ಒಂದೇ ಊಟಕ್ಕೆ ಬಳಕೆಯಾದ ಎಸ್ಸೆಂ ಕೃಷ್ಣ ಎಂಬ ಬಾಳೆಯೆಲೆ

Update: 2017-09-24 18:59 GMT

ಕರ್ನಾಟಕದಲ್ಲಿ ಐಟಿ ಅಧಿಕಾರಿಗಳು ಮತ್ತೆ ಸುದ್ದಿಯಲ್ಲಿದ್ದಾರೆ. ಐಟಿ ಅಧಿಕಾರಿಗಳು ಎಲ್ಲಾದರೂ ಸಕ್ರಿಯರಾಗಿದ್ದಾರೆ ಎಂದರೆ, ಆ ರಾಜ್ಯದೊಳಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ ಎಂದೇ ಅರ್ಥ. ಕೇಂದ್ರ ಸರಕಾರ ಯಾವ ಸಂಕೋಚವೂ ಇಲ್ಲದೆ ಐಟಿ ಅಧಿಕಾರಿಗಳನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎನ್ನುವ ವ್ಯಾಪಕ ಆರೋಪಗಳಿರುವ ಸಂದರ್ಭದಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ದಾಳಿ ರಾಜಕೀಯ ವಲಯದೊಳಗೆ ಕುತೂಹಲಕೆರಳಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಈಗ ನಡೆಯುತ್ತಿರುವ ದಾಳಿ ಸ್ವತಃ ಬಿಜೆಪಿಯ ರಾಜ್ಯ ನಾಯಕರಾಗಿರುವ ಎಸ್. ಎಂ. ಕೃಷ್ಣ ಅವರ ಅಳಿಯನನ್ನು ಗುರಿಯಾಗಿಸಿದೆ. ಆದುದರಿಂದ ಈ ದಾಳಿಯ ಬಗ್ಗೆ ಚರ್ಚೆಗಳು ನಡೆಯುವುದು ತೀರಾ ಸಹಜ. ಬಹುಶಃ ಈ ದಾಳಿ, ಎಸ್. ಎಂ. ಕೃಷ್ಣ ಕಾಂಗ್ರೆಸ್‌ನಲ್ಲಿ ಇರುವ ಸಂದರ್ಭದಲ್ಲೇನಾದರೂ ನಡೆದಿದ್ದರೆ ಇಂದು ಅದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿತ್ತು.

ಇಂತಹದೊಂದು ದೊಡ್ಡ ದಾಳಿ ತನ್ನ ಮೇಲೆ ಅಥವಾ ಅಳಿಯನ ಮೇಲೆ ನಡೆಯಬಹುದು ಎನ್ನುವ ಭಯ ಎಸ್. ಎಂ. ಕೃಷ್ಣ ಅವರಿಗಿತ್ತು. ತನ್ನ ರಾಜಕೀಯ ಬದುಕಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸರ್ವ ರೀತಿಯ ಸ್ಥಾನಮಾನಗಳನ್ನು ಪಡೆದುಕೊಂಡ ಕೃಷ್ಣ, ಜೀವನದ ಮುಸ್ಸಂಜೆಯ ಹೊತ್ತಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಎಲ್ಲ ಬಣ್ಣವನ್ನು ಮಸಿ ನುಂಗಿತು ಎನ್ನುವಂತೆ, ಕೃಷ್ಣ ಅವರ ಎಲ್ಲ ರಾಜಕೀಯ ಘನತೆಗಳನ್ನು ಅವರ ಅಳಿಯನ ಕುರಿತ ಮೋಹ ನುಂಗಿ ಹಾಕಿತು. ಎಸ್. ಎಂ. ಕೃಷ್ಣ ಅವರ ಬಿಜೆಪಿ ಪ್ರವೇಶವನ್ನು ಸ್ವತಃ ಬಿಜೆಪಿಯ ಕಾರ್ಯಕರ್ತರೇ ಇಷ್ಟ ಪಟ್ಟಿರಲಿಲ್ಲ. ಯಾಕೆಂದರೆ, ಅದಾಗಲೇ ರಾಜಕೀಯದಿಂದ ನಿವೃತ್ತಿಯ ಹಂತದಲ್ಲಿರುವ ಎಸ್. ಎಂ. ಕೃಷ್ಣ ಅವರ ಪ್ರವೇಶದಿಂದ ಬಿಜೆಪಿಗೆ ಆಗುವ ಲಾಭಗಳೇನು ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ.

