ನ್ಯಾಯಾಂಗ ವಿರುದ್ಧ ಕಾನೂನು ಸಚಿವರ ಕಿಡಿ!

Update: 2017-09-23 03:38 GMT

ಹೊಸದಿಲ್ಲಿ, ಸೆ. 23: ಅಧಿಕಾರ ನಡೆಸುವುದನ್ನು ನಮಗೆ ಬಿಟ್ಟುಬಿಡಿ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ನ್ಯಾಯಾಂಗವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜನರು ಆಡಳಿತ ನಡೆಸಲು ಯಾರನ್ನು ಚುನಾಯಿಸಿ ಕಳುಹಿಸಿದ್ದಾರೆಯೋ ಅವರಿಗೆ ಆಡಳಿತ ನಡೆಸುವ ಹೊಣೆಯನ್ನು ಬಿಟ್ಟುಬಿಡಿ" ಎಂದು ಹೇಳಿದರು.

"ನ್ಯಾಯಾಂಗ ಒಂದು ಕಾನೂನನ್ನು ಸಂವಿಧಾನ ಬಾಹಿರ ಎಂದು ಹೇಳಿ, ತಿರಸ್ಕರಿಸಬಹುದು. ಆದರೆ ಆಡಳಿತ ಹಾಗೂ ಕಾನೂನು ರೂಪಿಸುವ ಕೆಲಸವನ್ನು ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಬಿಟ್ಟುಬಿಡಬೇಕು" ಎಂದು ಅಭಿಪ್ರಾಯಪಟ್ಟರು.

"ಹಲವು ನ್ಯಾಯಾಲಯಗಳು ಆಡಳಿತದ ಕಾರ್ಯವ್ಯಾಪ್ತಿಯನ್ನು ಅತಿಕ್ರಮಿಸಿಕೊಳ್ಳುತ್ತಿವೆ. ಈ ಪ್ರವೃತ್ತಿಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಅವರ ಹಕ್ಕುಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕಿದೆ’ ಎಂದು ಹೇಳಿದರು.

ಕಾರ್ಯಾಂಗ ಮತ್ತು ನ್ಯಾಯಾಂಗ ನಡುವಿನ ತಿಕ್ಕಾಟ ಮುಂದುವರಿದಿದ್ದು, ಸುಪ್ರೀಂಕೋರ್ಟ್ ಕೊಲಾಜಿಯಂ, ನ್ಯಾಯಾಧೀಶರ ಹುದ್ದೆಗೆ ಶಿಫಾರಸ್ಸು ಮಾಡುವ ಹೆಸರನ್ನು ರಾಷ್ಟ್ರೀಯ ಭದ್ರತೆಯ ಕಾರಣದಿಂದ ತಿರಸ್ಕರಿಸುವ ಹಕ್ಕು ಸರ್ಕಾರಕ್ಕಿದೆ ಎನ್ನುವುದು ಕೇಂದ್ರದ ವಾದವಾದರೆ, ಅದಕ್ಕೆ ಕಾರಣಗಳನ್ನು ಸರ್ಕಾರ ನೀಡಬೇಕು ಎನ್ನುವುದು ನ್ಯಾಯಾಂಗದ ಪ್ರತಿಪಾದನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News