ಆರ್ಯವೈಶ್ಯರನ್ನು ಕೆರಳಿಸಿದ ‘ಸಾಮಾಜಿಕ ಕಳ್ಳರು’ ಬಗ್ಗೆ ವಿವರಣೆ

Update: 2017-09-30 18:30 GMT

ಜಾತಿ ಆರ್ಥಿಕತೆ, ದೇಶದೊಳಗೆಯೇ ತನ್ನ ಗಡಿಯನ್ನು ಸ್ಥಾಪಿಸಿಕೊಂಡಿದೆ. ಇದನ್ನು ವರ್ಗ ಶೋಷಣೆಯ ಚೌಕಟ್ಟಿನಲ್ಲಿ ಬಗೆಹರಿಸಲಾಗದು. ಈ ಸಾಮಾಜಿಕ ಕಳ್ಳತನ ಭವಿಷ್ಯದಲ್ಲಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲಿದೆ. ಆದರೆ ನಾನು ‘ಪೋಸ್ಟ್ ಹಿಂದೂ ಇಂಡಿಯಾ’ ಕೃತಿಯಲ್ಲಿ, ಭಾರತದ ಶ್ರೀಮಂತ ಜಾತಿಯನ್ನು ಬೀದಿಗೆ ತರುವ ಸಣ್ಣ ಪ್ರಯತ್ನ ಮಾಡಿದ್ದೇನೆ.

‘ಸಾಮಾಜಿಕ ಕಳ್ಳರು’ ಎಂಬ ಪರಿಕಲ್ಪನೆಯನ್ನು ‘ಪೋಸ್ಟ್ ಹಿಂದೂ ಇಂಡಿಯಾ’ ಕೃತಿಯಲ್ಲಿ ನಾನು ಬಿಂಬಿಸಿದ್ದನ್ನು ವಿರೋಧಿಸಿ ಆರ್ಯವೈಶ್ಯ ಸಮುದಾಯದವರು ಕಾನೂನು ಹಾಗೂ ಸುವ್ಯವಸ್ಥೆಗೆ ಅಡ್ಡಿಪಡಿಸಿದ್ದಾರೆ. ಜಾತಿ ಆಧರಿತ ವ್ಯಾಪಾರದ ಪರಿಕಲ್ಪನೆಯನ್ನು ವೈಶ್ಯ ಸಮುದಾಯಕ್ಕೆ ಅನ್ವಯಿಸಿದ್ದಕ್ಕೆ ವೈಶ್ಯ ಸಂಘಟನೆಗಳು ನನಗೆ ಪ್ರಾಣ ಬೆದರಿಕೆಯನ್ನೂ ಹಾಕಿವೆ. ಐತಿಹಾಸಿಕವಾಗಿ ಈ ವೈಶ್ಯ ಸಮುದಾಯದ ಮಾದರಿ ದೊಡ್ಡ ಮೊತ್ತದ ಸಂಪತ್ತನ್ನು ‘ಗುಪ್ತಧನ’ವಾಗಿ ಹುದುಗಿಸಿಟ್ಟಿದೆ.

‘ಸಾಮಾಜಿಕ ಕಳ್ಳರು’ ಎಂಬ ಅಧ್ಯಾಯವನ್ನು ಎಂಎಸ್‌ಕೋ ಪಬ್ಲಿಷರ್ಸ್‌ ಮೊದಲು ಭಾಷಾಂತರಿಸಿದ್ದು, ಇದನ್ನು ಸ್ಥಳೀಯ ಪುಸ್ತಕ ವ್ಯಾಪಾರಿಯೊಬ್ಬರು ಸಾಮಾಜಿಕ ‘ಸ್ಮಗ್ಲರುಲು: ಕೊಮಾತುಲ್ಲು’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ನಿಷೇಧಿಸುವಂತೆ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಲು ಆಂಧ್ರ ಹಾಗೂ ತೆಲಂಗಾಣದಲ್ಲಿ ಈ ಕೃತಿಯನ್ನು ಸುಟ್ಟುಹಾಕಲಾಯಿತು. ಈ ಹಿನ್ನೆಲೆಯಲ್ಲಿ ‘ಸಾಮಾಜಿಕ ಕಳ್ಳರು’ ಎಂಬ ಪರಿಕಲ್ಪನೆಯನ್ನು ಇನ್ನಷ್ಟು ವಿಸ್ತೃತವಾಗಿ ಪರಿಶೀಲಿಸುವ ಅಗತ್ಯವಿದೆ.

