ಸರಕಾರದ ಹಂಗಿಲ್ಲದೆ ಬದುಕು ಹಸಿರಾಗಿಸಿದವರು

Update: 2017-09-24 18:44 GMT

ಸಹ್ಯಾದ್ರಿ ಪರ್ವತಶ್ರೇಣಿಯ ತಪ್ಪಲಲ್ಲಿರುವ ಪೊಯಿ ಗ್ರಾಮದಿಂದ ಕೆಲವೇ ಕಿ.ಮೀ. ದೂರದಲ್ಲಿ ಸಾರ್ವಕಾಲಿಕವಾದ ಆದರೆ ಸಣ್ಣ ದಾದ ಬಾರ್ವಿ ನದಿ ಹರಿಯುತ್ತಿದೆ. ಈ ನದಿಯು ತುಂಬಾ ಸಣ್ಣದಾ ದರೂ, ಅದು ಯಾವತ್ತೂ ಬತ್ತಿದ್ದೇ ಇಲ್ಲ.

ನಿಮಗಾಗಿ ದೇಶ ಏನು ಮಾಡಿದೆಯೆಂದು ಕೇಳಬೇಡಿ, ದೇಶಕ್ಕಾಗಿ ನೀವು ಏನು ಮಾಡಿದ್ದೀರೆಂದು ಕೇಳಿ.
-ಜಾನ್ ಕೆನಡಿ

ಈ ಪ್ರಸಿದ್ಧ ವಾಕ್ಯವನ್ನು ಹೇಳಿದ 40 ವರ್ಷಗಳ ಬಳಿಕ. ಭಾರತದ ಮಹಾರಾಷ್ಟ್ರ ರಾಜ್ಯದ ಪುಟ್ಟ ಹಳ್ಳಿಯಾದ ಪೊಯಿ ಗ್ರಾಮದ ಜನತೆ ಈ ಸವಾಲ ನ್ನು ಸ್ವೀಕರಿಸಿಯಾರೆಂಬುದನ್ನು ಬಹುಶಃ ಆಗ ಕೆನಡಿ ಭಾವಿಸಿರಲಾರರು.

ಈ ಶತಮಾನದ ಆರಂಭದಲ್ಲಿ ಪೊಯಿ ಗ್ರಾಮದ 180 ಕುಟುಂಬ ಗಳ 825 ಮಂದಿ, ತಾವು ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆ ಯಿಂದ ಹೊರಬರಲು ಸರಕಾರ ತಮಗೆ ನೆರವಾಗುವುದನ್ನು ಕಾಯುತ್ತಾ ಕೂರಬಾರದೆಂದು ನಿರ್ಧರಿಸಿಬಿಟ್ಟಿದ್ದರು.

ಕೃಷಿ ಪೊಯಿ ಗ್ರಾಮದ ಜನತೆಯ ಪ್ರಧಾನ ವೃತ್ತಿ. ಇಲ್ಲಿನ ರೈತರಿಗೆ ಮಳೆಗಾಲದಲ್ಲಿ ಮಾತ್ರವೇ ಕೈತುಂಬಾ ಕೆಲಸವಿರುತ್ತದೆ, ಆದರೆ ಕೊಯ್ಲು ಮುಗಿದ ಬಳಿಕ ಅವರಿಗೆ ಹೆಚ್ಚೇನೂ ಕೆಲಸವಿರುವುದಿಲ್ಲ. ಆಗ ಪುರುಷರು ಬೀದಿಗಳಲ್ಲಿ ಅಲೆದಾಡುತ್ತಿದ್ದರೆ, ಮಹಿಳೆಯರು ಮನೆಗೆಲಸದಲ್ಲಿ ಮಗ್ನರಾಗಿರುತ್ತಿದ್ದರು. ವಿಶೇಷವಾಗಿ ಚಳಿಗಾಲದ ತಿಂಗಳು ಗಳಲ್ಲಂತೂ ಆದಾಯವಿಲ್ಲದೆ ಇಲ್ಲಿನ ಗ್ರಾಮಸ್ಥರ ಪರಿಸ್ಥಿತಿ ಅತ್ಯಂತ ದಯನೀಯವಾಗಿತ್ತು.

