ಸುರತ್ಕಲ್ ಎನ್ನುವ ಸಾಂಸ್ಕೃತಿಕ ಊರು

Update: 2017-09-26 18:42 GMT

ನನ್ನ ಮಕ್ಕಳಿಬ್ಬರೂ ಸೈಂಟ್‌ಆ್ಯನ್ಸ್‌ನ ಕನ್ನಡ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಬೆಳಗ್ಗೆ ಸಂಜೆ ಅಪ್ಪನ ಜತೆಯಲ್ಲಿ ಪ್ರಯಾಣ. ಕೆಲವು ಸಂಜೆಗಳಲ್ಲಿ ಅವರನ್ನು ಕರೆತರುವ ಜವಾಬ್ದಾರಿ ನನಗೂ ಇರುತ್ತಿತ್ತು. ಈ ನಡುವೆ ನನ್ನ ಮನೆ ಕೆಲಸಕ್ಕೆ ನೆರವಾಗಲು ನನ್ನವರ ದೂರದ ಸಂಬಂಧಿ ನಮ್ಮ ಮನೆಗೆ ಬಂದಳು. ಅವಳು 7ನೆಯ ತರಗತಿಯ ವರೆಗೆ ಮನೆಯಲ್ಲೇ ಕುಳಿತು ಬೀಡಿ ಕಲಿಯುವ ಅಗತ್ಯವಿತ್ತು. ತಂದೆಯನ್ನು ಕಳಕೊಂಡ ಆ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಮೂವರು ಹುಡುಗಿಯರು. ಆದುದರಿಂದ ತಾಯಿ ಇವಳನ್ನು ನಾವು ಇರಿಸಿಕೊಳ್ಳುವುದಕ್ಕೆ ಒಪ್ಪಿ ಸಹಕರಿಸಿದರು. ಎರಡು ವರ್ಷದ ಅವಧಿ ನಮ್ಮ ಜತೆಗೆ ಇದ್ದಳು. ಮಕ್ಕಳಿಬ್ಬರೂ ಶಾಲೆಗೆ ಹೋಗುತ್ತಿದ್ದುದರಿಂದ ನನ್ನ ಮಾವನವರು ತಮ್ಮ ಮಗಳ ಮನೆಗೆ ಹೋದವರು ಅಲ್ಲೇ ಉಳಿದುಕೊಂಡರು.

ನನ್ನ ತವರು ಮನೆಯಲ್ಲಿ ಅದುವರೆಗೆ ಕಾಯಿಲೆಯೆಂದು ಮಲಗಿರದ ನನ್ನ ತಂದೆಯವರು ಧಿಡೀರಾಗಿ ಕಾಯಿಲೆಬಿದ್ದು ಆರು ತಿಂಗಳು ನರಳಿ ನಮ್ಮನ್ನು ಅಗಲಿದರು. ಮುಂದಿನ ವರ್ಷದ ರಜೆಯಲ್ಲಿ ತನ್ನ ಇನ್ನೊಬ್ಬ ಮಗಳ ಮನೆಗೆ ಹೋದ ಅತ್ತೆಯವರು ಒಂದು ವಾರದ ಅನಾರೋಗ್ಯದೊಂದಿಗೆ ತೀರಿಕೊಂಡರು. ಅಲ್ಲಿಗೆ ಬಂದ ಮಾವ ಆ ಮಗಳ ಮನೆಯಲ್ಲೇ ಉಳಿಯುವ ನಿರ್ಧಾರ ಮಾಡಿದರು. ಈಗ ಕೃಷ್ಣಾಪುರದ ಮನೆಗೆ ದಿನಾ ಬೆಳಗ್ಗೆ ಬೀಗ ಹಾಕಿ ಹೊರಡುವ ವ್ಯವಸ್ಥೆ ನಮ್ಮದು. ನಮ್ಮ ಸಂಬಂಧಿ ಹುಡುಗಿಯನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಹೋಗಲು ಮನಸೊಪ್ಪದೇ ಅವಳನ್ನು ಹಿಂದಕ್ಕೆ ಕಳುಹಿಸಿದ್ದಾಯಿತು. ಇದೀಗ ಬೆಳಗ್ಗಿನ ಉಪಾಹಾರ ತಯಾರಿಸಿ, ಮಧ್ಯಾಹ್ನದ ಬುತ್ತಿಗೆ ತಯಾರಿಸುವಲ್ಲಿ ನಾನು ಸೋತು ಸುಣ್ಣವಾದೆ. ಜತೆಗೆ ಮಂಗಳೂರು ಕನ್ನಡ ಸಂಘದ ಕಾರ್ಯದರ್ಶಿತ್ವದ ಹೊಣೆ, ನಮ್ಮವರೂ ಕನ್ನಡ ಸಾಹಿತ್ಯ ಪರಿಷತ್‌ನ ಹಾಗೂ ಇತರ ಕಾರ್ಯಕ್ರಮಗಳ ಕಾರಣದಿಂದ ತಡವಾಗುವಲ್ಲಿ ಮಕ್ಕಳಿಬ್ಬರೂ ತಾವೇ ಮನೆಗೆ ಮೊದಲಾಗಿ ಹೋಗುವ ಸಂದರ್ಭಗಳೂ ಬರುತ್ತಿತ್ತು. ಆಗ ಪಕ್ಕದ ಮನೆಯ ಶೀನಣ್ಣನವರ ಮಕ್ಕಳು ನನ್ನ ಮಕ್ಕಳಿಗೆ ಜತೆಯಾಗಿರುತ್ತಿದ್ದರು.

