ಗೌರಿ ಲಂಕೇಶ್ ಹತ್ಯೆ: ಚಳವಳಿಯೊಂದಕ್ಕೆ ನಾಂದಿಯಾಗಲಿ

Update: 2017-09-26 18:41 GMT

ಮೊದಲನೆಯ ಸ್ವಾತಂತ್ರ್ಯ ಚಳವಳಿಯ ಉದ್ದೇಶ ಭಾರತವನ್ನು ವಸಾಹತುಶಾಹಿಗಳಿಂದ ಮುಕ್ತಗೊಳಿಸುವುದಾಗಿತ್ತು. ಈಗ ಎರಡನೆ ಚಳವಳಿ ಭಾರತವನ್ನು ಜಾತಿವಾದಿಗಳಿಂದ, ಮತೀಯವಾದಿಗಳಿಂದ, ಸಂವಿಧಾನ ವಿರೋಧಿಗಳಿಂದ, ಪ್ರಜಾತಂತ್ರ ವಿರೋಧಿಗಳಿಂದ ಮುಕ್ತಗೊಳಿಸಲು ನಡೆಯಬೇಕಿದೆ. ಭಾರತವನ್ನು ಮತ್ತೊಂದು ಪಾಕಿಸ್ತಾನವಾಗಿಸಲು ಹೊರಟಿರುವವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ನಡೆಯಬೇಕಿದೆ. ಭಾರತವನ್ನು ಬಹುಧರ್ಮೀಯ, ಸಹಬಾಳ್ವೆ ಸಂಸ್ಕೃತಿಯ ನಾಡಿನಿಂದ ಏಕಧರ್ಮೀಯ, ಅಸಹಿಷ್ಣು ಸಂಸ್ಕೃತಿಯ ಕೊಂಪೆಯಾಗಿ ಪರಿವರ್ತಿಸಲು ಹವಣಿಸುತ್ತಿರುವವರಿಂದ ಬಿಡುಗಡೆಗೊಳಿಸಲು ನಡೆಯಬೇಕಿದೆ.

ತ್ಸಾಹದ ಬುಗ್ಗೆಯಾಗಿದ್ದ ಗೌರಿ, ಸರಸರನೆ ಚುರುಕಾಗಿ ಓಡಾಡುತ್ತಿದ್ದ ನಮ್ಮ ಗೌರಿ, ಮಾನವತಾವಾದಿ ಗೌರಿ, ಶೋಷಿತ, ದಲಿತ, ದಮನಿತರ ಪರ ಧ್ವನಿ ಎತ್ತುತ್ತಿದ್ದ ಗೌರಿ, ಭ್ರಷ್ಟಾಚಾರ, ಕೋಮುವಾದಗಳ ವಿರುದ್ಧ ವಸ್ತುನಿಷ್ಠ, ನಿರ್ಭೀತ ವರದಿಗಾರಿಕೆಗೆ ಮತ್ತೊಂದು ಹೆಸರಾಗಿದ್ದ ಗೌರಿಲಂಕೇಶ್ ಪತ್ರಿಕೆಯ ಗೌರಿ, ಅಧಿಕಾರದ ಮುಂದೆ ತೆವಳುವವರೇ ಹೆಚ್ಚಿರುವ ಇಂದಿನ ದುರಂತಮಯ ಸನ್ನಿವೇಶದಲ್ಲಿ ಕೊನೆಗಳಿಗೆಯವರೆಗೂ ತನ್ನ ಪತ್ರಿಕಾವೃತ್ತಿಗೆ ಬದ್ಧಳಾಗಿದ್ದ ಗೌರಿ ನಮ್ಮನ್ನೆಲ್ಲ ಅಗಲಿ ಎತ್ತಲೋ ಹೋಗಿಬಿಟ್ಟರು. ಹಂತಕನ ಗುಂಡೇಟಿಗೆ ಬಲಿಯಾದ ಗೌರಿಯ ಅಕಾಲಿಕ ನಿಧನದ ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಕೆ ಇನ್ನು ನಮ್ಮ ನಡುವೆ ಇರುವುದಿಲ್ಲ ಎಂದು ನಂಬಲಿಕ್ಕೇ ಆಗುತ್ತಿಲ್ಲ. ಮನೆ ಮುಂದೆ ಅನಾಥವಾಗಿ ಬಿದ್ದಿದ್ದ ಆ ಹೃದಯ ಕಿವಿಚುವ ದೃಶ್ಯವನ್ನು ನೆನಪಿಸಿಕೊಂಡಾಗಲೆಲ್ಲಾ ದುಃಖ ಉಮ್ಮಳಿಸಿ ಬರುತ್ತದೆ. ಓರ್ವ ಒಂಟಿ, ಅಸಹಾಯಕ ಹೆಣ್ಣುಮಗಳನ್ನು ಹೀಗೆ ಬರ್ಬರವಾಗಿ ಹತ್ಯೆ ಮಾಡಿಸಿದವರು ಮಾನವರಲ್ಲ, ರಕ್ತಪಿಪಾಸು ದಾನವರು. ನಾನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದವರ ಬಗ್ಗೆ ಹೇಳುತ್ತಿಲ್ಲ. ಏಕೆಂದರೆ ಅವರು ಭೂಗತಲೋಕದ ವೃತ್ತಿಪರ ಕ್ರಿಮಿನಲ್‌ಗಳು. ಅವರಿಗಿರುವುದು ಒಂದೇ ತತ್ವ. ಅದು ದುಡ್ಡಿನ ತತ್ವ.

ಗೌರಿಯನ್ನು ಬಲ್ಲವರಿಗೆಲ್ಲಾ ಗೊತ್ತು, ಆಕೆಗೆ ಯಾರ ಜೊತೆಗೂ ವೈಯಕ್ತಿಕ ದ್ವೇಷವಾಗಲಿ, ಹಣಕಾಸಿಗೆ ಸಂಬಂಧಪಟ್ಟ ಜಗಳವಾಗಲಿ ಇರಲಿಲ್ಲ. ಇನ್ನು ಆಕೆಯ ಹತ್ಯೆ ಆಕಸ್ಮಿಕ ಎಂಬ ವಾದವನ್ನೂ ತಳ್ಳಿಹಾಕಬಹುದು. ಹೀಗಾಗಿ ಅದೊಂದು ಮೊದಲೇ ಪ್ಲಾನ್ ಮಾಡಿ ನಡೆಸಿರುವ ಕೃತ್ಯವೇ ಆಗಿರಬೇಕು. ಪೂರ್ವಯೋಜಿತವಾದ ಈ ಕೊಲೆಯ ಸಂಚು ರೂಪಿಸಿ ಅದನ್ನು ಮಾಡಿಸಿದುದು ವ್ಯಕ್ತಿಯಲ್ಲ, ಗುಂಪು ಎಂದೂ ಊಹಿಸಬಹುದಾಗಿದೆ. ಕೆಲವರು ಮಾವೊವಾದಿ ಗುಂಪುಗಳ ಕಡೆ ಬೊಟ್ಟು ಮಾಡುತ್ತಿದ್ದಾರೆ. ಎಸ್‌ಐಟಿ ಮೂಲಗಳ ಹೆಸರಿನಲ್ಲಿ ತುತ್ತೂರಿ ಮಾಧ್ಯಮಗಳ ಮೂಲಕ ಕೆಲವೊಂದು ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಈ ಮಾವೊವಾದಿ ಕೋನವನ್ನು ಸುಲಭದಲ್ಲಿ ತಳ್ಳಿಹಾಕಬಹುದು. ಏಕೆಂದರೆ ಮಾವೊವಾದಿಗಳು ಯಾವತ್ತೂ ತಮ್ಮ ಶತ್ರುವನ್ನು ಬಹಿರಂಗವಾಗಿ ಗುರುತಿಸುತ್ತಾರೆ ಮಾತ್ರವಲ್ಲ ಹತ್ಯೆಯ ನಂತರ ಅದನ್ನು ತಾವೇ ಮಾಡಿರುವುದಾಗಿ ಸಾರ್ವಜನಿಕವಾಗಿ ಘೋಷಿಸುತ್ತಾರೆ. ಮಾಜಿ ನಕ್ಸಲ್‌ಗಳೇ ಹೇಳುವ ಹಾಗೆ ಮುಖ್ಯವಾಹಿನಿಗೆ ಬರಲಿಚ್ಛಿಸುವವರು ಮಾವೊವಾದಿಗಳೊಂದಿಗೆ ಚರ್ಚಿಸಿದ ಬಳಿಕವೇ ಅದಕ್ಕೆ ಮುಂದಾಗುತ್ತಾರೆ. ತಮ್ಮಲ್ಲಿ ಕೆಲವರನ್ನು ಮುಖ್ಯವಾಹಿನಿಗೆ ತಂದ ಗೌರಿಯಂಥವರ ಮೇಲೆ ಮಾವೊವಾದಿಗಳು ಸಿಟ್ಟಾಗಿರುವ ಸಾಧ್ಯತೆ ಹೆಚ್ಚುಕಡಿಮೆ ಇಲ್ಲವೆಂದೇ ಹೇಳಬಹುದು. ಹೀಗಾಗಿ ಆಕೆ ವಿಚಾರಗಳ ತಾಕಲಾಟಕ್ಕೆ ಬಲಿಯಾಗಿರುವ ಸಾಧ್ಯತೆಯೇ ಹೆಚ್ಚು. ಗೌರಿಯನ್ನು ಕೊಲ್ಲಿಸಿದವರು ಯಾರೇ ಇರಲಿ ಒಂದಂತೂ ನಿಜ, ಅವರು ಶುದ್ಧ ಹೇಡಿಗಳು. ಆಕೆ ನಂಬಿದ ಸಿದ್ಧಾಂತದ ಪ್ರಖರತೆಗೆ ಬೆದರಿದ ಹೇಡಿಗಳ ಗುಂಪು ಬಾಡಿಗೆ ಹಂತಕರ ಮೂಲಕ ಆಕೆಯ ಪ್ರಾಣ ತೆಗೆದಿದೆೆ. ಹಾಗಾದರೆ ಯಾರಿರಬಹುದು ಈ ಸೈದ್ಧಾಂತಿಕ ವಿರೋಧಿ ಗುಂಪು?

2014ರ ನಂತರ ಭಾರತದಾದ್ಯಂತ ಅಸಹಿಷ್ಣುತೆಯ ಮಟ್ಟದಲ್ಲಿ ಭಾರಿ ಏರಿಕೆಯಾಗಿರುವುದನ್ನು ರಾಷ್ಟ್ರೀಯ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲಾಗಿದೆ. ಅಸಹಿಷ್ಣು ಗುಂಪುಗಳ ದಾಳಿಗಳಿಗೆ ದಲಿತರು, ಅಲ್ಪಸಂಖ್ಯಾತರಷ್ಟೇ ಅಲ್ಲದೆ ಲೇಖಕರು, ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ವಿಚಾರವಾದಿಗಳು ಕೂಡಾ ಬಲಿಯಾಗುತ್ತಿದ್ದಾರೆ. ಈ ಗುಂಪುಗಳ ಕಾರ್ಯವಿಧಾನ, ಅವು ಪ್ರತಿಪಾದಿಸುವ ವಿಚಾರಗಳು ಮತ್ತು ಆರಿಸುವ ಗುರಿಗಳನ್ನು ಗಮನಿಸಿದಾಗ ಇದೆಲ್ಲವೂ ಒಂದು ಭಾರೀ ಶಕ್ತಿಶಾಲಿ ಕೇಂದ್ರ ತಂಡದ ನಿರ್ದೇಶನದಲ್ಲಿ ನಡೆಯುತ್ತಿರುವಂತಿದೆ. ಮಿದುಳಲ್ಲಿ ಮಲಮೂತ್ರ ತುಂಬಿಸಿಕೊಂಡಿರುವ ಈ ದಾನವ ಗುಂಪುಗಳು ವಿರೋಧಿಗಳ ಮುಖಕ್ಕೆ ಮಸಿ ಎರಚುತ್ತವೆ. ಸೆಗಣಿ ಹಚ್ಚುತ್ತವೆ. ಅವರ ಮೇಲೆ ಹಲ್ಲೆ ಮಾಡುತ್ತವೆ. ಅವರನ್ನು ಕೊಲೆ ಮಾಡುತ್ತವೆ. ಜೀವಂತ ಸುಟ್ಟುಹಾಕುತ್ತವೆೆ. ಬಾಂಬ್ ಸ್ಫೋಟಿಸುತ್ತವೆ. ಮಾತೆಯಾಗಲಿರುವವರ ಹೊಟ್ಟೆ ಸೀಳಿ ಭ್ರೂಣವನ್ನು ತ್ರಿಶೂಲಕ್ಕೆ ಚುಚ್ಚಿ ಕೇಕೆ ಹಾಕುತ್ತವೆೆ. ನಿರ್ದಿಷ್ಟ ವರ್ಗ ಮಾತ್ರ ಈ ದೇಶವನ್ನು ಆಳಲು ಅರ್ಹವೆಂದು ಸಾರುತ್ತವೆ. ದಲಿತ, ದಮನಿತರನ್ನು ಎರಡನೆ ದರ್ಜೆಯ ಪ್ರಜೆಗಳಾಗಿಸಲು ಉದ್ದೇಶಿಸುತ್ತವೆ. ತಮಾಷೆ ಏನೆಂದರೆ ಸ್ವದೇಶಿ ವಸ್ತುಗಳ ಪ್ರಬಲ ಪ್ರತಿಪಾದಕರು ತಾವೆಂದು ಹೇಳಿಕೊಳ್ಳುವ ಇವರು ಅನುಸರಿಸುವುದು ವಿದೇಶಗಳಿಂದ ಎರವಲು ಪಡೆದ ಸಿದ್ಧಾಂತವನ್ನು. 30ರ ದಶಕದಲ್ಲಿ ಜರ್ಮನಿ, ಇಟೆಲಿಗಳಲ್ಲಿ ಪ್ರಚಲಿತವಿದ್ದ ಆ ರಾಜಕೀಯ ಸಿದ್ಧಾಂತ ಯಾವುದೆಂದು ನಮಗೆಲ್ಲಾ ಗೊತ್ತೇ ಇದೆ. ಈ ಮಾನವವಿರೋಧಿ ಸಿದ್ಧಾಂತವನ್ನು ಗೌರಿ ತೀವ್ರವಾಗಿ ವಿರೋಧಿಸುತ್ತಿದ್ದರು. ಇದಲ್ಲದೆ ಕಲಬುರ್ಗಿಯವರಂತೆ ಗೌರಿ ಕೂಡಾ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕಲ್ಪಿಸಬೇಕೆಂದು ತನ್ನ ಪತ್ರಿಕೆಯ ಮೂಲಕ ಬಲವಾದ ಧ್ವನಿ ಎತ್ತಿದ್ದರು. ಈ ಎಲ್ಲ ವಿಷಯಗಳನ್ನು ಪರಿಗಣಿಸಿದಾಗ ಸೈದ್ಧಾಂತಿಕ ಶತ್ರುವಾದ ಗೌರಿಯ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸುವ ಸೂಚನೆ ಮೇಲೆ ಹೇಳಿದ ಶಕ್ತಿಶಾಲಿ ತಂಡದಿಂದಲೇ ಬಂದಿರಬಹುದೆಂದು ತೋರುತ್ತದೆ. ಅಂತಹದೊಂದು ಸೂಚನೆ ಇನ್ಯಾರಿಂದಲೂ ಬರುವ ಸಾಧ್ಯತೆಗಳು ಇಲ್ಲವೆೆಂದೇ ಹೇಳಬಹುದು.