ಪ್ರತೀ ವರ್ಷವೂ ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತಿತ್ತು. ಹೀಗಾಗಿ ಗ್ರಾಮದ ನಿವಾಸಿ,ಹರಿಶ್ಚಂದ್ರ ಸೊಂಬ್ರೆ ಅವರು ಚಳಿಗಾಲ ದಲ್ಲಿ ಗ್ರಾಮಸ್ಥರಿಗೆ ಉದ್ಯೋಗವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಮಾರ್ಗವೊಂದನ್ನು ಕಂಡುಕೊಂಡರು.

‘‘ಮಹಾರಾಷ್ಟ್ರದ ಇತರ ಭಾಗಗಳಲ್ಲಿ, ರೈತರು ವರ್ಷಕ್ಕೆ ಒಂದಕ್ಕಿಂತಲೂ ಅಧಿಕ ಬೆಳೆ ಬೆಳೆಯುತ್ತಾರೆ. ಇದರಿಂದ ಅವರಿಗೆ ಹೆಚ್ಚುವರಿ ಆದಾಯ ದೊರೆಯುವುದಲ್ಲದೆ, ವರ್ಷವಿಡೀ ಕೆಲಸವೂ ಸಿಗುತ್ತದೆ. ಆದರೆ ಪೊಯಿ ಗ್ರಾಮದಲ್ಲಿ ಇದಕ್ಕಿಂತ ಭಿನ್ನವಾದ ಪರಿಸ್ಥಿತಿಯಿತ್ತು’ ಎಂದು ಮಹಾರಾಷ್ಟ್ರ ಅರಣ್ಯ ಇಲಾಖೆಯ ಉದ್ಯೋಗಿಯಾಗಿದ್ದು, ಈಗ ನಿವೃತ್ತರಾಗಿರುವ ಹರಿಶ್ಚಂದ್ರ ಸೊಂಬ್ರೆ ಹೇಳುತ್ತಾರೆ.

ಸಹ್ಯಾದ್ರಿ ಪರ್ವತಶ್ರೇಣಿಯ ತಪ್ಪಲಲ್ಲಿರುವ ಪೊಯಿ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸಾರ್ವಕಾಲಿಕವಾದ ಆದರೆ ಸಣ್ಣದಾದ ಬಾರ್ವಿ ನದಿ ಹರಿಯುತ್ತಿದೆ. ಈ ನದಿಯು ತುಂಬಾ ಸಣ್ಣದಾ ದರೂ, ಅದು ಯಾವತ್ತೂ ಬತ್ತಿದ್ದೇ ಇಲ್ಲ.

‘‘ಇದು ಕೊಂಕಣ ಪ್ರಾಂತವಾಗಿದೆ. ನಮ್ಮ ನದಿಗಳಲ್ಲಿ ಹೇರಳ ನೀರಿದೆ ಹಾಗೂ ಮುಂಗಾರಿನಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಿಂದ ಅವು ಮತ್ತೆ ತುಂಬುತ್ತವೆ. ಚಳಿಗಾಲದಲ್ಲಿ ನಮ್ಮ ಗ್ರಾಮಕ್ಕೆ ನದಿ ನೀರನ್ನು ತರುವ ಮೂಲಕ ಈ ನೈಸರ್ಗಿಕ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದೆವು’’ ಎಂದು ಗ್ರಾಮದ ನಿವಾಸಿ, ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ಬಿಎಡ್ ಪದವೀಧರರಾದ ಗುರುನಾಥ್ ಸಾಂಬ್ರೆ ಹೇಳುತ್ತಾರೆ.

