ದೇವರ ಹಂಗೇಕೆ

Update: 2017-09-25 18:43 GMT

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ.

-ಲದ್ದೆಯ ಸೋಮಣ್ಣ

ಬಸವಣ್ಣನವರ ಸಮಕಾಲೀನ ಶರಣ ಸೋಮಣ್ಣ ಈಗಿನ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲದ್ದೆ (ಲಾಧಾ) ಗ್ರಾಮದವನು. ಲದ್ದೆ ಎಂದರೆ ಹೊರೆ ಎಂಬ ಅರ್ಥವೂ ಇದೆ. ಲದ್ದೆ ಗ್ರಾಮದಿಂದ ಹುಲ್ಲಿನ ಹೊರೆಯನ್ನು ಹೊತ್ತು, ಸಮೀಪದ ಬಸವಕಲ್ಯಾಣ ತಾಲೂಕಿನ ಹುಲಸೂರಿನಲ್ಲಿ ಮಾರುವ ಕಾಯಕವನ್ನು ಕೈಗೊಂಡಿದ್ದ ಶರಣ ಲದ್ದೆಯ ಸೋಮಣ್ಣನ ವ್ಯಕ್ತಿತ್ವ ಅನುಕರಣೀಯವಾಗಿದೆ. ಸೋಮಣ್ಣನ ಒಂದೇ ಒಂದು ವಚನ ಸಿಕ್ಕಿದೆ. ಇದು ಆತನ ಉತ್ಸಾಹದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ.

ಯಾವುದೇ ಕಾಯಕವಾದರೂ ತಲ್ಲೀನವಾಗಿ ಮಾಡು. ಕಾಯಕದಿಂದ ಬಂದದ್ದನ್ನು ದಾಸೋಹಂ ಭಾವದಿಂದ ಗುರು, ಲಿಂಗ ಮತ್ತು ಜಂಗಮ (ಶರಣಸಂಕುಲ)ಕ್ಕೆ ಅರ್ಪಿಸು. ಅರ್ಪಿಸಿದ ನಂತರ ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು. ರೋಗ ಬಂದರೆ ನರಳು, ನೋವಾದರೆ ಅರಚು, ಸಾವು ಬಂದರೆ ಸಾಯಿ. ಇದಕ್ಕೆ ಆ ದೇವರ ಹಂಗೇಕೆ ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸುತ್ತಾನೆ.

ಆತ್ಮಗೌರವ, ಕಾಯಕನಿಷ್ಠೆ, ಶರಣಸಂಕುಲಕ್ಕೆ ನಿಷ್ಠೆ, ದೇವರ ಹಂಗಿನಲ್ಲಿ ಕೂಡ ಇರಬಾರದೆಂಬ ಛಲ ಮತ್ತು ಜನನದಂತೆ ಮರಣ ಕೂಡ ಜೈವಿಕ ಪ್ರಕ್ರಿಯೆಯಾಗಿರುವುದರಿಂದ ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂಬ ಮಹತ್ವದ ನಿಲುವುಗಳನ್ನು ಲದ್ದೆಯ ಸೋಮಣ್ಣ ಈ ವಚನದಲ್ಲಿ ತಾಳಿದ್ದಾನೆ.

ಜನ ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡಿದರೆ ಕಾಯಕದ ಆನಂದ ವನ್ನು ಪಡೆಯಲಾರರು. ಮಾನವರ ದೊಡ್ಡ ದುರಂತವೆಂದರೆ ತಮ್ಮ ಕಾಯಕವನ್ನು ತಾವು ಆನಂದಿಸದೆ ಇರುವುದು. ನಮ್ಮ ಕಾಯಕವನ್ನು ನಾವು ಸ್ವ ಕಾಯಕ ಮಾಡಿಕೊಂಡು, ಏಕಾಗ್ರತೆಯಿಂದ ಕ್ರಿಯಾಶೀಲರಾಗದಿದ್ದರೆ ಸಮಾಜ ಅವನತಿಯತ್ತ ಸಾಗುವುದು. ಜನಜೀವನ ದುಸ್ತರವಾಗುವುದು. ಕಾಯಕದಲ್ಲಿ ಮೇಲು ಕೀಳು ಎಂಬುದಿಲ್ಲ. ಈ ಸತ್ಯವನ್ನು ಅರಿತವರು ಜೀವನೋತ್ಸಾಹದಿಂದ ಕಾಯಕದಲ್ಲಿ ನಿರತರಾಗುವರು. ಕಾಯಕದಲ್ಲಿ ಮೇಲು ಕೀಳು ಎಂದು ಭೇದ ಮಾಡುವವರು ತಮ್ಮ ಕಾಯಕ ಕೀಳೆಂದು ಭಾವಿಸುವರು. ಇಂಥ ಸ್ಥಿತಿಯಲ್ಲಿ ಅವರು ಅನಾಥಪ್ರಜ್ಞೆಯಿಂದ ಬಳಲುತ್ತಾರೆ.