ಕ್ರಿಸ್ತಶಕ 5ನೆ ಶತಮಾನದಲ್ಲಿ ಗುಪ್ತರ ಯುಗ ಮುಗಿದ ಬಳಿಕ ಸಾಮಾಜಿಕ ಕಳ್ಳತನದ ಪ್ರಕ್ರಿಯೆ ಆರಂಭವಾಗಿದ್ದು, ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆ ಭಾರತಕ್ಕೆ ಬರುವವರೆಗೂ, ಜಾತಿ ನಿಯಂತ್ರಿತ ವ್ಯಾಪಾರ ಕೇವಲ ಬನಿಯಾಗಳ ಕೈಯಲ್ಲಿತ್ತು. ಬ್ರಿಟಿಷರು ಕೂಡಾ ಹಿಂದೂ ದೇವಾಲಯಗಳ ಸಂಪ್ರದಾಯದ ಆರ್ಥಿಕತೆ ಸೇರಿದಂತೆ ಜಾತಿ ಕೇಂದ್ರಿತ ಗ್ರಾಮಮಟ್ಟದ ವ್ಯವಹಾರವನ್ನು ಮುಟ್ಟುವ ಸಾಹಸ ಮಾಡಲಿಲ್ಲ.

ಮಾರುಕಟ್ಟೆ ವಹಿವಾಟಿಗೆ ಮರು ಪ್ರವೇಶವಾಗದಂತೆ ಸಂಪತ್ತು ಮತ್ತು ಚಿನ್ನವನ್ನು ದೇವಾಲಯಗಳ ಬೊಕ್ಕಸದಲ್ಲಿ ಹುದುಗಿಸಿ ಇಡಲಾಗುತ್ತಿತ್ತು. ಈ ಸಂಪತ್ತು ಕ್ರೋಡೀಕರಣದ ಇಡೀ ಪ್ರಕ್ರಿಯೆ ಉತ್ಪಾದಕ ವರ್ಗದ ಶ್ರಮವನ್ನು ಶೋಷಿಸುವ ಮೂಲಕ ನಡೆಯುತ್ತಿತ್ತು. ಇದನ್ನು ಆರ್ಥಿಕತೆಯಿಂದ ಹೊರತೆಗೆದು, ಮತ್ತೆ ಅದು ಸಮಾಜದಲ್ಲಿ ಚಲಾವಣೆಗೆ ಬಾರದಂತೆ ಮಾಡಲಾಗುತ್ತಿತ್ತು. ಈ ಶೋಷಣೆಯ ಪರಿಕಲ್ಪನೆ ಬ್ರಿಟಿಷರಿಗೂ ಅರ್ಥವಾಗಲಿಲ್ಲ.