ಗುರುನಾಥ್‌ರ ಶೈಕ್ಷಣಿಕ ಅರ್ಹತೆ ಹಾಗೂ ಅವರ ಚಿಕ್ಕಪ್ಪ ಹರಿಶ್ಚಂದ್ರರ ಬೆಂಬಲದಿಂದಾಗಿ ಅವರ ನಿರ್ಧಾರದ ಬಗ್ಗೆ ಗ್ರಾಮಸ್ಥರಿಗೆ ಸುಲಭವಾಗಿ ಭರವಸೆ ಮೂಡಿತು. ಪೊಯಿ ನದಿಯೊಂದಿಗೆ ಸಂಪರ್ಕಿಸುವ ಎರಡು ಕಿ.ಮೀ. ವಿಸ್ತೀರ್ಣದ ಪೈಪ್‌ಲೈನ್ ಅಳವಡಿಸುವ ಗುರುನಾಥ್ ಅವರ ಯೋಚನೆಯನ್ನು ಗ್ರಾಮದ ಪ್ರತಿಯೊಬ್ಬರೂ ಬೆಂಬಲಿಸಿದರು.

‘‘ದೈಹಿಕವಾಗಿ ಸಶಕ್ತನಾಗಿರುವ ಪ್ರತಿಯೊಬ್ಬ ಗ್ರಾಮಸ್ಥನೂ ಪೈಪ್ ಲೈನ್ ಅಳವಡಿಸಲು ಉದ್ದನೆಯ ಕಂದಕವನ್ನು ತೋಡುವ ಕಾರ್ಯ ದಲ್ಲಿ ಕೈಜೋಡಿಸಿದನು. ದಟ್ಟವಾದ ಕಾಡು ಹಾಗೂ ಬಂಡೆಕಲ್ಲಿನ ಪ್ರದೇಶವನ್ನು ಹಾದುಹೋಗುವ ಮೂರು ಇಂಚು ಅಗಲದ ಪೈಪ್, ಅಳವಡಿಸಲಾ ಯಿತು. ಈ ಕೆಲಸವನ್ನು ಪೂರ್ತಿಗೊಳಿಸಲು ನಾವು 30 ದಿನಗಳ ಕಾಲ ಕೆಲಸ ಮಾಡಿದ್ದೆವು’’ ಎಂದು ಗ್ರಾಮದ ರೈತ ನಾರಾಯಣ್ ಗುಧೆರೆ ಹೇಳುತ್ತಾರೆ.

ಕೇವಲ ಕೃಷ್ಯುತ್ಪನ್ನಗಳನ್ನು ಹಾಗೂ ಕೃಷಿ ಸಲಕರಣೆಗಳ ಮಾರಾಟದ ಅಂಗಡಿಯನ್ನು ನಡೆಸುತ್ತಿರುವ ಸುನೀಲ್ ಕುಮಾರ್ ಅವರು,‘‘ಇಂದು ನೀವು ಪೊಯಿ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಕಾರು, ಜೀಪ್ ಅಥವಾ ಬೈಕ್‌ನ್ನು ಕಾಣುವಿರಿ. ಕಳೆದ ದಶಕದಲ್ಲಿ ನಮ್ಮ ಗ್ರಾಮವು ವರ್ಷದಲ್ಲಿ ಎರಡು ಬೆಳೆಗಳನ್ನು ಕೊಯ್ಲು ಮಾಡುವ ಮೂಲಕ ಲಕ್ಷಾಂತರ ರೂ.ಗಳನ್ನು ಸಂಪಾದಿಸಿ, ಅಭ್ಯುದಯವನ್ನು ಕಂಡಿದೆ’’ ಎಂದು ಹೇಳುತ್ತಾರೆ.