ಇಂಥ ಅನಾಥಪ್ರಜ್ಞಾಪೀಡಿತರು ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ. ಇಂಥವರು ತಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳುವುದರಿಂದ ದೇಶದ ಪ್ರಗತಿ ಕುಂಠಿತಗೊಳ್ಳುವುದು. ಕಸಗುಡಿಸುವವರು ಸರಿಯಾಗಿ ಕಸಗುಡಿಸದಿದ್ದರೆ ರೋಗ ರುಜಿನಗಳು ಹರಡುವವು. ವಿಮಾನ ಚಾಲಕ ಏಕಾಗ್ರತೆ ವಹಿಸದಿದ್ದರೆ ಅಪಘಾತ ಸಂಭವಿಸುವುದು. ಹೆದ್ದಾರಿ ನಿರ್ಮಾಣ ದಲ್ಲಿ ಉದಾಸೀನ ಮಾಡಿದರೆ ರಸ್ತೆ ಅಪಘಾತಗಳು ಸಂಭವಿಸುವುವು. ಕಟ್ಟಡ ನಿರ್ಮಾಣದಲ್ಲಿ ಕಾಳಜಿ ವಹಿಸದಿದ್ದರೆ ಅನಾಹುತಗಳು ಸಂಭವಿಸುವುವು. ಅಧಿಕಾರಿಗಳು ತಮ್ಮ ಸ್ಥಾನಮಾನದ ಬಗ್ಗೆ ಬೇಸರಪಟ್ಟುಕೊಂಡರೆ ಅವರ ಹುದ್ದೆಗೆ ಸಂಬಂಧಿಸಿದ ಕೆಲಸಕಾರ್ಯಗಳು ನನೆಗುದಿಗೆ ಬೀಳುವುವು. ಮಂತ್ರಿಗಳು ತಮ್ಮ ಖಾತೆಗೆ ಸಂಬಂಧಿಸಿದ ಜವಾಬ್ದಾರಿ ಯನ್ನು ನಿಭಾಯಿಸದೆ ಇದ್ದಾಗ, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುವುವು.

ಅನೇಕ ಮಂತ್ರಿಗಳು ತಮಗೆ ಸರಿಯಾದ ಖಾತೆ ಸಿಕ್ಕಿಲ್ಲ ಎಂದು ಕೊರಗು ತ್ತಾರೆ. ಅನೇಕ ಅಧಿಕಾರಿಗಳು ತಮಗೆ ಸರಿಯಾದ ಹುದ್ದೆ ಸಿಕ್ಕಿಲ್ಲ ಎಂದು ಬಳಲುತ್ತಾರೆ. ಆದರೆ ಲದ್ದೆಯ ಸೋಮಣ್ಣ ಹುಲ್ಲು ಮಾರುವುದರಲ್ಲೇ ತೃಪ್ತಿಪಟ್ಟು ನಮ್ಮೆಲ್ಲರಿಗೆ ಗುರು ಸ್ಥಾನದಲ್ಲಿ ನಿಲ್ಲುತ್ತಾನೆ. ದುಡಿಯುವುದು ಸ್ವಾಭಿಮಾನದ ಪ್ರತೀಕ. ಬೇಡುವುದು ಅಪಮಾನದ ಪ್ರತೀಕ ಎಂದು ಆತ ಸೂಚಿಸಿದ್ದಾನೆ.

ಲದ್ದೆಯ ಸೋಮಣ್ಣ ಈ ಪುಟ್ಟ ವಚನದಲ್ಲಿ ಆರು ಮುಖ್ಯ ವಿಚಾರಗಳನ್ನು ಹೇಳಿದ್ದಾನೆ. 1) ಪಾಲಿಗೆ ಬಂದ ಕಾಯಕ ವನ್ನು ಮನಸಾರೆ ಮಾಡಬೇಕು. 2) ಕೇವಲ ಸ್ವಂತದ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಕಾಯಕ ಮಾಡದೆ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಮಾಡಬೇಕು. 3) ಗುರು ಎಂದರೆ ಜ್ಞಾನ, ಲಿಂಗ ಎಂದರೆ ನೀತಿಧರ್ಮ, ಜಂಗಮ ಎಂದರೆ ಸಮಾಜ. ಹೀಗೆ ಜ್ಞಾನಕಾರ್ಯ, ನೀತಿ ಧರ್ಮಕಾರ್ಯ ಮತ್ತು ಸಮಾಜಕಾರ್ಯಗಳಿಗಾಗಿ, ದುಡಿದು ಕೂಡಿಸಿದ್ದನ್ನು ವಿನಿಯೋಗಿಸ ಬೇಕು. ಉಳಿದದ್ದನ್ನು ಪ್ರಸಾದವೆಂದು ಭಾವಿಸುವುದರ ಮೂಲಕ ಹಿತ ಮಿತವಾಗಿ ಬಳಸಬೇಕು. 4) ಈ ಲೋಕದೊಳಗೆ ಜನಿಸಿದ ಬಳಿಕ ರೋಗರುಜಿನಗಳು, ಬೇನೆಬೇಸರಿಕೆಗಳು ಬಂದೇ ಬರುತ್ತವೆ. ಕೊನೆಗೆ ಸಾವು ಕೂಡ ನಿಶ್ಚಿತವಾದುದಾಗಿದೆ. ಈ ಸಂದರ್ಭದಲ್ಲಿನ ನೋವು ನರಳಾಟಗಳು ಅನಿವಾರ್ಯ. ಆದ್ದರಿಂದ ಇವನ್ನೆಲ್ಲ ಸಮಾಧಾನ ಚಿತ್ತದಿಂದ ಎದುರಿಸಬೇಕು. 5) ದುಡಿದು ಬದುಕುವ ಛಲ ಉಳ್ಳವರಿಗೆ ಮತ್ತು ಬದುಕಿನ ವಿವಿಧ ಮಜಲುಗಳ ಅರಿವುಳ್ಳವರಿಗೆ ದೇವರ ಹಂಗೂ ಇರಬಾರದು. ಏಕೆಂದರೆ ದೇವರು ನಮ್ಮ ತಾಪತ್ರಯ ಕಳೆಯುವ ಮಂತ್ರ ದಂಡವಲ್ಲ. ಆತ ಏನಿದ್ದರೂ ಬದುಕನ್ನು ಅರ್ಥಮಾಡಿಕೊಳ್ಳಲು ಬೇಕಾದ ಆತ್ಮಸಾಕ್ಷಿ. 6) ಈ ಸತ್ಯವನ್ನು ಅರಿತುಕೊಂಡು ಬದುಕಿದಷ್ಟು ದಿನ ಸಂತೋಷ ಮತ್ತು ಸಮಾಧಾನದಿಂದ ಬದುಕುವುದು.

