5 ಸಾವಿರ ರನ್ ಪೂರೈಸಿದ ಅಝರ್ ಅಲಿ

Update: 2017-09-30 18:33 GMT

ಅಬುಧಾಬಿ, ಸೆ.30: ಪಾಕಿಸ್ತಾನದ ಮಧ್ಯಮ ಸರದಿಯ ದಾಂಡಿಗ ಅಝರ್ ಅಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಮೂರನೆ ದಿನವಾಗಿರುವ ಶನಿವಾರ ಅವರು ಈ ಸಾಧನೆ ಮಾಡಿದ್ದಾರೆ.

32ರ ಹರೆಯದ ಅಝರ್ ಅಲಿ 61 ಟೆಸ್ಟ್‌ಗಳಲ್ಲಿ 5 ಸಾವಿರ ರನ್‌ಗಳನ್ನು ಪೂರೈಸಿದ್ದಾರೆ. ಅಝರ್ ಅಲಿ ತನ್ನ ಖಾತೆಗೆ 32 ರನ್ ಸೇರಿಸುವ ಮೂಲಕ ಈ ಮೈಲುಗಲ್ಲನ್ನು ತಲುಪಿದರು.

  2010 ಜುಲೈ 13ರಿಂದ 16ರ ತನಕ ಲಾರ್ಡ್ಸ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದ ಅಲಿ ಅವರು ಪಾಕ್ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಈ ತನಕ ಅವರು 14 ಶತಕ ಮತ್ತು 25 ಅರ್ಧಶತಕ ದಾಖಲಿಸಿದ್ದಾರೆ.

ಕಳೆದ ವರ್ಷ ಅವರು ವೆಸ್ಟ್ ಇಂಡೀಸ್ ವಿರುದ್ಧದ ಹಗಲು-ರಾತ್ರಿ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. 2016ರಲ್ಲಿ 11 ಟೆಸ್ಟ್‌ಗಳಲ್ಲಿ 1,198 ರನ್ ದಾಖಲಿಸಿದ್ದರು. ಹೋರಾಟದ ಮೂಲಕ ಆಸ್ಟ್ರೇಲಿಯದ ವಿರುದ್ಧ ದ್ವಿಶತಕ ದಾಖಲಿಸಿದ್ದರು.

ಯೂನಿಸ್ ಖಾನ್ ಪಾಕಿಸ್ತಾನ ಪರ ಗರಿಷ್ಠ ರನ್ ದಾಖಲಿಸಿದ ಆಟಗಾರ. ಅವರು 118 ಟೆಸ್ಟ್‌ಗಳಲ್ಲಿ 10,099 ರನ್ ಗಳಿಸಿದ್ದರು.ಜಾವೇದ್ ಮಿಯಾಂದಾದ್(8,832), ಇಂಝಮಮ್ ಉಲ್ ಹಕ್(8,829), ಮುಹಮ್ಮದ್ ಯೂಸುಫ್(7,530), ಸಲೀಮ್ ಮಲಿಕ್(5,768), ಮಿಸ್ಬಾವುಲ್ ಹಕ್(5,222), ಝಹೀರ್ ಅಬ್ಬಾಸ್(5,062) ಪಾಕ್ ಪರ ಟೆಸ್ಟ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ದಾಂಡಿಗರು.

 ಅಝರ್ ಅಲಿ ರನ್ 5,042ಕ್ಕೆ ತಲುಪಿದೆ.

<ಪಾಕಿಸ್ತಾನ 266/4:ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮೂರನೆ ದಿನದಾಟದಂತ್ಯಕ್ಕೆ 112.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿದೆ.

74 ರನ್ ಗಳಿಸಿದ ಅಝರ್ ಅಲಿ ಔಟಾಗದೆ 4ನೆ ದಿನಕ್ಕೆ ಬ್ಯಾಟಿಂಗ್‌ನ್ನು ಕಾಯ್ದಿರಿಸಿದ್ದಾರೆ.

ಎರಡನೆ ದಿನದಾಟದಂತ್ಯಕ್ಕೆ 23 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿದ್ದ ಪಾಕಿಸ್ತಾನ, ಈ ಮೊತ್ತಕ್ಕೆ 202 ರನ್ ಸೇರಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಶಾನ್ ಮಸೂದ್(59), ಶಮಿ ಅಸ್ಲಂ(51), ಅಸದ್ ಶಫಿಕ್(39) ಮತ್ತು ಬಾಬರ್ ಅಝಮ್(28) ಔಟಾಗಿದ್ದಾರೆ.

 ಮೊದಲ ವಿಕೆಟ್‌ಗೆ ಮಸೂದ್ ಮತ್ತು ಅಸ್ಲಂ 114 ರನ್‌ಗಳ ಜೊತೆಯಾಟ ನೀಡಿದ್ದರು.

ಶ್ರೀಲಂಕಾದ ಪರ ರಂಗನ್ ಹೆರಾತ್ 47ಕ್ಕೆ 2, ನುವಾನ್ ಪ್ರದೀಪ್ ಮತ್ತು ದಿಲ್ರುವಾನ್ ಪೆರೆರಾ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News