55 ಲಕ್ಷ ಜನರಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸಲಿದ್ದಾರೆ ಈ ಸಿಎಂ!
ರಾಯಪುರ್,ಸೆ.28 : ಮುಂದಿನ ಎರಡೂವರೆ ವರ್ಷಗಳೊಳಗಾಗಿ ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ತಮ್ಮ ರಾಜ್ಯದ 55 ಲಕ್ಷ 60 ಸಾವಿರ ಮಂದಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸುವ ಯೋಜನೆಯೊಂದನ್ನು ಹೊಂದಿದ್ದಾರೆ.
ಸಿಂಗ್ ಅವರ ಮಹತ್ವಾಕಾಂಕ್ಷೆಯ ಛತ್ತೀಸ್ಗಡ ಕಮ್ಯುನಿಕೇಶನ್ ಎವೆಲ್ಯೂಶನ್ ಸ್ಕೀಮ್ ಅನ್ವಯ ಉಚಿತ ಮೊಬೈಲ್ ಫೋನ್ ವಿತರಣೆಗೆ ರೂ 230 ಕೋಟಿ ಅಂದಾಜು ಪಟ್ಟಿ ತಯಾರಿಸಲಾಗಿದೆ. 2017-18 ಹಾಗೂ 2018-19ರಲ್ಲಿ ಒಟ್ಟು 50 ಲಕ್ಷ 80 ಸಾವಿರ ಮೊಬೈಲ್ ಫೋನ್ ವಿತರಿಸುವ ಗುರಿ ಸರಕಾರಕ್ಕಿದೆ. ಇವುಗಳಲ್ಲಿ 5.10 ಲಕ್ಷ ಮೊಬೈಲ್ ಫೋನುಗಳನ್ನು ತಾಂತ್ರಿಕ ಹಾಗೂ ಇತರ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಈ ಯೋಜನೆಯ ಫಲಾನುಭವಿಗಳಲ್ಲಿ, 40 ಲಕ್ಷ 10 ಸಾವಿರ ಮಂದಿ ಗ್ರಾಮೀಣ ಭಾಗದವರಾಗಿರುತ್ತಾರಾದರೆ 5 ಲಕ್ಷ 60 ಸಾವಿರ ಮಂದಿ ನಗರ ಪ್ರದೇಶದ ಬಡವರಾಗಿರುತ್ತಾರೆ. ಮೊದಲ ಹಂತದಲ್ಲಿ ಈ ಯೋಜನೆಗೆ 1,128 ಕೋಟಿ ರೂ ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ.
ಉಳಿದ 4 ಲಕ್ಷ 80 ಸಾವಿರ ಫೋನುಗಳನ್ನು 2019-20ರಲ್ಲಿ ನೀಡಲಾಗುವುದು. ಇದಕ್ಕೆ ಸುಮಾರು ರೂ 102 ಕೋಟಿ ವೆಚ್ಚವಾಗುವುದು.
ರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಈಗಾಗಲೇ ಯೋಜನೆ ಜಾರಿಗೆ ತಯಾರಿ ಆರಂಭಿಸಿದೆ. ಮೊದಲ ಹಂತದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಭಾಗಶಃ ಹಾಗೂ ಸಂಪೂರ್ಣ ಲಭ್ಯವಿರುವ ಒಂದು ಸಾವಿರಕ್ಕಿಂತಲೂ ಅಧಿಕ ಹಾಗೂ ಒಂದು ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆಯಿರುವ ಗ್ರಾಮಗಳ ಜನರಿಗೆ ಮೊಬೈಲ್ ಫೋನ್ ವಿತರಿಸಲಾಗುವುದು. ಎರಡನೇ ಹಂತದಲ್ಲಿ ಮೊಬೈಲ್ ಫೋನ್ ನೆಟ್ ವರ್ಕ್ ಇಲ್ಲದ ಗ್ರಾಮಗಳಲ್ಲಿ ಮೊಬೈಲ್ ಫೋನ್ ನೀಡಲಾಗುವುದು. ಈ ಗ್ರಾಮಗಳಲ್ಲಿ ನೆಟ್ ವರ್ಕ್ ಒದಗಿಸುವ ಜವಾಬ್ದಾರಿ ಟೆಲಿಕಾಂ ಕಂಪೆನಿಗಳದ್ದಾಗಿರುತ್ತದೆ.
ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಲು ಅನುವು ಮಾಡಿಕೊಡಲು ಈ ಫೋನುಗಳನ್ನು ವಿತರಿಸಲಾಗುವುದು ಎಂದು ಹೇಳಲಾಗಿದೆ.