ಆನ್ ಲೈನ್‌ನಲ್ಲಿ ಹಣ ಪಾವತಿಸುತ್ತೀರಾ?

Update: 2017-09-27 11:23 GMT

ನೋಟು ಅಮಾನ್ಯದ ಬಳಿಕ ನಗದುರಹಿತ ಆರ್ಥಿಕತೆಗೆ ಸರಕಾರವು ನೀಡುತ್ತಿರುವ ಒತ್ತು ಡಿಜಿಟಲ್ ಪಾವತಿಗಳನ್ನು ಜನಪ್ರಿಯಗೊಳಿಸಿದೆ. ಸ್ಮಾರ್ಟ್‌ಫೋನ್‌ಗಳು ಕೈಗೆಟಕುವ ಬೆಲೆಗಳಲ್ಲಿ ದೊರೆಯುತ್ತಿರುವುದರಿಂದ ಮತ್ತು ಡಾಟಾ ದರಗಳು ಇಳಿದಿರು ವುದರಿಂದ ಹೆಚ್ಚಿನ ಜನರು ಸ್ಮಾರ್ಟ್‌ಫೋನ್‌ಗಳ ಒಡೆಯರಾಗುತ್ತಿದ್ದಾರೆ ಮತ್ತು ಡಿಜಿಟಲ್ ಹಣ ಪಾವತಿಗೆ ಅವುಗಳನ್ನು ಬಳಸುತ್ತಿದ್ದಾರೆ.

 2016ಕ್ಕೆ ಅಂತ್ಯಗೊಂಡ ಐದು ವರ್ಷಗಳ ಅವಧಿಯಲ್ಲಿ ಡಿಜಿಟಲ್ ಹಣಪಾವತಿಗಳ ಪ್ರಮಾಣ ಶೇ.28ರಿಂದ ಶೇ.55ಕ್ಕೇರಿದೆ. ನೂತನ ಬಳಕೆದಾರರು ಸುರಕ್ಷಿತ ವಹಿವಾಟು ಗಳಿಗೆ ಅಗತ್ಯವಾಗಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸುವುದಿಲ್ಲವಾದ್ದರಿಂದ ಡಿಜಿಟಲ್ ಹಣಪಾವತಿಗಳಲ್ಲಿಯ ಈ ದಿಢೀರ್ ಏರಿಕೆಯು ಸೈಬರ್ ಕಳ್ಳತನದ ಅಪಾಯವನ್ನೂ ಹೆಚ್ಚಿಸಿದೆ.

ಸೈಬರ್ ಸುರಕ್ಷತೆ ಸಂಸ್ಥೆ ಕ್ಯಾಸ್ಪರ್‌ಸ್ಕಿ ಸ್ಮಾರ್ಟ್‌ಫೋನ್‌ಗಳ ಮೂಲಕ ಹಣವನ್ನು ಎಗರಿಸುವ ‘ಝಾಪ್ಕೋಪಿ ಟ್ರೋಜನ್’ಎಂಬ ಹೊಸ ಮಾಲ್‌ವೇರ್‌ನ್ನು ಪತ್ತೆ ಹಚ್ಚಿದೆ. ಅದು ವಿಶ್ವಾದ್ಯಂತ ಮೊಬೈಲ್‌ಗಳಲ್ಲಿ ಸೇರಿಕೊಂಡಿದ್ದು, ಅದರ ಶೇ.40ರಷ್ಟು ಹಾವಳಿಯು ಭಾರತವನ್ನೇ ಗುರಿಯಾಗಿಸಿಕೊಂಡಿದೆ.