ಈ ಆತ್ಮೀಯತೆಯಿಂದ ಮುಂದಿನ ಶೈಕ್ಷಣಿಕ ವರ್ಷದ ವೇಳೆ 7ನೆ ತರಗತಿ ಮುಗಿಸಿ ಇನ್ನು ಶಾಲೆ ಬೇಡ ಎಂದು ತೀರ್ಮಾನಿಸಿದ ಶೀನಣ್ಣನ ಹಿರಿಯ ಮಗಳು ಯಶವಂತಿಯನ್ನು ಹೈಸ್ಕೂಲಿಗೆ ಸೇರುವಂತೆ ಒತ್ತಾಯಿಸಿದೆ. 7ನೆ ಬ್ಲಾಕಿನಲ್ಲಿರುವ ಹೈಸ್ಕೂಲಿಗೆ ಆಕೆ ಸೇರಿದಲ್ಲಿ ಆಕೆಯ ಶೈಕ್ಷಣಿಕ ವೆಚ್ಚ ಭರಿಸುವ ಜವಾಬ್ದಾರಿಯೊಂದಿಗೆ ಅವಳಿಂದ ನನಗೆ ಬೆಳಗ್ಗೆ ಒಂದಿಷ್ಟು ಮನೆಗೆಲಸಕ್ಕೆ ಸಹಾಯವನ್ನು ಬೇಡಿದೆ. ಆಗ ಇನ್ನೂ ಬಾಲಕಾರ್ಮಿಕ ವಿರೋಧಿ ನೀತಿ ಇದ್ದರೂ ಇದ್ದಂತೆ ಕಾಣುತ್ತಿರಲಿಲ್ಲ. ಬಾಲಕಾರ್ಮಿಕ ನೀತಿ ಕಡ್ಡಾಯ ಶಿಕ್ಷಣದ ಜಾರಿಗೆ ಪೂರಕವಾದ ಕಾನೂನು ಹೌದು. ಆದರೆ ಮನೆ ಮಕ್ಕಳು ಮನೆಯಲ್ಲಿ ಮಾಡಬಹುದಾದ ಸಣ್ಣಪುಟ್ಟ ಕೆಲಸಗಳನ್ನು ಕಾರ್ಮಿಕ ನೀತಿಗೆ ಅಳವಡಿಸಲಾಗದು. ನಾವೇ ಸ್ವತಃ ನಮ್ಮ ಮನೆಯಲ್ಲಿ ಅಮ್ಮನಿಗೆ ಮನೆ ಕೆಲಸದಲ್ಲಿ ನೆರವಾದವರೇ. ಹಾಗೆಯೇ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಿದವರೇ ಅಲ್ಲವೇ? ನಾನಂತೂ ಆಕೆಯನ್ನು ಶಾಲೆ ಬಿಡಿಸಿ ಮನೆಕೆಲಸಕ್ಕೆ ಇಟ್ಟುಕೊಳ್ಳುವ ಕ್ರೌರ್ಯ ಮಾಡಲಿಲ್ಲ ಎಂಬ ಸಮಾಧಾನ ನನಗೆ ಇದೆ.