ಭಾರತೀಯ ಶೋಷಣೆ

ಭಾರತೀಯ ಶೋಷಣೆ ಮುಖ್ಯವಾಗಿ ಜಾತಿಯ ಸಾಮಾಜಿಕ ಗಡಿಯನ್ನು ಬಳಸಿಕೊಂಡು ಕ್ರೋಡೀಕೃತ ಸಂಪತ್ತನ್ನು ನಿಯಂತ್ರಿಸುವ ಅಂಶವನ್ನು ಒಳಗೊಂಡಿದೆ. ಇದನ್ನು ತೀವ್ರವಾಗಿ ಶೋಷಿಸಿದ ಸಂಪತ್ತಿನ ಗಡಿಯೊಳಗೆಯೇ ನಿಯಂತ್ರಿಸಲಾಗುತ್ತಿತ್ತು. ಇದನ್ನು ವ್ಯಾಪಾರಿಗಳು ತಮ್ಮ ಉತ್ತಮ ಜೀವನಕ್ಕೆ ಬಳಸಿಕೊಳ್ಳುತ್ತಿದ್ದರು ಮತ್ತು ಅರ್ಚಕರ ಉತ್ತಮ ಜೀವನಕ್ಕಾಗಿ ಸಾಕಷ್ಟು ದೇವಾಲಯಗಳಿಗೂ ನೀಡುತ್ತಿದ್ದರು. ಆದರೆ ಈ ನಗದು ಎಂದೂ ಕೃಷಿ ಅಭಿವೃದ್ಧಿಯ ಬಂಡವಾಳವಾಗಿ ಅಥವಾ ವ್ಯಾಪಾರ ವಿಸ್ತರಣೆ ಉತ್ತೇಜನದ ಬಂಡವಾಳವಾಗಿ ಮತ್ತೆ ಆರ್ಥಿಕತೆಗೆ ಹರಿಯುತ್ತಿರಲಿಲ್ಲ. ಇಡೀ ಪ್ರಕ್ರಿಯೆ ಒಂದು ರೀತಿಯ ಕಳ್ಳಸಾಗಾಟ. ಈ ಸಂಪತ್ತು ಭಾರತದಿಂದ ಹೊರಹೋಗುತ್ತಿರಲಿಲ್ಲ. ಆದರೆ ಜಾತಿ ಗಡಿಯೊಳಗೆಯೇ ಬಂಧಿಸಲ್ಪಡುತ್ತಿತ್ತು. ಪ್ರಕ್ರಿಯೆ ಇಂದಿಗೂ ಭಿನ್ನ ಮಾದರಿಯಲ್ಲಿ ಮುಂದುವರಿದಿದೆ. ಎಲ್ಲ ಧಾನ್ಯ ಮಾರುಕಟ್ಟೆಗಳಲ್ಲಿ ಸಾಹುಕಾರರು ಪ್ರಮುಖ ಖರೀದಿದಾರರು. ಇವರು ತೀರಾ ಕಡಿಮೆ ವೆಚ್ಚದಲ್ಲಿ ರೈತರಿಂದ ಖರೀದಿಸಿ, ಹೆಚ್ಚಿನ ಬೆಲೆಗೆ ಇದನ್ನು ಮಾರಾಟ ಮಾಡುತ್ತಾರೆ.

ಅಕ್ಕಿಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಸಾಹುಕಾರರು ಭತ್ತವನ್ನು ರೈತರಿಂದ ತೀರಾ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಭತ್ತವನ್ನು ಪಾಲಿಶ್ ಮಾಡಿದ ಅಕ್ಕಿಯಾಗಿ ತಮ್ಮ ಗಿರಣಿಗಳಲ್ಲಿ ಪರಿವರ್ತಿಸಿ, ಐದರಿಂದ ಆರು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಾರೆ. ಹತ್ತಿ, ಮೆಣಸಿನ ವಿಚಾರದಲ್ಲೂ ಇದು ಸತ್ಯ. ಬಹುತೇಕ ಅಕ್ಕಿ ಗಿರಣಿಗಳ ಜಾಲವನ್ನು ಈ ಜಾತಿಯ ಜನ ನಿಯಂತ್ರಿಸುತ್ತಾರೆ. ಇದರಿಂದ ಹಿಡಿದು ಅಂಬಾನಿ- ಅದಾನಿಯ ಬೃಹತ್ ಜಾತಿ ನಿಯಂತ್ರಿತ ಬಂಡವಾಳಕ್ಕೆ ಭಾರತದ ಆರ್ಥಿಕತೆಯನ್ನು ತಳ್ಳಲಾಗುತ್ತಿದೆ. ಇದು ಸಾಧ್ಯವಾಗಿರುವುದು ಸಾಮಾಜಿಕ ಕಳ್ಳತನದಿಂದ ಮಾತ್ರ.

