×
Ad

ಕೊಡಲಿ ಹಿಡಿದು ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ರಮ್ಝಾನ್ ಅಹ್ಮದ್

Update: 2017-09-28 19:59 IST

ಹೊಸದಿಲ್ಲಿ, ಸೆ.28: ಬಂಡಿಪೋರಾದ ತನ್ನ ಮನೆಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗುವ ಮೊದಲು ಬಿಎಸ್ ಎಫ್ ನ ಕಾನ್ ಸ್ಟೇಬಲ್ ರಮ್ಝಾನ್ ಅಹ್ಮದ್ ಪರ್ರೇ ಕೊಡಲಿಯೊಂದನ್ನು ಹಿಡಿದು ಭಯೋತ್ಪಾದಕರ ವಿರುದ್ಧ ಸೆಣಸಾಡಿದ್ದರು ಎಂದು ವರದಿಯಾಗಿದೆ.

ಲಷ್ಕರ್ ಎ ತೊಯ್ಬಾದ ಮೆಹಮೂದ್ ಭಾಯ್ ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಡಿಜಿಪಿ ವೈದ್ ಹೇಳಿದ್ದಾರೆ. ರಮ್ಝಾನ್ ರಿಗೆ ಗುಂಡಿಕ್ಕುವ ಮೊದಲು ಭಯೋತ್ಪಾದಕರು ಅವರ ಹಾಗೂ ಕುಟುಂಬಸ್ಥರಿಗೆ ಇರಿದಿದ್ದರು. ಕೊನೆಗೆ ರಮ್ಝಾನ್ ಅವರಿಗೆ ಗುಂಡಿಕ್ಕಿದ್ದಾರೆ. ಕುಟುಂಬದ ಸದಸ್ಯರಿಗೆ ಗಾಯಗಳಾಗಿವೆ ಎಂದವರು ತಿಳಿಸಿದ್ದಾರೆ.

ರಮ್ಝಾನ್ ಭಯೋತ್ಪಾದಕರನ್ನು ತನ್ನಿಂದ ಸಾಧ್ಯವಾದಷ್ಟು ಹಿಮ್ಮೆಟ್ಟಿಸಲು ಯತ್ನಿಸಿದರು. ಕೊಡಲಿಯ ಮೂಲಕ ಭಯೋತ್ಪಾದಕರಿಗೆ ಪ್ರತಿರೋಧ ಒಡ್ಡಿ ಹೋರಾಟ ನಡೆಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

3ರಿಂದ 4 ಜನರ ತಂಡ ದಾಳಿ ನಡೆಸಿತ್ತು. ಅವರಲ್ಲೊಬ್ಬ ಲಷ್ಕರ್ ಉಗ್ರ ಮೆಹಮೂದ್ ಭಾಯ್ ಎಂದು ರಮ್ಝಾನ್ ರ ಕುಟುಂಬಸ್ಥರು ಗುರುತಿಸಿದ್ದಾರೆ ಎಂದು ಉತ್ತರ ಕಾಶ್ಮೀರದ ಡಿಐಜಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಬಾರಿಯ ಈದ್ ಆಚರಿಸಲು ರಮ್ಝಾನ್ ಮನೆಗೆ ಬಂದಿದ್ದರು. 6 ವರ್ಷಗಳಿಂದ ಅವರು ಬಿಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಾರಮುಲ್ಲಾ ಜಿಲ್ಲೆಯ ಸಿಂಗ್ಪೋರಾದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News