ಶೀನಣ್ಣನ ಮಡದಿಗೆ ಮಕ್ಕಳು ಕಲಿಯಬೇಕೆಂದು ಇಚ್ಛೆ ಇತ್ತು. ಆದರೆ ಐದು ಮಕ್ಕಳನ್ನು ಸಾಕುವುದೇ ಕಷ್ಟವಾಗಿರುವಾಗ ನನ್ನ ನೆರವು ಅವರಿಗೆ ಒಪ್ಪಿಗೆಯಾಯಿತು. ಇದರಂತೆ ಆಕೆ ಬೆಳಗ್ಗೆ ಮನೆಗುಡಿಸಿ ಒರಸುವ ಕೆಲಸ ಮಾಡಿಕೊಡುತ್ತಿದ್ದಳು. ಸಂಜೆ ನನ್ನ ಮಕ್ಕಳ ಜತೆಯಲ್ಲಿದ್ದು ಆಕೆಯೂ ತನ್ನ ಶಾಲೆಯಲ್ಲಿ ನೀಡಿದ ಹೋಂವರ್ಕ್ ಮಾಡುತ್ತಿದ್ದಳು. ತನಗೆ ಗೊತ್ತಿಲ್ಲದ ಉತ್ತರಗಳನ್ನು, ಲೆಕ್ಕಗಳನ್ನು ನಮ್ಮಿಬ್ಬರಿಂದ ಕೇಳಿ ತಿಳಿದುಕೊಳ್ಳುತ್ತಿದ್ದಳು. ಆಕೆಯ ಪುಟ್ಟ ಕೈಗಳು ನನಗೆ ನೆರವು ನೀಡಿದಂತೆಯೇ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣಳಾದಳು. ಅಲ್ಲಿಯೇ ಪಿಯುಸಿ ತರಗತಿಗೆ ಪದವಿಪೂರ್ವ ಕಾಲೇಜು ಇದ್ದುದರಿಂದ ಈಗ ಅವಳೇ ವಿದ್ಯೆ ಮುಂದುವರಿಸುವ ಧೈರ್ಯವನ್ನೂ ಮಾಡಿದಳು. ಅವಳ ಓದಿನ ಪ್ರಭಾವದಿಂದ ಅವರ ವಾತಾವರಣ ಬದಲಾಯಿತು. ಚಿಕ್ಕವರೆಲ್ಲರೂ ಹೈಸ್ಕೂಲು ಸೇರಿ ವಿದ್ಯಾಭ್ಯಾಸ ಗಳಿಸುವುದಕ್ಕೆ ಸಮರ್ಥರಾದರು.

ಶನಿವಾರ ರವಿವಾರಗಳಲ್ಲಿ ನಮ್ಮ ಮನೆಯಲ್ಲಿದ್ದುಕೊಂಡು ನನ್ನ ಹೆಚ್ಚಿನ ಕೆಲಸಗಳಿಗೆ ನೆರವು ನೀಡುತ್ತಿದ್ದಳು. ಸಂಜೆಯ ಹೊತ್ತು ನಳ್ಳಿಯಿಂದ ನೀರು ತಂದು ಟ್ಯಾಂಕ್ ತುಂಬುತ್ತಿದ್ದಳು. ನಮ್ಮ ಹಾಗೂ ನಮ್ಮ ಮಕ್ಕಳ ಜತೆಯಲ್ಲಿ ಸಾಹಿತ್ಯ ಕಾರ್ಯಕ್ರಮಗಳಿಗೆ ಬರುವ ಆಸಕ್ತಿ ಹೊಂದಿದಳು. ನಮ್ಮ ಹೇಮಾಂಶು ಪ್ರಕಾಶನದ ಪುಸ್ತಕ ಪ್ರದರ್ಶನ, ಪುಸ್ತಕ ಮಾರಾಟದ ಕೆಲಸವನ್ನೂ ಮಾಡುತ್ತಾ ಒಂದರ್ಥದಲ್ಲಿ ಮನೆಮಗಳಾಗಿ ಬೆಳೆದಳು. ಪಿಯುಸಿ ಪರೀಕ್ಷೆಯನ್ನೂ ಮುಗಿಸಿದ ಅವಳು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿಯನ್ನೂ ಮುಗಿಸಿದಳು. ಇಂದು ತನ್ನ ಮನೆಯ ನಿರ್ವಹಣೆಯನ್ನು ತನ್ನ ಸ್ವ- ಉದ್ಯೋಗ ಟೈಲರಿಂಗ್‌ನಿಂದ ಮಾಡುವ ಒಬ್ಬ ಧೈರ್ಯವಂತ ಹೆಣ್ಣು ಮಗಳಾಗಿದ್ದಾಳೆ ಎನ್ನುವುದು ನನಗೆ ತೃಪ್ತಿ ನೀಡುವ ಅಂಶ.

ಈ ಅವಧಿಯಲ್ಲಿ ನನ್ನ ಮಗಳ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಯಿತು. ಹೈಸ್ಕೂಲಿಗೆ ಮಂಗಳೂರಿಗೆ ಬರುವ ಕಷ್ಟದ ಬದಲು ವಿದ್ಯಾದಾಯಿನಿ ಹೈಸ್ಕೂಲಿಗೆ ಸೇರಿಸುವ, ಹಾಗೆಯೇ ಮಗನನ್ನು ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸುವ ನಿರ್ಧಾರ ಮಾಡಿದೆವು. ಅಕ್ಕ ತಮ್ಮ ಇಬ್ಬರೂ ಜತೆಯಾಗಿ ಹೋಗಿ ಬರಲು ಅನುಕೂಲವಾಗುತ್ತದೆ ಎಂಬ ಯೋಚನೆ ನಮ್ಮದು. ಮಕ್ಕಳಿಗೆ ಇಷ್ಟವಾಯಿತೋ, ಇಲ್ಲವೋ ಎಂದು ಅವರನ್ನು ಕೇಳುವ ಕಾಲ ಅದಾಗಿರಲಿಲ್ಲ. ಜತೆಗೆ ಮಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವ ಆಲೋಚನೆಯೂ ಇತ್ತು. ವಿದ್ಯಾದಾಯಿನಿ ಹೈಸ್ಕೂಲಿನ ಶಿಕ್ಷಕ ಶಿಕ್ಷಕಿಯರ ಪರಿಚಯ ಇರಲಿಲ್ಲ. ಅಲ್ಲಿ ಹಿಂದೆ ಮುಖ್ಯೋಪಾಧ್ಯಾಯರಾಗಿ ಪ್ರಸಿದ್ಧರಾದ ಎಂ. ವಾಸುದೇವರಾಯರು ಆಡಳಿತ ಮಂಡಳಿಯಲ್ಲಿದ್ದರು. ನಮ್ಮ ಬಗ್ಗೆ ಅವರಿಗೆ ಒಳ್ಳೆಯ ಗೌರವ ಅಭಿಮಾನಗಳೂ ಇತ್ತು. ಅವರಿಂದ ಶಿಫಾರಸು ಪತ್ರ ಪಡೆಯುವುದು ಕಷ್ಟವಿರಲಿಲ್ಲ.

