಿಯನ್ ಎಚ್.ಎಸ್.ಪ್ರಣಯ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಎರಡನೆ ಶ್ರೇಯಾಂಕದ ಶಿ ಯೂಕಿ ವಿರುದ್ಧ 15-21, 14-21 ಅಂತರದಲ್ಲಿ ಸೋಲು ಅನುಭವಿಸಿದರು. ಸೈಯದ್ ಮೋದಿ ಗ್ರಾಂಡ್ ಪ್ರಿ ಗೋಲ್ಡ್ ಚಾಂಪಿಯನ್ ಪ್ರಣವ್ ಮತ್ತು ಸಿಕ್ಕಿ ರೆಡ್ಡಿ ಅವರು ಮಿಶ್ರ ಡಬಲ್ಸ್‌ನಲ್ಲಿ ಕೊರಿಯಾದ ಸಿಯಾಂಗ್ ಜಾಯೆ ಸಿಯೊ ಮತ್ತು ಕಿಮ್ ಹಾ ನಾ ವಿರುದ್ಧ 21-18, 9-21, 21-19 ಅಂತರದಲ್ಲಿ ಜಯ ಗಳಿಸಿದರು. ಮುಂದಿನ ಸುತ್ತಿನಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಅವರು ಜಪಾನ್‌ನ ತಾಕುರೊ ಹೊಕಿ ಮತ್ತು ಸಯಕಾ ಹಿರಾಟೊ ವಿರುದ್ಧ ಎದುರಿಸಲಿದ್ದಾರೆ.

ಶ್ರೀಕಾಂತ್ ವಿರುದ್ಧ ವಿಕ್ಟರ್ ಅವರು ಚೆನ್ನಾಗಿ ಆಡಿ ಜಯ ಗಳಿಸಿದರು. ಆದರೆ ಶ್ರೀಕಾಂತ್ ಅವರ ಇಟ್ಟ ತಪ್ಪು ಹೆಜ್ಜೆಗಳು ಅವರನ್ನು ಸೋಲಿನ ದವಡೆಗೆ ನೂಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News