ನವಾಝುದ್ದೀನ್ ತಾಯಿ ಮೆಹರುನ್ನಿಸಾಗೆ ಸ್ಥಾನ
ಮುಂಬೈ, ಸೆ. 28 : ಖ್ಯಾತ ನಟ ನವಾಝುದ್ದೀನ್ ಸಿದ್ದಿಕಿಯ ತಾಯಿ ಮೆಹರುನ್ನಿಸಾ ಸಿದ್ದೀಕಿ ಅವರು ಬಿಬಿಸಿ ಬಿಡುಗಡೆ ಮಾಡಿರುವ ಜಗತ್ತಿನ 100 ಸ್ಪೂರ್ತಿದಾಯಕ ಹಾಗು ಸೃಜನಶೀಲ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇತರ ಮಹಿಳೆಯರ ಶ್ರೇಯಸ್ಸಿಗಾಗಿ ಧ್ವನಿ ಎತ್ತುವ ವಿಶ್ವದೆಲ್ಲೆಡೆಯ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ವರ್ಷದ ಪಟ್ಟಿಯಲ್ಲಿ 60 ಹೆಸರುಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಉಳಿದ 40 ಹೆಸರುಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು.
ಜಗತ್ತಿನೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಕಿರುಕುಳ, ಅನ್ಯಾಯ ಹಾಗು ಅಸಮಾನತೆ ವಿರುದ್ಧ ಹೋರಾಡಿ ತಮ್ಮ ಛಾಪು ಮೂಡಿಸಿದ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಮಹಿಳೆಗೆ ನಿರ್ಬಂಧ, ಮಹಿಳಾ ಅನಕ್ಷರತೆ, ಬೀದಿ ಕಿರುಕುಳ ಹಾಗು ಕ್ರೀಡೆಯಲ್ಲಿ ಲಿಂಗ ತಾರತಮ್ಯ - ಈ ನಾಲ್ಕು ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿ ಬದಲಾವಣೆ ತಂದ ಮಹಿಳೆಯರನ್ನು ಗುರುತಿಸಿ ಈ ಪಟ್ಟಿಯಲ್ಲಿ ಗೌರವಿಸಲಾಗಿದೆ.
ಭಾರತದಿಂದ ಮೆಹರುನ್ನಿಸಾ ಅಲ್ಲದೆ ಕವಯತ್ರಿ ರೂಪಿ ಕೌರ್ , ಉದ್ಯಮಿ ಅದಿತಿ ಅವಸ್ಥಿ , ಲೇಖಕಿ ಇರಾ ತ್ರಿವೇದಿ, ಉದ್ಯಮಿ ನಿತ್ಯಾ ತುಮ್ಮಲಚೆಟ್ಟಿ, ವಿದ್ಯಾರ್ಥಿನಿ ಪ್ರಿಯಾಂಕಾ ರಾಯ್ ಹಾಗು ಶಿಕ್ಷಕಿ ತುಲಿಕಾ ಕಿರಣ್ , ಸಾಮಾಜಿಕ ಉದ್ಯಮಿ ಊರ್ವಶಿ ಸಾಹ್ನಿ , ಅಂಗವೈಕಲ್ಯ ಕುರಿತ ಕಾರ್ಯಕರ್ತೆ ವಿರಾಲಿ ಮೋದಿ ಹಾಗು ಕ್ರಿಕೆಟರ್ ಮಿಥಾಲಿ ರಾಜ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಸಾಧಕರ ಕುರಿತ ಸರಣಿ ಅಕ್ಟೊಬರ್ ನಲ್ಲಿ ಬಿಬಿಸಿಯಲ್ಲಿ ಪ್ರಾರಂಭವಾಗಲಿದೆ.
A Lady who showed courage against all odds being in a conservative Family from a small village-My Mother #100MostInfluentialWomenInTheWorld pic.twitter.com/rtE9VnEP74
— Nawazuddin Siddiqui (@Nawazuddin_S) September 27, 2017