ಎಸ್. ಎಂ. ಕೃಷ್ಣ ಅವರನ್ನು ಸ್ವೀಕರಿಸುವುದರ ಜೊತೆಗೆ ಅವರ ಅಳಿಯನ ಮೇಲಿರುವ ಆರೋಪಗಳನ್ನು, ಕಳಂಕಗಳನ್ನೂ ಬಿಜೆಪಿ ಮೈಮೇಲೆ ಎಳೆದುಕೊಳ್ಳಬೇಕಾಗಿತ್ತು. ಆದುದರಿಂದಲೇ ತಳಮಟ್ಟದ ಬಿಜೆಪಿ ಕಾರ್ಯಕರ್ತರು ಎಸ್. ಎಂ. ಕೃಷ್ಣ ಅವರ ಕುರಿತು ಅಸಹನೆ ಹೊಂದಿದ್ದರು. ಆದರೆ ಉಪಚುನಾವಣೆಯ ಹೊತ್ತಿಗೆ ರಾಜ್ಯ ಬಿಜೆಪಿಯ ಕೈಯಲ್ಲಿ ಬಂಡವಾಳವೇ ಇರಲಿಲ್ಲ. ಅದಾಗಷ್ಟೇ ಕೆಲವು ಕಾಂಗ್ರೆಸ್‌ನ ಹಿರಿಯರು ಬಿಜೆಪಿಗೆ ಸೇರುತ್ತಿರುವುದನ್ನು ಮುಂದಿಟ್ಟುಕೊಂಡು ಉಪಚುನಾವಣೆಯನ್ನು ಬಿಜೆಪಿ ಎದುರಿಸಲು ಮುಂದಾಯಿತು. ಎಸ್. ಎಂ. ಕೃಷ್ಣ, ಶ್ರೀನಿವಾಸ ಪ್ರಸಾದ್‌ರಂತಹ ನಾಯಕರು ಕಾಂಗ್ರೆಸ್‌ನ್ನು ಬಿಡುತ್ತಿರುವುದು ಆ ಪಕ್ಷದ ಹಿನ್ನಡೆಯನ್ನು ತೋರಿಸುತ್ತದೆ ಎನ್ನುವುದನ್ನು ಮತದಾರರಲ್ಲಿ ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡಿತು. ಆದರೆ ಎಸ್.ಎಂ. ಕೃಷ್ಣ ಮತ್ತು ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್‌ನ್ನು ಬಿಟ್ಟು ಬಿಜೆಪಿಯನ್ನು ಸೇರುತ್ತಿರುವುರ ಹಿಂದಿರುವ ಸಮಯ ಸಾಧಕತನವನ್ನು ಜನರು ಸ್ಪಷ್ಟವಾಗಿ ಗುರುತಿಸಿದ್ದರು.