ಆದರೆ ಸಾಕಷ್ಟು ಹಣವಿಲ್ಲದಿದ್ದಲ್ಲಿ, ಈ ಪೈಪ್ ಲೈನ್ ಯೋಜನೆಗೆ ಜೀವ ಬರುತ್ತಿರಲಿಲ್ಲ. ಹೀಗಾಗಿ ಅವರು ಪ್ರತಿಯೊಬ್ಬ ರೈತನಿಂದಲೂ ತಲಾ 2 ಸಾವಿರ ರೂ. ಸಂಗ್ರಹಿಸಲು ನಿರ್ಧರಿಸಿದ್ದರು. ಇದರಿಂದಾಗಿ 2000ನೆ ಇಸವಿಯಲ್ಲಿ ಅವರಿಗೆ 50 ಸಾವಿರ ರೂ. ನಿಧಿ ಸಂಗ್ರಹವಾಯಿತು. ಆದರೆ ಸಂಗ್ರಹವಾದ ಹಣವು ತಮ್ಮ ಯೋಜನೆಗೆ ಸಾಕಾಗುತ್ತಿರಲಿಲ್ಲ ಎಂದು ಗುರುನಾಥ್ ಹೇಳುತ್ತಾರೆ. ಪೂರ್ಣಾವಧಿಗೆ ಕೃಷಿಕ ನಾಗುವ ಉದ್ದೇಶದಿಂದ ಗುರುನಾಥ್ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಪೈಪ್‌ಲೈನ್ ಅಳವಡಿಸುವುದರ ಜೊತೆಗೆ ನದಿಯಿಂದ ನೀರನ್ನು ಎತ್ತಲು ದಡದಲ್ಲಿ ಮೋಟಾರ್ ಪಂಪ್ ಅಳವಡಿಸಬೇಕಾಗಿತ್ತು ಹಾಗೂ ಸಣ್ಣ ಪಂಪ್‌ಹೌಸ್ ಕೂಡಾ ನಿರ್ಮಿಸಬೇಕಿತ್ತು.

ಹೀಗಾಗಿ ಇನ್ನೂ ಹೆಚ್ಚು ಹಣ ನೀಡುವಂತೆ ಅವರು ಗ್ರಾಮಸ್ಥರನ್ನು ವಿನಂತಿಸಿದರು. ಆದರೆ ಆ ಕಾಲದಲ್ಲಿ ಪ್ರತಿಯೊಬ್ಬ ಗ್ರಾಮಸ್ಥನೂ ಒಂದೇ ಬಾರಿಗೆ ದೇಣಿಗೆ ನೀಡುವ ಪರಿಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಯಾರಿಗೆ ನಿರ್ದಿಷ್ಟ ಹಂತದಲ್ಲಿ ದೇಣಿಗೆ ನೀಡಲು ಸಾಧ್ಯವಿಲ್ಲವೋ ಅವರು ಬಿಡಿ ಕಂತುಗಳಲ್ಲಿ ಹಣವನ್ನು ಪಾವತಿಸಬಹುದಾಗಿತ್ತು.

‘‘ಗ್ರಾಮದ ಜನತೆ ನಮ್ಮ ಮೇಲೆ ಸಂಪೂರ್ಣ ನಂಬಿಕೆಯಿಟ್ಟಿದ್ದುದು ನಮ್ಮ ಅದೃಷ್ಟ’’ ಎಂದು ಗುರುನಾಥ್ ಅವರ ಕಿರಿಯ ಸಹೋದರ ಸುನೀಲ್ ಹೇಳುತ್ತಾರೆ.

ನೀರಿನ ಸೌಲಭ್ಯದಿಂದಾಗಿ ಯಾವ ತರಕಾರಿಗಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ಹಲವಾರು ಗ್ರಾಮಸ್ಥರು ಸಲಹೆ ನೀಡಿದರು. ತರಕಾರಿ ಬೆಳೆಯುವುದರಿಂದ ಇಡೀ ಗ್ರಾಮಕ್ಕೆ ಪ್ರಯೋಜನವಾಗಲಿದೆಯೆಂದು ಅವರು ಪ್ರತಿಪಾದಿಸಿದರು.