ಮುಂಬೈ ಗಿರಣಿಗಳಿಂದ ಹಿಡಿದು ಎಲ್ಲ ಪೆಟ್ರೋಲಿಯಂ ಉತ್ಪನ್ನಗಳವರೆಗೂ ಮಾಲಕತ್ವ ಸ್ಥಾಪನೆಯಾಗಿರುವುದು ಒಂದು ವರ್ಗದ ಶೋಷಣೆ ಮತ್ತು ಜಾತಿ ವ್ಯಾಪಾರ ವರ್ತುಲದಿಂದ. ಈ ವ್ಯಾಪಾರಿ ಜಾತಿ ಆಧರಿತ ವರ್ತುಲ, ಮತ್ತೊಂದು ಜಾತಿಯ ವ್ಯಾಪಾರಿ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ. ಸಾಮಾಜಿಕ ಕಳ್ಳಸಾಗಾಟ ಆರ್ಥಿಕತೆಯ ಎರಡನೆ ಪ್ರಮುಖ ಲಕ್ಷಣವೆಂದರೆ, ಕೆಳವರ್ಗದ ಬಡವರ ಬಗ್ಗೆ ಇವರಿಗೆ ಅನುಕಂಪ ಅಥವಾ ಕಳಕಳಿ ಇಲ್ಲದಿರುವುದು. ಅದೇ ಸಮುದಾಯದ ಬಡವರು ಸ್ವಲ್ಪಮಟ್ಟಿನ ನೆರವು ಪಡೆಯುತ್ತಾರೆ. ಆದರೆ ತಳಮಟ್ಟದ ದಲಿತ, ಆದಿವಾಸಿ ಬಡವರು ಯಾವ ಅನುಕಂಪವನ್ನೂ ಗಳಿಸುವುದಿಲ್ಲ. ಶ್ರೀಮಂತ ಮುಸ್ಲಿಮರು, ಸಮುದಾಯದ ಬಡವರಿಗೆ ನೆರವಾಗುವ ಸಲುವಾಗಿ ಇಡುವ ಝಕಾತ್‌ನಂತೆ ಇವರು ತಮ್ಮ ಜಾತಿ ಸಂಘಟನೆಗಳಲ್ಲಿ ಸಾಮಾಜಿಕ ನ್ಯಾಯ ನಿಧಿಯನ್ನು ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದವರು ಕೂಡಾ ಹಿಂದೂಗಳೇ ಎಂದು ಮೇಲ್ವರ್ಗದವರು ಪ್ರತಿಪಾದಿಸುತ್ತಾರೆ. ಆದರೆ ಇವು ಎಂದಿಗೂ ಒಂದು ರೂಪಾಯಿಯನ್ನು ಕೂಡಾ ಸಾಮಾಜಿಕ ಕಾರಣಕ್ಕೆ ಹಂಚುವುದಿಲ್ಲ.

ಪಾಶ್ಚಿಮಾತ್ಯ ದೇಶಗಳಲ್ಲಿ ವರ್ಗ ಶೋಷಣೆಕಾರರು ಸಾಮಾಜಿಕ ಹೂಡಿಕೆ ನಿಧಿ ಇಟ್ಟಿರುತ್ತಾರೆ. ಕರಿಯರು ಮತ್ತು ಬಡವರು ಮತ್ತಿತರರಿಗೆ ಸಹಾಯಹಸ್ತ ಚಾಚುವ ಆದ್ಯತೆಯನ್ನು ಇವರು ಹೊಂದಿರುತ್ತಾರೆ. ಸಾಮಾಜಿಕ ಕಳ್ಳರು ಮಾತ್ರ ಕನಿಷ್ಠ ದೇವರ ಭಯದಿಂದ ಕೂಡಾ ಇಂಥ ಅನುಕಂಪ ಹೊಂದಿಲ್ಲ. ಇದರಿಂದ ಕೆಳಜಾತಿಯ ಬಡವರು ಹಸಿವು, ಅಪೌಷ್ಟಿಕತೆ ಮತ್ತು ಹತಾಶೆಯ ಆತ್ಮಹತ್ಯೆಯಿಂದ ಸಾಯುತ್ತಾರೆ. ಶ್ರೀಮಂತರ ಸಂಪತ್ತು ಕ್ರೋಡೀಕರಣಕ್ಕೆ ಮಿತಿ ಇಲ್ಲ. ಸಾಮಾಜಿಕವಾಗಿ ಕಳ್ಳತನದ ಆರ್ಥಿಕತೆ ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗದವರಿಗೆ ತಮ್ಮ ಮಳಿಗೆ ಅಥವಾ ಕಂಪೆನಿಗಳಲ್ಲಿ ಆದ್ಯತೆಯ ಮೇಲೆ ಕೆಲಸ ನೀಡಲು ಕೂಡಾ ಇಚ್ಛಿಸುವುದಿಲ್ಲ. ಈ ದೊಡ್ಡ ಸಮುದಾಯ ಹಲವು ದಶಕಗಳಿಂದ, ಖಾಸಗಿ ವಲಯದಲ್ಲೂ ಮೀಸಲಾತಿಗೆ ಆಗ್ರಹಿಸುತ್ತಾ ಬಂದಿದೆ. ಇಂಥ ಕಳಕಳಿ ಅಥವಾ ಆಗ್ರಹ ಎದ್ದಾಗಲೆಲ್ಲ ಪ್ರತಿಭೆ ಸತ್ತೇ ಹೋಯಿತು ಎಂಬಂತೆ ಮಾತನಾಡುತ್ತಾರೆ.