ಬಸವಣ್ಣನವರ ಬಹುದೊಡ್ಡ ಸಾಧನೆ ಎಂದರೆ ಇಂಥ ಸಹಸ್ರ ಸಹಸ್ರ ಬಡವರಿಗೆ ಆತ್ಮಗೌರವದಿಂದ ಮುನ್ನುಗ್ಗುವಂಥ ಜೀವನ ದರ್ಶನ ಮಾಡಿಸಿದ್ದು. ಜೀವನೋತ್ಸಾಹದಿಂದ ತುಂಬಿದಂಥ ಬಡ ಕಾಯಕಜೀವಿಗಳಿಂದ ಕೂಡಿದ ‘ಶ್ರೀಮಂತ ಸಮಾಜ’ ರಚನೆ ಮಾಡಿದ್ದು. ‘ಎಲ್ಲ ಜಾತಿಗಳು ಸುಳ್ಳು; ಬಡವರೆಲ್ಲ ಒಂದು’ ಎಂಬ ಸತ್ಯದ ನೆಲೆಯ ಮೇಲೆ. ಸಮೂಹ ಪ್ರಜ್ಞೆಯ ಶರಣಸಂಕುಲ ಸೃಷ್ಟಿಸಿದ್ದು. ಆ ಮೂಲಕ ವಿಶ್ವದ ಇತಿಹಾಸದಲ್ಲಿ ಬಡವರಿಗೆ ಸ್ಥಾನವನ್ನು ಕಲ್ಪಿಸಿದ್ದು. ಮಾನವಕುಲಕ್ಕೆ ಒಳಿತಾಗುವ ವಿಚಾರಗಳು ಜನಮಾನಸವನ್ನು ಹೊಕ್ಕಾಗ, ಸಮೂಹ ಪ್ರಜ್ಞೆಯೊಂದಿಗೆ ಕ್ರಿಯಾಶೀಲವಾಗುತ್ತ ಮಾನವೀಯತೆಯ ಮಹಾದರ್ಶನಕ್ಕೆ ಕಾರಣವಾಗುತ್ತವೆ ಎಂಬುದನ್ನು ಸಾಧಿಸಿತೋರಿಸಿದ್ದು.

ಬಸವಣ್ಣನವರ ಈ ಸಾಧನೆಗಳ ಪ್ರತೀಕವಾಗಿ ಲದ್ದೆಯ ಸೋಮಣ್ಣ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾನೆ. ಉತ್ಸಾಹದ ಚಿಲುಮೆಯಾಗಿ ನಾವೂ ಮುನ್ನುಗ್ಗುವಂತೆ ಮಾಡುತ್ತಾನೆ.

ಹುಲಸೂರಿನಲ್ಲಿ ಲದ್ದೆಯ ಸೋಮಣ್ಣನ ಗುಡಿ ಇದೆ. ಇವನ ಆರಾಧ್ಯದೈವ ಸೋಮೇಶ್ವರನ ಗುಡಿ ಲದ್ದೆ ಗ್ರಾಮದಲ್ಲಿದೆ. ‘ಭಾಪು ಲದ್ದೆಯ ಸೋಮಾ’ ಎಂಬ ಅವನ ವಚನಾಂಕಿತದಲ್ಲಿ ಸ್ವಾಭಿಮಾನದ ಉತ್ಸಾಹ ಮತ್ತು ದೇವರ ಜೊತೆಗಿನ ಸಲುಗೆಯ ಭಾವ ಎದ್ದು ಕಾಣುತ್ತದೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