ಇಡೀ ಗ್ರಾಮವು ಕೇವಲ ಒಂದೇ ವಿಧದ ತರಕಾರಿಯನ್ನು ಬೆಳೆಸಬೇಕು ಹಾಗೂ ಅದು ಸಂಪೂರ್ಣವಾಗಿಸಾವಯವ ಕೃಷಿಯಾಗಿರ ಬೇಕೆಂದು ನಿರ್ಧರಿಸಲಾಯಿತು. ಕೇವಲ ಒಂದು ವಿಧದ ತರಕಾರಿಯನ್ನು ಬೆಳೆದು, ಏಕಕಾಲದಲ್ಲಿ ಅದರ ಕಟಾವು, ಸಾಗಾಣೆ ಹಾಗೂ ಮಾರಾಟ ಮಾಡುವ ಯೋಜನೆ ರೂಪಿಸಲಾಯಿತು. ಗ್ರಾಮದ ರೈತರು ಬೆಳೆದ ತರಕಾರಿಗಳನ್ನು ಸಮೀಪದ ನಗರವಾದ ಕಲ್ಯಾಣ್‌ನ ಮಾರುಕಟ್ಟೆಗೆ ರಖಂ ಆಗಿ ಸಾಗಾಟ ಮಾಡುವ ಮೂಲಕ ವೈಯಕ್ತಿಕವಾಗಿ ತಗಲುವ ಸಾಗಾಟ ವೆಚ್ಚವನ್ನು ಕಡಿತಗೊಳಿಸುವುದೇ ಇದರ ಉದ್ದೇಶವಾಗಿತ್ತು.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿರುವ ಬೆಂಡೆಕಾಯಿಯನ್ನು ಬೆಳೆಯಲು ಅವರು ನಿರ್ಧರಿಸಿದರು. ಹೀಗೆ ಕಳೆದ 17 ವರ್ಷಗಳಿಂದ ಈ ಗ್ರಾಮವು ಯಶಸ್ವಿಯಾಗಿ ಬೆಂಡೆಕಾಯಿ ಕೃಷಿಯಲ್ಲಿ ತೊಡಗಿಸಿ ಕೊಂಡಿದೆ. ಆರಂಭದಲ್ಲಿ ಗ್ರಾಮಸ್ಥರು ಉತ್ತಮ ಬೆಳೆಯನ್ನು ಪಡೆಯಲು ಹರಸಾಹಸ ಪಟ್ಟರು. ಅವರ ಪರಿಶ್ರಮ ಸಾರ್ಥಕವಾಗಲು ಸುಮಾರು ಎರಡು ವರ್ಷಗಳೇ ಹಿಡಿಯಿತು. ಆದರೆ, ಆನಂತರ ಅವರು ತಿರುಗಿ ನೋಡಿದ್ದೇ ಇಲ್ಲ.

ಪೊಯಿ ಗ್ರಾಮದಲ್ಲಿ ಬೆಳೆಯುವ ಬೆಂಡೆಗೆ ಇಂದು ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ ಉತ್ತಮವಾದ ಬೆಲೆ ದೊರೆಯುತ್ತಿದೆ.ಸಗಟು ಮಾರುಕಟ್ಟೆಯಲ್ಲಿ, ಸಾಮಾನ್ಯ ಬೆಂಡೆಗೆ ಪ್ರತೀ ಕೆ.ಜಿ.ಗೆ 30 ರೂ. ಬೆಲೆ ಯಿದ್ದರೆ, ಪೊಯಿ ಬೆಂಡೆೆ ಕನಿಷ್ಠವೆಂದರೆ ಕೆ.ಜಿ.ಗೆ 35 ರೂ.ಗೆ ವಿಕ್ರಯವಾಗುತ್ತದೆ. ಹೀಗೆ ಹಲವಾರು ಟನ್ ಬೆಂಡೆಗೆ ಪ್ರತೀ ಕೆ.ಜಿ.ಗೆ ಹೆಚ್ಚುವರಿಯಾಗಿ 5 ರೂ. ದೊರೆತರೆ ಆ ಹಣವೇ ಬಹಳಷ್ಟಾಗುತ್ತದೆ. ಇದರಿಂದಾಗಿ ಪೊಯಿ ಗ್ರಾಮದ ರೈತನು ಬೆಂಡೆ ಕೃಷಿಯ ಋತು ವಿನಲ್ಲಿ ಪ್ರತೀ ಎಕರೆಗೆ ಕನಿಷ್ಠ 1.5 ಲಕ್ಷ ರೂ.ನಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸುತ್ತಾನೆ.