ನಾನು ಕೆಲವು ಗುಂಪುಗಳ ಬಗ್ಗೆ ಹೇಳಿದೆ. ಅದೇ ಗುಂಪುಗಳಿಗೆ ಸೇರಿದ ಗೋವಾ ಮೂಲದ ಸಂಸ್ಥೆಯೊಂದರ ಕೆಲವು ಕಾರ್ಯಕರ್ತರು ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆಗಳಲ್ಲಿ ಭಾಗಿಯಾಗಿರಬಹುದೆಂದು ತನಿಖಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಆದರೆ ಈ ಹಂತಕ್ಕೆ ಮುಟ್ಟಿದ ನಂತರ ತನಿಖೆ ಬೇಕೋ ಬೇಡವೋ ಎಂಬ ರೀತಿಯಲ್ಲಿ ನಡೆಯುತ್ತಿದೆ. ಹೆಚ್ಚುಕಡಿಮೆ ನಿಂತೇ ಹೋಗಿದೆ ಎನ್ನಬಹುದು. ಕೆಲವು ವರ್ಷಗಳ ಕೆಳಗೆ ಇದೇ ಸಂಸ್ಥೆಯ ಮಹಾರಾಷ್ಟ್ರದ ಕಚೇರಿಯ ಮೇಲೆ ದಾಳಿ ನಡೆಸಿದ್ದ ಸಿಬಿಐಗೆ ಹಲವಾರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಹೆಸರುಗಳಿದ್ದ ಹಿಟ್ ಲಿಸ್ಟ್ ಸಿಕ್ಕಿದ್ದಾಗಿ ವರದಿಯಾಗಿತ್ತು. 2008ರ ಥಾಣೆ, ವಾಶಿ, ಪನ್ವೇಲ್ ಸ್ಪೋಟಗಳು, 2009ರ ಗೋವಾ ಸ್ಪೋಟ ಮತ್ತು ಮೀರಜ್, ಸಾಂಗ್ಲಿ, ಇಚ್ಚಲ್‌ಕರಂಜಿ ಕೋಮು ದಂಗೆಗಳ ಹಿಂದೆ ಇದೇ ಸಂಸ್ಥೆಯ ಕೈವಾಡ ಪತ್ತೆಯಾಗಿದೆ. ಇದೆಲ್ಲದರ ವಿವರಗಳು 2011ರಲ್ಲಿ ಎಸ್‌ಐಟಿ ಮುಖ್ಯಸ್ಥರಾಗಿದ್ದ ರಾಕೇಶ್ ಮರಿಯಾ ಅವರ 1,000 ಪುಟಗಳ ವರದಿಯಲ್ಲಿದೆ. ಈ ಸಂಸ್ಥೆಯ ಆಶ್ರಮಗಳಲ್ಲಿ ಸಾಧಕ, ಸಾಧಕಿಯರಿಗೆ ದಿವ್ಯ ಔಷಧದ ಹೆಸರಿನಲ್ಲಿ ಮಾನಸಿಕ ರೋಗಿಗಳಿಗಾಗಿರುವ ಅಮಿಸಲ್‌ಪ್ರೈಡ್, ರೆಸ್ಪೆರಿಡಾನ್‌ನಂಥಾ ಡ್ರಗ್ಸ್ ತಿನ್ನಿಸುವ ವಿಷಯವೂ ಪತ್ತೆಯಾಗಿದೆ. ರಾಕೇಶ್ ಮರಿಯಾ ವರದಿಯ ಗತಿ ಏನಾಯಿತೋ ಗೊತ್ತಿಲ್ಲ. ಬಹುಶಃ ಮಿಕ್ಕೆಲ್ಲಾ ವರದಿಗಳ ಹಾಗೆ ಯಾವುದೋ ಒಂದು ಮೂಲೆಯಲ್ಲಿ ಕೊಳೆಯುತ್ತಾ ಬಿದ್ದಿರಬೇಕು.

