ಗೋಸಂರಕ್ಷಕರಿಗೆ ಕಡಿವಾಣ, ಹಿಂಸೆಗೆ ಪರಿಹಾರ: ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ತಾಕೀತು

Update: 2017-09-23 03:29 GMT

ಹೊಸದಿಲ್ಲಿ, ಸೆ. 23: ಗೋರಕ್ಷಕರ ಹಿಂಸಾಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಹಾಗೂ ಗೋಸಂರಕ್ಷರಿಂದ ಹಿಂಸೆಗೀಡಾದ ಮತ್ತು ಮೃತಪಟ್ಟ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ಸ್ವಯಂಘೋಷಿತ ಗೋರಕ್ಷಕ ಗುಂಪುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನೀಡಿದ ಸೂಚನೆಯ ಅನುಷ್ಠಾನದ ಬಗ್ಗೆ ವರದಿ ಸಲ್ಲಿಸುವಂತೆಯೂ 22 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.

"ಈ ರಾಜ್ಯಗಳು ಗೋಸಂಬಂಧಿ ಹಿಂಸಾಚಾರಗಳಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಂಬಂಧ ಸಮಗ್ರ ಕಾರ್ಯಯೋಜನೆಯನ್ನು ಸಿದ್ಧಪಡಿಸಬೇಕು" ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಕೆ.ಮಿಶ್ರ ಆವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ.

ಜೂನ್ 23ರಂದು ದೆಹಲಿ ಬಳಿ ಗೋಸಂರಕ್ಷಕರ ಹಿಂಸೆಗೆ ಬಲಿಯಾದ 15 ವರ್ಷದ ಜುನೈದ್ ಎಂಬ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭ ವಕೀಲ ಇಂದಿರಾ ಜೈಸಿಂಗ್ ಅವರ ಮನವಿಗೆ ನ್ಯಾಯಪೀಠ ಸ್ಪಂದಿಸಿ, ಈ ಆದೇಶ ನೀಡಿತು.

ಗೋಸಂರಕ್ಷಕ ಗುಂಪುಗಳ ಹಿಂಸೆಗೆ ಕಡಿವಾಣ ಹಾಕಲು ಸೂಚಿಸುವಂತೆ ಕೋರಿ ಮಹಾತ್ಮಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ಮಾಡುತ್ತಿದೆ. ಗೋಮಾಂಸ ಕಳ್ಳಸಾಗಾಣಿಕೆ ಹಾಗೂ ಭಕ್ಷಣೆಯ ಶಂಕೆಯಿಂದ ಇಂಥ ಹಲವಾರು ಹಿಂಸಾಕೃತ್ಯಗಳನ್ನು ಗೋಸಂರಕ್ಷಣೆ ಹೆಸರಿನಲ್ಲಿ ಮಾಡಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News