ನೀವು ತಿಳಿದಿರಲೇಬೇಕಾದ ಹೃದಯಾಘಾತದ ಆರು ಲಕ್ಷಣಗಳು

Update: 2017-09-28 09:47 GMT

ಹೃದಯಕ್ಕೆ ಆಮ್ಲಜನಕಯುಕ್ತ ರಕ್ತದ ಪೂರೈಕೆಯ ಕೊರತೆಯಾದಾಗ ಹೃದಯದ ಸ್ನಾಯುಗಳು ಸಾಯಲು ಆರಂಭಿಸುತ್ತವೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗಿದೆ. ಪರಿಧಮನಿಯ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಕೊಲೆಸ್ಟ್ರಾಲ್ ಸಂಗ್ರಹದಿಂದಾಗಿ ಹೃದಯಕ್ಕೆ ಆಮ್ಲಜನಕಯುಕ್ತ ರಕ್ತದ ಕೊರತೆಯುಂಟಾಗುತ್ತದೆ. ಪ್ರಥಮ ಬಾರಿ ಹೃದಯಾಘಾತಕ್ಕೆ ಗುರಿಯಾಗುವವರಲ್ಲಿ ಶೇ.90 ರಷ್ಟು ಜನರು ಬದುಕುಳಿಯು ತ್ತಾರೆ. ಆದರೆ ಶೇ.10ರಷ್ಟು ಜನರು ಆಸ್ಪತ್ರೆ ತಲುಪುವುಷ್ಟರಲ್ಲಿ ಸ್ಥಿತಿ ತೀರ ಹದಗೆಟ್ಟು ಸಾವನ್ನಪ್ಪುತ್ತಾರೆ. ಹೀಗಾಗಿ ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು.

ತೀವ್ರ ಎದೆನೋವು

ಹೃದಯಾಘಾತಕ್ಕೆ ಸಂಬಂಧಿಸಿದ ನೋವು ಏಕಾಏಕಿಯಾಗಿ ಎದೆಯ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ನೋವು ಅತ್ಯಂತ ತೀವ್ರವಾಗಿರುತ್ತದೆ. ಯಾರೋ ನಿಮ್ಮ ಹೃದಯದಿಂದ ಜೀವವನ್ನು ಹಿಂಡಿ ಹೊರಕ್ಕೆ ತೆಗೆಯುತ್ತಿದ್ದಂತಿರುತ್ತದೆ. ವೈದ್ಯಕೀಯ ಭಾಷೆಯಲ್ಲಿ ‘ಎಂಜಿನಾ’ ಎಂದು ಕರೆಯಲ್ಪಡುವ ಈ ನೋವು ಕೆಲವು ನಿಮಿಷಗಳ ಕಾಲ ಇರುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹೃದಯಕ್ಕೆ ರಕ್ತದ ಪೂರೈಕೆ ಪುನರಾರಂಭ ಗೊಂಡರೆ ಕೆಲ ಹೊತ್ತಿನ ಬಳಿಕ ಮಾಯವಾಗುತ್ತದೆ. ಆದರೆ ಹೀಗಾಗದಿದ್ದರೆ ಈ ನೋವು ತ್ವರಿತವಾಗಿ ತೋಳುಗಳು, ಬೆನ್ನು, ಕುತ್ತಿಗೆ ಮತ್ತು ಬಳಿಕ ತಲೆಗೆ ಹರಡುತ್ತದೆ.

ದವಡೆಗಳಲ್ಲಿ ನೋವು ಅಥವಾ ಹಲ್ಲುನೋವು

ಈ ಲಕ್ಷಣ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಹೃದಯಾಘಾತದ ಸಂದರ್ಭ ದಲ್ಲಿ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಎದೆನೋವು ಉಂಟಾಗಬಹುದು ಅಥವಾ ಉಂಟಾಗದಿರಬಹುದು.

ತೀವ್ರ ಉಸಿರಾಟ ಸಮಸ್ಯೆ

ಇದು ಹೃದಯಾಘಾತದ ಇನ್ನೊಂದು ಸಾಮಾನ್ಯ ಲಕ್ಷಣವಾಗಿದೆ. ಇಲ್ಲಿ ವ್ಯಕ್ತಿಯಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಯಂತೆ ಆತ ಉಸಿರಿಗಾಗಿ ಪರದಾಡುತ್ತಾನೆ. ಈ ಲಕ್ಷಣವು ಎದೆನೋವು ಆರಂಭವಾ ಗುವ ಮೊದಲು ಅಥವಾ ಆರಂಭವಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತದೆ.

ಅತಿಯಾಗಿ ಬೆವರುವಿಕೆ

ವ್ಯಕ್ತಿಯೋರ್ವ ದಿಢೀರ್‌ನೆ ಕುಸಿದು ಬಿದ್ದಾಗ ಹೆಚ್ಚಿನ ಸಂದರ್ಭಗಳಲ್ಲಿ ಆತ ಅತಿಯಾಗಿ ಬೆವರಿರುವುದನ್ನು ನಾವು ನೋಡುತ್ತೇವೆ. ಆದರೆ ಇತರ ಲಕ್ಷಣಗಳ ಜೊತೆಗೆ ವ್ಯಕ್ತಿ ಅತಿಯಾಗಿ ಬೆವರಿದ್ದರೆ ಅದು ಹೃದಯಾಘಾತದ ಸ್ಪಷ್ಟ ಸಂಕೇತವಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ ಎಂಜಿನಾ ಹೊಟ್ಟೆಯ ಮೇಲ್ಭಾಗಕ್ಕೆ ಹರಡುತ್ತದೆ ಮತ್ತು ಇದು ತೀವ್ರ ಎದೆಯುರಿ, ಅಜೀರ್ಣದ ಅನುಭವ, ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ.

ತೋಳುಗಳಲ್ಲಿ ನೋವು

ಹೃದಯಾಘಾತವಾದಾಗ ಜನರು ತಮ್ಮ ಎಡತೋಳು, ಭುಜಗಳು, ಬೆನ್ನು ಮತ್ತು ಕೆಲವೊಮ್ಮೆ ಶರೀರದ ಸಂಪೂರ್ಣ ಎಡಭಾಗದಲ್ಲಿಯೂ ಸಹ ನೋವು ಅನುಭವಿಸು ತ್ತಾರೆ. ಆದರೆ ಈ ನೋವು ಯಾವಾಗಲೂ ಎಡಭಾಗಕ್ಕೇ ಸೀಮಿತವಾಗಿರುವುದಿಲ್ಲ, ಅದು ಶರೀರದ ಬಲಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು.

ಹೃದಯಾಘಾತವಾದಾಗ ಏನು ಮಾಡಬೇಕು?

ಈ ಲಕ್ಷಣಗಳು ಕಾಣಿಸಿಕೊಂಡಾಗ ನೆರವಿಗಾಗಿ ನಿಮ್ಮ ಸುತ್ತಲಿನ ಜನರಿಗೆ ತಿಳಿಸಿ, ಆ್ಯಂಬುಲನ್ಸ್ ತರಿಸುವಂತೆ ಸೂಚಿಸುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಈ ಸಂದರ್ಭದಲ್ಲಿ ನೀವು ಆಸ್ಪತ್ರೆಗೆ ತಲುಪುವುದು ವಿಳಂಬವಾದರೆ ನಿಮ್ಮ ಹೃದಯಕ್ಕೆ ಆಗಿರುವ ಹಾನಿಯೂ ಹೆಚ್ಚುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News