ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆಯೇ?

Update: 2017-09-29 08:41 GMT

ಮೂತ್ರಕೋಶ ನಮ್ಮ ಶರೀರದಲ್ಲಿಯ ಪ್ರಮುಖ ಅಂಗಾಂಗಗಳಲ್ಲಿ ಒಂದಾಗಿದೆ. ಆದರೂ ಹೆಚ್ಚಾಗಿ ಚರ್ಚೆಯಾಗದ ಅಂಗವೆಂದರೆ ಇದೇ ಆಗಿದೆ. ಇದು ಹಿಗ್ಗುವ ಸಾಮರ್ಥ್ಯವುಳ್ಳ ಅಂಗವಾಗಿದ್ದು, ಮೂತ್ರಪಿಂಡಗಳಿಂದ ಮೂತ್ರವು ಶರೀರದಿಂದ ಹೊರತಳ್ಳಲ್ಪಡುವವರೆಗೆ ಅದನ್ನು ಸಂಗ್ರಹಿಸುವ ಹೊಣೆಗಾರಿಕೆ ಮೂತ್ರಕೋಶದ್ದಾಗಿದೆ. ಮೂತ್ರಕೋಶವು ಸಂಪೂರ್ಣವಾಗಿ ತುಂಬುವ ಹಂತದಲ್ಲಿದ್ದಾಗ ಅದು ಮೂತ್ರವನ್ನು ಖಾಲಿ ಮಾಡುವಂತೆ ಮಿದುಳಿಗೆ ಸಂಕೇತವನ್ನು ರವಾನಿಸುತ್ತದೆ ಮತ್ತು ಇದರ ಪರಿಣಾಮ ವಾಗಿ ನಾವು ಮೂತ್ರವನ್ನು ವಿಸರ್ಜಿಸುತ್ತೇವೆ.

ಮೂತ್ರಕೋಶದಲ್ಲಿ ಅದಕ್ಕಿಂತ ಹೆಚ್ಚು ಮುಖ್ಯವಾಗಿರುವ ಅಂಗವೊಂದಿದೆ. ಅದು ಮೂತ್ರ ಅನೈಚ್ಛಿಕವಾಗಿ ವಿಸರ್ಜನೆ ಅಥವಾ ಸೋರಿಕೆಯಾಗುವುದನ್ನು ತಡೆಯುತ್ತದೆ. ನಾಲ್ಕೂ ಕಡೆಗಳಿಂದ ಸಂಕುಚಿತಗೊಳ್ಳುವ ಸಾಮರ್ಥ್ಯವಿರುವ ಉಂಗುರದಂತಹ ಈ ಪ್ರತಿರೋಧಕ ಸ್ನಾಯುವನ್ನು ‘ಇಂಟರ್ನಲ್ ಸ್ಪಿಂಕ್ಟರ್’ ಎಂದು ಕರೆಯಲಾಗುತ್ತದೆ. ಇದಿಲ್ಲದಿದ್ದರೆ ಎಲ್ಲ ಮನುಷ್ಯರೂ ಇಡೀ ದಿನ ಎಲ್ಲ ಕಡೆಗಳಲ್ಲಿಯೂ ಮೂತ್ರವನ್ನು ವಿಸರ್ಜಿಸುತ್ತಲೇ ಇದ್ದರು! ಇದು ಈ ಇಂಟರ್ನಲ್ ಸ್ಪಿಂಕ್ಟರ್‌ನ ಮಹತ್ವವಾಗಿದೆ.

ನಮ್ಮಲ್ಲಿ ಹೆಚ್ಚಿನವರ ಸಮಸ್ಯೆಯೆಂದರೆ ನಮ್ಮ ಶರೀರದ ಮಾತನ್ನು ಕೇಳಲು ನಮಗೆ ಸಮಯವೇ ಇರುವುದಿಲ್ಲ. ಮೂತ್ರ ವಿಸರ್ಜನೆಯ ಒತ್ತಡವುಂಟಾದಾಗಲೂ ನಾವು ಕೊನೆಯ ಕ್ಷಣದವರೆಗೂ ಅದನ್ನು ತಡೆದುಕೊಂಡಿರುತ್ತೇವೆ. ಇದು ಅನಾರೋಗ್ಯಕರ ಅಭ್ಯಾಸವಾಗಿದೆ. ಮೂತ್ರವನ್ನು ತಡೆಹಿಡಿಯುವುದರಿಂದ ಮೂತ್ರನಾಳದ ಸೋಂಕು, ಮೂತ್ರಕೋಶದಲ್ಲಿ ಕಲ್ಲುಗಳ ಸೃಷ್ಟಿ, ಅನೈಚ್ಛಿಕ ಮೂತ್ರ ವಿಸರ್ಜನೆ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.

 ಈ ಸಮಸ್ಯೆಗಳಲ್ಲಿ ಅತ್ಯಂತ ಹೆಚ್ಚು ಮುಜುಗರಕೆ ಕಾರಣವಾಗುವುದು ಮೂತ್ರ ವಿಸರ್ಜನೆಯ ಮೇಲೆ ಸಂಯಮ ಕಳೆದುಕೊಳ್ಳುವುದು. ಮುಜುಗರವನ್ನು ತಪ್ಪಿಸಿಕೊಳ್ಳಲು ಜನರು ಗುಂಪಿನೊಂದಿಗೆ ಸೇರದೇ ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಇಂತಹವರಲ್ಲಿ ಮೂತ್ರಕೋಶವು ಸಂಪೂರ್ಣವಾಗಿ ತುಂಬಿದಾಗ ಮೂತ್ರವು ಅನೈಚ್ಛಿಕವಾಗಿ ವಿಸರ್ಜನೆ ಯಾಗುತ್ತದೆ. ಇಂಟರ್ನಲ್ ಸ್ಪಿಂಕ್ಟರ್‌ಗೆ ಹಾನಿಯಾಗಿ ಅದು ನಮ್ಮ ನಿಯಂತ್ರಣದಲ್ಲಿಲ್ಲ ದಿದ್ದಾಗ ಈ ಸಮಸ್ಯೆಯು ಹುಟ್ಟಿಕೊಳ್ಳುತ್ತದೆ.

ಆರೋಗ್ಯಕರ ಮೂತ್ರಕೋಶವು ತುಂಬ ಮುಖ್ಯವಾಗಿದೆ. ಅದು ತೊಂದರೆಯನ್ನುಂಟು ಮಾಡುವವರೆಗೂ ಜನರು ಸಾಮಾನ್ಯವಾಗಿ ಇದನ್ನು ತಿಳಿದುಕೊಂಡಿರುವುದಿಲ್ಲ. ಮೂತ್ರಕೋಶವನ್ನು ಆರೋಗ್ಯಯುತವಾಗಿರಿಸಲು ಕೆಲವು ಸರಳ ಉಪಾಯಗಳಿಲ್ಲಿವೆ.

ಹೆಚ್ಚು ನೀರು ಸೇವನೆ

ದಿನವಿಡೀ ಸಾಕಷ್ಟು ನೀರು ಸೇವನೆಯ ಮಹತ್ವದ ಬಗ್ಗೆ ವೈದ್ಯರು ವಿವರಿಸುವದು ಕಡಿಮೆ. ಪವಾಡಗಳನ್ನೇ ಉಂಟು ಮಾಡಬಲ್ಲ ನೀರು ವಿಷಯುಕ್ತ ಪದಾರ್ಥಗಳನ್ನು ಹೊರಗೆ ಹಾಕುವ ಮೂಲಕ ಇಡೀ ಶರೀರವನ್ನು ಆರೋಗ್ಯಪೂರ್ಣವಾಗಿಡುತ್ತದೆ. ಅದು ಮೂತ್ರನಾಳದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರಹಾಕುವ ಮೂಲಕ ಸೋಂಕು ತಗಲುವ ಸಾಧ್ಯತೆಗಳನ್ನು ತಗ್ಗಿಸುತ್ತದೆ. ಆದರೆ ಅತಿಯಾಗಿ ನೀರು ಸೇವಿಸದಂತೆ ಎಚ್ಚರಿಕೆ ವಹಿಸಿ,ಇಲ್ಲದಿದ್ದರೆ ಆಗಾಗ್ಗೆ ಬಾತ್‌ರೂಮಿಗೆ ಓಡಬೇಕಾಗುತ್ತದೆ.

ಧೂಮ್ರಪಾನ ಬೇಡ

ನಿಕೋಟಿನ್ ಮತ್ತು ತಂಬಾಕು ಮೂತ್ರಕೋಶಕ್ಕೆ ತೊಂದರೆಯನ್ನುಂಟು ಮಾಡುತ್ತವೆ. ಸುದೀರ್ಘಾವಧಿಯಲ್ಲಿ ಮೂತ್ರಕೋಶದ ಕ್ಯಾನ್ಸರ್‌ಗೆ ಇವು ಸಾಮಾನ್ಯ ಕಾರಣಗಳಾಗಿವೆ. ಅಲ್ಲದೆ ಇವು ಅನಿಯಂತ್ರಿತ ಮೂತ್ರ ವಿಸರ್ಜನೆಯನ್ನೂ ಉಂಟು ಮಾಡುತ್ತವೆ. ಧೂಮ್ರಪಾನಿಗಳಲ್ಲಿ ಕಾಣಿಸಿಕೊಳ್ಳುವ ಅತಿಯಾದ ಕೆಮ್ಮು ಮೂತ್ರ ಸೋರಿಕೆಗೂ ಕಾರಣವಾಗುತ್ತದೆ.