ಸುರಕ್ಷಿತ ಆನ್‌ಲೈನ್ ಪಾವತಿಗಾಗಿ ಸೂಕ್ತ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ಇಂತಹ ವೈರಸ್‌ಗಳಿಂದ ಪಾರಾಗಬಹುದು. *ನೀವು ಆನ್‌ಲೈನ್‌ನಲ್ಲಿ ಯಾವುದೇ ಉತ್ಪನ್ನಗಳಿಗಾಗಿ ಹುಡುಕಾಡುತ್ತಿದ್ದರೆ ಅಥವಾ ಸರ್ಚ್ ಇಂಜಿನ್‌ನಲ್ಲಿ ಬೆಲೆಗಳ ಹೋಲಿಕೆ ಮಾಡುತ್ತಿದ್ದರೆ ನೀವು ನಿಮ್ಮ ಉದ್ದೇಶಿತ ತಾಣದ ಬದಲು ಮಾಲ್‌ವೇರ್ ಸಂಪರ್ಕವನ್ನು ಕಲ್ಪಿಸುವ ‘ಪಾಯ್ಸನ್ಡ್’ ಸರ್ಚ್ ರಿಸಲ್ಟ್‌ನ ಮೇಲೆ ಅನುದ್ದಿಷ್ಟವಾಗಿ ಕ್ಲಿಕ್ ಮಾಡುವ ಅಪಾಯವಿರುತ್ತದೆ. ವೈರಸ್‌ನ ಲಿಂಕ್‌ಗಳನ್ನು ಸೇರಿಸಲು ಸೈಬರ್ ಕ್ರಿಮಿನಲ್‌ಗಳು ಈ ‘ಪಾಯ್ಸನ್ಡ್’ ಸರ್ಚ್ ರಿಸಲ್ಟ್‌ಗಳನ್ನು ಸೃಷ್ಟಿಸಿರುತ್ತಾರೆ. ಕಾಸ್ಪರ್‌ಸ್ಕಿಯ ಯುಆರ್‌ಎಲ್ ಅಡ್ವೈಸರ್ ಅಥವಾ ವೆಬ್ ಆನ್ ಟ್ರಸ್ಟ್‌ನಂತಹ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳು ‘ಪಾಯ್ಸನ್ಡ್’ ಲಿಂಕ್‌ಗಳು ಮತ್ತು ವೈರಸ್‌ಯುಕ್ತ ವೆಬ್‌ಸೈಟ್‌ಗಳನ್ನು ದೂರವಿರಿಸಲು ನೆರವಾಗುತ್ತವೆ.

►ನೀವು ಆಯ್ಕೆ ಮಾಡಿಕೊಂಡ ರಿಟೇಲರ್‌ಗಳ ವೆಬ್‌ಸೈಟ್‌ಗೆ ಹೋಗಲು ಲಿಂಕ್‌ನ್ನು ಕ್ಲಿಕ್ ಮಾಡುವ ಬದಲು ಅಡ್ರೆಸ್ ಬಾರ್‌ನಲ್ಲಿ ಯುಆರ್‌ಎಲ್‌ನ್ನು ಟೈಪ್ ಮಾಡಿ. ಇದರಿಂದ ನಿಮ್ಮ ಕೆಲಸ ಸ್ವಲ್ಪ ಹೆಚ್ಚಾಗಬಹುದು, ಆದರೆ ಈ ಸರಳ ಕ್ರಮ ನಕಲಿ ಮತ್ತು ವೈರಸ್‌ಯುಕ್ತ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸುತ್ತದೆ. ಲಿಂಕ್ ‘https' ನಿಂದ ಆರಂಭಗೊಂಡಿದೆ ಎನ್ನುವುದನ್ನು ಖಚಿತ ಮಾಡಿಕೊಳ್ಳಿ. ನೀವು ಹಣಪಾವತಿ ಸೈಟ್‌ಗೆ ಭೇಟಿ ನೀಡಿದಾಗ ಬ್ರೌಸರ್ ವಿಂಡೋ ಫ್ರೇಮ್‌ನಲ್ಲಿ ಬೀಗದ ಚಿಹ್ನೆಯಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.