ಈ ಗ್ರಾಮದಲ್ಲಿ ಬಹುತೇಕ ರೈತರು ಕನಿಷ್ಠ ಐದು ಎಕರೆ ಜಮೀನು ಹೊಂದಿದ್ದಾರೆ. ಭತ್ತದ ಕೃಷಿಯಿಂದ ದೊರೆಯುವ ಆದಾಯದ ಜೊತೆಗೆ ಬೆಂಡೆ ಕೃಷಿಯಲ್ಲೂ ಹೆಚ್ಚುವರಿ ವರಮಾನ ಬರುತ್ತಿದೆ. ನೀರಿನ ಸಾಗಣೆಯ ನಿರ್ವಹಣೆಗೆ ಹಾಗೂ ವಿದ್ಯುತ್ ಶುಲ್ಕದ ವೆಚ್ಚವನ್ನು ಗ್ರಾಮಸ್ಥರಿಂದ ಪ್ರತೀ ಎಕರೆವಾರು ಲೆಕ್ಕದಲ್ಲಿ ಪಡೆಯಲಾಗುತ್ತಿದೆ. ನೀರಿನ ವಿತರಣೆಗೂ ಕೂಡಾ ವ್ಯವಸ್ಥಿತವಾದ ಏರ್ಪಾಡು ಮಾಡಲಾಗಿದೆ. ಬೆಂಡೆ ಕೃಷಿಗೆ ದಿನಂಪ್ರತಿ ನೀರಿನ ಅಗತ್ಯವಿಲ್ಲದಿ ರುವುದರಿಂದ ಪ್ರತಿಯೊಬ್ಬ ಗ್ರಾಮಸ್ಥನಿಗೂ ನೀರು ವಿತರಣೆಗೆ ನಿರ್ದಿಷ್ಟ ದಿನ ಹಾಗೂ ನಿರ್ದಿಷ್ಟ ತಾಸುಗಳನ್ನು ನಿಗದಿಪಡಿಸಲಾಗಿದೆ.

‘‘ನಾವು ಬೆಳೆಯುವ ಬೆಂಡೆಯ ಉನ್ನತ ಗುಣಮಟ್ಟವನ್ನು ಮಾರು ಕಟ್ಟೆಯಲ್ಲಿ ನೀವು ಸುಲಭವಾಗಿ ಗುರುತಿಸಬಹುದಾಗಿದೆ’’ ಎಂದು ಗುರುನಾಥ್ ಅವರ ಪತ್ನಿ ಹಾಗೂ ಗ್ರಾಮದ ಬಾಲವಾಡಿಯ ಶಿಕ್ಷಕಿ ಸುನೀತಾ ಸೊಂಬ್ರೆ ಹೆಮ್ಮೆಯಿಂದ ಹೇಳುತ್ತಾರೆ.

ತರಕಾರಿ ಕೃಷಿಯಿಂದ ಹೆಚ್ಚುವರಿ ಆದಾಯ ದೊರೆಯುವುದನ್ನು ಅರಿತ ಗ್ರಾಮದ ಮಹಿಳೆಯರು ಕೂಡಾ ಗೃಹಕೃತ್ಯಗಳಿಂದ ಬಿಡುವು ಮಾಡಿಕೊಂಡು ಮನೆಯಿಂದ ಹೊರಬರುತ್ತಿದ್ದಾರೆ.ಅವರೆಲ್ಲಾ ಸೇರಿ ಸ್ಥಾಪಿಸಿರುವ ಮಹಿಳಾ ಮಹಾ ಸಂಘ ಗಥ್‌ನಲ್ಲಿ ಈಗ ಸುಮಾರು 150 ಮಂದಿ ಕಿರಿಯ ಹಾಗೂ ಹಿರಿಯ ವಯಸ್ಸಿನ ಮಹಿಳೆಯರು ಸದಸ್ವತ್ವ ಪಡೆದಿದ್ದಾರೆ. ಸಂಘಕ್ಕೆ ಪ್ರತೀ ತಿಂಗಳು ತಲಾ 100 ರೂ.ದೇಣಿಗೆ ನೀಡುತ್ತಿದ್ದಾರೆ ಹಾಗೂ ಕೃಷ್ಯು ತ್ಪನ್ನಗಳ ಮಾರಾಟದಲ್ಲಿ ಗ್ರಾಮದ ಪುರುಷರ ಜೊತೆ ವ್ಯಾಪಾರ ಒಡಂಬಡಿಕೆ ಕೂಡಾ ಮಾಡಿಕೊಂಡಿದ್ದಾರೆ.