ನಡಿಗೆ

ನಡಿಗೆಯು ನಮ್ಮ ಮೂತ್ರಕೋಶವು ಸಹಜವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಅದು ರಾತ್ರಿವೇಳೆ ಪದೇಪದೇ ಮೂತ್ರ ವಿಸರ್ಜನೆಗೆ ಕಾರಣವಾಗುವ ಶರೀರದಲ್ಲಿನ ಮೂತ್ರ ಶೇಖರಣೆಯನ್ನೂ ತಡೆಯುತ್ತದೆ. ನಡಿಗೆಯು ಹಗಲಿನಲ್ಲಿ ಶರೀರದಲ್ಲಿಯ ಹೆಚ್ಚುವರಿ ದ್ರವವನ್ನು ಹೊರಹಾಕಲು ನೆರವಾಗುತ್ತದೆ.

ಮದ್ಯಪಾನ ತಗ್ಗಿಸಿ

ಅತಿಯಾದ ಮದ್ಯಪಾನ ನಮ್ಮ ಶರೀರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅದು ಮೂತ್ರಕೋಶದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡಿ ಅದರ ಕಾರ್ಯಭಾರವನ್ನು ಹೆಚ್ಚಿಸುತ್ತದೆ. ಸಂಯಮವಿಲ್ಲದ ಮೂತ್ರವಿಸರ್ಜನೆ ಮತ್ತು ಮೂತ್ರಕೋಶ ಕಲ್ಲುಗಳು ಮದ್ಯಪಾನದ ಇತರ ದುಷ್ಪರಿಣಾಮಗಳಲ್ಲಿ ಸೇರಿವೆ.

ಕೆಫೀನ್ ಸೇವನೆಯ ಮೇಲೆ ನಿಯಂತ್ರಣ ಕೆಫೀನ್ ಮೂತ್ರಕೋಶದ ಪಾಲಿಗೆ ಇನ್ನೊಂದು ವೈರಿಯಾಗಿದೆ. ಅದು ಮೂತ್ರಕೋಶ ತುಂಬುವಂತೆ ಮಾಡುತ್ತದೆ ಮತ್ತು ಪದೇ ಪದೇ ಬಾತರೂಮಿಗೆ ಓಡುವಂತಾಗುತ್ತದೆ. ನಿರ್ಜಲೀಕರಣ ಇದರ ಅಡ್ಡಪರಿಣಾಮವಾಗಿದ್ದು, ನೀರು ಕಡಿಮೆಯಾಗಿ ಶರೀರದಲ್ಲಿ ಉಪ್ಪಿನ ಶೇಖರಣೆಯಾಗುವುದರಿಂದ ಅಂತಿಮವಾಗಿ ಮೂತ್ರಕೋಶಕ್ಕೆ ಹಾನಿಯುಂಟಾ ಗುತ್ತದೆ.

ಕೀಗಲ್ ವ್ಯಾಯಾಮ

ಮೂತ್ರಕೋಶವನ್ನು ನಿಯಂತ್ರಿಸಲು ಕೀಗಲ್ ವ್ಯಾಯಾಮ ಅತ್ಯುತ್ತಮ ಮಾರ್ಗವಾ ಗಿದೆ. ಮೂತ್ರಕೋಶದೊಂದಿಗೆ ಸಂಪರ್ಕ ಹೊಂದಿರುವ ವಸ್ತಿ ಕುಹರದ ಸ್ನಾಯುಗಳ ಸಂಕುಚನ ಮತ್ತು ಆಕುಂಚನಗಳನ್ನು ಕೀಗಲ್ ವ್ಯಾಯಾಮವು ಒಳಗೊಂಡಿದೆ. ಇದು ಈ ಸ್ನಾಯುಗಳನ್ನು ಬಲಗೊಳಿಸುವ ಮೂಲಕ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಸೋರಿಕೆಯನ್ನು ತಡೆಯುತ್ತದೆ.

ತೂಕ ಮಿತಿಯಲ್ಲಿರಲಿ

ಅತಿಯಾದ ತೂಕ ಮತ್ತು ಬೊಜ್ಜು ನಮ್ಮ ಶರೀರದ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣಗಳಾಗಿವೆ. ಅತಿಯಾದ ತೂಕವು ಮೂತ್ರಪಿಂಡಗಳ ಮೇಕೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ ಮತ್ತು ಈ ಒತ್ತಡದ ಪರಿಣಾಮ ಮೂತ್ರಕೋಶದ ಮೇಲೆ ಆಗುತ್ತದೆ. ಇದರಿಂದ ಅನಿಯಂತ್ರಿತ ಮೂತ್ರ ವಿಸರ್ಜನೆಯ ಸಾಧ್ಯತೆಗಳು ಹೆಚ್ಚುತ್ತವೆ. ಹೀಗಾಗಿ ಶರೀರದ ತೂಕವನ್ನು ಒಂದು ಮಿತಿಯೊಳಗೆ ಕಾಯ್ದುಕೊಳ್ಳುವುದು ಎಲ್ಲ ರೀತಿಗಳಿಂದಲೂ ಹಿತಕರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News