‘ಸ್ವಾಭಿಮಾನಕ್ಕಾಗಿ ಬಿಜೆಪಿ ಸೇರುತ್ತಿದ್ದೇನೆ’ ಎನ್ನುವ ಶ್ರೀನಿವಾಸ ಪ್ರಸಾದ್‌ರ ಹೇಳಿಕೆ, ಮೋದಿಯನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ ಎನ್ನುವ ಎಸ್.ಎಂ. ಕೃಷ್ಣರ ಹೇಳಿಕೆಗಳನ್ನು ಮತದಾರರು ನಂಬಲಿಲ್ಲ. ಕೃಷ್ಣ ಅವರಂತೂ ತೀವ್ರವಾದ ಟೀಕೆಗಳಿಗೆ ಬಲಿಯಾದರು. ಐಟಿ ದಾಳಿಗೆ ಹೆದರಿಯೇ ಎಸ್. ಎಂ. ಕೃಷ್ಣ ಬಿಜೆಪಿಗೆ ಸೇರಿದರು ಎನ್ನುವುದು ಅದಾಗಲೇ ಮನೆ ಮಾತಾಗಿತ್ತು. ಆದುದರಿಂದ, ಎಸ್. ಎಂ. ಕೃಷ್ಣ ವೈಯಕ್ತಿಕವಾಗಿ ವರ್ಚಸ್ಸನ್ನು ಕಳೆದುಕೊಂಡರು. ಜೊತೆಗೆ ಬಿಜೆಪಿಗೂ ಅವರಿಂದ ಯಾವುದೇ ಲಾಭವಾಗಲಿಲ್ಲ. ಒಂದು ರೀತಿಯಲ್ಲಿ ಎಸ್. ಎಂ. ಕೃಷ್ಣ ಅವರ ಪ್ರವೇಶದಿಂದ ಬಿಜೆಪಿಗೆ ನಷ್ಟವಾಗಿತ್ತು. ಒಂದು ವೇಳೆ, ಅದೇ ಹೊತ್ತಿನಲ್ಲಿ ಕೃಷ್ಣ ಅವರ ಅಳಿಯನ ನಿವಾಸದ ಮೇಲೆ ದಾಳಿ ನಡೆದಿದ್ದರೆ ಅದರಿಂದ ಕಾಂಗ್ರೆಸ್ ಸಾಕಷ್ಟು ಮುಜುಗರ ಅನುಭವಿಸುತ್ತಿತ್ತು. ಜೊತೆಗೆ ಕೃಷ್ಣ ಅವರ ಕುಟುಂಬದ ಅಕ್ರಮ ಆಸ್ತಿಯೂ ಬಯಲಿಗೆ ಬರುತ್ತಿತ್ತು. ಕೃಷ್ಣ ಬಿಜೆಪಿ ಸೇರುವ ಮೂಲಕ ಕಾಂಗ್ರೆಸ್‌ಗೆ ಲಾಭ ಮಾಡಿದರು. ಜೊತೆಗೆ ಬಿಜೆಪಿಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡಿದರು.

ಬಹುಶಃ ಉಪಚುನಾವಣೆಯಲ್ಲಾದ ಸೋಲಿಗೆ ಎಸ್. ಎಂ. ಕೃಷ್ಣ ಅವರನ್ನೇ ಹೊಣೆ ಮಾಡಿ ಸೇಡು ತೀರಿಸಿಕೊಳ್ಳಲು ಹೊರಟಿದೆಯೋ ಎನ್ನುವಂತೆ ಅವರ ಅಳಿಯನ ಕಚೇರಿಗಳಿಗೆ ಕಳೆದ ನಾಲ್ಕು ದಿನಗಳಿಂದ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಆದರೆ ಈ ಹಿಂದೆ ರಾಜ್ಯ ಸಚಿವ ಡಿಕೆಶಿ ನಿವಾಸಗಳ ಮೇಲೆ ನಡೆದ ದಾಳಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಮಾಧ್ಯಮಗಳಲ್ಲಿ ಈ ದಾಳಿಗೆ ಸಿಗುತ್ತಿಲ್ಲ. ಕಾರಣವೂ ಸ್ಪಷ್ಟ. ಅಂದು ಆತುರಾತುರದಲ್ಲಿ ಡಿಕೆಶಿಯವರ ನಿವಾಸಕ್ಕೆ ದಾಳಿ ನಡೆಸಲು ಮುಖ್ಯ ಕಾರಣ, ಗುಜರಾತ್‌ನ ರಾಜಕೀಯ ಬೆಳವಣಿಗೆ. ಈ ದಾಳಿಯನ್ನು ಮಾಧ್ಯಮಗಳು ಅದೆಷ್ಟು ವೈಭವೀಕರಿಸಿದವು ಎಂದರೆ, ಡಿಕೆಶಿ ಮನೆಯಲ್ಲಿ ಕೋಟಿ ಕೋಟಿ ಹಣದ ಕಂತೆಗಳು ಪತ್ತೆಯಾದವು ಎಂಬಂತೆ ವರದಿ ಮಾಡಿದವು.