ಜಿಲ್ಲಾ ಪರಿಷದ್ ಅನುದಾನದಿಂದ ನಾವು ಉಳುಮೆಯ ಟಿಲ್ಲರ್ ಹಾಗೂ ಭತ್ತ ಕಟಾವು ಯಂತ್ರವನ್ನು ಖರೀದಿಸಿದ್ದೇವೆ. ತಾಸಿಗೆ 400 ರೂ.ನಂತೆ ನಾವು ಅವುಗಳನ್ನು ರೈತರಿಗೆ ಬಾಡಿಗೆಗೆ ನೀಡುತ್ತಿದ್ದೇವೆ. ಇವು ಗಳಿಗೆ ನಾವು ಚಾಲಕನೊಬ್ಬನನ್ನು ಗೊತ್ತುಪಡಿಸಿಕೊಂಡಿದ್ದು, ಆತನಿಗೆ ತಾಸಿನ ಆಧಾರದಲ್ಲಿ ವೇತನ ಪಾವತಿಸುತ್ತಿದ್ದೇವೆ’’ ಮಹಿಳಾ ಸಹಕಾರಿ ಸಂಘ ಗಥ್‌ನ ಖಜಾಂಚಿ ಸುನೀತಾ ಭೂತಾರೆ ಹೇಳುತ್ತಾರೆ.

9 ಮೊಳದ ಸಾಂಪ್ರದಾಯಿಕ ಕಸೊಟಾ ಸೀರೆಯನ್ನು ಧರಿಸಿರುವ ಮಹಿಳೆಯರು ಪೊಯಿ ಗ್ರಾಮದ ವಿಶಿಷ್ಟ ಸೊಗಡಿನ ಮರಾಠಿಯಲ್ಲಿ ಕೃಷಿ ವ್ಯವಹಾರ, ಹಣ ಹಾಗೂ ಶಿಕ್ಷಣದ ಬಗ್ಗೆ ಚರ್ಚಿಸುವುದನ್ನು ನೋಡಿದಾಗ ಸಂತಸವಾಗುತ್ತದೆ. ಕೌಟುಂಬಿಕ ವಿಷಯಗಳ ಬಗ್ಗೆ ಚರ್ಚಿಸಲು ಅವರೆಲ್ಲರೂ ಕನಿಷ್ಠ ಪಕ್ಷ ತಿಂಗಳಿಗೊಮ್ಮೆ ಸಭೆ ಸೇರುತ್ತಾರೆ ಹಾಗೂ ಪರಸ್ಪರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಪ್ರತಿಯೊಬ್ಬ ಮಗುವೂ ಗ್ರಾಮದಲ್ಲಿರುವ ಏಳನೆ ತರಗತಿವರೆಗಿನ ಶಾಲೆಗೆ ಹೋಗುತ್ತದೆ. ಆನಂತರ ಹೈಸ್ಕೂಲ್ ಶಿಕ್ಷಣಕ್ಕಾಗಿ ಮಕ್ಕಳು ನೆರೆಯ ಗ್ರಾಮಕ್ಕೆ ತೆರಳು ತ್ತಾರೆ. ಕಾಲೇಜು ಶಿಕ್ಷಣವನ್ನು ಅವರು ಕಲ್ಯಾಣ್ ನಗರದ ಆಸು ಪಾಸಿನಲ್ಲಿರುವ ಕಾಲೇಜುಗಳಲ್ಲಿ ಪಡೆಯುತ್ತಾರೆ.

ಆರ್ಥಿಕ ಪ್ರಗತಿ ಹಾಗೂ ಶಿಕ್ಷಣವು ಪೊಯಿ ಗ್ರಾಮದ ಜನತೆಯಲ್ಲಿ ಜಾಗೃತಿಯನ್ನುಂಟು ಮಾಡಿದೆ. ಈ ಗ್ರಾಮದಲ್ಲೆಲ್ಲೂ ಶರಾಬು ಅಂಗಡಿಗಳಿಲ್ಲ. ಮದ್ಯಪಾನ ನಿಷೇಧವನ್ನು ಗ್ರಾಮಸ್ಥರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇಡೀ ಗ್ರಾಮವು ವೈಫೈ ಸಂಪರ್ಕವನ್ನು ಪಡೆದಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರವು ಈ ಗ್ರಾಮದಲ್ಲಿ ಸಣ್ಣದೊಂದು ಘಟಕವನ್ನು ತೆರೆದಿದ್ದು, ಗುರುನಾಥ್ ಮ್ಯಾನೇಜರ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ಇದೀಗ ಈ ಶಾಖೆಯಲ್ಲಿ 1 ಸಾವಿರ ಖಾತೆಗಳಿದ್ದು, ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರ್ ಮೂಲಕ ದಿನಂಪ್ರತಿ ಲಕ್ಷಾಂತರ ರೂ.ಗೂ ಅಧಿಕ ವಹಿವಾಟು ನಡೆಸಲಾಗುತ್ತಿದೆ.

ತಮ್ಮ ಹಳ್ಳಿಯ ಸಮೀಪವೇ ಇರುವ ನೂರಾರು ಹೆಕ್ಟೇರ್ ಜಮೀನಿನಲ್ಲಿರುವ ಹಚ್ಚ ಹಸಿರಾದ ಕಾಡಿನಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮವನ್ನು ಬೆಳೆಸುವುದು ಈ ಗ್ರಾಮಸ್ಥರ ಮುಂದಿನ ಕಾರ್ಯಸೂಚಿ ಯಾಗಿದೆ. ಈ ಸುಂದರವಾದ ಕಾಡಿನಲ್ಲಿರುವ ಸಾಗುವಾನಿ ಮತ್ತಿತರ ಬೆಲೆಬಾಳುವ ಮರಗಳನ್ನು ಗ್ರಾಮಸ್ಥರು ಹಲವಾರು ವರ್ಷಗಳಿಂದ ಕಾಡುಗಳ್ಳರು ಮತ್ತಿತರ ದುಷ್ಕರ್ಮಿಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ತಮ್ಮ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕಾಗಿ ಗ್ರಾಮಸ್ಥರು ಕಾಡಿನ ಆಸುಪಾಸಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಹಾಗೂ ಬುಡಕಟ್ಟು ನಿವಾಸಿಗಳ ನೆರವನ್ನು ಪಡೆಯಲಿದ್ದು, ಆ ಮೂಲಕ ಅವರಿಗೂ ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಈಗಾಗಲೇ ಗ್ರಾಮಸ್ಥರು ಮಹಾರಾಷ್ಟ್ರ ಸರಕಾರವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಹಾಗೂ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಬಹುದೆಂಬ ಆಶಾವಾದವನ್ನು ಹೊಂದಿದ್ದಾರೆ.

ಕೆನಡಿಯವರ ಆನಂತರದ 60 ವರ್ಷಗಳ ಬಳಿಕ, ಪೊಯಿ ಗ್ರಾಮಸ್ಥರು ‘‘ಹೌದು, ನಾವು ನಮ್ಮ ದೇಶಕ್ಕಾಗಿ ಏನಾದರೂ ಮಾಡಿ ದ್ದೇವೆ ’’ ಎಂದು ಹೆಮ್ಮೆಯಿಂದ ಘೋಷಿಸುತ್ತಾರೆ.

ಕೃಪೆ: ದಿ ಬೆಟರ್ ಇಂಡಿಯಾ ಗ್ರೋ
 

Writer - ಸುರೇಖಾ ಕಡಪಾ-ಬೋಸ್

contributor

Editor - ಸುರೇಖಾ ಕಡಪಾ-ಬೋಸ್

contributor

Similar News

ಜಗದಗಲ
ಜಗ ದಗಲ