ಸಾಮಾಜಿಕವಾಗಿ ಕಳ್ಳತನಕ್ಕೀಡಾದ ಈ ಆರ್ಥಿಕತೆ, ಈ ಪರಿಧಿಯ ಗಡಿಯಲ್ಲೇ ಇರುವ ಸಂಪತ್ತನ್ನು ನಿರಂತರವಾಗಿ ಕಾಪಾಡಿಕೊಂಡುಹೋಗುವ ಬುದ್ಧಿವಂತ ವರ್ಗವನ್ನಷ್ಟೇ ಸೃಷ್ಟಿಸುತ್ತದೆ.

ಜಾತಿ ಆರ್ಥಿಕತೆ, ದೇಶದೊಳಗೆಯೇ ತನ್ನ ಗಡಿಯನ್ನು ಸ್ಥಾಪಿಸಿಕೊಂಡಿದೆ. ಇದನ್ನು ವರ್ಗ ಶೋಷಣೆಯ ಚೌಕಟ್ಟಿನಲ್ಲಿ ಬಗೆಹರಿಸಲಾಗದು. ಈ ಸಾಮಾಜಿಕ ಕಳ್ಳತನ ಭವಿಷ್ಯದಲ್ಲಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲಿದೆ. ಆದರೆ ನಾನು ‘ಪೋಸ್ಟ್ ಹಿಂದೂ ಇಂಡಿಯಾ’ ಕೃತಿಯಲ್ಲಿ, ಭಾರತದ ಶ್ರೀಮಂತ ಜಾತಿಯನ್ನು ಬೀದಿಗೆ ತರುವ ಸಣ್ಣ ಪ್ರಯತ್ನ ಮಾಡಿದ್ದೇನೆ.

ಇದಕ್ಕಾಗಿ ಅವರು ನನ್ನ ಪ್ರತಿಕೃತಿಗಳನ್ನು ತೆಲುಗು ರಾಜ್ಯಗಳಲ್ಲಿ ಕಳೆದ ಕೆಲ ದಿನಗಳಿಂದ ದಹಿಸುತ್ತಿದ್ದಾರೆ. ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಆದರೆ ಇದನ್ನು ತಡೆಯಬೇಕಾದರೆ ಎಲ್ಲ ಶೂದ್ರರು ಅಂದರೆ ಕಮ್ಮ, ರೆಡ್ಡಿ, ಜಾಟ್, ಪಟೇಲ್, ಮರಾಠಾ, ಇತರ ಹಿಂದುಳಿತ ವರ್ಗಗಳು, ದಲಿತರು ಹಾಗೂ ಆದಿವಾಸಿಗಳು ಸಂಘಟಿತರಾಗಬೇಕು. ಬಹುತೇಕ ಈ ಎಲ್ಲ ಸಮುದಾಯಗಳು ಇಂದಿಗೂ ಕೃಷಿ ವಲಯ ಅಥವಾ ಸಣ್ಣ ಉದ್ದಿಮೆಯನ್ನೇ ನೆಚ್ಚಿಕೊಂಡಿವೆ. ಸಾಹುಕಾರ ಆರ್ಥಿಕತೆಯಲ್ಲಿ, ಇವರು ಕಡಿಮೆ ಹಾಗೂ ಸಾಮಾಜಿಕ ಕಳ್ಳಸಾಗಾಟ ಪ್ರಕ್ರಿಯೆಯ ಸಂತ್ರಸ್ತರು. ನಮ್ಮ ಅರ್ಥಶಾಸ್ತ್ರಜ್ಞರು ಈ ಸಾಮಾಜಿಕ ಕಳ್ಳಸಾಗಾಟ ಪರಿಕಲ್ಪನೆ ಬಗ್ಗೆ ಚರ್ಚೆಗೆ ಮುಂದಾಗಲಿ.

ಕೃಪೆ: thewire.in

Writer - ಕಾಂಚ ಐಲಯ್ಯ ಶೆಪರ್ಡ್

contributor

Editor - ಕಾಂಚ ಐಲಯ್ಯ ಶೆಪರ್ಡ್

contributor

Similar News

ಜಗದಗಲ
ಜಗ ದಗಲ