ಮುಂಗಾರು ಆಹಾರಧಾನ್ಯ ಉತ್ಪಾದನೆ ಕುಸಿತ

Update: 2017-09-25 16:04 GMT

ಹೊಸದಿಲ್ಲಿ, ಸೆ.25: ಈ ವರ್ಷದ ಮುಂಗಾರು ಅವಧಿಯ ಆಹಾರಧಾನ್ಯ ಉತ್ಪಾದನೆ 134.67 ಮಿಲಿಯನ್ ಟನ್ ಎಂದು ನಿರೀಕ್ಷಿಸಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.2.77ರಷ್ಟು ಕಡಿಮೆಯಾಗಿದೆ.

2017-18ರ ಅವಧಿಯಲ್ಲಿ ಮುಂಗಾರು ಅವಧಿಯ ಪ್ರಮುಖ ಆಹಾರಧಾನ್ಯ ಉತ್ಪಾದನೆಯ ಕುರಿತ ತನ್ನ ಪ್ರಪ್ರಥಮ ಮುಂಗಡ ಅಂದಾಜು ಪ್ರಕಟಿಸಿರುವ ಕೃಷಿ ಇಲಾಖೆ, ಆಹಾರಧಾನ್ಯ ಉತ್ಪಾದನೆ 134.67 ಮಿಲಿಯನ್ ಟನ್ ತಲುಪಬಹುದು ಎಂದು ಅಂದಾಜಿಸಿದೆ. ಇದರಲ್ಲಿ ಎಣ್ಣೆಬೀಜಗಳ ಉತ್ಪಾದನೆ 20.68 ಮಿಲಿಯನ್ ಟನ್, ಕಬ್ಬು 337.69 ಮಿಲಿಯನ್ ಟನ್, ಹತ್ತಿ 32.27 ಟನ್, ಸೆಣಬು ಮತ್ತು ನಾರು 10.33 ಮಿಲಿಯನ್ ಟನ್ ಉತ್ಪಾದನೆಯಾಗುವ ನಿರೀಕ್ಷಿಸಲಾಗಿದೆ.

  ಮುಂಗಾರು ಮಳೆ ನಿಗದಿತ ಪ್ರಮಾಣದಲ್ಲಿ ಸುರಿದಿದ್ದು 2017-18ರಲ್ಲಿ ಮುಂಗಾರು ಹಾಗೂ ರಾಬಿ ಅವಧಿಯಲ್ಲಿ ಒಟ್ಟು 275.68 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯ ಗುರಿಯಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

 ಮುಂಗಾರು ಸೀಸನ್‌ನ ಒಟ್ಟು ಭತ್ತದ ಬೆಳೆ 94.48 ಮಿಲಿಯನ್ ಟನ್ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ದಾಖಲೆ ಉತ್ಪಾದನೆಯಾದ 96.39 ಮಿಲಿಯನ್ ಟನ್‌ಗಿಂತ ಇದು ಕಡಿಮೆಯಾಗಿದೆ. ಆದರೆ ಕಳೆದ ಐದು ವರ್ಷದ ಸರಾಸರಿಗೆ ಹೋಲಿಸಿದರೆ ಇದು 2.59 ಮಿಲಿಯನ್ ಟನ್‌ಗಳಷ್ಟು ಹೆಚ್ಚಳವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News