ಆದರೆ ಇಷ್ಟೊಂದು ಸಣ್ಣ ವಿಷಯಕ್ಕೆ ಅವರಿಗೆ ತೊಂದರೆ ಕೊಡುವುದು ಯಾಕೆ ಎಂಬ ಯೋಚನೆ ನಮ್ಮದಾಗಿತ್ತು. ಜತೆಗೆ ಮಗಳು 7ನೆಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಳು. ಸೀಟು ಸಿಗುವುದು ಕಷ್ಟವಾಗಲಾರದು ಎಂಬ ಅಭಿಪ್ರಾಯ ನಮ್ಮದು. ವಿದ್ಯಾದಾಯಿನಿ ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮದ್ದಾಗಿದ್ದು ಅಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದ 8ನೆ ತರಗತಿಗೆ ಪ್ರವೇಶ ನೀಡುತ್ತಿದ್ದರು. ಈ ಭರವಸೆಯಿಂದ ನಾನು ಮಗಳನ್ನು ಕರೆದುಕೊಂಡು ನೇರವಾಗಿ ಮುಖ್ಯೋಪಾಧ್ಯಾಯರ ಕೊಠಡಿಯ ಹೊರಗೆ ನಮ್ಮ ಸರತಿಗಾಗಿ ಕಾದು ಕುಳಿತುಕೊಂಡೆ. ನಮ್ಮ ಸರದಿ ಬಂದಾಗ ಒಳಹೋಗಿ ವಿಷಯ ವಿವರಿಸಿದೆ. ಯಾಕೋ ಅಂದು ಮುಖ್ಯೋಪಾಧ್ಯಾಯರ ‘ಮೂಡ್’ ಚೆನ್ನಾಗಿರಲಿಲ್ಲ ಎಂದು ಕಾಣುತ್ತದೆ. ನಮ್ಮ ಪರಿಚಯ ಅವರಿಗಿರಲೇಬೇಕಾದ ಅನಿವಾರ್ಯತೆ ಇರಲಿಲ್ಲ. ಅಲ್ಲದೆ, ನಾನೂ ನಮ್ಮ ಕುರಿತಾಗಿ ವಿವರಿಸಲೂ ಇಲ್ಲ. ಒಬ್ಬ ವಿದ್ಯಾರ್ಥಿನಿಯ ತಾಯಾಗಿ ಕೇಳಬೇಕಾದ ಕೋರಿಕೆ ಸಲ್ಲಿಸಿದ್ದೆ.

ತಲೆಯನ್ನೇ ಎತ್ತದ ಅವರು ‘‘ನೀವೆಲ್ಲಾ ಯಾಕೆ ಇಲ್ಲಿ ಬಂದು ಸಾಯ್ತೀರಾ?’’ ಎಂದ ಮಾತು ಮಾತ್ರ ಇವತ್ತಿಗೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತದೆ. ನಾವು ಕೃಷ್ಣಾಪುರದಲ್ಲಿ ವಾಸವಿದ್ದೇವೆ. ಮಕ್ಕಳಿಗೆ ಶಾಲೆ ಹತ್ತಿರವಾದರೆ ಉತ್ತಮ ಎಂದಷ್ಟೇ ನಯವಾಗಿ ಉತ್ತರಿಸಿದೆ. ಆಗ ವಿದ್ಯಾದಾಯಿನಿ ಹೈಸ್ಕೂಲಲ್ಲದೆ ಬೇರೆ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಕಾಟಿಪಳ್ಳ, ಸುರತ್ಕಲ್‌ಗಳಲ್ಲಿ ಇರಲಿಲ್ಲ. ಮಗಳ ಅಂಕಪಟ್ಟಿ ನೋಡಿದ ಮೇಲೆ ಟಿ.ಸಿ. ತೆಗೆದುಕೊಂಡು ಕಚೇರಿಗೆ ಹೋಗಿ ಫೀಸು ಕಟ್ಟಲು ಅದೇ ಮುಖಭಾವದಲ್ಲಿ ಆದೇಶವಿತ್ತರು. ಮಗಳ ಮೂರು ವರ್ಷದ ಹೈಸ್ಕೂಲು ಜೀವನದಲ್ಲಿ ಅವರ ಕೊಠಡಿಗೆ ಮತ್ತೊಂದು ಬಾರಿ ಹೋಗಿದ್ದೆ. ಅದು ಆಕೆ ಒಂಬತ್ತನೆ ತರಗತಿಯಲ್ಲಿರುವಾಗ ಭರತನಾಟ್ಯದ ಜೂನಿಯರ್ ಪರೀಕ್ಷೆಗೆ ಸಂಬಂಧಿಸಿ ದೃಢೀಕರಣ ಪತ್ರಕ್ಕಾಗಿ ಆಗಲೂ ಆ ಮುಖ್ಯೋಪಾಧ್ಯಾಯರ ಮುಖಭಾವ ಹಾಗೆಯೇ ಇತ್ತು. ನನಗೋ ಅವರನ್ನು ಕಂಡಾಗ ನೆನಪಿಗೆ ಬಂದುದು ನನ್ನ ಗುರುಗಳಾದ ಪ್ರೊ.ಎಸ್.ವಿ.ಪಿ.ಯವರ ಒಂದು ಮಾತು ‘‘ಮುಖಸೊಟ್ಟಗಿದ್ದರೇನು? ಅದರಲ್ಲೊಂದು ನಗುವಿದ್ದರೆ ಸೊಟ್ಟ ಮುಖವೂ ಅಂದವಾಗಿ ಕಾಣುತ್ತದೆ’’ ಎಂಬುದಾಗಿ.

ಆದರೆ ನಗುವುದಕ್ಕೇ ತಿಳಿಯದ ಈ ನನ್ನ ವೃತ್ತಿಬಾಂಧವರನ್ನು ನೋಡಿ ಶಿಕ್ಷಕರಾದವರು ಹೀಗೂ ಇರುತ್ತಾರಾ? ಎಂದು ಆಶ್ಚರ್ಯಪಟ್ಟಿದ್ದೆ. ಮುಂದೆ ಶಾಲೆಯ ಇತರ ಶಿಕ್ಷಕ ಶಿಕ್ಷಕಿಯರ ಪರಿಚಯವಾಯಿತು. ನನ್ನ ಮಗಳಿಗೆ ಇಷ್ಟವಾದ ಶಿಕ್ಷಕಿ ಎಂದರೆ ಕೆ.ಆರ್.ಇ.ಸಿ. ಕ್ಯಾಂಪಸ್‌ನಿಂದ ಬರುತ್ತಿದ್ದ ಸಲ್ದಾನ ಟೀಚರ್‌ರವರು. ಅವರಿಗೆ ಶಿಕ್ಷಕರ ದಿನದಂದು ಬಹಳ ವರ್ಷಗಳವರೆಗೆ ಶುಭಾಶಯ ಪತ್ರ ಕಳುಹಿಸುತ್ತಿದ್ದಳು.

ಅಲ್ಲೇ ಅಂದರೆ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕನೆ ತರಗತಿಗೆ ಮಗನನ್ನು ಸೇರಿಸಿದೆ. ಅಲ್ಲಿನ ವಾತಾವರಣ ಭಿನ್ನವಾಗಿತ್ತು. ಅಲ್ಲಿ ಮುಖ್ಯೋಪಾಧ್ಯಾಯರಾಗಿದ್ದವರು ಪ್ರಸಿದ್ಧ ಗಮಕಿಗಳಾದ ಪಿ.ಸಿ. ವಾಸುದೇವರಾಯರು. ಅವರು ತಂದೆಯವರ ಪ್ರವಚನ ಕಾರ್ಯಕ್ರಮಕ್ಕೆ ಗಮಕಿಗಳಾಗಿ ಕಾರ್ಯಕ್ರಮ ನೀಡಿದವರಾಗಿ ಪರಿಚಿತರಾಗಿದ್ದರು. ನಮ್ಮಿಬ್ಬರಿಗೂ ಪರಿಚಿತರೇ ಆಗಿದ್ದು ಅಲ್ಲಿಗೆ ಹೋದಾಗ ಆತ್ಮೀಯ ಸ್ವಾಗತ ದೊರೆಯಿತು. ಅಲ್ಲದೆ ಅಲ್ಲಿ ಹಿರಿಯ ಅಧ್ಯಾಪಕರಾಗಿದ್ದ ತಬಲಾ ವಾದಕರೂ ಆಗಿದ್ದ ನಾರಾಯಣ ರಾಯರೂ ತಂದೆಯವರಿಗೆ ಹರಿಕಥೆಗೆ ಹಿಮ್ಮೇಳದಲ್ಲಿ ಸಹಕರಿಸಿದವರಾಗಿದ್ದು, ಅವರು ನನ್ನನ್ನು ಪರಿಚಯಿಸಿಕೊಂಡು ಮಗನನ್ನು ಅವರ ಶಾಲೆಗೆ ಸೇರಿಸಿದ ಬಗ್ಗೆ ಸಂತೋಷವನ್ನು ಸೂಚಿಸಿದರು.

ಆ ಶಾಲೆಯ ಇನ್ನುಳಿದ ಅಧ್ಯಾಪಕ, ಅಧ್ಯಾಪಿಕೆಯರೂ ಪರಿಚಿತರಾದರು. ಅದರಲ್ಲೂ ಮಗನಿಗೆ ಕಲಿಸಿದ ಶಿಕ್ಷಕ, ಶಿಕ್ಷಕಿಯರಿಗೆ ನಾನು ಒಳ್ಳೆಯ ವಿದ್ಯಾರ್ಥಿಯ ತಾಯಿಯಾಗಿಯೂ ಗುರುತಿಸಲ್ಪಟ್ಟೆ. ಅದರಲ್ಲೂ ನನ್ನ ಮಗನಿಗೆ ವಿಶೇಷ ಪ್ರೀತಿ ತೋರುತ್ತಿದ್ದ, ಅಭಿಮಾನ ಪಡುತ್ತಿದ್ದ ಕಲಾವತಿ ಟೀಚರ್, ಗುಲಾಬಿ ಟೀಚರ್, ರಾಧಾ ಟೀಚರ್ ಹಾಗೂ ಕೆ.ಕೆ. ಪೇಜಾವರ ಸರ್ ಇವರೆಲ್ಲ ಹೆಚ್ಚು ಆತ್ಮೀಯರಾದರು. ಅಲ್ಲಿ ರಜಾದಿನಗಳಲ್ಲಿ ನಡೆಯುತ್ತಿದ್ದ ಮಕ್ಕಳ ಶಿಬಿರಗಳಿಗೆ ಮಗನನ್ನು ಕಳುಹಿಸುತ್ತಿದ್ದುದರಿಂದ ನಾವೂ ಉದ್ಘಾಟನಾ ಸಮಾರೋಪ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದರಿಂದ ನಮಗೆ ಇನ್ನೂ ಹಲವರ ಪರಿಚಯವಾಯಿತು. ಅವರಲ್ಲಿ ಪತ್ರಕರ್ತ ಜಿ.ಎನ್. ಮೋಹನ್, ಬಹುಮುಖ ಪ್ರತಿಭೆಯ ಶಿಕ್ಷಕ ಗೋಪಾಡ್ಕರ್, ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಯಾಗಿದ್ದ ಶಿವರಾಂ ಪೈಲೂರು, ವ್ಯಂಗ್ಯ ಚಿತ್ರಕಾರ ಪಿ. ಮಹಮ್ಮದ್, ಚಿತ್ರಕಲಾವಿದರಾದ ದಂಪತಿ ಎಂ.ಜಿ. ಕಜೆ ಮತ್ತು ನಳಿನಿ ಕಜೆ, ಹಾಗೆಯೇ ಜಿ.ಎನ್. ಮೋಹನ್, ಸತ್ಯಾ ಇವರೆಲ್ಲ ನಮ್ಮ ಸ್ನೇಹಿತ ಬಳಗಕ್ಕೆ ಸೇರಿಕೊಂಡರು. ಈ ಸ್ನೇಹವೇ ಮುಂದೆ ‘ಕೊಲಾಜ್ ಬಳಗ’ ಎಂಬುದರ ಹುಟ್ಟಿಗೆ ಕಾರಣವಾಯಿತು.

