ಮಧ್ಯ ಪ್ರದೇಶದ ಎಲ್ಲಾ ಮದರಸಗಳು ಪ್ರತಿ ದಿನ ರಾಷ್ಟ್ರಧ್ವಜ ಹಾರಿಸಬೇಕು: ಶಿಕ್ಷಣ ಸಚಿವ ವಿಜಯ್ ಶಾ

Update: 2017-09-23 07:18 GMT

ಭೋಪಾಲ್, ಸೆ. 23: ಮಧ್ಯ ಪ್ರದೇಶದ ಎಲ್ಲಾ ಮದರಸಗಳು ಸದ್ಯದಲ್ಲಿಯೇ ಪ್ರತಿದಿನ ರಾಷ್ಟ್ರಧ್ವಜ ಹಾರಿಸುವ ಪದ್ಧತಿಯನ್ನು ಜಾರಿಗೊಳಿಸ ಬೇಕು ಎಂದು ರಾಜ್ಯ ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ಮದರಸ ಶಿಕ್ಷಾ ಸಮ್ಮೇಳನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಆದರೆ ವಿಜಯ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆಯಲ್ಲದೆ ನಾಗ್ಪುರದಲ್ಲಿನ ಆರೆಸ್ಸೆಸ್ ಮುಖ್ಯ ಕಾರ್ಯಾಲಯದಲ್ಲಿ ಹಾಗೂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರತಿ ದಿನ ರಾಷ್ಟ್ರಧ್ವಜ ಅರಳಿಸಿದ ನಂತರವಷ್ಟೇ ಮದರಸಗಳಿಗೆ ರಾಷ್ಟ್ರಧ್ವಜ ಹಾರಿಸುವ ಆದೇಶ ನೀಡಬೇಕೆಂದು ಅದು ಹೇಳಿದೆ.

‘‘ಸರಕಾರಿ ಶಾಲೆಗಳಿಗೂ ಇಂತಹ ಆದೇಶವಿಲ್ಲದೇ ಇರುವಾಗ ಮದರಸಗಳಿಗೆ ಮಾತ್ರವೇಕೆ ?,’’ ಎಂದು ಮಧ್ಯ ಪ್ರದೇಶದ ಮುಸ್ಲಿಂ ವಿಕಾಸ ಪರಿಷದ್ ಅಧ್ಯಕ್ಷ ಮುಹಮ್ಮದ್ ಮಾಹಿರ್ ಕೂಡ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ‘‘ಸರಕಾರವೇಕೆ ಮುಸ್ಲಿಮರ ದೇಶಭಕ್ತಿಯನ್ನು ಸಾಬೀತು ಪಡಿಸಲು ಆಗಾಗ ಹೇಳುತ್ತಿದೆ ಎಂಬುದು ತಿಳಿಯದಾಗಿದೆ,’’ ಎಂದು ಅವರು ಹೇಳಿದ್ದಾರೆ.

‘‘ಮುಸ್ಲಿಮರೂ ಈ ದೇಶದ ನಾಗರಿಕರು. ಅವರು ಕೂಡ ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಮತ ಚಲಾಯಿಸುತ್ತಾರೆ, ತೆರಿಗೆ ಪಾವತಿಸುತ್ತಾರೆ. ಇತರ ನಾಗರಿಕರಂತೆಯೇ ಎಲ್ಲಾ ಕಾರ್ಯಗಳನ್ನು ಅವರೂ ನಿರ್ವಹಿಸುತ್ತಾರೆ. ಆದರೆ ಇಂತಹ ಆದೇಶಗಳು ಸಮಾಜವನ್ನು ವಿಭಜಿಸುತ್ತವೆ,’’ ಎಂದು ಅವರು ಆತಂಕ ವ್ಕಕ್ತಪಡಿಸಿದರು.

‘‘ರಾಷ್ಟ್ರಧ್ವಜದ ಕುರಿತಾದ ನಿಯಮಗಳನ್ನು ಸಂಸ್ಥೆಗಳಿಗೆ ಮನವರಿಕೆ ಮಾಡಿ ನಂತರ ಆದೇಶವನ್ನು ಜಾರಿಗೊಳಿಸಲಾಗುವುದು. ಆದರೆ ಯಾವುದೇ ದಿನಾಂಕ ನಿಗದಿಯಾಗಿಲ್ಲ,’’ ಎಂದು ಮದರಸ ಮಂಡಳಿ ಅಧ್ಯಕ್ಷ ಸೈಯದ್ ಇಮಾದುದ್ದೀನ್ ಹೇಳಿದ್ದಾರೆ.

ಈ ಹಿಂದೆ ರಾಜ್ಯದ ಮದರಸ ಮಂಡಳಿ ತನ್ನ ಅಧೀನದಲ್ಲಿ ಬರುವ ಎಲ್ಲಾ ಸಂಸ್ಥೆಗಳಿಗೂ ಸ್ವಾತಂತ್ರ್ಯ ದಿನವನ್ನು ಆಚರಿಸಲು ಆದೇಶ ನೀಡಿತ್ತಲ್ಲದೆ ಆಚರಣೆಯ ಫೋಟೋಗಳನ್ನೂ ಕಳುಹಿಸುವಂತೆ ಹೇಳಿತ್ತು. ರಾಜ್ಯದಲ್ಲಿ ಒಟ್ಟು 2,575 ಮದರಸಗಳಿದ್ದು ಇವುಗಳಲ್ಲಿ 2.88 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News