►ಕೆಲವು ಕ್ರೆಡಿಟ್ ಕಾರ್ಡ್ ಕಂಪನಿಗಳು ತಮ್ಮ ಗ್ರಾಹಕರಿಗೆ ತಾತ್ಕಾಲಿಕ ಕ್ರೆಡಿಟ್ ಕಾರ್ಡ್ ನಂಬರ್‌ಗಳನ್ನು ನೀಡುತ್ತವೆ. ಇವುಗಳನ್ನು ಒಂದು ಬಾರಿಯ ಖರೀದಿಗಾಗಿ ಬಳಸಬಹುದು. ಇಲ್ಲಿ ಒಂದು ವೇಳೆ ಮಾಹಿತಿಗಳ ಕಳ್ಳತನವಾದರೂ ಸೈಬರ್ ಕಳ್ಳರಿಗೆ ಅದರಿಂದ ಯಾವುದೇ ಲಾಭವಾಗುವುದಿಲ್ಲ. ಆದರೆ ನಿಯಮಿತ ಪಾವತಿ ಅಗತ್ಯವಾಗಿರುವ ಖರೀದಿಗಳಿಗಾಗಿ ಮತ್ತು ಆಟೋ ರಿನ್ಯೂವಲ್‌ಗಾಗಿ ನೀವು ಇವುಗಳನ್ನು ಬಳಸುವಂತಿಲ್ಲ. ಅಂತಹ ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್‌ನ ಬಳಕೆಯು ಕಡಿಮೆ ಮಿತಿಯನ್ನು ಹೊಂದಿರುತ್ತದೆ.

►ಹಣಕಾಸು ವಹಿವಾಟುಗಳನ್ನು ನಡೆಸಲೆಂದೇ ನೀವು ಒಂದು ಕಂಪ್ಯೂಟರ್‌ನ್ನು ಮೀಸಲಿಡಬಹುದು.HTTPS ಎನ್‌ಫೋರ್ಸ್‌ಮೆಂಟ್ ಜೊತೆಗೆ ಗೂಗಲ್ ಕ್ರೋಮ್ ಮತ್ತು ನಂಬಿಕೆಯ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ನ್ನು ಕಂಪ್ಯೂಟರ್‌ಗೆ ಅಳವಡಿಸಿಕೊಳ್ಳಿ. ಈ ಕಂಪ್ಯೂಟರ್‌ನ್ನು ಮಾಮೂಲು ಸರ್ಫಿಂಗ್ ಅಥವಾ ಸಾಮಾಜಿಕ ಮಾಧ್ಯಮಗಳ ಜಾಲಕ್ಕಾಗಿ ಬಳಸಿಕೊಳ್ಳಬೇಡಿ.

►ಆನ್‌ಲೈನ್ ಶಾಪಿಂಗ್‌ಗಾಗಿಯೇ ಪ್ರತ್ಯೇಕ ಇ-ಮೇಲ್ ವಿಳಾಸವನ್ನು ಸೃಷ್ಟಿಸಿಕೊಳ್ಳಿ. ಇದು ವಿವಿಧ ನೋಟಿಫಿಕೇಷನ್‌ಗಳು ಮತ್ತು ಸೇಲ್ಸ್ ಪ್ರಮೋಷನ್ ಸೋಗಿನಲ್ಲಿರುವ ಸಂಭಾವ್ಯ ವೈರಸ್‌ಯುಕ್ತ ಇ-ಮೇಲ್ ಅಥವಾ ಸ್ಪಾಮ್ ಮೆಸೇಜ್‌ಗಳನ್ನು ತೆರೆಯುವ ಅಪಾಯವನ್ನು ತಗ್ಗಿಸುವುಲ್ಲಿ ನಿಮಗೆ ನೆರವಾಗುತ್ತದೆ.

►ಹಲವಾರು ಖಾತೆಗಳನ್ನು ನಿರ್ವಹಿಸಲು ಪಾಸ್‌ವರ್ಡ್ ಮ್ಯಾನೇಜರ್ ನಿಮಗೆ ನೆರವಾಗುತ್ತದೆ. ಸರಳವಾದ ಟೆಕ್ಸ್ಟ್‌ನಲ್ಲಿರುವ ಪಾಸ್‌ವರ್ಡ್‌ಗಳನ್ನು ಈ ಮ್ಯಾನೇಜರ್ ಗೂಢ ಲಿಪೀಕರಣಗೊಳಿಸುತ್ತದೆ. ಅಲ್ಲದೆ ನಿಮ್ಮ ಎಲ್ಲ ಖಾತೆಗಳಿಗೂ ಒಂದೇ ಪಾಸ್‌ವರ್ಡ್ ಬಳಸುವ ಸಾಮಾನ್ಯ ತಪ್ಪನ್ನು ನಿವಾರಿಸಲೂ ಈ ಮ್ಯಾನೇಜರ್ ನೆರವಾಗುತ್ತದೆ. ಕೆಲವು ಆ್ಯಂಟಿವೈರಸ್ ಮತ್ತು ಆಂತರಿಕ ಸುರಕ್ಷಾ ಉತ್ಪನ್ನಗಳು ಪಾಸ್‌ವರ್ಡ್ ಮ್ಯಾನೇಜ್‌ಮೆಂಟ್ ಮತ್ತು ಪಾಸ್‌ವರ್ಡ್ ಸುರಕ್ಷಾ ಲಕ್ಷಣಗಳನ್ನು ಒಳಗೊಂಡಿರುತ್ತವೆ.