ನಮ್ಮ ದೃಶ್ಯ ಮನೆಯಲ್ಲಿ ಆಗಾಗ ಸೇರುತ್ತಿದ್ದ ಈ ಸಭೆಯಲ್ಲಿ ಸತ್ಯಾ, ಹನೀಫ್‌ರವರ ಮಡದಿ, ನಳಿನಿ ಕಜೆ ಮತ್ತು ನಾನು ಮಾತ್ರ ಈ ಬಳಗದ ಮಹಿಳಾ ಸದಸ್ಯೆಯರು. ಕೆ.ಕೆ. ಪೇಜಾವರರ ಮದುವೆಯ ಸಂಭ್ರಮ, ಪಿ. ಮಹಮ್ಮದ್‌ರಿಗೆ ಮಗಳು ಹುಟ್ಟಿದ, ಸತ್ಯಾ, ಮೋಹನರಿಗೆ ಕಿನ್ನರಿ ಹುಟ್ಟಿದ ಸಂಭ್ರಮ ಇವುಗಳೆಲ್ಲ ವಿಶಿಷ್ಟ ರೀತಿಯಲ್ಲಿ ನಡೆಯುವುದಕ್ಕೆ ಈ ಗೆಳೆಯರ ಬಳಗವೇ ಕಾರಣ. ಈ ಬಳಗದಲ್ಲಿ ಮೋಹನ್, ಸತ್ಯಾ ಹಾಗೂ ಶಿವರಾಂ ಪೈಲೂರು ಮಂಗಳೂರು ಬಿಟ್ಟು ಹೋದಾಗ ನಮ್ಮ ಕೊಲಾಜ್ ಬಳಗ ಕೊಲೆಪ್ಸ್ ಆದರೂ ಸ್ನೇಹ ಉಳಿದುಕೊಂಡಿದೆ. ನಮ್ಮ ದೃಶ್ಯ ಮನೆ ಇಂತಹ ಬಳಗದ ಹುಟ್ಟಿಗೆ ಈ ಬಳಗದ ಅನೇಕ ಸ್ಮರಣೀಯವಾದ ಗಮನಾರ್ಹ ಕಾರ್ಯಕ್ರಮಗಳ ಸಂಘಟನೆಗೆ ಸಾಕ್ಷಿಯಾಗಿತ್ತು ಎನ್ನುವುದು ನಮ್ಮ ಸಂತೋಷ. ಕೃಷ್ಣಾಪುರದ ಯುವಕ ಮಂಡಲದ ಆಶ್ರಯ ಸಾಂಸ್ಕೃತಿಕ ಕಾರ್ಯಕ್ರಮ ಗಳು, ಮುಖ್ಯವಾಗಿ ಯಕ್ಷಗಾನ, ನಾಟಕ, ಭರತನಾಟ್ಯ ಮೊದಲಾದವುಗಳು ನಡೆದಾಗ ನಾವಿಬ್ಬರೂ ನಮ್ಮ ಮಕ್ಕಳ ಜತೆ ಹೋಗುತ್ತಿದ್ದೆವು. ನಮ್ಮ ಜತೆ ಯಶವಂತಿಯೂ ಇರಬೇಕು ಎನ್ನುವುದು ಮಕ್ಕಳ ಅಪೇಕ್ಷೆಯಂತೆ ನಮ್ಮದೂ ಆಗಿರುತ್ತಿತ್ತು. ಈಗ ಆಕೆ ನಮ್ಮ ಮನೆಮಗಳೇ ಆಗಿ ಭಾಗವಹಿಸುತ್ತಿದ್ದಳು.

ಕಾರ್ಯಕ್ರಮಕ್ಕೆ ಬಂದ ಕಲಾವಿದರುಗಳೆಲ್ಲ ನಮಗೆ ಪರಿಚಿತರೇ ಆಗಿರು ತ್ತಿದ್ದರು. ಯುವಕ ಮಂಡಲದ ಅನೇಕ ಕಾರ್ಯಕ್ರಮಗಳಲ್ಲಿ ನಾವು ವೇದಿಕೆಯೇರುವ ಅವಕಾಶವನ್ನು ನೀಡಿ ಯುವಕ ಮಂಡಲದ ಸದಸ್ಯರು ನಮ್ಮನ್ನು ಗೌರವಿಸಿದುದನ್ನು ಮರೆಯಲಾರೆವು. ಯುವಕ ಮಂಡಲವು ತನ್ನ ಕಾರ್ಯಕ್ರಮಗಳಿಂದಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತ್ತು. ನೆಹರೂ ಯುವ ಕೇಂದ್ರದ ಆಯ್ಕೆಯ ಉತ್ತಮ ಯುವಕ ಮಂಡಲವಾಗಿತ್ತು. ಈ ನಡುವೆ ನಾವು ಕೂಡ ಸುರತ್ಕಲ್, ಹಳೆಯಂಗಡಿ, ಸಸಿಹಿತ್ಲು ಹೀಗೆ ಅನೇಕ ಯುವಕ ಮಂಡಲಗಳಿಗೆ ಪರಿಚಿತರಾಗಿ ಸಾಮಾಜಿಕ ಕಾಳಜಿಯ ಸಾರ್ವಜನಿಕ ವ್ಯಕ್ತಿಗಳಾಗಿ ಬೆಳೆದುದೂ ಸೇರಿದಂತೆ ಸಾಹಿತ್ಯಿಕವಾಗಿ ನಮ್ಮದೇ ಆದ ಒಂದು ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದೆವು.