ಇನ್ನೇನು ಡಿಕೆಶಿಯವರು ಜೈಲು ಪಾಲಾಗಿಯೇ ಬಿಟ್ಟರು, ಅವರ ರಾಜಕೀಯ ಬದುಕೇ ಮುಗಿದು ಹೋಯಿತು ಎಂಬಂತೆ ವದಂತಿಗಳನ್ನು ಹರಡಿದವು. ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಗೆದ್ದುದು ಮಾತ್ರವಲ್ಲ, ಇತ್ತ ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳಿಗೂ ವಿಶೇಷವಾದುದೇನೂ ದಕ್ಕಲಿಲ್ಲ. ಈ ದಾಳಿ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್ ಗೆಲುವು ಡಿಕೆಶಿಯ ವರ್ಚಸ್ಸನ್ನು ರಾಜ್ಯದಲ್ಲಿ ಹೆಚ್ಚಿಸಿತು. ಕೃಷ್ಣ ಬಿಜೆಪಿಗೆ ಸೇರಿದ ಹಲವು ಸಮಯದ ಬಳಿಕ ಇದೀಗ ಅವರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದೆ. ಕೃಷ್ಣ ಅವರು ಬಿಜೆಪಿಗೆ ಸೇರುವಾಗಲೇ ಕೇಂದ್ರ ವರಿಷ್ಠರ ಅಭಯ ಅವರಿಗೆ ದೊರಕಿರುವ ಸಾಧ್ಯತೆಗಳಿರುವುದರಿಂದ, ಕಾಟಾಚಾರಕ್ಕಾಗಿ ಈ ದಾಳಿ ನಡೆದಿದೆ ಎಂದು ನಾವು ಭಾವಿಸಬಹದು. ಬಿಜೆಪಿಗೆ ಸೇರಿದ ಕಾರಣಕ್ಕಾಗಿ ಕೃಷ್ಣ ಐಟಿ ದಾಳಿಯಿಂದ ಬಚಾವಾದರು ಎಂದು ಜನರು ಹೇಳಿಕೊಳ್ಳಬಾರದು ಎನ್ನುವು ಉದ್ದೇಶದಿಂದ ಈ ದಾಳಿ ನಡೆದಿರಬಹುದು.

ಅಂದರೆ, ಕೃಷ್ಣ ಕುಟುಂಬದ ಭಾಗದಿಂದ ಎಲ್ಲ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಈ ದಾಳಿ ನಡೆದಿದೆ. ಇದು ‘ನಾವು ಹೊಡೆದಂತೆ ಮಾಡುತ್ತೇವೆ, ನೀನು ಅತ್ತಂತೆ ಮಾಡು’ ಎಂಬ ರೀತಿಯಲ್ಲಿದೆ. ಅದೇನೇ ಇರಲಿ, ಅತ್ತ ಬಿಜೆಪಿಗೆ ಸೇರಿ ತಾವು ಈವರೆಗೆ ಸಂಪಾದಿಸಿಕೊಂಡಿದ್ದ ವರ್ಚಸ್ಸನ್ನೂ ಕೃಷ್ಣ ಬಲಿಕೊಟ್ಟರು. ಇತ್ತ, ಐಟಿ ದಾಳಿಯಿಂದ ಬಚಾವಾಗುವುದೂ ಅವರಿಂದ ಸಾಧ್ಯವಾಗಲಿಲ್ಲ. ಬಹುಶಃ ಈ ದಾಳಿ ಕೃಷ್ಣ ಅವರ ರಾಜಕೀಯ ಬದುಕಿಗೆ ಹೊಡೆದ ಕೊನೆಯ ಮೊಳೆಯಾಗಿದೆ. ಬರೇ ಒಂದು ಊಟಕ್ಕೇ ಕೃಷ್ಣ ಬಿಜೆಪಿಯ ಪಾಲಿಗೆ ಉಂಡು ಎಸೆದ ಬಾಳೆ ಎಲೆಯಾಗಿ ಬಿಟ್ಟಿರುವುದು ಅವರ ಒಟ್ಟಾರೆ ರಾಜಕೀಯ ಬದುಕಿನ ದುರಂತವಾಗಿದೆ. ಒಂದು ಕಾಲಕ್ಕೆ ರಾಜ್ಯದ ಅಭಿವೃದ್ಧಿಯ ಹರಿಕಾರ ಎಂದು ಐಟಿ ಮಾಧ್ಯಮಗಳಿಂದ ಬಿಂಬಿತರಾಗಿದ್ದ ಕೃಷ್ಣ ಅವರು ಇಂದು ಬಿಜೆಪಿಯ ಹಿತ್ತಲಿನ ಕಸದ ತೊಟ್ಟಿಯ ಪಾಲಾದುದು ಇತರ ಹಿರಿಯ ರಾಜಕೀಯ ನಾಯಕರಿಗೆ ಒಂದು ಪಾಠವಾಗಬೇಕಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News