​ಜೊಕೊವಿಕ್ ಮುಖ್ಯ ಕೋಚ್ ಆಗಿ ಅಗಾಸ್ಸಿ ಮುಂದುವರಿಕೆ

Update: 2017-09-27 18:41 GMT

ಬೆಲ್‌ಗ್ರೆಡ್, ಸೆ.27: ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸರ್ಬಿಯದ ಮಾಜಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಆ್ಯಂಡ್ರೆ ಅಗಾಸ್ಸಿಯವರನ್ನು ತನ್ನ ಮುಖ್ಯ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿದ್ದಾರೆ.

   ‘‘ಅಗಾಸ್ಸಿ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದು, ಇಟಲಿಯ ಮಾರ್ಕೊ ಪ್ಯಾನಿಚಿ ಫಿಟ್‌ನೆಸ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅರ್ಜೆಂಟೀನದ ಉಲಿಸೆಸ್ ಬಾಡಿಯೊ ನೂತನ ಫಿಜಿಯೋ ಆಗಿ ನೇಮಕಗೊಂಡಿದ್ದಾರೆ’’ಎಂದು ಜೊಕೊವಿಕ್‌ರ ಮಾಧ್ಯಮ ಕಚೇರಿ ತಿಳಿಸಿದೆ. 12 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಜೊಕೊವಿಕ್ ವಿಂಬಲ್ಡನ್ ಟೂರ್ನಿಯಲ್ಲಿ ಝೆಕ್‌ನ ಥಾಮಸ್ ಬೆರ್ಡಿಕ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ಗಾಯಾಳು ನಿವೃತ್ತಿಯಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಟೆನಿಸ್‌ನಿಂದ ದೂರ ಉಳಿದು ವಿಶ್ರಾಂತಿ ಪಡೆಯುವುದಾಗಿ ಜುಲೈನಲ್ಲಿ ಘೋಷಿಸಿದ್ದರು. ಜನವರಿಯಲ್ಲಿ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸುವುದರೊಂದಿಗೆ ಜೊಕೊವಿಕ್ ಎಲ್ಲ 4 ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದರು. 2017ರ ಋತುವಿನಲ್ಲಿ ನಂ.1 ಸ್ಥಾನವನ್ನು ಬ್ರಿಟನ್‌ನ ಆ್ಯಂಡಿ ಮರ್ರೆಗೆ ಬಿಟ್ಟುಕೊಟ್ಟಿದ್ದ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ 2ನೆ ಸುತ್ತಿನಲ್ಲಿ ಎಡವಿದ್ದರು. ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ನ್ನು ದಾಟಲು ವಿಫಲರಾಗಿದ್ದರು. ಕೋಚ್ ಬೊರಿಸ್ ಬೆಕೆರ್‌ರಿಂದ ಬೇರ್ಪಟ್ಟ ಬಳಿಕ ಜೊಕೊವಿಕ್ ತನ್ನ ಮೊದಲಿನ ಲಯ ಕಳೆದುಕೊಂಡಿದ್ದರು. ‘‘ಜೊಕೊವಿಕ್ ಮೊಣಕೈ ನೋವಿಗೆ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲವು ಸಮಯದಿಂದ ಬೆಲ್‌ಗ್ರೆಡ್‌ನಲ್ಲಿ ಜೊಕೊವಿಕ್ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದಾರೆ. 2018ರ ಆಸ್ಟ್ರೇಲಿಯನ್ ಓಪನ್ ವೇಳೆಗೆ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗುವ ನಿರೀಕ್ಷೆಯಲ್ಲಿರುವ ಜೊಕೊವಿಕ್ ಕಠಿಣ ಪ್ರಾಕ್ಟೀಸ್ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News