ಇದಕ್ಕೆ ನಮ್ಮ ಮಕ್ಕಳಿಬ್ಬರ ಹೆಸರನ್ನು ಜೋಡಿಸಿ ‘ಹೇಮಾಂಶು ಪ್ರಕಾಶನ’ ಎಂದು ಹೆಸರಿಟ್ಟೆವು. ಇದರ ಮೂಲಕ ಮೊದಲು ಪ್ರಕಟವಾದ ಕೃತಿ ‘ಉದಿಪು’ ಎಂಬ ತುಳು ಕಥಾ ಸಂಕಲನ ಮುದ್ದುಮೂಡುಬೆಳ್ಳೆಯವರದ್ದು.
ಗೋವಿಂದದಾಸ ಕಾಲೇಜಿನ ಪ್ರಾಚಾರ್ಯರಾದ ಎಚ್. ಗೋಪಾಲಕೃಷ್ಣರಾಯರು ಪ್ರಾಂಶುಪಾಲರಾಗಿದ್ದ ವೇಳೆ ಕನ್ನಡ ವಿಭಾಗದಲ್ಲಿ ಡಾ. ಸೀ. ಹೊಸಬೆಟ್ಟು ಹಾಗೂ ಲೀಲಾವತಿ ಎಸ್.ರಾವ್ ಇವರಿಬ್ಬರು ಇದ್ದು ಗೋವಿಂದದಾಸ ಕಾಲೇಜಿನಲ್ಲಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಅಲ್ಲದೆ, ಯಕ್ಷಗಾನ, ನೀನಾಸಂ ನಾಟಕಗಳೂ ನಡೆಯುತ್ತಿತ್ತು. ಇವುಗಳಿಗೆಲ್ಲಾ ನಮಗೆ ಆಹ್ವಾನವಿರುತ್ತಿದ್ದುದರಿಂದ ನಾವು ಮತ್ತು ನಮ್ಮ ಮಕ್ಕಳು ಯಾವಾಗಲೂ ಭಾಗವಹಿಸುತ್ತಿದ್ದೆವು. ಅಲ್ಲಿಯ ಅಧ್ಯಾಪಕ ವೃಂದದ ಹಲವರು ನಮ್ಮ ಆತ್ಮೀಯರಾಗಿದ್ದರು. ಇಂಗ್ಲಿಷ್ ವಿಭಾಗದಲ್ಲಿದ್ದ ಶೇಖರ ಇಡ್ಯರು ಕಾಟಿಪಳ್ಳದ 7ನೆ ಬ್ಲಾಕಿನಲ್ಲಿ ಬೊಳ್ಳಾಜೆ ಎಂಬಲ್ಲಿ ‘ಇಂಚರ’ ಎಂಬ ಮನೆಯಲ್ಲಿ ವಾಸ್ತವ್ಯವಿದ್ದು, ಅವರು ಉತ್ತಮ ಓದುಗರು ಹಾಗೂ ಪುಸ್ತಕವನ್ನು ಓದುಗರಿಗೆ ತಲುಪಿಸುವ ಸೇವೆಯನ್ನು ವ್ರತದಂತೆ ನಡೆಸುತ್ತಿದ್ದರು.

ನಮ್ಮ ಮನೆಗೆ ಆಗಾಗ ಬರುತ್ತಿದ್ದು ಸಾಹಿತ್ಯಿಕ, ಸಾಮಾಜಿಕ ಚರ್ಚೆಗಳು ನಮ್ಮಿಳಗೆ ನಡೆಯುತ್ತಿದ್ದುದು ನಮ್ಮ ತಾತ್ವಿಕತೆಗೆ ಬಲ ನೀಡುತ್ತಿತ್ತು. ಅವರ ಮಡದಿ ವಿದ್ಯಾದಾಯಿನಿ ವಿದ್ಯಾಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಮೈರ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶಿವರಾಮ ಕಾರಂತರ ಅಭಿಮಾನಿಯಾಗಿದ್ದ ಶೇಖರ ಇಡ್ಯರು ತನ್ನ ಮಕ್ಕಳಿಗೆ ಕಾರಂತರ ಮಕ್ಕಳ ಹೆಸರನ್ನೇ ‘ಉಲ್ಲಾಸ’ ಹಾಗೂ ಮಾಲವಿಕಾರನ್ನು ನೆನಪಿಸುವ ‘ಮಲ್ಲಿಕಾ’ ಎಂಬ ಹೆಸರಿಟ್ಟಿದ್ದರು. ನಾವೂ ಅವರ ಮನೆ ‘ಇಂಚರ’ಕ್ಕೆ ಮಕ್ಕಳೊಂದಿಗೆ ಭೇಟಿ ಕೊಟ್ಟುದುದು ಹಲವು ಬಾರಿ. ಹೀಗೆ ಹಲವರ ಸ್ನೇಹ, ಪರಿಚಯ, ಆತ್ಮೀಯತೆಗಳು ನಮ್ಮ ಜೀವನಾನುಭವಗಳಾಗಿ ನಮ್ಮ ಬದುಕಿಗೂ ಬರಹಕ್ಕೂ ದಾರಿದೀಪಗಳಾಗುತ್ತಿದ್ದಂತೆಯೇ ಇವೆಲ್ಲವುಗಳಿಗೆ ಸಂಬಂಧವೇ ಇಲ್ಲದಂತೆ ಬದುಕುವ ಸಾಮಾನ್ಯ ಜನರ ಬದುಕು ಕೂಡ ಒಟ್ಟು ಸಮಾಜದ ಅಂಶಗಳೇ ಎನ್ನುವ ಎಚ್ಚರವೂ ನಮ್ಮಲ್ಲಿತ್ತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News