ಇವತ್ತು ಗೌರಿಯ ಸಾವನ್ನು ಸಂಭ್ರಮಿಸುವಂತಹ ಕೀಳುಮಟ್ಟಕ್ಕೆ ಇಳಿದವರು ಕೂಡಾ ಅದೇ ಕೇಂದ್ರ ತಂಡದ ನಿರ್ದೇಶನದಲ್ಲಿರುವ ಮಾನವವಿರೋಧಿ ಗುಂಪುಗಳ ಸದಸ್ಯರೇ ಆಗಿರಬೇಕೆೆಂದು ತೋರುತ್ತದೆ. ಶಾಂತಿ, ಸೌಹಾರ್ದ, ಅಹಿಂಸಾ ತತ್ವವನ್ನು ವಿರೋಧಿಸುವ ಇಂತಹ ಗುಂಪುಗಳಿಗೆ ಸೇರಿದವನೊಬ್ಬ ಗಾಂಧೀಜಿಯನ್ನು ಗುಂಡಿಟ್ಟು ಸಾಯಿಸಿದ ಬಳಿಕ ಅವರೆಲ್ಲರೂ ದೇಶಾದ್ಯಂತ ಸಿಹಿ ಹಂಚಿಕೊಂಡು ಸಂಭ್ರಮಪಟ್ಟಿದ್ದರು. ಸುಪ್ರಸಿದ್ಧ ಸಾಹಿತಿ ಅನಂತಮೂರ್ತಿ ನಿಧನರಾದಾಗಲೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಎರಡು ವರ್ಷಗಳ ಹಿಂದೆ ಕಲಬುರ್ಗಿ ಹತ್ಯೆಯಾದಾಗಲೂ ಇದೇ ರೀತಿ ಸಂಭ್ರಮಿಸಿದ ಅದೇ ಮನಸ್ಸುಗಳು ಇದೀಗ ಗೌರಿ ಹತ್ಯೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಕೃತಿಯನ್ನು ತೋರಿಸುತ್ತಿವೆ, ಹೊಟ್ಟೆಯೊಳಗೆ ಧಗಧಗಿಸುತ್ತಿರುವ ಹಾಲಾಹಲವನ್ನು ಕಾರುತ್ತಿವೆ. ಇವರಲ್ಲಿ ಒಬ್ಬನನ್ನೂ ಬಿಡದೆ ಎಲ್ಲರನ್ನೂ ವಿಚಾರಣೆಗೊಳಪಡಿಸಿದರೆ ಕೆಲವೊಂದು ಮಹತ್ವದ ಸುಳಿವುಗಳು ಲಭ್ಯವಾಗುವುದು ಖಚಿತ.

ಗೌರಿ ಹತ್ಯೆಗೂ ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆಗಳಿಗೂ ಸಾಮ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ ಹತ್ಯೆಗಳ ತನಿಖೆಯ ವೈಖರಿಯನ್ನು ನೋಡುವಾಗ, ಕಲಬುರ್ಗಿ ಹತ್ಯೆಯ ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿಗೆ ಸಹಕಾರ ಸಿಗದಿರುವುದನ್ನು ಕಾಣುವಾಗ ಇಡೀ ತನಿಖಾ ಪ್ರಕ್ರಿಯೆ ಮೇಲೆ ವಿಶ್ವಾಸವಾದರೂ ಹೇಗೆ ಬರುತ್ತದೆ? ಇವತ್ತು ಪಂಜರದ ಗಿಣಿಗಳಾಗಿರುವ ಸಿಬಿಐ, ಎನ್‌ಐಎಗಳು ಮಾಲೇಗಾಂವ್, ಅಜ್ಮೀರ್ ದರ್ಗಾ, ಸಂಜೋತಾ ಎಕ್ಸ್‌ಪ್ರೆಸ್ ಮೊದಲಾದ ಪ್ರಕರಣಗಳಲ್ಲಿ ಏನು ಮಾಡುತ್ತಾ ಇವೆ ಎಂದು ಎಲ್ಲರಿಗೂ ಗೊತ್ತು. ಹೀಗಿರುವಾಗ ಗೌರಿ ಹತ್ಯೆಯನ್ನು ಮತ್ತೆ ಅದೇ ಸಂಸ್ಥೆಗಳಿಗೆ ಒಪ್ಪಿಸುವುದು ಮೂರ್ಖತನದ ಪರಮಾವಧಿಯೇ ಸರಿ. ಇವತ್ತು ಸಿಬಿಐಗೆ ವಹಿಸಬೇಕೆಂದು ಹೇಳುತ್ತಿರುವವರ ಉದ್ದೇಶ ಏನಿರಬಹುದು ನೀವೇ ಊಹಿಸಿ. ಆದುದರಿಂದ ನಾವೆಲ್ಲರೂ ಇಂದು ಒಂದು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗಾಗಿ ಒತ್ತಾಯಿಸುತ್ತಲೇ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸಬೇಕಾಗಿದೆ. ಗೌರಿ ಹತ್ಯೆಯನ್ನು ಒಂದು ಭಯೋತ್ಪಾದಕ ಕೃತ್ಯವೆಂದು ಘೋಷಿಸಲು ಒತ್ತಾಯಿಸಬೇಕಾಗಿದೆ. ಆರೋಪಿಗಳ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಗಳಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಬೇಕಾಗಿದೆ. ಇದರ ಜೊತೆಗೆ ಒಂದು ರಾಷ್ಟ್ರವ್ಯಾಪಿ ಹೋರಾಟವನ್ನೂ ಪ್ರಾರಂಭಿಸಬೇಕಾಗಿದೆ.

ಕಳೆದ ಹಲವಾರು ದಶಕಗಳ ಅವಧಿಯಲ್ಲಿ ಕೈರ್ಲಾಂಜಿ, ರಾಯಚೂರು, ವಿಲ್ಲುಪುರಂ, ಮಲ್ಕನ್‌ಗಿರಿ, ಮೀರತ್, ಉನಾ, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಉದ್ದಗಲಕ್ಕೂ ಜಾತಿವಾದಿ ಹಿಂಸಾಚಾರಗಳಿಗೆ ಸಾವಿರಗಟ್ಟಲೆಯಲ್ಲಿ ದಲಿತರು, ಆದಿವಾಸಿಗಳು ಪ್ರಾಣ ಕಳೆದುಕೊಂಡಿದ್ದಾರೆ. ನೆಲ್ಲಿ, ದಿಲ್ಲಿ, ಮುಂಬೈ, ಗುಜರಾತ್ ಮೊದಲಾದ ಕಡೆ ನೂರಾರು ಕೋಮುವಾದಿ ಹಿಂಸಾಚಾರಗಳಿಗೆ ಸಾವಿರಾರು ಅಲ್ಪಸಂಖ್ಯಾತರು ಬಲಿಯಾಗಿದ್ದಾರೆ. ನಮ್ಮದೇ ಕರಾವಳಿಯಲ್ಲಿ ಹಲವರು ಮತ್ತು ರಾಷ್ಟ್ರ ಮಟ್ಟದಲ್ಲಿ ಮುಹಮ್ಮದ್ ಅಖ್ಲಾಕ್, ಪೆಹ್ಲೂ ಖಾನ್, ಜುನೈದ್ ಮುಂತಾದವರು ಕೊಲೆಗೀಡಾಗಿದ್ದಾರೆ. ಇದರೊಂದಿಗೆ ಪತ್ರಕರ್ತರ, ಆರ್‌ಟಿಐ ಕಾರ್ಯಕರ್ತರ, ವಿಚಾರವಾದಿಗಳಾದ ದಾಭೋಲ್ಕರ್, ಪನ್ಸಾರೆ, ಕಲಬುರ್ಗಿಯವರ ಹತ್ಯೆಗಳು ಮತ್ತು ಇದೀಗ ಗೌರಿಯ ಹತ್ಯೆ ಸಮಾಜದಲ್ಲಿ ತಲ್ಲಣ ಉಂಟುಮಾಡಿದೆ. ದೇಶದಲ್ಲಿ ನಡೆಯುತ್ತಿರುವ ಈ ಜನವಿರೋಧಿ ಬೆಳವಣಿಗೆಗಳೆಲ್ಲವೂ ಖಂಡಿತಾ ಸಾಮಾನ್ಯ ಜನರ ಮನಸ್ಸನ್ನು ಕಲಕಿವೆ. ಜನರ ಆಕ್ರೋಶ ಸ್ವಲ್ಪಸ್ವಲ್ಪವಾಗಿಯೇ ಹೆಚ್ಚುತ್ತಿರುವುದರಲ್ಲಿ ಅನುಮಾನವಿಲ್ಲ. ಆ ಆಕ್ರೋಶ ಸಹನೆಯ ಕಟ್ಟೆಯನ್ನು ಒಡೆದು ಮಹಾಪೂರವಾಗಬೇಕು. ಮತ್ತೊಂದು ಸ್ವಾತಂತ್ರ್ಯ ಚಳವಳಿ ನಡೆಯಬೇಕು. ಆಗಷ್ಟೆ ಬದಲಾವಣೆ ಸಾಧ್ಯ.

ಮೊದಲನೆಯ ಸ್ವಾತಂತ್ರ್ಯ ಚಳವಳಿಯ ಉದ್ದೇಶ ಭಾರತವನ್ನು ವಸಾಹತುಶಾಹಿಗಳಿಂದ ಮುಕ್ತಗೊಳಿಸುವುದಾಗಿತ್ತು. ಈಗ ಎರಡನೆ ಚಳವಳಿ ಭಾರತವನ್ನು ಜಾತಿವಾದಿಗಳಿಂದ, ಮತೀಯವಾದಿಗಳಿಂದ, ಸಂವಿಧಾನ ವಿರೋಧಿಗಳಿಂದ, ಪ್ರಜಾತಂತ್ರ ವಿರೋಧಿಗಳಿಂದ ಮುಕ್ತಗೊಳಿಸಲು ನಡೆಯಬೇಕಿದೆ. ಭಾರತವನ್ನು ಮತ್ತೊಂದು ಪಾಕಿಸ್ತಾನವಾಗಿಸಲು ಹೊರಟಿರುವವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ನಡೆಯಬೇಕಿದೆ. ಭಾರತವನ್ನು ಬಹುಧರ್ಮೀಯ, ಸಹಬಾಳ್ವೆ ಸಂಸ್ಕೃತಿಯ ನಾಡಿನಿಂದ ಏಕಧರ್ಮೀಯ, ಅಸಹಿಷ್ಣು ಸಂಸ್ಕೃತಿಯ ಕೊಂಪೆಯಾಗಿ ಪರಿವರ್ತಿಸಲು ಹವಣಿಸುತ್ತಿರುವವರಿಂದ ಬಿಡುಗಡೆಗೊಳಿಸಲು ನಡೆಯಬೇಕಿದೆ. ಅಂತಹ ಎರಡನೆ ಸ್ವಾತಂತ್ರ್ಯ ಚಳವಳಿಯೊಂದಕ್ಕೆ ನಾಂದಿ ಹಾಡುವುದೇ ಗೌರಿಯೂ ಸೇರಿದಂತೆ ಹತ್ಯೆಗೀಡಾದ ಹುತಾತ್ಮರೆಲ್ಲರಿಗೂ ನಾವು ಸಲ್ಲಿಸಬಹುದಾದ ಕಾಣಿಕೆ. ಆಗಷ್ಟೆ ಅವರೆಲ್ಲರ ಆತ್ಮಕ್ಕೆ ಚಿರಶಾಂತಿ ಸಿಗಬಹುದು.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News

ಜಗದಗಲ
ಜಗ ದಗಲ