►ಸಾರ್ವಜನಿಕ ವೈಫೈ/ಕಂಪ್ಯೂಟರ್‌ಗಳನ್ನು ದೂರವಿಡಿ. ಇವುಗಳ ಮೂಲಕ ಹಣಕಾಸು ವಹಿವಾಟುಗಳನ್ನು ಎಂದೂ ನಡೆಸಬೇಡಿ. ಹ್ಯಾಕರ್‌ಗಳು ಸಾರ್ವಜನಿಕ ವೈಫೈ ನೆಟ್‌ವರ್ಕ್‌ನ್ನು ಸುಲಭವಾಗಿ ಪ್ರವೇಶಿಸಿ ನಿಮ್ಮ ಲಾಗಿನ್ ಮಾಹಿತಿಗಳನ್ನು ಕದಿಯುತ್ತಾರೆ. ನೀವು ಹೊರಗಡೆಯಿದ್ದಾಗ ಹಣಕಾಸು ವಹಿವಾಟು ನಡೆಸಲು ನಿಮ್ಮ ಸ್ವಂತ ಮೊಬೈಲ್ ಫೋನ್ ನೆಟ್‌ವರ್ಕ್ ಬಳಸಿ.

►ನಿಮ್ಮ ದತ್ತಾಂಶಗಳು ನಿಮ್ಮ ಬಳಿಯಲ್ಲಿಯೇ ಇರಲಿ. ಬ್ಯಾಂಕ್ ಮತ್ತು ವೈಯಕ್ತಿಕ ವಿವರಗಳನ್ನೆಂದೂ ಬ್ರೌಸರ್ ಅಥವಾ ಪೇಮೆಂಟ್ ಸೈಟ್‌ನಲ್ಲಿ ಸೇವ್ ಮಾಡಬೇಡಿ. ವಹಿವಾಟು ಮಾಡುವಾಗಲೆಲ್ಲ ಅಗತ್ಯ ಮಾಹಿತಿಯನ್‌ನು ಟೈಪ್ ಮಾಡಿ. ಪ್ರತಿ ಬಾರಿ ಲಾಗಿನ್ ಆದ ಬಳಿಕ ಲಾಗ್ ಔಟ್ ಆಗಲು ಮರೆಯಬೇಡಿ.

►ನಿಮಗೆ ನಂಬಿಕೆಯಿಲ್ಲದ ಆ್ಯಪ್‌ಗಳನ್ನು ದೂರವೇ ಇಡಿ. ಅಧಿಕೃತ ಆ್ಯಪ್ ಸ್ಟೋರ್ ಮೂಲಕವೇ ಆ್ಯಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ.

►ಆನ್‌ಲೈನ್ ಮೂಲಕ ಪಾವತಿ ಮಾಡುವ ಮುನ್ನ ನಿಮ್ಮ ಮಾರಾಟಗಾರ ವಿಶ್ವಾಸಿಕ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಹೆಚ್ಚಿನ ಸಣ್ಣ ವ್ಯಾಪಾರಿಗಳ ವೆಬ್‌ಸೈಟ್‌ಗಳು ಡಾಟಾ ಕಳ್ಳತನವನ್ನು ತಡೆಯಲು ಸಾಕಷ್ಟು ಸುರಕ್ಷಿತವಾಗಿರುವುದಿಲ್ಲ. ವ್ಯಾಪಾರಿಯಲ್ಲಿ ವಿಶ್ವಾಸವಿ ಲ್ಲದಿದ್ದರೆ ಆನ್‌ಲೈನ್ ಮೂಲಕ ಹಣವನ್ನು ಪಾವತಿಸಬೇಡಿ. ಕ್ಯಾಷ್ ಆನ್ ಡೆಲಿವರಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News